ತೃತೀಯ ಲಿಂಗಿ ವ್ಯಕ್ತಿಗಳನ್ನು ಅಪ್ಪಿಕೊಳ್ಳುವ ಶರಣ ತತ್ವದ ನಾಟಕ (ಎರಡು ವಿಮರ್ಶೆ)

2Posts
Auto Updates

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿ ಮಹಾದೇವ ಹಡಪದ ನಿರ್ದೇಶಿಸಿರುವ “ಕೋಳೂರು ಕೊಡಗೂಸು” ಶರಣ ತತ್ವವನ್ನು ಪ್ರತಿಪಾದಿಸುವ ನಾಟಕ. ಇತ್ತೀಚೆಗೆ ಪ್ರದರ್ಶನಗೊಂಡ ಈ ನಾಟಕವನ್ನು ಹೆಚ್. ಎಂ. ಸೋಮಶೇಖರಪ್ಪ ಮತ್ತು ಎಚ್.ಎಸ್. ನವೀನಕುಮಾರ ವಿಮರ್ಶಿಸಿದ್ದಾರೆ.

5 days 3 hr agoNovember 16, 2024 5:46 am

ಹರಿಹರನ ರಗಳೆಗೆ ವೈಚಾರಿಕ ಸ್ಪರ್ಶ

ಹೆಚ್. ಎಂ. ಸೋಮಶೇಖರಪ್ಪ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾಮಠ, ಸಾಣೇಹಳ್ಳಿ ಇವರು ರಚಿಸಿ ಶ್ರೀ ಮಹಾದೇವ ಹಡಪದ ಇವರು ನಿರ್ದೇಶಿಸಿರುವ ಶಿವಸಂಚಾರ-24ರ ತಂಡ ಅಭಿನಯಿಸಿರುವ ನಾಟಕ “ಕೋಳೂರು ಕೊಡಗೂಸು” ಈ ಬಾರಿಯ ನಾಟಕೋತ್ಸವದ ಕೊನೆಯ ದಿನವಾದ ಶನಿವಾರದಂದು (ದಿನಾಂಕ 09.11.2024) ಸಾಣೇಹಳ್ಳಿಯಲ್ಲಿ ಪ್ರದರ್ಶನಗೊಂಡಿತು.

ಈ ನಾಟಕದ ಮೂಲ 12 ನೇ ಶತಮಾನದಲ್ಲಿ ರಚನೆಯಾಗಿರುವ ಹರಿಹರನ ಕೋಳೂರು ಕೊಡಗೂಸಿನ ರಗಳೆ.

ಮೂಲ ಕಥೆಯಲ್ಲಿ, ಮಕ್ಕಳಿಲ್ಲದ ದಂಪತಿಗಳು ಕಲ್ಲಿನಾಥ ದೇವರ ಹರಕೆಯಿಂದ ಒಂದು ಹೆಣ್ಣುಮಗು ಪಡೆಯುತ್ತಾರೆ. ಹರಕೆಯ ಭಾಗವಾಗಿ ಪ್ರತಿದಿನವೂ ಹಾಲಿನ ನೈವೇದ್ಯ ಅರ್ಪಿಸುತ್ತಿರುತ್ತಾರೆ. ಕೆಲಸದ ನಿಮಿತ್ತ, ಹೊರ ಊರಿಗೆ ಹೋಗಬೇಕಾದ ಸಂದರ್ಭ ಬಂದಾಗ ತಮ್ಮ ಮಗಳು ಕೊಡಗೂಸಿಗೆ ದೇವರಿಗೆ ತಪ್ಪದೆ ಹಾಲಿನ ನೈವೇದ್ಯ ಅರ್ಪಿಸುವ ಜವಾಬ್ದಾರಿ ಕೊಟ್ಟು ಹೋದ ಸಂದರ್ಭದಲ್ಲಿ ಕಲ್ಲಿನಾಥ ನಿಜವಾಗಿಯೂ ತಾನೇ ಹಾಲನ್ನು ಕುಡಿಯುತ್ತಿದ್ದ ಎಂದು ನಂಬಿದ್ದ ಕೊಡಗೂಸು ತನ್ನ ಮುಗ್ಧ ಭಕ್ತಿಯಿಂದ ದೇವರೇ ಪ್ರತ್ಯಕ್ಷವಾಗಿ ಬಂದು ಹಾಲು ಕುಡಿಯುವಂತೆ ಮಾಡುತ್ತಾಳೆ.

ಇದು ಕೋಳೂರಿನಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಇದನ್ನು ನಂಬದ ತಂದೆ ತಾಯಿಯರು ಮತ್ತು ಊರಿನ ಜನರು ದೇವರಿಗೆ ಹಾಲು ಕುಡಿಸಿ ತೋರಿಸುವಂತೆ ಒತ್ತಾಯಿಸುತ್ತಾರೆ. ಅವರೆಲ್ಲರ ಒತ್ತಾಯದಿಂದ ಕೊಡಗೂಸಿಗೆ ಆದ ಅವಮಾನದಿಂದ ಅವಳನ್ನು ಪಾರುಮಾಡಲು ಶಿವನೇ ಪ್ರತ್ಯಕ್ಷವಾಗಿ ಕೊಡಗೂಸನ್ನು ಎತ್ತಿಕೊಂಡು ಕಲ್ಲಿನಾಥ ಲಿಂಗದಲ್ಲಿ ಲೀನವಾಗುತ್ತಾನೆ ಮತ್ತು ಈ ಸಂದರ್ಭದಲ್ಲಿ ಮಗುವಿನ ತಲೆಯ ಕೂದಲು ಬಾಯಿತೆರೆದ ಲಿಂಗದಲ್ಲಿ ಲೀನವಾಗುವಾಗ ಲಿಂಗದ ತಲೆಯಮೇಲೆ ಸಿಕ್ಕಿಹಾಕಿಕೊಂಡು ಸ್ವಲ್ಪ ಕೂದಲು ಉಳಿದು ಬಿಡುತ್ತವೆ.

ಶೈವಪಂಥದ ಅನುಯಾಯಿಯಾಗಿದ್ದ ಹರಿಹರನು ಶಿವನ ಮಹಿಮೆಯ ಶ್ರೇಷ್ಠತೆ ಮತ್ತು ಭಕ್ತರನ್ನು ಶಿವ ಹೇಗೆ ಕಾಪಾಡುತ್ತಾನೆ ಎಂದು ಕೊಂಡಾಡುವ ಸಲುವಾಗಿ ರಚಿಸಿದ್ದ ಈ ರಗಳೆಯ ಮೂಲ ಕಥೆಯನ್ನು ಆಧಾರವಾಗಿಟ್ಟುಕೊಂಡು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ನಾಟಕವನ್ನು ರಚಿಸಿದ್ದಾರೆ. ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಸಂದರ್ಭಕ್ಕೆ ಅನುಗುಣವಾಗಿ ರಚಿಸಿದ್ದ ಹರಿಹರನ ಕೋಳೂರ ಕೊಡಗೂಸಿನ ರಗಳೆಯ ಮೂಲ ಕಥೆಗಿಂತ ಸಂಪೂರ್ಣವಾಗಿ ಭಿನ್ನವಾಗಿ ಅಂದರೆ, ಇಂದಿನ ಕಾಲಮಾನದ ಧಾರ್ಮಿಕ ಮತ್ತು ಸಾಮಾಜಿಕ ಸಂದರ್ಭಕ್ಕೆ ಅನುಗುಣವಾಗಿ ಈ ನಾಟಕವನ್ನು ಮರುನಿರೂಪಿಸಿದ್ದಾರೆ.

ಭಕ್ತಿ ಮತ್ತು ಪವಾಡ ಪ್ರಧಾನವಾದ ಮೂಲ ಕಥೆಗೆ ಸ್ವಾಮೀಜಿಯವರು ಸಮಾಜೋ-ಧಾರ್ಮಿಕ ಸ್ಪರ್ಶವನ್ನು ಕೊಟ್ಟು ಈ ನಾಟಕದ ಮೂಲಕ ಸಮಾಜದಲ್ಲಿ ಬದಲಾವಣೆಗಳನ್ನು ತರಬಹುದಾದಂತಹ ಪ್ರಯತ್ನವನ್ನು ಮಾಡಿದ್ದಾರೆ. ಸ್ಠಾವರ ಲಿಂಗ ಪೂಜೆ ಮತ್ತು ಪವಾಡಸದೃಷ್ಯ ಭಕ್ತಿ ಪ್ರಧಾನವಾದ ಈ ಕಥೆಗೆ ಭಕ್ತಿ ಪ್ರಧಾನವಾದ ಇಷ್ಟಲಿಂಗ ದೀಕ್ಷೆ ಮತ್ತು ಪೂಜೆಗೆ ಪ್ರಾಧಾನ್ಯತೆ ಕೊಡುವುದರ ಮೂಲಕ ಬಸವಪ್ರಣೀತ ಇಷ್ಟಲಿಂಗ ಪೂಜೆಗೆ ಒತ್ತು ಕೊಟ್ಟಿದ್ದಾರೆ. ಈ ಮೂಲಕ ಇಡೀ ಸೃಷ್ಟಿಯೇ ಇಷ್ಟಲಿಂಗ ಮತ್ತು ನಾವೆಲ್ಲರೂ ಈ ಸೃಷ್ಟಿಯ ಒಂದು ಭಾಗ ಎಂಬ ಸಂದೇಶವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ.

ಈ ನಾಟಕದಲ್ಲಿ ಸಾಮಾಜಿಕ ವ್ಯವಸ್ಥೆ ಮತ್ತು ಲೋಪದೋಗಳ ಬಗ್ಗೆ, ಜೀತ ಪದ್ದತಿಯ ಬಗ್ಗೆ, ಗುರುಮಠದ ಮೂಲಕ ಶಿಕ್ಷಣದ ಮಹತ್ವದ ಬಗ್ಗೆ, ಭೂಮಿ ಉಳ್ಳವರು ಇಲ್ಲದವರ ಮೇಲೆ ನಡೆಸುವ ಶೋಷಣೆಯ ಬಗ್ಗೆ, ಬಾಲ್ಯವಿವಾಹದ ಬಗ್ಗೆ, ಪ್ರಾಣಿ ಪಕ್ಷಿಗಳ ಮೇಲೆ ದಯೆ ತೋರಿಸಬೇಕಿರುವುದರ ಬಗ್ಗೆ, ದೇವರ ಮತ್ತು ಶಾಸ್ತ್ರ ಹಾಗೂ ಸಂಪ್ರದಾಯಗಳ ಹೆಸರಿನಲ್ಲಿ ಪುರೋಹಿತಶಾಹಿಯ ಶೋಷಣೆಯ ಬಗ್ಗೆ ಇನ್ನೂ ಹಲವು ವಿಷಯಗಳ ಬಗ್ಗೆ ವಿವಿಧ ಪಾತ್ರಗಳ ಮೂಲಕ ಮಾತನಾಡಿಸಿದ್ದಾರೆ. ಅಲ್ಲದೆ, ಸಮಾಜದಲ್ಲಿ ಇಂದಿಗೂ ದೊಡ್ಡ ಪಿಡುಗಾಗಿರುವ ಬಡ್ಡಿ ವ್ಯವಹಾರದ ಕ್ರೌರ್ಯವನ್ನು ನವಿರಾದ ಹಾಸ್ಯದ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದು ರಂಗದ ಮೇಲೆ ಚೆನ್ನಾಗಿ ಮೂಡಿ ಬಂದಿದೆ.

ಇಪ್ಪತ್ತೊಂದನೇ ಶತಮಾನದಲ್ಲಿದ್ದೂ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ರಾಂತಿಗಳನ್ನು ಮಾಡಿದ್ದರೂ ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಮಂಗಳಮುಖಿಯರು, ಸಲಿಂಗಕಾಮಿಗಳು ಹಾಗೂ ದ್ವಿಲಿಂಗಿ (LGBT) ಸಮುದಾಯಗಳನ್ನು ಇನ್ನೂ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಒಬ್ಬ ಸೃಷ್ಟಿಕರ್ತನಿದ್ದಾನೆ, ಅವನೇ ಈ ಸೃಷ್ಟಿಗೆ ಕಾರಣ ಮತ್ತು ಈ ಸೃಷ್ಟಿಯಲ್ಲಿ ಎಲ್ಲವೂ ಅವನ ನಿರ್ದೇಶನದಂತೆಯೇ ನಡೆಯುತ್ತದೆ ಎಂದು ನಂಬಿರುವ ಧರ್ಮಗಳೂ ಸಹ ಸೃಷ್ಟಿಕರ್ತನ ಸೃಷ್ಟಿಯ ಭಾಗವಾಗಿರುವ LGBT ಸಮುದಾಯವನ್ನು ತೆರೆದ ಬಾಹುಗಳಿಂದ ಅಪ್ಪಿಕೊಳ್ಳದಿರುವುದು ಮತ್ತು ಸಮಾಜದಲ್ಲಿ ಗೌರವಯುತವಾಗಿ ನಡೆಸಿಕೊಳ್ಳದಿರುವುದು ಆಶ್ಚರ್ಯಕರವಾಗಿದೆ.

ಇಂತಹ ಸಾಮಾಜಿಕ ವ್ಯವಸ್ಥೆಯ ಲೋಪವೊಂದನ್ನು ಸರಿಪಡಿಸುವ ಅವಶ್ಯಕತೆಯಿರುವ ಸಂದೇಶವೊಂದನ್ನು ತುಂಬಾ ಜಾಗರೂಕತೆಯಿಂದ ಜೊತೆಗೆ ನವಿರಾದ ಹಾಸ್ಯದ ಮೂಲಕ ಮಂಗಳಮುಖಿಯ ಪಾತ್ರವೊಂದನ್ನು ಸೃಷ್ಟಿಸಿ “ನಾನು ಮಂಗಳಮುಖಿ, ನನಗೂ ಇಷ್ಟಲಿಂಗ ದೀಕ್ಷೆ ಕೊಡುತ್ತೀರಾ” ಎಂದು ಕೇಳುವ ಮಂಗಳಮುಖಿಗೆ “ಇಷ್ಟಲಿಂಗ ದೀಕ್ಷೆ ತಗೆದುಕೊಳ್ಳಲು ಜಾತಿ, ಧರ್ಮ, ವರ್ಣ, ಲಿಂಗಬೇಧ ಯಾವುದೂ ಇಲ್ಲ. ನಿನಗೂ ಇಷ್ಠಲಿಂಗ ದೀಕ್ಷೆ ಕೊಡುತ್ತೇವೆ” ಎಂದು ಮಂಗಳಮುಖಿಗೆ ಇಷ್ಟಲಿಂಗ ದೀಕ್ಷೆ ಕೊಡಿಸುವುದರ ಮೂಲಕ ಸೃಷ್ಟಿಕ್ರಿಯೆಯ ಭಾಗವೇ ಆಗಿರುವ ಮಂಗಳಮುಖಿಯರನ್ನು ಧರ್ಮ ಹಾಗೂ ಸಮಾಜ ಒಪ್ಪಿಕೊಂಡು ತನ್ನ ತೆಕ್ಕೆಯಲ್ಲಿ ಅಪ್ಪಿಕೊಳ್ಳುವ ಮತ್ತು ಆ ಮೂಲಕ ಸಮಾಜದಲ್ಲಿ ಸಮಾನ ಸ್ಥಾನಮಾನ ಕೊಟ್ಟು ಗೌರವಯುತವಾಗಿ ನಡೆಸಿಕೊಳ್ಳಬೇಕೆಂಬ ಸಂದೇಶವನ್ನು ಈ ನಾಟಕದಲ್ಲಿ ಸ್ವಾಮೀಜಿಗಳು ಕಟ್ಟಿಕೊಟ್ಟಿದ್ದಾರೆ.

ಇದು “ಇವನಾರವ ಎನ್ನದೆ, ಇವ ನಮ್ಮವ” ಎಂದು ಒಪ್ಪಿ ಅಪ್ಪಿಕೊಳ್ಳುವ ಬಸವಪ್ರಜ್ಞೆಯ ಮೂಲಮಂತ್ರವೇ ಆಗಿದೆ. ಈ ನಾಟಕದ ಮೂಲಕ ಸ್ವಾಮೀಜಿಯವರು ಸ್ಥಾವರಲಿಂಗ ಮತ್ತು ಪವಾಡಗಳನ್ನು ನಿರಾಕರಿಸಿ ಇಷ್ಟಲಿಂಗದ ಪರಿಕಲ್ಪನೆ ಮತ್ತು ಪೂಜೆಗೆ ಕೊಟ್ಟಿರುವ ಪ್ರಾಮುಖ್ಯತೆಯನ್ನು ಸಮಾಜವು LGBT ಸಮೂಹವನ್ನ ಒಪ್ಪಿಕೊಡು ಗೌರವಯುತವಾಗಿ ನಡೆಸಿಕೊಳ್ಳುವ ಅವಶ್ಯಕತೆಯ ಬಗ್ಗೆಯೂ ಸೂಚ್ಯವಾಗಿ ಸಂದೇಶ ಕೊಟ್ಟಿದ್ದಾರೆ. ಇದು ಸಮಾಜದ ಆಗು ಹೋಗುಗಳ ಬಗ್ಗೆ ನಾಟಕದ ರಚನೆಕಾರರಾದ ಸ್ವಾಮೀಜಿಯವರಿಗೆ ಇರುವ ಸೂಕ್ಷತೆಯನ್ನು ಮತ್ತು ಕಾಲಕ್ಕೆ ತಕ್ಕಂತೆ ಆಗಬೇಕಿರುವ ಸಾಮಾಜಿಕ ಬದಲಾವಣೆಗಳಿಗೆ ಧರ್ಮಗಳು ತೆರೆದುಕೊಳ್ಳಬೇಕಿರುವುದರ ಅವಶ್ಯಕತೆಯ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ.

ಶ್ರೀ ಮಹಾದೇವ ಹಡಪದ ಅವರ ನಿರ್ದೇಶನವೂ ಕೂಡ ತುಂಬಾ ಕ್ರಿಯಾತ್ಮಕವಾಗಿದ್ದು ಕಥಯ ಹಂದರಕ್ಕೆ ಎಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಿದ್ದಾರೆ, ಅತ್ಯಲ್ಪ ರಂಗ ಪರಿಕರಕರಣಗಳನ್ನು ಉಪಯೋಗಿಸಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ನಾಟಕವನ್ನು ಪ್ರಸ್ತುತಪಡಿಸಿದ್ದಾರೆ. ರಂಗಭೂಮಿಯಲ್ಲಿ ಸೃಜನಶೀಲತೆ ಮತ್ತು ಹೊಸತನ ತರುವ ಪ್ರಯತ್ನವಾಗಿ ಪಾತ್ರಗಳಿಗೆ ಮುಖವಾಡಗಳನ್ನು ಉಪಯೋಗಿಸಲಾಗಿದೆ. ಮುಖವಾಡಗಳನ್ನು ಪ್ರಾಚೀನ ಸಂಪ್ರದಾಯಗಳನ್ನು ಅಧುನಿಕ ಕಥೆ ಹೇಳುವ ತಂತ್ರದ ಭಾಗವಾಗಿಯೂ ಉಪಯೋಗಿಸಲಾಗುತ್ತದೆ. ಈ ನಾಟಕದಲ್ಲಿ ನಿರ್ದೇಶಕರು ಅಂತಹ ಒಂದು ಪ್ರಯತ್ನ ಮಾಡಿದಂತೆ ಕಾಣುತ್ತದೆ. ಇನ್ನು ಬೆಳಕು, ದ್ವನಿವರ್ದಕ ಮತ್ತು ಹಿನ್ನೆಲೆ ಗಾಯನಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ “ಕೋಳೂರು ಕೊಡಗೂಸು” ನಾಟಕವು ಉತ್ತಮ ನಿರ್ದೇಶನದೊಟ್ಟಿಗೆ ತಾಂತ್ರಿಕವಾಗಿಯೂ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ.

5 days 3 hr agoNovember 16, 2024 5:47 am

ಕಾಲ್ಪನಿಕ ಕಥೆಗೆ, ಕಾಯಕ ಪ್ರಜ್ಞೆಯ ಮೆರಗು

ಎಚ್.ಎಸ್. ನವೀನಕುಮಾರ, ಹೊಸದುರ್ಗ

ಪೌರಾಣಿಕ ಕಾಲ್ಪನಿಕ ಛಾಯೆಯುಳ್ಳ ಕಥೆಯೊಂದಕ್ಕೆ, ಮಾನವೀಯತೆಯ ಸ್ವರೂಪವನ್ನು ಕೊಟ್ಟು, ನಮ್ಮ ಅಂತಃ ಶಕ್ತಿಯನ್ನು ಸಾಕ್ಷಾತ್ಕರಿಸಿ ಕೊಳ್ಳುವುದು ಹಾಗೂ ಕಾಯಕ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳುವುದೇ ಭಗವದ್ ದರ್ಶನ ಎನ್ನುವ ಸಂದೇಶ ಸಾರುವ ವಿಶಿಷ್ಟ ನಾಟಕ “ಕೋಳೂರು ಕೊಡಗೂಸು”.

ತನ್ನಿಷ್ಟ ದೈವ ಕಲ್ಲಿನಾಥನಿಗೆ ನೊರೆ ಹಾಲು ಕುಡಿಸಿಯೇ ತೀರುತ್ತೇನೆ ಎನ್ನುವ ಮುಗ್ಧ ಬಾಲೆ ಕೊಡಗೂಸಿನ ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗಿ ಅವಳನ್ನು ತನ್ನೊಳಗೆ ಐಕ್ಯವಾಗಿಸಿಕೊಂಡ ಎನ್ನುವ ಮೂಲ ಕಥೆಗೆ, ಪ್ರಸ್ತುತ ಸನ್ನಿವೇಶಗಳ ಹೊದಕೆಯನ್ನು ಅತ್ಯಂತ ಸಮರ್ಥವಾಗಿ ಹೆಣದಿದ್ದಾರೆ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ, ಪ್ರೇಕ್ಷಕರನ್ನು ಸೆಳೆಯುವಂತೆ ರಂಗದ ಮೇಲೆ ನಿರೂಪಿಸಿದ್ದಾರೆ ನಿರ್ದೇಶಕರಾದ ಮಹಾದೇವ ಹಡಪದ ಅವರು.

ಇಲ್ಲಿ ಕಥೆಗೆ ಕಾಲ್ಪನಿಕ ಅಂತ್ಯ ಕೊಡುವುದರ ಬದಲಿಗೆ ವಾಸ್ತವತೆಯ ಚಿತ್ರಣವನ್ನು ನೀಡಲಾಗಿದೆ. ಕೊಡಗೂಸಿನ ಮುಗ್ಧ ಭಕ್ತಿಗೆ ನಿರಾಶೆಯಾಗದಂತೆ ಆಕೆಯ ಆಶ್ರಮದ ಗುರುಗಳೇ ಶಿವನ ವೇಷದಲ್ಲಿ ಬಂದು ಆಕೆ ಕುಡಿಸಿದ ಹಾಲು ಕುಡಿಯುತ್ತಾರೆ. ಕೊನೆಗೆ ಊರಿನ ಎಲ್ಲರಿಗೂ ಇಷ್ಟಲಿಂಗ ದೀಕ್ಷೆಯನ್ನು ನೀಡಿ, ಅವರಿಗೆ ಸಂಸ್ಕಾರ ನೀಡುತ್ತಾರೆ.

ಇಲ್ಲಿ ಬರುವ ಕೊಡಗೂಸಿನ ತಂದೆ ಶಿವದೇವಯ್ಯ ಶರಣರ ವಚನಗಳಿಂದ ಪ್ರಭಾವಿತನಾದ ವ್ಯಕ್ತಿ ತನ್ನ ಮಗಳಲ್ಲೂ ಇದೇ ಸಂಸ್ಕಾರವನ್ನು ಆತ ತುಂಬಿರುತ್ತಾನೆ. ಈಕೆ ತಾನು ವಿದ್ಯೆ ಕಲಿಯುತ್ತಿದ್ದ ಆಶ್ರಮದಲ್ಲಿಯೂ ತಾನು ಮನೆಯಲ್ಲಿ ಕಲಿತ ಸದ್ಗುಣ ಹಾಗೂ ಸಂಸ್ಕಾರಗಳನ್ನು ಉಳಿದ ವಿದ್ಯಾರ್ಥಿಗಳಲ್ಲೂ ಬಿತ್ತುವ ಪ್ರಯತ್ನವನ್ನು ಮಾಡುತ್ತಿರುತ್ತಾಳೆ.

ಊರೆಂದ ಮೇಲೆ ಸಹಜವಾಗಿ ಇರುವ ವಿಭಿನ್ನ ಪಾತ್ರಗಳು ರಂಗದ ಮೇಲೆ ಅನಾವರಣಗೊಳ್ಳುತ್ತಾ ಹೋಗುತ್ತವೆ. ಶಿವದೇವಯ್ಯ ತನ್ನ ಕಾಯಕವನ್ನು ನಿಷ್ಠೆಯಿಂದ ಮಾಡುವ ವ್ಯಕ್ತಿಯಾದರೆ, ಸಾಹುಕಾರ ಸಿದ್ದಪ್ಪ, ಜನರಿಗೆ ಬಡ್ಡಿಗೆ ಹಣವನ್ನು ನೀಡಿ ಶೋಷಿಸುವ ವ್ಯಕ್ತಿ. ಈ ಸಾಹುಕಾರ ಸಿದ್ದಪ್ಪ, ಅವನ ಆಳು ಹಾಗೂ ತೃತೀಯ ಲಿಂಗಿ ಚೆಲುವಿಯ ಪಾತ್ರಧಾರಿಗಳು ಪ್ರೇಕ್ಷಕರಿಗೆ ವಿಶಿಷ್ಟ ಮನರಂಜನೆಯನ್ನು ನೀಡುತ್ತಾ ಹೋಗುತ್ತಾರೆ.

ಹೀಗೆ ರಂಜನೆಯ ಕಥೆ ಹೇಳುವುದರ ಮೂಲಕ ಪ್ರೇಕ್ಷಕರನ್ನು ನಾಟಕ ಹಿಡಿದಿಟ್ಟುಕೊಳ್ಳುವುದರ ಜೊತೆಗೆ, ಅರ್ಥಪೂರ್ಣ ವಚನಗಳನ್ನು ಹಾಡು- ನೃತ್ಯಗಳ ಮೂಲಕ ಪ್ರಸ್ತುತಪಡಿಸಿರುವುದು ನಾಟಕದ ಸತ್ವವನ್ನು ಹೆಚ್ಚಿಸುತ್ತದೆ. ಹಾಡು ನೃತ್ಯಗಳ ಸಂದರ್ಭಗಳಲ್ಲಿ ಬಸವಣ್ಣನ ಮುಖವಾಡಧಾರಿಗಳು ರಂಗದ ಮೇಲೆ ಕಾಣಿಸಿಕೊಳ್ಳುವುದು, ಒಂದು ವಿಶಿಷ್ಟ ರಂಗತಂತ್ರವಾಗಿದೆ.

ಒಟ್ಟಾರೆಯಾಗಿ ಬದುಕಿಗೆ ನಂಬಿಕೆ ಮುಖ್ಯವಾದರೂ ಮೂಢನಂಬಿಕೆ ಎಂದಿಗೂ ಸಲ್ಲ ಎನ್ನುವ ಅರ್ಥಪೂರ್ಣ ಸಂದೇಶವನ್ನು ಈ ನಾಟಕ ನೀಡುವುದರ ಜೊತೆಗೆ, ನಮ್ಮ ಕನ್ನಡ ಸಾಹಿತ್ಯದ ಚಿನ್ನದ ಗಣಿ ಎಂದೇ ಕರೆಯಲ್ಪಡುವ ವಚನ ಸಾಹಿತ್ಯವನ್ನು ರಂಗರೂಪಕದ ರೀತಿಯಲ್ಲಿ ಕಟ್ಟಿಕೊಡುವುದು ನಾಟಕದ ಗಟ್ಟಿತನಕ್ಕೆ ಕಾರಣವಾಗುತ್ತದೆ.

ಅಭಿನಯದ ದೃಷ್ಟಿಯಿಂದ ಸಾಹುಕಾರ ಸಿದ್ದಪ್ಪನ ಪಾತ್ರಧಾರಿ, ತೃತೀಯಲಿಂಗಿ ಚೆಲುವಿಯ ನಟನೆ ಮನಸ್ಸಿನಲ್ಲಿ ನಿಲ್ಲುತ್ತದೆ. ಉಳಿದೆಲ್ಲ ಪಾತ್ರಧಾರಿಗಳು ಸಹ ಅಷ್ಟೇ ಲವಲವಿಕೆಯಿಂದ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿ ನಾಟಕದ ಕಳೆ ಹೆಚ್ಚಿಸಿದ್ದಾರೆ. ಕಿವಿಗೆ ಹಿತ ನೀಡುವ ವಚನ ಗಾಯನ, ಸುಮಧುರ ಸಂಗೀತ, ಹಾಗೂ ಬೆಳಕಿನ ವ್ಯವಸ್ಥೆ ನಾಟಕವನ್ನು ಪ್ರೇಕ್ಷಕರಿಗೆ ಹತ್ತಿರವಾಗಿಸುತ್ತದೆ.

“ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬ ಶರಣರ ನುಡಿಯಂತೆ ಲಿಂಗವೆಂಬುದು ಗುಡಿಯಲ್ಲಿ ಬಂಧಿತವಲ್ಲ, ಅದು ಎಲ್ಲರ ಮನೆ ಮನಗಳಲ್ಲಿ ಇರಬೇಕಾದ ದೈವ ಎನ್ನುವ ನಿಜವಾದ ಆಧ್ಯಾತ್ಮದ ಸಾರವನ್ನು ಈ ನಾಟಕದಲ್ಲಿ ಕಟ್ಟಿಕೊಡಲಾಗಿದೆ. ಶಿವ ಸಂಚಾರದ ಈ ವರ್ಷದ ತಿರುಗಾಟದ ನಾಟಕಗಳಲ್ಲಿ ಒಂದಾದ “ಕೋಳೂರು ಕೊಡಗೂಸು” ನಾಡಿನ ಜನರ ಮಾನಸದಲ್ಲಿ ಸದಭಿರುಚಿ, ವೈಚಾರಿಕತೆ, ಹಾಗೂ ಸರ್ವೋದಯದ ಪರಿಕಲ್ಪನೆಯನ್ನು ಬಿತ್ತುವಂತಾಗಲಿ ಎನ್ನುವುದು ರಂಗಾಸಕ್ತರ ಆಶಯ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಹಾದೇವ ಹಡಪದ

Share This Article
2 Comments
  • ಬಸವ ತತ್ವದ ವೈಚಾರಿಕ ನೆಲೆಗಟ್ಟಿನಲ್ಲಿ ನೇರ ನಡೆ ನುಡಿಗಳಿಂದ ಸರಿಯಾದುದನ್ನು ಒಪ್ಪಿಕೊಂಡು ತಪ್ಪುಗಳನ್ನು ತಿದ್ದುವ ಹಾಗೂ ಬಸವ ತತ್ವದ ನೆರೆ ನಡೆ ನುಡಿಯ ಹಾಗೂ ಶರಣರ ಆದರ್ಶಗಳನ್ನು ಹೃದಯ ತುಂಬಾ ತುಂಬಿಕೊಂಡಿರುವ ಪೂಜ್ಯರಿಗೆ ಶರಣು ಶರಣಾರ್ಥಿಗಳು…

  • ಮಹದೇವ ಹಡಪದ ಒಬ್ಬ ಶ್ರೇಷ್ಟ ಕಲಾವಿದ ಸಾಹತಿ ನಿದೆ೯ಶಕ
    ಇವರು ತಮ್ಮ ಮಗಳು ದಿನಾ ಕತೆ ಹೇಳುವಂತೆ ಪಿಡಿಸುತ್ತಿದ್ದಾಗ ಇವರಿಗೆ ಕಾಲ್ಪನಿಕ ಕತೆಗಳನ್ನು ಹೇಳಲು ಮನಸ್ಸಾಗಲಿಲ್ಲ ತಕ್ಷಣ ಅವರು ಕಾಶ್ಮೀರದ ನಿಜದೇವಿ (ಭೊಂತಾದೇವಿಯ) ಇತಿಹಾಸವನ್ನು ಅವರ ಮಗಳಿಗಾಗಿ ಬಯಲುಡಿಗೆ ಕೃತಿಯನ್ನು ಮಕ್ಕಳಿಗಾಗಿಗೆ ಕತೆ ರೂಪದಲ್ಲಿ ರಚಿಸಿದ ಪುಸ್ತಕ ಎಲ್ಲರೂ ಕೊಂಡು ತಮ್ಮ ಮಕ್ಕಳಿಗೂ ಬಸವಾದಿ ಶರಣರ ಕತೆ ಹೇಳಿದರೆ ಬಸವ ಪರಂಪರೆ ಮುಂದುವರಿಯುದು.
    ಸಾಣೆ ಹಳ್ಳಿ ಶ್ರೀಗಳು ಲಿಂಗಾಯತ ಸಮಾಜದ ಬಹು ದೊಡ್ಡ ಆಸ್ತಿ ಇವ೯ರಿಗೂ ಅನಂತ ಶರಣುಗಳು🙏🙏

Leave a Reply

Your email address will not be published. Required fields are marked *