ಗದಗ
ನಾಡು ನುಡಿಗೆ ಲಿಂಗಾಯತ ಧರ್ಮದ ಕೊಡುಗೆ ಅಪಾರ, ಕನ್ನಡ ಭಾಷೆ ದುಂಡು ದುಂಡಾದ ಭಾಷೆ. ವಚನಕಾರರು ಕನ್ನಡ ಭಾಷೆಯಲ್ಲಿಯೇ ವಚನಗಳನ್ನು ರಚಿಸಿ, ಕನ್ನಡ ಭಾಷೆಯ ಸುಂದರತೆಗೆ, ಬೆಳವಣಿಗೆಗೆ ಕಾರಣರಾದರು ಎಂದು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಅವರು 2718 ನೇ ಶಿವಾನುಭವದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕನ್ನಡ ಭಾಷೆ 2000 ವರ್ಷಗಳ ಇತಿಹಾಸ ಹೊಂದಿದೆ. ಪಂಪ ಕನ್ನಡದ ಆದಿಕವಿಯಾದರೆ, ಅಕ್ಕಮಹಾದೇವಿ ಆದಿ ಕವಿಯಿತ್ರಿ. ಮೊದಲಿದ್ದ ಮುಂಬೈ ಕರ್ನಾಟಕ ಈಗ ಕಿತ್ತೂರು ಕರ್ನಾಟಕವಾಗಿದೆ. ಕನ್ನಡ ಭಾಷೆಯನ್ನು ಆಡುವ ಪ್ರದೇಶವನ್ನು ಕರ್ನಾಟಕವೆಂದು, ಏಕೀಕರಣದ ಹೊರಾಟದಿಂದ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿದರು. ಮರಾಠಿ ಮಯವಾಗಿದ್ದ ಕನ್ನಡ ಪ್ರದೇಶದಲ್ಲಿ ಡೆಪ್ಯುಟಿ ಚನ್ನಬಸಪ್ಪನವರು ಕನ್ನಡ ಶಾಲೆಗಳನ್ನು ತೆರೆದು, ಕನ್ನಡ ಭಾಷೆ ಉಳಿಸಿದರು. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೇಕು, ಗಡಿನಾಡು ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕನ್ನಡ ಕಟ್ಟುವ ಕೆಲಸವಾಗಬೇಕು. ಕನ್ನಡಕ್ಕಾಗಿ ಹೋರಾಡಿದ ದಿಗ್ಗಜರನ್ನು ಸ್ಮರಿಸಿಕೊಳ್ಳಬೇಕು ಎಂದರು.
ಪೂಜ್ಯ ರಾಚೋಟೇಶ್ವರ ಮಹಾಸ್ವಾಮಿಗಳು ಅಂತೂರ ಬೆಂತೂರ ಇವರು ವಿಶೇಷ ಕನ್ನಡ ತಿಂಗಳಿನ ಕಾರ್ಯಕ್ರಮವನ್ನು ವಿನೂತನವಾಗಿ ತಂತ್ರಾಂಶ ಬಳಸಿಕೊಂಡು ರಿಮೋಟ್ ಡಿವೈಸ್ ಉಪಯೋಗಿಸಿ ಉದ್ಘಾಟಿಸಿದರು.
ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸಿದ್ಧಲಿಂಗೇಶ್ವರ ಹಲಸೂರು ರವರು ತೋಂಟದಾರ್ಯ ಮಠದಲ್ಲಿ ನೆಡೆದ ನವೆಂಬರ್ ತಿಂಗಳ ವಿಶೇಷ ಶಿವಾನುಭವ ಕಾರ್ಯಕ್ರಮದಲ್ಲಿ ಕನ್ನಡದ ದಿಗ್ಗಜರು ವಿಷಯ ಕುರಿತು ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಸಾಹಿತಿಗಳ, ಕವಿಗಳ, ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ವೈದ್ಯ ಜಿ. ಬಿ. ಬೀಡನಾಳ ಇವರನ್ನು ಸಂಮಾನ ಮಾಡಲಾಯಿತು.
ಸುವರ್ಣ ಸಂಭ್ರಮ ವಿಶೇಷ ಪ್ರಶಸ್ತಿ ಪುರಸ್ಕೃತ ರಾದ ಜಾನಪದ ಕಲಾವಿದ ಶ್ರೀ ಸುರೇಶ ಠಾಕರಪ್ಪ ಲಮಾಣಿ ಅವರನ್ನು ಸನ್ಮಾನಿಸಲಾಯಿತು.
ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನೆರವೆರಿಸಿದರು. ಧರ್ಮಗ್ರಂಥ ಪಠಣವನ್ನು ಕುಮಾರಿ ಸೌಜನ್ಯ ಎಸ್. ಹಳ್ಳಿಕೇರಿ, ವಚನ ಚಿಂತನವನ್ನು ಕುಮಾರಿ ಛಾಯಾ ಜಿ. ಜಂಗಮನಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶರಣ ಕರಿಯಪ್ಪ ಸಿದ್ದಲಿಂಗಪ್ಪ ಜಂಗಳಿ, ಕನಕಶ್ರೀ ಮೆಡಿಕಲ್ ಸ್ಟೋರ್ ಗದಗ ಇವರು ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿಯವರು, ಸದಸ್ಯರಾದ ಸೋಮಶೇಖರ ಪುರಾಣಿಕ, ವಿದ್ಯಾ ಗಂಜಿಹಾಳ, ಮಹೇಶ ಗಾಣಿಗೇರ, ನಾಗರಾಜ್ ಹಿರೇಮಠ, ಬಸವರಾಜ ಕಾಡಪ್ಪನವರ ಹಾಗೂ ಶಿವಾನಂದ ಹೊಂಬಳ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಎ.ಬಳಿಗೇರ ಅವರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ. ಬಿ. ಬೆನಕೊಪ್ಪ ಸಂಮಾನಿತರನ್ನು ಪರಿಚಯಿಸಿದರು, ಉಪಾಧ್ಯಕ್ಷ ಡಾ.ಉಮೇಶ ಪುರದ ಕಾರ್ಯಕ್ರಮ ನಿರೂಪಿಸಿದರು.