ಒಂದು ಲಕ್ಷ ಶೇಂಗಾ ಹೋಳಿಗೆ ದಾಸೋಹ ಮಾಡಿದ ತೇರದಾಳದ ಶರಣೆಯರು

15,000 ಶರಣೆಯರು ಎರಡು ಕಿ.ಮೀ ನಡೆಯುತ್ತ, ಶ್ರೀ ಗುರುಬಸವ ಲಿಂಗಾಯ ನಮಃ ಮಂತ್ರ ಹೇಳುತ್ತ, ದೇವಸ್ಥಾನ ಸಮಿತಿಗೆ ಒಂದು ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆ ಸಲ್ಲಿಸುವ ಮೂಲಕ ಇತಿಹಾಸ ಬರೆದರು.

ತೇರದಾಳ

ಹನ್ನೆರಡನೇ ಶತಮಾನದ ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶ್ವರ, ತೇರದಾಳ ಪಟ್ಟಣದ ಆರಾಧ್ಯದೈವ, ಅಲ್ಲಮಪ್ರಭು ದೇವರ ನೂತನ ದೇವಸ್ಥಾನದ ಲೋಕಾರ್ಪಣೆ ನವೆಂಬರ್ 11ರಂದು ನಡೆಯಲಿದೆ.

ಇದರ ನಿಮಿತ್ಯ ಬಸವ ಮಹಾಪುರಾಣ ಪ್ರವಚನ ಅಕ್ಟೋಬರ್ 14ರಿಂದ ಪ್ರಾರಂಭಗೊಂಡು, ಪ್ರತಿದಿನ ಸಂಜೆ ಜರುಗುತ್ತಿದೆ.

ಬೆಳಗಾವಿ ಜಿಲ್ಲೆ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭುಸ್ವಾಮೀಜಿ ಅವರು ಹೇಳುತ್ತಿರುವ ಪುರಾಣ ಪ್ರವಚನ ಕೇಳಲು ತೇರದಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತಾದಿಗಳು ಮಳೆಯನ್ನೂ ಲೆಕ್ಕಿಸದೆ ಬರುತ್ತಿದ್ದಾರೆ.

ಪುರಾಣ ಆಲಿಸಲು ಬರುವ ಸಹಸ್ರಾರು ಭಕ್ತರಿಗೆ ಪ್ರತಿದಿನ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಾಲುಗ್ಗಿ, ಸಜ್ಜಕ, ಮಾದಲಿ, ಬೂಂದಿ, ಬಾಸುಂದೆ, ಬಾದುಷಾ, ಹೂರಣದ ಹೋಳಿಗೆ, ಜಿಲೇಬಿ, ಚಪಾತಿ, ರೊಟ್ಟಿ, ವಿವಿಧ ತೆರನಾದ ಪಲ್ಲೆ ಅನ್ನ-ಸಾರನ್ನು ಈಗಾಗಲೇ ಭಕ್ತರು ಸವಿದಿದ್ದಾರೆ.

ಈ ದಾಸೋಹ ಕಾರ್ಯಕ್ಕೆ ದೇಣಿಗೆ ಸಲ್ಲಿಸಲು ಭಕ್ತರು ನಾ ಮುಂದೆ ತಾ ಮುಂದೆ ಎಂಬಂತೆ ಮುಗಿಬೀಳುತ್ತಿದ್ದಾರೆ. ಕೆಲವರು ಈ ಕಾರ್ಯಕ್ಕೆ ಧನ ಸಹಾಯ ಸಲ್ಲಿಸಿದರೆ, ಕೆಲವರು ತಮ್ಮಲ್ಲಿರುವ ದವಸ ಧಾನ್ಯಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪಟ್ಟಣದ ಕಲ್ಲಟ್ಟಿಗಲ್ಲಿ ಮನೆಗಳ ಶರಣೆಯರು 25 ಸಾವಿರಕ್ಕೂ ಹೆಚ್ಚು ರೊಟ್ಟಿಗಳನ್ನು ಈಗಾಗಲೇ ಸಮರ್ಪಿಸಿದ್ದಾರೆ. ನಂತರ ದೇವರಾಜ ನಗರ, ಬಸವ ಕಾಲೋನಿ ಸೇರಿದಂತೆ ನಾನಾ ಕಡೆಯವರು ರೊಟ್ಟಿ ಸಮರ್ಪಿಸಿದ್ದಾರೆ. ಸಿದ್ದೇಶ್ವರ ಗಲ್ಲಿಯ ಭಕ್ತರು 125ಕ್ಕೂ ಹೆಚ್ಚು ಬೆಲ್ಲದ ಪೆಂಟಿಗಳ ದಾಸೋಹ ಸೇವೆ ಮಾಡಿದ್ದಾರೆ.

ಹೀಗೆ ಸಾಗಿದ ಭಕ್ತಿಯ ದಾಸೋಹ, ಬುತ್ತಿ ಪಯಣ ಸೋಮವಾರ ಸಲ್ಲಿಸಿದ ಶೇಂಗಾ ಹೋಳಿಗೆಗೆ ಬಂದು ನಿಂತಿದೆ.

ಸೋಮವಾರ ಅಕ್ಟೋಬರ್ 28ರಂದು ಪಟ್ಟಣದ ಎಲ್ಲ ಭಾಗದ ಮಹಿಳೆಯರು ಶೇಂಗಾ ಹೋಳಿಗೆ ಮನೆಗಳಲ್ಲಿ ತಯಾರಿಸಿ, ಬುಟ್ಟಿಗಳಲ್ಲಿ ತುಂಬಿಕೊಂಡು, ಬುಟ್ಟಿಗಳನ್ನು ತಮ್ಮ ತಲೆ ಮೇಲೆ ಹೊತ್ತವರು ಸಾವಿರಾರು ತಾಯಂದಿರು, ಅದರ ಜೊತೆಗೆ ವಚನ ಸಾಹಿತ್ಯವನ್ನು ತಲೆಮೇಲೆ ಹೊತ್ತವರು ಸಾವಿರಾರು ಶರಣೆಯರು. ಹೀಗೆ ಎರಡು ಕಿ.ಮೀ ನಡೆಯುತ್ತ, ಶ್ರೀ ಗುರುಬಸವ ಲಿಂಗಾಯ ನಮಃ ಓಂ ಎಂಬ ಮಂತ್ರ ಹೇಳುತ್ತ, ದೇವಸ್ಥಾನ ಸಮಿತಿಗೆ ಒಂದು ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆ ಸಲ್ಲಿಸುವ ಮೂಲಕ ಇತಿಹಾಸ ಬರೆದರು.

ಎಣ್ಣೆ ಹೋಳಿಗೆ ಯಾತ್ರೆ ದೇವಸ್ಥಾನಕ್ಕೆ ತೆರಳುವ ಮುನ್ನ ರಬಕವಿ ರಸ್ತೆಯ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಾತೆಯರು ಜಮಾಯಿಸಿದರು. ಚಿಮ್ಮಡದ ಪ್ರಭು ಶ್ರೀ, ಶೇಗುಣಸಿಯ ಡಾ.ಮಹಾಂತಪ್ರಭು, ತೇರದಾಳದ ಗಂಗಾಧರ ದೇವರು, ಬನಹಟ್ಟಿ ಹಿರೇಮಠದ ಶರಣ ಬಸವ ಶಿವಾಚಾರ್ಯ ಶ್ರೀ ಶೇಂಗಾ ಹೋಳಿಗೆ ಬುತ್ತಿ ಜಾತ್ರೆಗೆ ಚಾಲನೆ ನೀಡಿದರು.

ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಿಂದ ಹೊರಟ ಮಾತೆಯರು ಪೊಲೀಸ್ ಠಾಣೆ, ಪದ್ಮಾ ಆಸ್ಪತ್ರೆ, ನಿವರಗಿ ಟೆಕ್ಸಟೈಲ್ಸ್, ಮಹಾವೀರ ಸರ್ಕಲ್, ಬಸ್ ನಿಲ್ದಾಣ, ಜಾಮೀಯಾ ಮಸ್ಜೀದ್, ನಾಡ ಕಚೇರಿ, ಚಾವಡಿ ಸರ್ಕಲ್, ಕನ್ನಡ ಶಾಲೆ, ಜೋಳದ ಬಜಾರ, ಗುಮ್ಮಟಗಲ್ಲಿ, ಸಿದ್ದೇಶ್ವರಗಲ್ಲಿ, ಜವಳಿ ಬಜಾರ್, ಗಣಪತಿ ಗುಡಿ, ಅಗಸಿ, ವಿಠ್ಠಲ ಮಂದಿರ ಮಾರ್ಗವಾಗಿ ನಡೆದುಬಂದರು. ದೇವಸ್ಥಾನ ಸಮಿತಿಗೆ ಹೋಳಿಗೆ ಅರ್ಪಿಸಿದರು. ಅಂದಾಜು 15 ಸಾವಿರ ಭಕ್ತರು ಈ ಹೋಳಿಗೆ ಹಾಗೂ ವಚನ ಕಟ್ಟುಗಳನ್ನು ಹೊತ್ತು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.

ಭಕ್ತರು ಈ ಹೋಳಿಗೆ ಜೊತೆ ಸವಿಯಲೆಂದು ಕುಡಚಿ ರಸ್ತೆಯ ನಾಲ್ಕನೇ ಕಾಲುವೆಯ ಭಕ್ತರು 1.5 ಕ್ವಿಂಟಲ್ ತುಪ್ಪ ದಾಸೋಹ ನೀಡಿದ್ದು ವಿಶೇಷವಾಗಿತ್ತು.

Share This Article
2 Comments
  • ತುಂಬಾ ಹೆಮ್ಮೆಯಾಗುತ್ತದೆ ವಿಡಿಯೋ ಕ್ಲಿಪಿಂಗ್ ನೋಡಲು.
    ಉತ್ತರ ಕರ್ನಾಟಕದ ಜನರ ಬಸವ ಭಕ್ತಿಯ ಮೆರವಣಿಗೆ ಬೇರೆ ಪ್ರದೇಶ ದವರಿಗೆ ಪ್ರೇರಣೆ /ಮಾದರಿ ಆಗಲಿ. 🙏🙏

Leave a Reply

Your email address will not be published. Required fields are marked *