ವಿಶ್ವಗುರು ಬಸವೇಶ್ವರರ ಲಿಂಗೈಕ್ಯತೆಯ ಬಗ್ಗೆ ಹಗುರವಾಗಿ ಮಾತನಾಡಿ ಬಸವಣ್ಣನವರಿಗೆ ಅಪಮಾನ ಮಾಡಿದ್ದಾರೆ.
ಗಂಗಾವತಿ
ಬಸವಣ್ಣನವರ ಬಗ್ಗೆ, ಅವಹೇಳನಕಾರಿಯಾಗಿ ಮಾತನಾಡಿದ, ವಿಜಯಪುರ ಶಾಸಕ ಬಸವನಗೌಡ
ಯತ್ನಾಳರವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಾನೂನಿನ ಶಿಸ್ತು ಕ್ರಮ ಜರುಗಿಸಬೇಕೆಂದು ರಾಷ್ಟ್ರೀಯ ಬಸವದಳ, ತಾಲೂಕು ಘಟಕ ಗಂಗಾವತಿ ನಗರದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ವಿಜಯಪುರ ಶಾಸಕರಾದ ಬಸವನಗೌಡ ಪಾಟಿಲ ಯತ್ನಾಳರವರು ಇತ್ತೀಚೆಗೆ ತಮ್ಮ ಪಕ್ಷದ ವತಿಯಿಂದ ಬೀದರನಲ್ಲಿ ವಕ್ಫ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಾ, ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಲಿಂಗೈಕ್ಯದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿ, ಬಸವಣ್ಣನವರಿಗೆ ಅಪಮಾನವೆಸಗಿರುವುದನ್ನು ಬಸವಾಭಿಮಾನಿಗಳಾದ ನಾವು ತೀವ್ರವಾಗಿ ಖಂಡಿಸುತ್ತೇವೆ.
ಬಸನಗೌಡ ಪಾಟೀಲ್ ಯತ್ನಾಳ್ರವರು ನಾಲಿಗೆ ಹರಿಬಿಟ್ಟು, ವಕ್ಫ್ ವಿರುದ್ಧ ಎಲ್ಲರೂ ದಂಗೆ ಏಳಬೇಕು, ಇಲ್ಲದಿದ್ದರೆ ಬಸವಣ್ಣ ಹೊಳೆಗೆ ಹಾರಿದಂತೆ ಹಾರಬೇಕಾಗುತ್ತದೆ ಇಲ್ಲವೇ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕಾಗುತ್ತದೆ ಎಂಬುವ ರೀತಿಯಲ್ಲಿ ಹನ್ನೆರಡನೇ ಶತಮಾನದ ಸಮಾನತೆಯ
ಹರಿಕಾರ ವಿಶ್ವಗುರು ಬಸವೇಶ್ವರರ ಲಿಂಗೈಕ್ಯತೆಯ ಬಗ್ಗೆ ಹಗುರವಾಗಿ ಮಾತನಾಡಿ ಬಸವಣ್ಣನವರಿಗೆ
ಅಪಮಾನ ಮಾಡಿದ್ದಾರೆ. ಈ ಹೇಳಿಕೆಯು ಅವರ ಕೆಳಮಟ್ಟದ ವ್ಯಕ್ತಿತ್ವವನ್ನು ತೋರಿಸಿದ್ದು. ಇವರ ವಿರುದ್ಧ ಶಿಸ್ತು ಕಾನೂನು ಕ್ರಮಕೈಗೊಂಡು ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡುತ್ತ, ಶಾಸಕ ಯತ್ನಾಳ ಅವರು ಈ ಕೂಡಲೇ ನಾಡಿನ ಜನರ ಕ್ಷಮೆ ಯಾಚಿಸಬೇಕು ಇಲ್ಲದೇ ಹೋದರೆ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಯತ್ನಾಳ ಮನೆಗೆ ಬಂದು ಘೆರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಉಪತಹಶೀಲ್ದಾರ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು.
ಎಚ್. ಮಲ್ಲಿಕಾರ್ಜುನ, ಕೆ ವೀರೇಶಪ್ಪ , ವೀರೇಶ ಅಸರೆಡ್ಡಿ, ದಿಲೀಪಕುಮಾರ ವಂದಾಲ, ರೇಣುಕಮ್ಮ ಗೌಡ್ರ, ಚನ್ನಬಸಪ್ಪ ಅರೇಗಾರ, ಮಲ್ಲಿಕಾರ್ಜುನ ಅರಲಳ್ಳಿ ಪುರುಷೋತ್ತಮ, ಚನಬಸಮ್ಮ ಕಂಪ್ಲಿ, ಬಸವಜ್ಯೋತಿ ಲಿಂಗಾಯತ, ರತ್ನಮ್ಮ ಅರೇಗಾರ, ಎಚ್. ಕವಿತಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.