ಬಸವಣ್ಣವರ ಪುತ್ತಳಿ ಹೊತ್ತು ನಡೆದ ಅಂಬಾರಿ ಆನೆಯ ಜೊತೆ ವಚನ ಗ್ರಂಥಗಳನ್ನು ಹೊತ್ತು ಹೆಜ್ಜೆ ಹಾಕಿದ ಶರಣೆಯರು
ಗಜೇಂದ್ರಗಡ
ಕಳೆದ 32 ದಿನಗಳಿಂದ ನಡೆದ ಬಸವ ಪುರಾಣ ಕಾರ್ಯಕ್ರಮದ ಮಹಾಮಂಗಲೋತ್ಸವ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ವಿಜೃಂಭಣೆಯಿಂದ ಜರುಗಿತು.
ಭೀಮಕವಿ ವಿರಚಿತ ‘ಬಸವ ಪುರಾಣ’ ಮಹಾಕಾವ್ಯ ಹೊತ್ತ ಆನೆಯ ಅಂಬಾರಿಯ ಜೊತೆಗೆ,
ಧರ್ಮಗುರು ಬಸವಣ್ಣನವರ ಪುತ್ಥಳಿ ಹೊತ್ತ ವಾಹನದ ಜೊತೆಗೆ ಸಾವಿರಾರು ಶರಣೆಯರು ವಚನ ಗ್ರಂಥವನ್ನು ತಲೆಯ ಮೇಲೆ ಹೊತ್ತು ಹೆಜ್ಜೆ ಹಾಕಿದರು.
ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ, ಚೌಕಿಮಠದಿಂದ ಮಧ್ಯಾಹ್ನ ಆರಂಭಗೊಂಡ ಮೆರವಣಿಗೆಗೆ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಮತ್ತಿತರ ಪೂಜ್ಯರು ಚಾಲನೆ ನೀಡಿದರು.
ಧರ್ಮಗ್ರಂಥ ವಚನ ಸಾಹಿತ್ಯವನ್ನು ಮೂರುಸಾವಿರ ಜನ ಶರಣೆಯರು ತಲೆಮೇಲೆ ಹೊತ್ತು ನಡೆದರು. ವೀರಗಾಸೆ, ಪೂಜಾ ಕುಣಿತ, ನಂದಿಕೋಲು, ವಿವಿಧ ವಾದ್ಯಮೇಳ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು, ಎಲ್ಲರನ್ನೂ ಆಕರ್ಷಿಸಿದವು. ಜಾತಿ-ಧರ್ಮ ಭೇದವಿಲ್ಲದೇ ಸರ್ವ ಜನಾಂಗದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಸವಣ್ಣನವರಿಗೆ, ಅನ್ನದಾನೇಶ್ವರರಿಗೆ ಜಯಘೋಷ ಹಾಕಿದರು.
ಮನೆಗಳ ಮುಂದೆ ಮಹಿಳೆಯರು ರಂಗೋಲಿ ಬಿಡಿಸಿದ್ದರು. ತಮ್ಮತಮ್ಮ ಮನೆಗಳ ಮುಂದುಗಡೆ ಮೆರವಣಿಗೆ ಬಂದಾಗ, ವಿಶ್ವಗುರು ಬಸವಣ್ಣನವರ ಪುತ್ಥಳಿ ಮುಂದೆ ಜನರು ತಮ್ಮ ಭಕ್ತಿ ಭಾವ ಸಮರ್ಪಿಸುತ್ತಿರುವುದು ಮೆರವಣಿಗೆ ಉದ್ದಕ್ಕೂ ಕಂಡುಬಂತು.
ಪ್ರತಿದಿನ ಸಂಜೆ ಪುರಾಣ ಕಾರ್ಯಕ್ರಮ ನಡೆದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ಮಂಗಲೋತ್ಸವ ಸಮಾರಂಭ ಜರುಗಿತು. ಸಮ್ಮುಖ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ಕುದುರೆಮೋತಿ ವಿಜಯ ಮಹಾಂತ ಸ್ವಾಮೀಜಿ, ಮಾಜಿ ಸಂಸದ ಆರ್.ಎಸ್. ಪಾಟೀಲ, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ ನಾಯ್ಕ ಮಾತನಾಡಿದರು.
ಹಾಲಕೆರೆ ಅನುದಾನೇಶ್ವರ ಪೀಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಪುರಾಣ ಕಾರ್ಯಕ್ರಮ ಯಶಸ್ಸುಗೊಳಿಸಿದ ಸರ್ವರನ್ನು ನೆನೆದರು. ವಿಶೇಷವಾಗಿ ಆಗಮಿಸಿದ್ದ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರು ಮಾತನಾಡುತ್ತಾ, ಬಸವಣ್ಣನವರ ಪುರಾಣ, ವಚನಗಳನ್ನು ಕೇಳುವುದು ಮಾತ್ರ ಆಗಬಾರದು. ಅವುಗಳ ಅನುಕರಣೆ, ಅನುಷ್ಠಾನವಾಗುವುದು ಮುಖ್ಯ ಎಂದರು.
ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಹಳ್ಳಿ, ಸಿದ್ದಣ್ಣ ಬಂಡಿ, ಮುದಿಯಪ್ಪ ಮುಧೋಳ, ಪುರಾಣಿಕ ಅನ್ನದಾನಶಾಸ್ತ್ರಿ, ಕಳಕಯ್ಯ ಸಾಲಿಮಠ, ಎಂ.ಪಿ.ಗಾಣಿಗೇರ ಮತ್ತಿತರ ಮುಖಂಡರು, ಪೂಜ್ಯ ಸ್ವಾಮಿಗಳು ವೇದಿಕೆ ಮೇಲಿದ್ದರು.
ಪ್ರತಿದಿನ ಸದ್ಭಾವನಾ ಯಾತ್ರೆ ನಡೆದವು. ಪುರಾಣ ಕಾರ್ಯಕ್ರಮ ನಡೆದ ಪ್ರತಿದಿನವೂ ಗಜೇಂದ್ರಗಡ ಹಾಗು ಸುತ್ತಮುತ್ತಲಿನ ಗ್ರಾಮಗಳ ಸರ್ವಧರ್ಮೀಯ ಬಸವ ಭಕ್ತರು ಬೇರೆ ಬೇರೆ ದಿನ ಮೆರವಣಿಗೆ ಮುಖಾಂತರ ‘ಬಸವ ಬುತ್ತಿ’ಯನ್ನು ಹೊತ್ತುಕೊಂಡು ಬಂದು, ಪುರಾಣ ಸಮಿತಿಗೆ ಅರ್ಪಿಸಿ ತಮ್ಮ ಭಕ್ತಿ ಪ್ರದರ್ಶಿಸಿದರು. ಪುರಾಣ ಮುಗಿದ ನಂತರ ನಡೆಯುತ್ತಿದ್ದ ಪ್ರತಿದಿನದ ದಾಸೋಹದಲ್ಲಿ ಮೂರು-ನಾಲ್ಕು ಸಾವಿರ ಜನ ಪ್ರಸಾದ ಸ್ವೀಕರಿಸುತ್ತಿದ್ದರು. ಇದು ಬಸವಣ್ಣನವರು ಸಕಲ ಜೀವಾತ್ಮರ ಲೇಸು ಬಯಸುವ ಸಿದ್ಧಾಂತ ಹಾಗೂ ದಾಸೋಹ ತತ್ವದ ಮಹತ್ವವನ್ನು ಸಾರಿ ಸಾರಿ ಹೇಳಿತು.
ಗಜೇಂದ್ರಗಡ ನಗರದಲ್ಲಿ ಬಸವ ಪುರಾಣ ಅದ್ದೂರಿಯಾಗಿ ನಡೆಯಿತು
The ceremony is excellent. The women were carrying Vachana sahitya as well as prepared food. It is good. But only women carry vachana sahitya? Why not men too? Basava philosophy is a philosophy of gender equality. This changa is necessary.