ನೋವು ತಿಂದು ಸಮಸಮಾಜದ ಕನಸು ಕಂಡ ಬಸವಣ್ಣ: ಬಸವನಗೌಡ ಮಾಳಗಿ

ಶಿವಮೊಗ್ಗ

ಅಪಾರ ಅಪಮಾನ, ನೋವು, ಸಂಕಟ ಅನುಭವಿಸಿಯೂ ಬಸವಣ್ಣವರು ಸಮಸಮಾಜ ನಿರ್ಮಾಣದ ಕನಸು ಕಂಡವರು ಎಂದು ವಚನ ಮಂಟಪ ಸಂಚಾಲಕ ಬಸವನಗೌಡ ಮಾಳಗಿ ಹೇಳಿದರು.

ಶಿವಮೊಗ್ಗದ ಬಸವ ಕೇಂದ್ರ ಆಯೋಜಿಸಿರುವ ಚಿಂತನ ಕಾರ್ತಿಕದಲ್ಲಿ ‘ನಾಳೆ ಬಪ್ಪುದು ನಮಗಿಂದೇ ಬರಲಿ’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಬಸವಣ್ಣನವರಿಗೆ ಬಾಲ್ಯದಿಂದಲೇ ಸಮಾಜದಲ್ಲಿ ಸಮಗ್ರ ಬದಲಾವಣೆಯ ತುಡಿತವಿತ್ತು. ಇದೇ ಕಾರಣಕ್ಕೆ ಅವರು ಜನಿವಾರ ಕಿತ್ತೊಗೆದು ಸಾಮಾಜಿಕ ಕ್ರಾಂತಿಗೆ ಮುಂದಾದರು ಎಂದು ಹೇಳಿದರು.

ಬುದ್ಧನ ದಯೆ, ಮಹಾವೀರನ ಅಹಿಂಸೆ, ಮಾರ್ಕ್ಸ್ ನ ಅರ್ಥಶಾಸ್ತ್ರ, ಕ್ರಿಸ್ತನ ಮಾನವ ಪ್ರೇಮ, ಪೈಗಂಬರರ ಬ್ರಾತೃತ್ವ, ಅಂಬೇಡ್ಕರ್ ಅವರ ದಲಿತೋದ್ಧಾರ, ಗಾಂಧೀಜಿಯವರ ಸಾಮಾಜಿಕ ಚಿಂತನೆ ಇವೆಲ್ಲವೂ ಮಿಳಿತಗೊಂಡಿರುವ ವ್ಯಕ್ತಿಯೇ ಬಸವಣ್ಣ.

ಕವಿ ಎಂದು ಹೇಳಿಕೊಳ್ಳದೆ ಕಾವ್ಯದ ಮಾಂತ್ರಿಕತೆಯನ್ನು ವಚನಗಳಲ್ಲಿ ಅಭಿವ್ಯಕ್ತಿಸಿದ ಶ್ರೇಷ್ಠ ಕವಿ. ಬೆರಗು-ಬೆಡಗಿನಿಂದ ಕೂಡಿದ ವೈವಿಧ್ಯಮಯ ಬದುಕಿನ ಬಸವಣ್ಣ ಅವರದ್ದು. ಶಕ್ತಿ- ಸಾಮರ್ಥ್ಯ- ಶ್ರೇಷ್ಠತೆಯ ಸಂಗಮ ಎಂದು ವಿವರಿಸಿದರು.

ಆತ್ಮ, ಪರಮಾತ್ಮ, ಮೋಕ್ಷ, ಮಾಯೇ, ಜಗತ್ತು ಮುಂತಾದವು ಜನಸಮಾನ್ಯರಿಗೆ ಅರ್ಥವಾಗದ ವಿಷಯಗಳು ಅಂದಿನ ಸಮಾಜದಲ್ಲಿ ಬೇರೂರಿದ್ದವು. ಇಂಥ ವಿಷಯಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ ಅರ್ಥೈಸಿದ ದಾರ್ಶನಿಕ ಬಸವಣ್ಣನವರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಬಸವಕೇಂದ್ರದ ಡಾ. ಶ್ರೀಬಸವ ಮರುಳಸಿದ್ದ ಸ್ವಾಮೀಜಿ, ನಾಳೆ ಬಪ್ಪುದು ನಮಗಿಂದೇ ಬರಲಿ ಎನ್ನುವ ಮೂಲಕ ಬಸವಣ್ಣನವರು ಬದುಕಿನ ಬಗ್ಗೆ ಆತ್ಮವಿಶ್ವಾಸ ಮೂಡಿಸುತ್ತಾರೆ. ಈ ಆತ್ಮವಿಶ್ವಾಸ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಮೂಡಿಸುತ್ತದೆ ಎಂದರು.

ನೈತಿಕತೆ ಎಂಬ ಆಯುಧ ನಮ್ಮ ಬಳಿ ಇದ್ದಾಗ ಯಾವುದೇ ಪರಿಸ್ಥಿತಿಗೂ ಹೆದರುವ ಅಗತ್ಯವಿರುವುದಿಲ್ಲ. ಆತ್ಮಸಾಕ್ಷಿಗೆ ಹಾಗೂ ದೇವರಿಗೆ ಮಾತ್ರ ಅಂಜುವ ಬದುಕು ನಮ್ಮದಾಗಬೇಕು.

ಅಂತರಂಗ-ಬಹಿರಂಗ ಪವಿತ್ರವಾಗಿ ಇಟ್ಟಕೊಳ್ಳದಿದ್ದರೆ ಬದುಕು ದಾರಿ ತಪ್ಪುತ್ತದೆ. ನೈತಿಕ ಶಕ್ತಿ ಕಳೆದುಕೊಂಡರೆ ತಲೆತಗ್ಗಿಸುವ ಪರಿಸ್ಥಿತಿ ಬರುತ್ತದೆ ಎಂದರು.

ಜೀವನ ನಿರಂತರ ಹೋರಾಟ- ಇದನ್ನು ಸಮರ್ಥವಾಗಿ ಎದುರಿಸಲು ಆತ್ಮಸಾಕ್ಷಿ ಬೇಕು. ನೈತಿಕತೆಯಿಂದ ಮಾತ್ರ ಇಂಥ ಬದುಕು ಸಾಧ್ಯ. ಶುದ್ಧ ಹಾಗೂ ನೈತಿಕ ಬದುಕು ನೆಮ್ಮದಿಗೆ ದಾರಿ ಆಗಬಲ್ಲದು ಎಂದರು.

ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕಿರಣ್ ದೇಸಾಯಿ ಕಾರ್ಯಕ್ರಮ ಆಯೋಜಿಸಿದ್ದರು. ಜಂಗಮ ಪುರೋಹಿತ ಸಮಾಜದ ಅಧ್ಯಕ್ಷರಾದ ಡಾ. ರೇಣುಕಾರಾಧ್ಯ ಅಧ್ಯಕ್ಷತೆವಹಿಸಿದ್ದರು.

ಅಕ್ಕನ ಬಳಗದಿಂದ ವಚನ ಗಾಯನ ನಡೆಯಿತು. ಶರಣ, ಶರಣೆಯರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *