ಸಿಂಧನೂರು
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿಶ್ವಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಪ್ರತಿಯೊಬ್ಬರು ಖಂಡಿಸಬೇಕೆಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಟಿ. ಪಂಪನಗೌಡ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದರು.
ಯತ್ನಾಳ ಅವರು ಹಿರಿಯ ಶಾಸಕರಾಗಿ ಇಲ್ಲಸಲ್ಲದ ಮಾತುಗಳನ್ನು ಸಮಾಜಕ್ಕೆ ಮಾತನಾಡಿರುವುದು ಅಲ್ಲದೇ ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡಿದ ಬಸವಣ್ಣನವರ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಯತ್ನಾಳ್ ಅವರ ಬುದ್ಧಿ ಶಕ್ತಿ ಸಣ್ಣದು ಎಂದು ಇದು ತೋರಿಸಿ ಕೊಡುತ್ತದೆ. ಇದೇ ಥರ ಮುಂದುವರೆದು ಮಾತನಾಡಿದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಮಹಾಸಭಾ ತಾಲೂಕು ಅಧ್ಯಕ್ಷ ರಾಮನಗೌಡ ಮಲ್ಕಾಪುರೆ ಮಾತನಾಡಿ, ಬಸವಣ್ಣನವರ ಬಗ್ಗೆ ಸಣ್ಣತನದ ಮಾತುಗಳನ್ನು ಯತ್ನಾಳ ಆಡಿದ್ದಾರೆ, ಕೂಡಲೇ ಅವರು ಕ್ಷಮೆಯಾಚಿಸಬೇಕು, ಇಲ್ಲವಾದರೆ ಮಹಾಸಭಾದಿಂದ ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಜಿಲ್ಲಾ ಮುಖಂಡ ಮಲ್ಲನಗೌಡ ಮಾವಿನಮಡು ಮಾತನಾಡಿ, ಯತ್ನಾಳ್ ಬುದ್ಧಿ ಇಲ್ಲದವರ ಥರ ಮಾತನಾಡುತ್ತಿದ್ದಾರೆ, ಕೂಡಲೇ ಅವರು ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ವೀರಶೈವ ಸಮಾಜದ ಮುಖಂಡ ಎನ್. ಅಮರೇಶ ಮಾತನಾಡಿ, ವೀರಶೈವ ಮಹಾಸಭಾ ಒಂದು ಕುಟುಂಬಕ್ಕೆ ಸೀಮಿತ ಆಗಿಲ್ಲ ಸರ್ವರನ್ನು ತೆಗೆದುಕೊಂಡು ಹೋಗುವುದಾಗಿದೆ. ಇದರ ಬಗ್ಗೆ ಯತ್ನಾಳ್ ಹಗರವಾಗಿ ಮಾತನಾಡಿದ್ದು ಸರಿಯಲ್ಲ, ತಕ್ಷಣವೇ ಕ್ಷಮೆ ಯಾಚಿಸಬೇಕು ಎಂದರು.
ಮಹಾಸಭಾ ಉಪಾಧ್ಯಕ್ಷ ಚನ್ನಬಸವ ಗೊರಬಾಳ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಮಾಲಿ ಪಾಟೀಲ, ಕಾರ್ಯದರ್ಶಿ ಬಸವರಾಜ ಕಲ್ಲೂರ, ಶ್ರೀನಿವಾಸ ರೆಡ್ಡಿ, ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.