“ಅಯ್ಯೋ ನನಗೆ ಯಾವುದು ಬೇಡವಾಗಿದೆಯೋ ಅದು ಬರ್ತಾಯಿದೆ. ನಾನು ಹಣ್ಣಾಗಿ ಹೋಗಿದ್ದೇನೆ. ನಿಮ್ಮೆಲ್ಲರ ಅಭಿಮಾನದಿಂದ ಒಂದು ಗೌರವ ಸ್ಥಾನ ದೊರೆತಿದೆ. ನಾನು ಆ ಸ್ಥಾನಕ್ಕೆ ಕಡಿಮೆ ಅನಸ್ತಾ ಇದೆ. ಈ ವಯಸ್ಸಿನಲ್ಲಿ ಯಾವುದೇ ಸ್ಥಾನಮಾನಗಳು ನನಗೆ ಬೇಕಿಲ್ಲ. ನಿಮ್ಮೆಲ್ಲರ ಅಭಿಮಾನ ಆಗಲಿ” ಎಂಬುದು ಮಂಡ್ಯದಲ್ಲಿ ಡಿಸೆಂಬರ್ ೨೦,೨೧ ಮತ್ತು ೨೨ರಂದು ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರ ತಕ್ಷಣದ ಪ್ರತಿಕ್ರಿಯೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಅವರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರ: ಕರ್ನಾಟಕದಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಬಗ್ಗೆ ನಿಮಗೆ ಏನನ್ನಿಸುತ್ತದೆ?
ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆ ಹೇಳಿಕೊಳ್ಳುವಷ್ಟು ಅಲ್ಲದಿದ್ದರೂ ತಕ್ಕ ಮಟ್ಟಿಗೆ ಬೆಳವಣಿಗೆ ಕಂಡಿದೆ. ಭಾಷೆಯ ಬೆಳವಣಿಗೆ ಮಾಡುವ ಕೆಲಸ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಇದರಲ್ಲಿ ಸಾರ್ವಜನಿಕರದ್ದು ಪಾಲಿದೆ. ಕನ್ನಡ ಭಾಷೆಯ ಉಳಿವಿಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬಹುದು. ಆದರೆ ಅದು ಸೂಕ್ತ ಮತ್ತು ತೀವ್ರಗತಿಯಲ್ಲಿ ಆಗಿಲ್ಲ ಎಂಬುದು ನೋವಿನ ಸಂಗತಿ. ಬಾಷೆ ಬಳಸಿದಷ್ಟು ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಪ್ರ: ಕನ್ನಡ ಉಳಿವಿಗೆ ಯಾವ ಕ್ರಮ ಕೈಗೊಳ್ಳಬೇಕು?
ಆಡಳಿತ ಭಾಷೆ ಕನ್ನಡವಾಗಿದ್ದರೂ ಕರ್ನಾಟಕದಲ್ಲಿಯೇ ಕನ್ನಡ ಸಂಪೂರ್ಣವಾಗಿ ಅನುಷ್ಠಾನವಾಗದಿರುವುದು ವಿಷಾದದ ಸಂಗತಿ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು. ಉದ್ಯೋಗದ ಬರವಸೆ ನೀಡುವ ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ಆದರೆ ಅದಿನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಅದನ್ನು ಶಾಸನಬದ್ಧಗೊಳಿಸಿದಾಗ ಮಾತ್ರ ಕನ್ನಡ ಉಳಿಯಲಿದೆ. ಈ ಕೆಲಸವನ್ನು ಸರ್ಕಾರ ಆದಷ್ಟು ಬೇಗ ಮಾಡಬೇಕು.
ಪ್ರ: ಜಾನಪದ ಕ್ಷೇತ್ರದವರಾದ ತಾವು ಶರಣ ಸಾಹಿತ್ಯ ಕ್ಷೇತ್ರದಲ್ಲಿ ಒಲವು ಮೂಡಲು ಏನು ಕಾರಣ?
ಗ್ರಾಮೀಣ ಅಂಗಳದಲ್ಲಿ ಬೆಳೆದಿರುವ ನಾನು ಸಹಜವಾಗಿ ಜಾನಪದ ಬದುಕಿನ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದೆ. ಅದರಂತೆ ವಚನ ಸಾಹಿತ್ಯದ ಕುರಿತಾಗಿಯೂ ಆಸಕ್ತಿ ಬೆಳೆಸಿಕೊಂಡು ಓದುತ್ತ ಹೋದೆ. ಅವಕಾಶ ಇದ್ದಾಗ ನಾವೇ ಈ ಕೆಲಸ ಮಾಡಬಹುದಾ? ಅನ್ನಿಸಿತು. ಪ್ರಚಾರ, ಅಧ್ಯಯನ ಹಾಗೂ ಪ್ರಸಾರದ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೂಲಕ ನಾಡಿನಾದ್ಯಂತ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಂಚರಿಸಿ ಶರಣರ ವಿಚಾರಗಳನ್ನು ವ್ಯಾಪಕಗೊಳಿಸುವ ಕೆಲಸ ಮಾಡಿದೆ. ಸಹಜ, ಸರಳ ಬದುಕಿನ ಸತ್ಯಗಳನ್ನು ಹೇಳಿಕೊಡುವ ಜನಪದ ಸಾಹಿತ್ಯ ಬೇರೆ ಅಲ್ಲ; ಬದುಕಿನಲ್ಲಿ ಆತ್ಮವಿಶ್ವಾಸ, ಭರವಸೆ ತುಂಬುವ ವಚನ ಸಾಹಿತ್ಯ ಬೇರೆ ಅಲ್ಲ.
ಪ್ರ: ಇಂದಿನ ಬರಹಗಾರರಿಗೆ ನಿಮ್ಮ ಸಂದೇಶವೇನು?
ಬರಹಗಾರ ತನ್ನದೇ ಆದ ಸ್ವಾತಂತ್ರ್ಯ, ಸತ್ಯದ ಅಭಿವ್ಯಕ್ತಿ, ಸೃಜನಶೀಲತೆ ಹೊಂದಿರುತ್ತಾನೆ. ಹೀಗೆ ಮಾಡು ಎಂದು ಸಾಹಿತಿಗಳಿಗೆ ಹೇಳುವುದು ಸರಿಯಲ್ಲ. ಒಂದು ವೇಳೆ ಅವರ ಬರಹ ಸಾರ್ವಜನಿಕ ಬದುಕಿಗೆ ಭಂಗ ತರುವಂತಿದ್ದರೆ ಹೀಗೆ ಮಾಡಬಾರದು ಎಂದು ಹೇಳಬಹುದು. ಯಾವಾಗಲೂ ಸಾಹಿತ್ಯದ ಆಶಯವೇ ಜನ ಬದುಕುವುದಕ್ಕಾಗಿ ಇದೆ ಎಂದು ರಾಘವಾಂಕ ಹೇಳಿದ್ದಾರೆ. ಸಾಹಿತ್ಯಕ್ಕೆ ಸಾರ್ವಜನಿಕವಾದ ಉದ್ದೇಶವಿದೆ. ಹೀಗಾಗಿ ಬರಹಗಾರರಿಗೆ ಸಂದೇಶ ಕೊಡುವುದು ಬಹಳ ದೊಡ್ಡ ತಪ್ಪು.
ಪ್ರ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕೀಯ ನಡೆಯುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲ?
ರಾಜಕೀಯ ನಡೆಯುವುದು ನನಗೆ ಗೊತ್ತಿಲ್ಲ. ಆಯ್ಕೆ ಸಂದರ್ಭದಲ್ಲಿ ಅಭಿಪ್ರಾಯಗಳು ಬೇಕಾದಷ್ಟು ಬರುತ್ತವೆ. ರಾಜಕೀಯ ಪ್ರಶ್ನೆ ಅಲ್ಲ. ಸಾಹಿತಿಗಳು ಇಂಥವರಾದರೆ ಅನುಕೂಲ, ಸೂಕ್ತ ಎಂದು ಅವರ ಅಭಿಮಾನಿಗಳು, ಹಿತೈಷಿಗಳು ಹೇಳುತ್ತಾರೆ. ಇದು ಎಲ್ಲ ಕಾಲದಲ್ಲೂ ಇದ್ದದ್ದೇ. ಬೇರೆ ಬೇರೆಯವರು ಸಲಹೆ ಕೊಡುತ್ತಾರೆ. ಪರಿಷತ್ತಿನ ಪದಾಧಿಕಾರಿಗಳು ಸಭೆ ಸೇರಿ ಒಮ್ಮತಕ್ಕೆ ಬಂದು ಆಯ್ಕೆ ಮಾಡುತ್ತಾರೆ ಅಷ್ಟೇ! ಇದರಲ್ಲಿ ರಾಜಕೀಯವೇನಿಲ್ಲ ಎಂದು ನನಗೆ ಅನಿಸುತ್ತದೆ.
ಪ್ರ: ಸಾಹಿತ್ಯೇತರರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮಾತುಗಳು ಕೇಳಿಬಂದದ್ದು ಎಷ್ಟರ ಮಟ್ಟಿಗೆ ಸರಿ?
ಹಾಗೆ ನೋಡಿದರೆ ಎಲ್ಲ ಕನ್ನಡಿಗರಿಗೂ ಅಧ್ಯಕ್ಷರಾಗುವ ಅರ್ಹತೆ ಇದೆ. ಈಗ ಆ ದೃಷ್ಟಿಯಿಂದ ನಾನೂ ಸಾಹಿತಿ ಇದ್ದೇನೆ. ಸಾಹಿತ್ಯಕ್ಕಾಗಿ ಕೆಲಸ ಮಾಡಿರಬೇಕು. ನಿರ್ಧಿಷ್ಟವಾದ, ಗಮನಾರ್ಹವಾದ ಕಾಣಿಕೆ, ಕೊಡುಗೆ ನೀಡಿರಬೇಕು. ಆದರೆ ಸಾಹಿತ್ಯ ಕ್ಷೇತ್ರ ಬಿಟ್ಟು ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಬಾರದು ಎಂಬ ರೂಢಿ, ಕ್ರಮ ಇದೆ. ಈಗ ಒಳ್ಳೆಯದೇ ಆಗಿದೆ.
ಸಮ್ಮೇಳನಾಧ್ಯಕ್ಷರಿವರು..
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿಯ ರುದ್ರಪ್ಪ ಹಾಗೂ ಅಕ್ಕಮ್ಮರ ಉದರದಲ್ಲಿ ಮೇ. ೧೯, ೧೯೩೦ರಂದು ಜನಿಸಿದರು. ಓದಿದ್ದು ೧೦ನೇ ತರಗತಿ ಮಾತ್ರ! ಆದರೆ ವಿಶ್ವವಿದ್ಯಾಲಯದ ಪ್ರಾಧ್ಯಾಕರನ್ನೇ ಮೀರಿಸುವಷ್ಟು ಪಾಂಡಿತ್ಯ ಪಡೆದಿದ್ದಾರೆ. ಸ್ವಾತಂತ್ರ್ಯ ಚಳವಳಿ, ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಭಾರತ ಸ್ಕೌಟ್ಸ್ & ಗೈಡ್ಸ್ನಲ್ಲಿ ಪ್ರಧಾನ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಜಾನಪದ ವಿದ್ವಾಂಸರಾದ ಪ್ರೊ. ಎಚ್.ಎಲ್. ನಾಗೇಗೌಡ, ಲಿಂಗಪ್ಪ ಅವರ ಜೊತೆಗೂಡಿದ ಶ್ರಮದ ಪ್ರತಿಫಲ ಎನ್ನುವಂತೆ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಜಾನಪದ ವಿಶ್ವವಿದ್ಯಾಲಯ ತಲೆ ಎತ್ತಿ ನಿಂತಿದೆ.
ಪ್ರಕಟಿತ ಕೃತಿಗಳು:
ಕರ್ನಾಟಕ ಜಾನಪದ ಕಲೆಗಳು, ಮಹಾದೇವಿ, ಸದಾಶಿವಾಚಾರ್ಯ, ಚಲುವಾಂಬಿಕೆ, ಕುನಾಲ, ವಿಭೂತಿ, ಬೆಳ್ಳಕ್ಕಿ ಹಿಂಡು ಬೆರ್ಯಾವ, ಸಾಕ್ಷಿಕಲ್ಲು, ಕರ್ನಾಟಕ ಪ್ರಗತಿಪಥ, ಆಲೋಚನೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೧೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಹಿರಿಯ ಸಾಹಿತಿ ಗೊರೂಚ ರವರಿಗೆ ಅಬಿನಂಧನೆಗಳು