“ಲಿಂಗಪ್ರಜ್ಞೆ ಎಂದರೆ ಸಮಾನತೆ, ಸಹೋದರತ್ವ. ನಮ್ಮ ಮಕ್ಕಳಿಗಾಗಿ ಸೌಹಾರ್ದ ಸಮಾಜ ಕಟ್ಟಬೇಕಾಗಿದೆ.”
ಯಡೆಯೂರು
ಮನುಸ್ಮೃತಿಯ ಮೂಲಕ ಈ ದೇಶದ ಬಹುಜನರನ್ನು ಗುಲಾಮರನ್ನಾಗಿ ಮಾಡಲಾಗಿದೆ. ಗುಲಾಮಗಿರಿಯಿಂದ ನಮ್ಮನ್ನು ಬಿಡಿಸಿದವರು ಬಸವಾದಿ ಶರಣರು. ಮನುವಾದಿಗಳ ಕಾರ್ಗತ್ತಲೆಯಿಂದ ಶರಣರು ವಚನಗಳ ಮೂಲಕ ನಮ್ಮನ್ನೆಲ್ಲ ಬೆಳಕಿಗೆ ತಂದರು.
ಇತಿಹಾಸ ತಿರುಚಿ ಸಮಾಜ ನಾಶ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ, ಕರ್ನಾಟಕದಲ್ಲಿ ಟಿಪ್ಪು ಸುಲ್ತಾನರ ಇತಿಹಾಸ ತಿರುಚಿ ಸಾಮರಸ್ಯ ಕೆಡಿಸಲಾಗುತ್ತಿದೆ ಎಂದು ಆಳಂದ ತೋಂಟದಾರ್ಯ ಅನುಭವ ಮಂಟಪದ ಕೊರಣೇಶ್ವರ ಸ್ವಾಮೀಜಿ ಹೇಳಿದರು.
ಅವರು ಎಡೆಯೂರಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಡೆದ ಪ್ರಥಮ ಅಖಿಲ ಕರ್ನಾಟಕ ಶರಣ ಸಾಹಿತ್ಯ ಸಮ್ಮೇಳನದ ಸಾನಿಧ್ಯವಹಿಸಿ ಮಾತನಾಡಿದರು.
ಶರಣು ಸಾಹಿತಿ, ಸಮ್ಮೇಳನದ ಅಧ್ಯಕ್ಷ ರಮ್ಜಾನ್ ದರ್ಗಾ ವಚನ ಪಿತಾಮಹ ಫ.ಗು. ಹಳಕಟ್ಟಿ ತಮ್ಮ ಜೀವನವನ್ನು ವಚನಗಳ ಸಂರಕ್ಷಣೆಗಾಗಿ ಮೀಸಲಾಗಿಟ್ಟರು. ನಾನೂ ಹಾಗೇ ಮಾಡಬೇಕೆಂದು ಅವರ ವಿಚಾರ ಕೇಳಿ ನಿರ್ಧರಿಸಿದೆ, ಎಂದರು.
ವಚನ ಧರ್ಮ ವಿಶಿಷ್ಟ ವೈಚಾರಿಕತೆಯ ಧರ್ಮ. ಅದು ದೇವರನ್ನು ನಂಬುತ್ತದೆ ಆದರೆ ಕೈಲಾಸ ನಂಬುವುದಿಲ್ಲ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವವನು ಶರಣ ಎನ್ನುತ್ತದೆ, ಎಂದು ಹೇಳಿದರು.
ಸಮ್ಮೇಳನ ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ ಎಡೆಯೂರು ಸಿದ್ಧಲಿಂಗೇಶ್ವರರ ಕಾಲಘಟ್ಟದಲ್ಲಿ ಲಿಂಗಾಯತ ಪ್ರಜ್ಞೆ ಮತ್ತೆ ಜಾಗೃತವಾಯ್ತು. ಲಿಂಗಪ್ರಜ್ಞೆ ಎಂದರೆ ಸಮಾನತೆ, ಸಹೋದರತ್ವ. ನಮ್ಮ ಮಕ್ಕಳಿಗಾಗಿ ಸೌಹಾರ್ದ ಸಮಾಜ ಕಟ್ಟಬೇಕಾಗಿದೆ. ಕನ್ನಡ ಸಾಹಿತ್ಯ ಸಮಾನತೆ, ಮಾನವೀಯತೆಯ ಪರವಾಗಿ ಇರುವಂಥದ್ದು ಎಂದು ಹೇಳಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಬಿ.ಸಿ. ಶೈಲಾ ನಾಗರಾಜ ವಹಿಸಿ ಮಾತನಾಡಿದರು. ಕುಣಿಗಲ್ಲ ಶಾಸಕ ಎಚ್. ಡಿ. ರಂಗನಾಥ ಸಹ ಮಾತನಾಡಿದರು.ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶರಣ ಸಂಕುಲ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಮಧ್ಯಾಹ್ನ ಚಿಂತನಾಗೋಷ್ಠಿಗಳು ನಡೆದವು. ಡಾ. ಹಸಿನಾ ಎಚ್. ಕೆ., ಶಿವಲೀಲಾ ಹುಣಸಗಿ, ಲಕ್ಷ್ಮೀ ಸಿ. ಎಚ್. ಕೊಟ್ರೇಶ್ ಉಪ್ಪಾರ ಮತ್ತಿತರರಿದ್ದರು.
ಬೇರೆ ಬೇರೆ ಕವಿಗಳಿಂದ ವಚನ ನಿರ್ವಚನ ನಡೆಯಿತು. ಕೊನೆಗೆ ತಿಪಟೂರು ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ವಚನ ರೂಪಕ ನಡೆಯಿತು.