ಅನುಭವ ಮಂಟಪದ ಶರಣರ ವೇಷದಲ್ಲಿ ಮಿನುಗಿದ ಚಿಣ್ಣರು

ತೇರದಾಳ

ಅಲ್ಲಮಪ್ರಭು, ಬಸವಣ್ಣ ಸೇರಿದಂತೆ ಹಲವು ಶರಣರ ವೇಷ ಧರಿಸಿ, ಆಯಾ ವಚನಕಾರರ ವಚನಗಳನ್ನು ಹೇಳುವ ಮೂಲಕ ಇಲ್ಲಿನ ನೀಲಕಂಠೇಶ್ವರ ಶಾಲೆಯ ಮಕ್ಕಳು ಕಲ್ಯಾಣದ ಮಹಾಮನೆಯನ್ನು ರಚಿಸುವ ಮೂಲಕ ವಿನೂತನವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.

ಅಲ್ಲಮನ ವೇಷಧಾರಿ ಪವನ ಬಸಪ್ಪ ಮಾಳಿ ಅವರ ವಚನ ವಾಚನ ಮಾಡಿದರೆ, ಉಳಿದ ಶಿವಶರಣರಾದ ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಹಲವಾರು ವಚನಕಾರರ ವೇಷ ಧರಿಸಿದ್ದಲ್ಲದೆ, ಅವರ ವಚನಗಳನ್ನು ಪಠಿಸುವ ರೀತಿ ವಿಶೇಷವಾಗಿತ್ತು. ಬಸವಣ್ಣನಾಗಿ ಓಂಕಾರ ದೇವಲಾಪುರಮಠ, ಅಕ್ಕಮಹಾದೇವಿಯಾಗಿ ಗಾಯತ್ರಿ ಮಾನಶೆಟ್ಟಿ, ಚನ್ನಬಸವಣ್ಣ-ಶ್ರವಣ ಪ್ರಕಾಶ ಗಿರೆನ್ನವರ, ಮಡಿವಾಳ ಮಾಚಿದೇವ-ದರ್ಶನ ಬೆಳಗಲಿ, ಜೇಡರ ದಾಸಿಮಯ್ಯ-ಮಣಿಕಂಠ ಬೋರನಟ್ಟಿ, ನೀಲಾಂಬಿಕೆ-ಬಾಗೀರಥಿ ಕಂಪುನವರ, ಆಯ್ದಕ್ಕಿ ಲಕ್ಕಮ್ಮ-ಭಾಗ್ಯ ಬೆಳಗಲಿ, ಮಾದಾರ ಚನ್ನಯ್ಯ-ವೇದಾಂತ ಕಂಪುನವರ, ನಾಗಲಾಂಬಿಕೆ-ನಮಿತಾ ಉಳಗೊಂಡ, ಅಂಬಿಗರ ಚೌಡಯ್ಯ-ಪ್ರೀತಮ ಅಂಬಲಿ, ಶಿಶುನಾಳ ಶರೀಫನಾಗಿ ಅಯಾನ್ ಅತ್ತಾರ ಗಮನ ಸೆಳೆದರು.

ನಂತರ ಮಾತೆಯರಿಂದ ಮಾತೃ ಭೋಜನ ಕಾರ್ಯಕ್ರಮ ಜರುಗಿತು. ಮಾತೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಆಹಾರವನ್ನು ತಂದು ಶಾಲಾ ಆವರಣದಲ್ಲಿ ತಮ್ಮ ಮಕ್ಕಳಿಗೆ ಕೈತುತ್ತು ಉಣಿಸುವ ಮೂಲಕ ಮಾತೃ ವಾತ್ಸಲ್ಯ ಮೆರೆದರು. ವಿಶೇಷವಾಗಿ ಮಕ್ಕಳು ಹಾಗೂ ಪಾಲಕರಿಗಾಗಿ ಮೋಜಿನ ಆಟಗಳಾದ ಕೂಸುಮರಿ, ಹೆಜ್ಜೆ ಮೇಲೆ ಹೆಜ್ಜೆ, ಹೂಪ್ಸ್ ಗೇಮ್, ಬಲೂನ್ ಗೇಮ್, ಚಂಡೆಸೆತ, ಇಟ್ಟಿಗೆ ಆಟ, ಜೋಡಿ ಹೆಜ್ಜೆ, ಬಾಟಲ್ ಗೇಮ್, ಮ್ಯಾಜಿಕ ನೃತ್ಯ, ಬಲೂನ ಬ್ಯಾಲೆನ್ಸ್ ಮತ್ತು ಬಲೂನ್ ಕ್ಯಾಚ್‌ಗಳನ್ನು ಆಡಿಸುವ ಮೂಲಕ ಮನರಂಜಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಶಿಕ್ಷಕ ಸಂತೋಷ ಖವಾಸಿ `ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವ ಮಕ್ಕಳು ಮತ್ತು ಪಾಲಕರ ಓಡನಾಟ ನಗರ ಪ್ರದೇಶದಲ್ಲಿ ಕಣ್ಮರೆಯಾಗುತ್ತಿದೆ. ಮಕ್ಕಳಿಗೆ ಸಮಯ ಕೊಡಲು ಅವರ ಪಾಲಕರಿಗೆ ಆಗುತ್ತಿಲ್ಲ. ಯಾಂತ್ರಿಕ ಜೀವನದಂತೆ ಆಗಿದ್ದು, ಮಕ್ಕಳು ಪಾಲಕರ ಜೊತೆಗೆ ಬೆಳೆದಾಗ ಅಲ್ಲಿ ಬಾಂಧವ್ಯ ಚಿರವಾಗಿರುತ್ತದೆ. ಮಕ್ಕಳ ಆಸೆ ಪಾಲಕರಿಗೆ, ಪಾಲಕರ ಕಷ್ಟ ಮಕ್ಕಳ ಅರಿವಿಗೆ ಬರುವ ಮೂಲಕ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಗುಣ ಬೆಳೆಸಬಹುದು’ ಎಂದರು. ಶಾಲಾ ಶಿಕ್ಷಕರಾದ ವಿಶ್ವನಾಥ ಉಪ್ಪಿನ, ಎಮ್.ಕೆ.ಆಡಿನ್, ಉಮೇಶ ಕಳಸದ, ಆರ್.ಬಿ.ಬರಗಿ, ಎಮ್.ಎಸ್.ಬೆನಕಟ್ಟಿ, ಮಲ್ಲಿಕಾರ್ಜುನ ಕೋಷ್ಠಿ, ಎಲ್.ಸಿ.ಬಿರಡಿ, ಎಸ್.ಎಚ್.ಕಡಕೋಳ, ಅಂಬಲಿ, ಜಾಧವ ಸೇರಿದಂತೆ ಪಾಲಕರು, ಮಕ್ಕಳು ಇದ್ದರು.

Share This Article
2 Comments
  • ಅತ್ಯಂತ ಶ್ಲಾಘನೀಯ. ಅನುಭವ ಮಂಟಪದ ರೂಪಕಗಳು ನೋಡುಗರ ಮನಸ್ಸಿನಲ್ಲಿ ಆಳವಾಗಿ ಮತ್ತು ದೀರ್ಘಕಾಲ ಉಳಿಯುತ್ತವೆ.

    ಪಾತ್ರ ಮಾಡಿದ ಮಕ್ಕಳಿಗೆ ಮತ್ತು ಶಿಕ್ಷಕವೃಂದದವರಿಗೆ ಅಭಿನಂದನೆಗಳು

Leave a Reply

Your email address will not be published. Required fields are marked *