ಗುಳೇದಗುಡ್ಡ
ಬಸವ ಕೇಂದ್ರದ ವತಿಯಿಂದ ಸರಳ-ಸಹಜತೆಯಿಂದ ಜರುಗುವ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ದಿನಾಂಕ 07-12-2023 ರ ಸಂಜೆ 5 ಗಂಟೆಗೆ ನಡೆದ ಮಹಾಮನೆ ಕಾರ್ಯಕ್ರಮವು ಕುಂಬಾರ ಓಣಿಯ ಶರಣ ಮಹೇಶ ಬಸಪ್ಪ ಶಿವರಾತ್ರಿ ಅವರ ಮನೆಯಲ್ಲಿ ಜರುಗಿತು.
ಅಪ್ಪ ಬಸವ ತಂದೆಯ ವಚನ –
ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ ಕಡಬಡ್ಡಿಯ ಕೊಡಲಾಗದು.
ಬಂದಡೊಂದು ಲೇಸು, ಬಾರದಿದ್ದಡೆರಡು ಲೇಸು.
ಅಲ್ಲಿದ್ದಡೆಯೂ ಲಿಂಗಕ್ಕೆ ಬೋನ. ಇಲ್ಲಿದ್ದಡೆಯೂ ಲಿಂಗಕ್ಕೆ ಬೋನ.
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.
ಇದು ಕಾರಣ ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದೆ, ಕಡಬಡ್ಡಿಯ ಕೊಡಲಾಗದು.
ಎಂಬ ವಚನದ ಮೇಲೆ ಅನುಭಾವ ನಡೆಯಿತು. ಪ್ರತಿ ಸಾಪ್ತಾಹಿಕ ಮಹಾಮನೆಯ ಕಾರ್ಯಕ್ರಮದಂತೆ ಪ್ರಾರಂಭದಲ್ಲಿ ಶರಣೆ ಜಯಶ್ರೀ ಬ. ಬರಗುಂಡಿ ಹಾಗೂ ಸಂಗಡಿಗರಿಂದ ಸಾಮೂಹಿಕ ಪ್ರಾರ್ಥನೆಯ ನಂತರ ಪ್ರೊ. ಶ್ರೀಕಾಂತ ಗಡೇದವರು ಸಂಕ್ಷಿಪ್ತವಾಗಿ ವಚನಗಳು ಮಹತ್ವವನ್ನು ತಿಳಿಸಿ ಅವು ನಮ್ಮ ಬದುಕಿಗೆ ಹೇಗೆ ಬೇಕಾಗುತ್ತವೆ ಎಂಬುದನ್ನು ವಿವರಿಸುತ್ತ, ಅಪ್ಪ ಬಸವಣ್ಣನವರ ಮೇಲಿನ ವಚನದ ಚಿಂತನೆಯನ್ನು ಮಾಡುತ್ತ, ಬಸವಣ್ಣನವರು ಮನುಷ್ಯನ ಅರಿಷಡ್ವರ್ಗಗಳಿಗೆ ಕಡಿವಾಣ ಹಾಕಲು, ತೃಪ್ತಿಕರವಾದ ಜೀವನಕ್ಕೆ ತನ್ನ ದುಡಿಮೆಯ ಫಲ ಸದ್ಭಳಕೆಯ ಪಥವನ್ನು ಈ ವಚನದಲ್ಲಿ ಉಲ್ಲೇಖಿಸಿದ್ದಾರೆ.
ರಾಷ್ಟ್ರಪ್ರಜ್ಞೆ ಮತ್ತು ಆರ್ಥಿಕ ಪ್ರಜ್ಞೆಯನ್ನು ಇಟ್ಟುಕೊಂಡು ಪ್ರಕೃತಿದತ್ತವಾಗಿ ಲಭ್ಯವಿರುವ ಮಾನವನ ಜೀವನಕ್ಕೆ ಬೇಕಾಗಿರುವ ಸಂಪನ್ನೂಲಗಳನ್ನು ಒಂದೇ ಕಡೆ ಸಂಗ್ರಹವಾದರೆ ಸಂಪನ್ನೂಲಗಳ ಸಮತೋಲನ ತಪ್ಪುತ್ತದೆ. ಅದರಿಂದ ಮನುಷ್ಯ ಅತೃಪ್ತಿಯಿಂದ ಇರುವದಕ್ಕೆ ಅವಕಾಶ ಮಾಡಿದಂತಾಗುತ್ತದೆ ಎಂಬ ದೂರದೃಷ್ಟಿಯಿಂದ ಎಲ್ಲರೂ ಸಂತೃಪ್ತಿಯಿಂದ ಬದುಕಲು ಬಸವಣ್ಣನವರು ಸಮ ಸಮಾಜದ ಚಿಂತನೆಗೆ ಈ ವಚನ ದಾರಿದೀಪವಾಗಿದೆ. ಈ ವಚನದ ಮೂಲಕ ಬಸವಣ್ಣನವರು ಶ್ರೇಷ್ಠ ಆರ್ಥಿಕ ತಜ್ಞರಾಗಿರುವರು ಎಂದು ಪ್ರಸ್ತಾವಿಕವಾಗಿ ತಮ್ಮ ಅನುಭವವನ್ನು ಹಂಚಿಕೊಂಡರು.
ವಚನದ ಚಿಂತನೆಯ ಮುಂದುವರೆದು ಪ್ರೊ. ಮಹಾದೇವಯ್ಯ ಪ. ನೀಲಕಂಠಮಠ ಅವರು ವಚನವನ್ನು ಅನುಭಾವಗೈಯುತ್ತ ನಾವುಗಳು ಸದಾಚಾರಿಗಳಾಗಿರಬೇಕು, ವ್ಯಕ್ತಿ ತನ್ನ ದುಡಿಮೆಯನ್ನು ತ್ರಿಕರಣ ಶುದ್ಧವಾಗಿ ಕಾಯಕವನ್ನು ಮಾಡಿ ಅದರ ಫಲವನ್ನು ಗುರು-ಲಿಂಗ-ಜಂಗಮಕ್ಕೆ ಸಮರ್ಪಿಸಿ ಜಂಗಮದಲ್ಲಿ ಸಮರಸವಾಗಬೇಕು. ದುಡಿಮೆಯ ಫಲವನ್ನು ಕುಲ ನೋಡಿ ಅಂದರೆ ಭಕ್ತ ಕುಲ ಮತ್ತು ಭವಿ ಕುಲವನ್ನು ಅರಿತು ಫಲವನ್ನು ಅರ್ಪಿಸಬೇಕು. ಮೃಡ ಭಕ್ತರ ನಡುವೆ ಕಡಬಡ್ಡಿಯ ವ್ಯವಹಾರ ಎಂದಿಗೂ ಸಲ್ಲದು ಮತ್ತು ಲಿಂಗವಂತನು ಯಾರಲ್ಲಿಯೂ ಬಡ್ಡಿ ವ್ಯವಹಾರ ಮಾಡಕೂಡದು. ಕಾಯಕದ ಫಲವನ್ನು ಶಿವಶರಣರಲ್ಲಿ ಅವಶ್ಯಕತೆ ಇದ್ದವರಿಗೆ ಹಂಚಿ ಉಣ್ಣುವ ದಾಸೋಹ ಸಿದ್ದಾಂತವನ್ನು ಅನುಸರಿಸಿದರೆ ನಿತ್ಯ ತೃಪ್ತಿಕೆ ಲಭ್ಯ ಎಂದು ವಚನದ ಅರ್ಥವನ್ನು ಮನಮುಟ್ಟುವಂತೆ ಪ್ರಚುರಪಡಿಸಿದರು.