(ಇತ್ತೀಚೆಗೆ ಕಲಬುರ್ಗಿಯಲ್ಲಿ ನಡೆದ ಕದಳಿ ಮಹಿಳಾ ವೇದಿಕೆಯ ಸಮಾವೇಶದಲ್ಲಿ ವಿನಯಾ ಒಕ್ಕುಂದ ಅವರು ‘ಇದು ಒಳಗೆ ಸುಳಿವ ಆತ್ಮ’ ಎಂಬ ವಿಷಯದ ಮೇಲೆ ಮಾತನಾಡಿದರು. ವ್ಯಾಪಕವಾಗಿ ಚರ್ಚೆಗೀಡಾಗಿರುವ ಅವರ ಭಾಷಣದ ಸಂಕ್ಷಿಪ್ತ ಟಿಪ್ಪಣಿ ಇಲ್ಲಿದೆ.)
ಕಲಬುರ್ಗಿ
ವಚನ ಸಾಹಿತ್ಯ ಒಂದು ವಿಸ್ಮಯ. ಪ್ರಪಂಚದ ಇತಿಹಾಸದಲ್ಲಿ ಜನಸಾಮಾನ್ಯರು ಕಟ್ಟಿದ ಚಳುವಳಿ ಮತ್ತು ಆ ಚಳುವಳಿಯ ಸಾಹಿತ್ಯ ಇಷ್ಟೊಂದು ಮರು ಓದುಗಳಿಗೆ ಒಳಗಾದದ್ದಿಲ್ಲ. ತನ್ನ ಕಾಲವನ್ನು ಮಾತ್ರವಲ್ಲ ತನ್ನ ಮುಂದಿನ ತಲೆಮಾರುಗಳನ್ನೂ ತೀವ್ರವಾಗಿ ಎಚ್ಚರಿಸಿದ, ಪ್ರಶ್ನಿಸಿದ ಮತ್ತೊಂದನ್ನು ಕಾಣುವುದು ಕಷ್ಟ. ಇಂದಿಗೂ ಸಾಹಿತ್ಯದ ಓದಿಗೆ ಸಮ ಸಮಾಜದ ಕನಸಿಗೆ ಇಂಬು ಕೊಡುವ ಗುರುಮನೆಯಿದು.
I. ವಚನಗಳ ಓದು ಮೂರು ಕ್ರಮಗಳಲ್ಲಿ ನಡೆದು ಬಂದಿದೆ.
- ಸಾಂಪ್ರದಾಯಿಕ ಓದು : ವಚನಗಳ ಸಂಪಾದನೆಯ, ರಾಷ್ಟ್ರೀಯ ಪುನರುತ್ಥಾನವಾದೀ ಚಿಂತನೆಯ ಗುಣ ಬೆರೆತ, ಸ್ವಮತ-ಧರ್ಮಗಳ ಜಾಗೃತಿ ಮುಖ್ಯವಾದ, ಉದಾರವಾಗಿ ನಿರ್ವಚಿಸಿಕೊಳ್ಳುವ ಜರೂರತ್ತಿನ ಓದು. ವಚನಗಳ ಸಂಗ್ರಹ, ಸಂಪಾದನೆ ವಿಶ್ಲೇಷಣೆಗಳಲ್ಲಿ ಈ ಗುಣ ದಟ್ಟವಾಗಿತ್ತು. ಇಲ್ಲಿ ವಚನಗಳ ಆಯ್ದು ಕಟ್ಟುವ ಬಗೆಯೂ ಕಾಣಿಸಿಕೊಂಡಿತು.
- ಪ್ರಗತಿಪರ ಓದು : ಸ್ವಾತಂತ್ರ್ಯಾ ನಂತರದ ಸಾಮಾಜಿಕ ತಲ್ಲಣಗಳು ಸಮಕಾಲೀನ ಸಂಕಟಗಳಿಗೆ ಪರಂಪರೆಯಲ್ಲಿ ಪರಿಹಾರಗಳಿವೆಯೇ ಎಂಬ ಜೀವಪರ ಹುಡುಕಾಟಗಳಿಗೆ ಆಸ್ಪದ ಒದಗಿಸಿದ ಈ ಅಧ್ಯಯನ ದಾರಿಯು ನೂರು, ಸಾವಿರ ಮರು ಓದುಗಳಾಗಿ ವಚನ ಸಾಹಿತ್ಯವನ್ನು ಅನುಸಂಧಾನಗೊಳಿಸಿಕೊಂಡಿದೆ.
- ನಿರಾಕರಣೆಯ ಓದು : ಸಾಂಪ್ರದಾಯಿಕ ಮತ್ತು ಪ್ರಗತಿಪರ ಓದುಗಳು ಪರಸ್ಪರ ಬೆರೆವ ಅಗತ್ಯದ ಕಾಲದಲ್ಲಿ ವಚನ ಸಾಹಿತ್ಯವು ಧರ್ಮವೊಂದರ ಆಶಯಗಳ ದಾಖಲೆ ಆರ್ಷೇಯ ಧರ್ಮಗಳಲ್ಲಿ ಯಾವುದು ಉಲ್ಲೇಖಗೊಂಡಿವೆಯೋ ಅವೇ ಇಲ್ಲೂ ಮುಂದುವರೆದಿವೆ, ಅನುವಾದಿತವಾಗಿವೆ-ವಾಸ್ತವದಲ್ಲಿ ಇದೊಂದು ಬಾಳಿನ ಪ್ರಾಕ್ಟಿಸ್ ಆಗಿರಲಿಲ್ಲ ಎನ್ನುವ ನಿರಾಕರಣೆಯ ಚರ್ಚೆ ಮುನ್ನೆಲೆಗೆ ಬರತೊಡಗಿತು. ಇದರ ಉದ್ದೇಶ ಸಮಸಮಾಜದ ಕನಸಿನ ಬೇರುಗಳನ್ನು ಕತ್ತರಿಸುವುದಾಗಿತ್ತು.
ಅಂದಂದಿನ ನುಡಿಯ ಅಂದಂದೇ ಅರಿಯಲಾಗದು-ಎನ್ನುತ್ತಾನೆ ಅಲ್ಲಮ. ಹೊಸ ಕಾಲದ ಹೊಸನೋಟ ಕ್ರಮಗಳಿಗೆ ಹಾಸುಹೊಕ್ಕಾಗುವ ತ್ರಾಣ ವಚನಗಳಿಗಿದೆ.
II. ಒಳಗೆ ಸುಳಿವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ- ಎಂಬ ಈ ತಾತ್ವಿಕ ಚೌಕಟ್ಟು ಈ ನೆಲದ ಮೊಟ್ಟ ಮೊದಲ ಮಹಿಳಾ ಸಮಾನತೆಯ ರೂಪಕ.
ಗಂಡಾಗಿ ಮಾತ್ರ ಮೋಕ್ಷಕ್ಕೆ ಅರ್ಹ ಎಂದ ಜೈನ ಧರ್ಮ, ಹೆಣ್ಣಿನ ಸಹಬಾಳ್ವೆಯನ್ನು ಅನುಮಾನಿಸಿದ ಬೌದ್ಧ ಧರ್ಮದ ಮೊದಲರ್ಧ, ಹೆಣ್ಣನ್ನು ಹೊಲೆ ಎಂದ ವೈದಿಕಶಾಹಿ ಇವುಗಳ ಜಡತೆಯನ್ನು ನೀಗಿಸಿದ್ದು ಶರಣ ಚಳುವಳಿ, ಹೆಣ್ಣನ್ನು ಮನುಷ್ಯಳೆಂದು ಒಪ್ಪದ ವೈದಿಕ ಧರ್ಮಶಾಸ್ತçಗಳ ಕಾಠಿಣ್ಯದಿಂದ ಬಿಡುಗಡೆಯ ಬಾಗಿಲು ತೆರೆದದ್ದು ಶರಣಧರ್ಮ. ಹೆಣ್ಣು ಬಾಳಿನ ಘನತೆಯ ಮರುಜೀವಣಿಯಿದು. ಜಗತ್ತಿನೆದುರು ಕನ್ನಡದ ಗೌರವದ ಕುರುಹು ಈ ಚಳುವಳಿ.
ಆದ್ಯ ವಚನಕಾರ ಜೇಡರ ದಾಸಿಮಯ್ಯನ- ಮೊಲೆ ಮುಡಿ ಬಂದಡೆ…… ಎಂಬ ವಚನ, ಹೆಣ್ತನದ ಹರಲಿಗಳಿಂದ ಬಿಡುಗಡೆ ಕೊಟ್ಟ ಸಂವಿಧಾನದ ಪ್ರಿಯಾಂಬಲ್. ವ್ಯಕ್ತಿತ್ವಕ್ಕೆ ಹುಟ್ಟಿನ ಸೋಂಕಿಲ್ಲ, ಲಿಂಗದ ಸೋಂಕಿಲ್ಲ- ಎಂಬ ತಿಳಿವಿನ ಧಾರೆ. ಈ ವೈಚಾರಿಕತೆಯನ್ನು, ಅನ್ವಯಗೊಳಿಸಲು ವಿಸ್ತರಿಸಲು ಬಸವಣ್ಣ, ಅಲ್ಲಮಪ್ರಭು ಆದಿಯಾಗಿ ಎಲ್ಲರ ವಚನಗಳ ಸಾಕ್ಷ್ಯಗಳಿವೆ. ಸತಿ ಭಕ್ತೆಯಾದೊಡೆ ಹೊಲೆಗಂಜಲಾಗದು ಎಂಬ ನಿಲುವು. ತನ್ನ ಸೀಮಿತತೆಯಲ್ಲೂ ಹೆಣ್ಣಿನ ಗೃಹಿಣಿತನಕ್ಕೆ ಸಿಕ್ಕ ಮನ್ನಣೆ. ಹೆಣ್ಣಿನ ಕುರಿತ ವೈದಿಕ ಧರ್ಮಶಾಸ್ತ್ರಗಳು ಯಾವ ಮಿಥ್ಯಗಳನ್ನು ಕಟ್ಟಿದ್ದವೋ ಅದನ್ನು ಮುರಿವ ಪರ್ಯಾಯವು ರೂಪುಗೊಂಡ ಬಗೆ.
III. ಹೆಣ್ಣಿನ ಸಮಾನತೆಯ ಪ್ರಶ್ನೆಯು ಸಂವೇದನೆಯಾಗಿ ಅಂತರ್ಗತವಾಯಿತೇ, ಆದರ್ಶದ ಹಂತಕ್ಕೇ ಉಳಿಯಿತೇ? ಈ ಕೇಳಿಕೆ, ಇಂದಿನ ಕಣ್ಣಪಟ್ಟಿಯಿಂದ ಅಂದನ್ನು ಅಳೆದು ತೂಗುವುದಕ್ಕಾಗಿ ಅಲ್ಲ. ನಡೆ-ನುಡಿಗಳ ಒಂದುತನದ ಹಂಬಲ ಹೊತ್ತ ವಚನ ಚಳವಳಿಗೆ ಲಿಂಗಸಮಾನತೆಯನ್ನು ಬದುಕಾಗಿಸಿಕೊಳ್ಳುವುದು ಸಾಧ್ಯವಾಯಿತೇ ಎಂಬ ಹುಡುಕಾಟಕ್ಕಾಗಿ. ಇದು ಇಂದಿಗೂ ಮೀರಲಾಗದ ತೊಡಕು. ಪ್ರಾಣ ಘಾತುಕ ಸಂಕಟ.
ಬಸವಣ್ಣನಿಗೆ ಜಾತಿ ನಿರಸನವನ್ನು ಸಾಧಿಸಿಕೊಳ್ಳುವುದು ಸಾಧ್ಯವಾಯಿತು. ಚೆನ್ನಯ್ಯನ ಮನೆಯ ದಾಸನ ಮಗನು……., ನೆಲನೊಂದೆ ಹೊಲಗೇರಿ……., ಅಪ್ಪನು ನಮ್ಮ ಮಾದಾರ ಚನ್ನಯ್ಯ …… , ಇವೆಲ್ಲ ಹುಟ್ಟನ್ನು ವೈಭವೀಕರಿಸುವ ವೈದಿಕಕ್ಕೆ ಒಡ್ಡಿದ ಸವಾಲುಗಳು. ಇಷ್ಟು ದಟ್ಟವಾದ ಖಚಿತವಾದ ರೀತಿಯಲ್ಲಿ ಪುರಷಾಹಂಕಾರವನ್ನು ಕಳೆದುಕೊಳ್ಳುವುದು ಸಾಧ್ಯವಾಗಲಿಲ್ಲ.
ಎನ್ನ ಸತಿ ನೀಲಲೋಚನೆ….. –ಎಂಬ ವಚನ, ಹೆಣ್ಣು ಮತ್ತು ದೇಹದ ಸಮೀಕರಣದ ಪೂರ್ವನಿಶ್ಚಿತ ನೆಲೆಯನ್ನು ಸತಿ-ಪತಿಗಳೊಂದಾಗುವ ಹೆಣ್ಣಿನ ಅನಾಯ್ಕೆಯನ್ನು ಎದುರಿಡುತ್ತಿದೆ. ಬಸವಣ್ಣನ ಭಕ್ತಿ ಪರೀಕ್ಷೆಗಾಗಿ ಒದಗಬೇಕಾದವಳು ನೀಲಾಂಬಿಕೆ. ನೀಲಮ್ಮನ ವಚನಗಳು ಪ್ರಸಾದಕಾಯವಾಗಿ ಅರ್ಪಿತಳಾದವಳ ಬೇಗುದಿಯ ಭಾವಗೀತೆಗಳಂತಿವೆ. ಕಳ್ಳನ ಮನೆಗೊಬ್ಬ …….ಚಾಂಡಲಗಿತ್ತಿ…… ಎಂಬ ವಚನ ಸತೀತ್ವದ ಬಿಕ್ಕಟ್ಟುಗಳ ಮತ್ತೊಂದು ಕಥನ.
ಜೇಡರ ದಾಸಿಮಯ್ಯ ಮತ್ತು ದುಗ್ಗಳೆಯ ವಿವಾಹ ಪೂರ್ವದ ಪರೀಕ್ಷೆಯ ಕಥನ, ಅಂಬಲಿಯ ಪ್ರಸಂಗಗಳು- ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ-ಎಂಬ ಸಾಂಪ್ರದಾಯಿಕ ಪರಿಭಾಷೆಗಳು, ಪತಿಯಾಜ್ಞೆಯಲ್ಲಿ ನಡೆಯದಿರೆ ಯಾತನೆಯಲ್ಲವೆ ? (ಗಂಗಾಂಬಿಕೆ), ಇಂತಿವರ ಕಾರುಣ್ಯ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ ತತ್ತ್ವದ ಮಾತು ಎನಗೇಕಯ್ಯ ? (ದುಗ್ಗಳೆ)- ಹೀಗೆ ಮುಖಾಮುಖಿಗೊಳಿಸಿದಾಗ ಹೊರಡುವ ಫಲಿತ ಹೆಣ್ಣಿನ ಸಮಾನತೆಯ ಸಂಕಟದ ಸಂಕೀರ್ಣತೆಯ ಆಯಾಮ. ಇವು ದಾಂಪತ್ಯವೆಂಬ ಖಾಸಗಿ ವಲಯದ ಸಮಸ್ಯೆ ಎಂದು ಅಲಕ್ಷಿಸಲಾಗುವುದಿಲ್ಲ.
ಸಾಮಾಜಿಕವಾಗಿ ಹೆಣ್ಣನ್ನು ಸಹಜೀವಿಯಾಗಿ ಒಪ್ಪಿಕೊಳ್ಳುವಲ್ಲಿಯೂ ಈ ತೊಂದರೆ ಎದುರಾಗಿದೆ. ಪರಸತಿಯನು ಮಹಾದೇವಿಯೆಂಬೆ-ಎಂಬ ಗೌರವ ಸಮರ್ಪಣೆ, ಆ ಸತಿಯ ಪತಿಗೆ ಸಲ್ಲುವಂಥದ್ದು. ಸತಿಯರಲ್ಲದ ಗೊಗ್ಗವ್ವೆ, ಸಂಕವ್ವೆಯಂಥವರ ಬಗೆಗಿನ ನಿಲುವು ?
ಹೆಣ್ಣಿಗೆ ಸಾಮಾಜಿಕ ಗೌರವವನ್ನು ಕೊಟ್ಟ ಬಸವಣ್ಣನಿಗೂ ಈ ತೊಡಕು ನೀಗುವುದು ಸುಲಭವಾಗುವುದಿಲ್ಲ ಎನ್ನುವುದೇ ಸಮಸ್ಯೆಯ ತೀವ್ರತೆಯನ್ನು ಎದುರಿಡುತ್ತಿದೆ. ಲಿಂಗನಿಷ್ಠೆಯ ಶರಣಧರ್ಮದ ನಿಯಮ ಮಂಡಿಸುವಾಗ ಮತ್ತೆ ಮತ್ತದೇ ಮಡದಿ-ಸೂಳೆಯರ ಮಾದರಿಗಳು. ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ………., ಕೂಸುಳ್ಳ ಸೂಳೆ ಧನದಾಸೆಗೆ ………….. ಇಂತಹ ಹಲವುಗಳಿವೆ.
ಇದು, ಮಹಿಳಾ ಸಮಾನತೆ ಎಂಬ ಅಗ್ನಿದಿವ್ಯ. ಇಂದಿಗೂ ಗಂಡಿಗೂ, ಹೆಣ್ಣಿಗೂ ದಕ್ಕಿಸಿಕೊಳ್ಳಲಾಗದ ಪ್ರಮೇಯವೇ ಎಂಬುದಕ್ಕೆ ಸಾಕ್ಷಿ. ಅಚ್ಚರಿ ಮತ್ತು ಸಂಭ್ರಮವೆಂದರೆ ಈ ತೊಡಕನ್ನು ದಾಟಿದವರು ೧೨ನೇ ಶತಮಾನದ ಶರಣೆಯರು. ವಚನ ಚಳವಳಿ ಎಂಬ ಸಾಮಾಜಿಕ ಕ್ರಾಂತಿಗೆ ದೀವಿಗೆಯಿವರು. ಒಳಗೆ ಸುಳಿವಾತ್ಮ ಎಂಬ ಬೆಳಕಿನ ಬೀಜವನ್ನು ತಮ್ಮ ವ್ಯಕ್ತಿತ್ವದಲ್ಲಿ ನೆಟ್ಟು ಬೆಳಕನ್ನು ಬೆಳೆದರು.
ಬೆಟ್ಟಿ ಫ್ರೀಡನ್ ಎಂಬ ಸ್ತ್ರೀವಾದಿ ಚಿಂತಕಿ “ಜಗತ್ತಿನ ಎಲ್ಲ ಚಳುವಳಿಗಳು ಹೆಣ್ಣಿನ ಪಾಲುದಾರಿಕೆಯಿಂದ ಯಶಸ್ವಿಯಾಗಿವೆ. ಆದರೆ ಆ ಚಳುವಳಿಗಳು ಹೆಣ್ಣಿಗೆ ಕೊಟ್ಟಿದ್ದೇನು?” ಎಂಬ ಪ್ರಮೇಯವನ್ನಿಡುತ್ತಾರೆ. ಆ ಮರುವಿವೇಚನೆಗೆ ವಚನ ಚಳುವಳಿಯೂ ಹೊರತಲ್ಲ. ಒಳಗೆ ಸುಳಿವ ಆತ್ಮಶಕ್ತಿಯ ನಿರ್ವಚನದ ನೆಲೆ ಅಕ್ಕ ಎಂಬ ಮೊದಲ ಸ್ತ್ರೀವಾದಿಯದು. ಅಕ್ಕನೆಂಬ ಅನೂಹ್ಯ ಚೈತನ್ಯದ ಆಸ್ಫೋಟಕ್ಕೆ ಬಸವಾದಿ ಪ್ರಮಥರ ಅನುಭಾವ ಮಂಟಪದ ನೆಲೆ ಒದಗಿತು ಎಂಬುದು ಸತ್ಯ.
ಅಕ್ಕನೆಂಬ ಸ್ವಯಂಭೂ ದೀಪ್ತಿಯೂ ಅಷ್ಟೇ ಸತ್ಯ. ಹೆಣ್ಣನ್ನು ಆಳಬಹುದೆಂಬ ಪಿತೃಸತ್ತೆಗೆ ಸವಾಲಾದವಳು ಅಕ್ಕ. ಆರೂ ಇಲ್ಲದವಳೆಂದು……, ಹಸಿವಾದೊಡನೆ ಭಿಕ್ಷಾನ್ನಗಳುಂಟು……… ಕಾಮನ ತಲೆಯ ಕೊರೆದು………. ಅತಿಕಾಮಿ ಚನ್ನಮಲ್ಲಿಕಾರ್ಜುನಿಗೂ ತೊಡರನಿಕ್ಕಿದವಳು ಅಕ್ಕ. ಕೌಶಿಕನನ್ನು ಮಾತ್ರವಲ್ಲ ಕೌಶಿಕತನವನ್ನೇ ಎದುರಿಸಿದವಳು. ಎಲುಬಿನ ತಡಿಕೆ— ಎಂಬ ದೇಹ ನಿರಾಕರಣೆಯಿಂದ, ಎನ್ನ ದೇಹವೇ ನೀನಾದ ಬಳಿಕ ನಿನ್ನನೆಂತು ಪೂಜಿಸಲಿ ? ಎಂಬ ಹೆಣ್ತನವೆಂಬ ಘನತೆಯ ಎತ್ತರವನ್ನು ಸ್ಥಾಪಿಸಿದವಳು.
ಹೆಣ್ತನದ ಬೌದ್ಧಿಕ ವಿಕಾಸದ ಒಂದೊಂದು ಹೆಜ್ಜೆಯಲ್ಲಿಯೂ ಒಳಗೆ ಸುಳಿವಾತ್ಮದ ನಿಷ್ಕರ್ಷೆಗಳು ನಡೆದಿವೆ. ನೀಲಮ್ಮನ- ಹಂದೆಯಲ್ಲ ನಾನು ಹರುಷದ ಧೈರ್ಯವುಳ್ಳ ಹೆಣ್ಣು – ಎಂಬ ವಚನ. ಹೆಣ್ಣು ಎಂದರೆ ಹೀಗೇ ಎಂಬ ರೂಢಿಯನ್ನು ನಿರಾಕರಿಸಿ, ಹೆಣ್ಣಾಗಿ ತಾನೇನು ಎಂದು ಮರುನಿರ್ವಚಿಸಿಕೊಳ್ಳುತ್ತದೆ. ತನ್ನ ತಾನರಿತ ಅರಿವಿನ ನಿರ್ಭೀತ ದಾರಿಯನ್ನು ತೆರೆಯುತ್ತದೆ. ವಚನ ಚಳುವಳಿಗೆ ತಾಯ್ತನದ ವಿವೇಕದ ಸಂಗೋಪನೆ ಮಾಡಿದವರು ವಚನಕಾರ್ತಿಯರು. ಶರಣರೊಳಗೂ ಇದ್ದ ಅವೈಚಾರಿಕ ಅಸಮಾನ ಸ್ಥಿತಿಯ ತಿದ್ದುಪಡಿಗಳಲ್ಲಿ ಅದೆಷ್ಟು ನಿಷ್ಠೆಯಿಂದ ತೊಡಗಿಸಿಕೊಂಡರು! ಭವಿಗಳು ತಪ್ಪಿದರೆ ಒಪ್ಪುವ. ಭಕ್ತ ತಪ್ಪಿದರೆ ಒಪ್ಪಲಾಗದು ಎಂಬ ಅಕ್ಕರೆಯಲ್ಲಿ.
೧) ಅವನ ಎದುರು ಅವನ ಸತಿಯನ್ನು ಅವ್ವಾ ಎಂದು, ಆತ ಸಂದಲ್ಲಿ ಸತಿ ಎಂಬ ಭಂಡರಿಗೆ ವೃತನೇಮಗಳೇಕೆ?
೨) ತುಪ್ಪ ಬೋನ ಉಂಡು, ಅರಿವುಗೆಟ್ಟವರಾಗಿ ಇಷ್ಟಲಿಂಗವಪ್ಪಿದವರು ಜ್ಞಾನಿಗಳು ಎಂದರೆ ಅವರ ಬಾಯಲ್ಲಿ ಬಾಲ ಹುಳು ಸುರಿಯುವೆ.
೩) ಕೈದು ಕೊಡುವರಲ್ಲದ ಕಲಿತನವ ಕೊಡುವರೇ ಮಾರಯ್ಯ?
೪) ಸೀರೆಯೊಳಗೊಂದೆಳೆಯ……. ಎಂಬ ದೃಢತೆ, ಕುರಿಕೋಳಿ ಕಿರಿಮೀನು ತಿಂಬವರಿಗೆಲ್ಲ —- ಎಂಬ ವಚನದಲ್ಲಿ ಇರುವ ಆಹಾರ ರಾಜಕಾರಣದ ತಿಕ್ಕಾಟದ ತೀಕ್ಷ್ಣತೆ,………
ಇಂತಹ ನೂರಾರು ವಚನಗಳು ವಚನಕಾರ್ತಿಯರ ಪ್ರಬುದ್ಧತೆಯ ಸಾಕ್ಷೀಪ್ರಜ್ಞೆಗಳಾಗಿ ನಮ್ಮೆದುರಿವೆ. ಯಾರು ಯಾರನ್ನು ಮುನ್ನಡೆಸಿದರು ಎಂಬ ಅಚ್ಚರಿಯೂ ಅಗಿದೆ.
IV. ನಾವಿಂದು ವಚನ ಚಳವಳಿಯನ್ನು ಮರುಸಂಕಥನಗೊಳಿಸಿಕೊಳ್ಳುವ ಅಗತ್ಯವೇನು ? ಯಾವ ವೈದಿಕ ಜಾಡ್ಯವನ್ನು ವಿರೋಧಿಸಿ, ಸಮ ಸಮಾಜದ ಕನಸು ಕಾಣಲಾಗಿತ್ತೋ ಅದೀಗ ಏನಾಗುತ್ತಿದೆ ? ಜನ ವಿವೇಕವನ್ನು ಮತೀಯಗೊಳಿಸುವ ಆಕ್ರಮಣ, ಬೌದ್ಧಿಕ ವಿಕಾಸವನ್ನು ಹತ್ತಿಕ್ಕುತ್ತಿದೆ. ನಾವಿಂದು ಮಹಿಳೆಯರು, ಜಾತಿ-ಧರ್ಮಗಳ ಸ್ಥಾವರದೊಳಗೆ ಸಿಲುಕಿದ್ದೇವೆ. ತಪ್ಪು-ಸರಿಗಳನ್ನು ಕಾಣಲಾರದವರಾಗಿದ್ದೇವೆ. ವಚನ ಚಳವಳಿ ಕೊಟ್ಟ ಸಮಸಮಾಜದ ಕನಸಿನ ಬೀಜ ನಮ್ಮೆಲ್ಲರ ಬೊಗಸೆಯಲ್ಲಿದೆ. ನೆಲಕ್ಕೂರಿ ಬೆಳೆಸುವ ಬಯಲಿಗೆ ಒಡ್ಡಿಕೊಳ್ಳಬೇಕಿದೆ.