‘ಶರಣ’ ಅಲಂಕಾರಿಕ ಪದವಲ್ಲ, ಸಾಧನೆಯ ಹಂತ: ಗಿರಿಜಕ್ಕ ಧರ್ಮರೆಡ್ಡಿ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

ನಾವು ಸಾಮಾನ್ಯವಾಗಿ ವ್ಯಕ್ತಿಗಳಿಗೆ ಗೌರವಯುತವಾಗಿ ಕರೆಯಲು ‘ಶರಣ’ನೆಂಬ ಪದ ಬಳಸುತ್ತೇವೆ. ಅವರನ್ನು ‘ಶರಣರೆ’ ಎನ್ನುತ್ತೇವೆ. ಆದರೆ ಬಸವಾದಿ ಶರಣರ ವಿಚಾರಧಾರೆಯಲ್ಲಿ ಶರಣರೆಂದರೆ ಬರೀ ಕರೆಯುವ, ಮಾತನಾಡಿಸುವ ಅಲಂಕಾರಿಕ ಪದವಲ್ಲ. ಇಲ್ಲಿ ಶರಣರೆಂದರೆ ಅನುಭಾವಿ, ಆಚಾರವುಳ್ಳವ, ಜ್ಞಾನದ ಅರಿವನ್ನು ಹೊಂದಿರುವಾತನಾಗಿರುತ್ತಾನೆ.

ಶರಣರ ಪ್ರಕಾರ ಹುಟ್ಟಿದ ಮನುಷ್ಯನಿಗೆ ಸಂಸ್ಕಾರ ಮುಖ್ಯವಾಗಿರುತ್ತದೆ. ಈ ಸಂಸ್ಕಾರವೇ ಆತನನ್ನು ಹಂತ ಹಂತವಾಗಿ ದೈವತ್ವದ ಕಡೆ ಒಯ್ಯುವುದು. ಬಹಳಷ್ಟು ಶರಣರ ವಚನಗಳಲ್ಲಿ ‘ಶರಣ’ನೆಂಬ ಪದಕ್ಕೆ ತಮ್ಮದೇ ಆದ ವ್ಯಾಖ್ಯಾನಗಳಿವೆ. ಆದರೆ ಬಹುತೇಕ ಶರಣರು ಷಟ್‌ಸ್ಥಲಗಳ ಬಗ್ಗೆ ವಿವರಿಸುತ್ತಾ, ಮೊದಲ ಮೆಟ್ಟಿಲು ಭಕ್ತನಾಗುವುದು, ಹಂತ ಹಂತವಾಗಿ ಒಂದೊಂದೇ ಮೆಟ್ಟಿಲನ್ನು ದಾಟುತ್ತ ನಡೆದು ಐದನೇ ಮೆಟ್ಟಿಲು ಮುಟ್ಟಿದಾಗ ಆತನಿಗೆ ಶರಣತ್ವ ಲಭಿಸುತ್ತದೆ. ಈ ಐದೂ ಹಂತಗಳನ್ನು ಮುಟ್ಟಿದಾತ ಮಾತ್ರ ಶರಣನಾಗಲು ಸಾಧ್ಯ ಎಂದು ಶರಣ ಚಿಂತಕಿ ಗಿರಿಜಕ್ಕ ಧರ್ಮರೆಡ್ಡಿ ಹೇಳಿದರು.

ಅವರು ಗದಗ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಗದಗ ತಾಲೂಕ ಕದಳಿ ಮಹಿಳಾ ವೇದಿಕೆ ಹಾಗೂ ಬಸವದಳ ಗದಗ-ಬೆಟಗೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ೧೬೨೬ನೇ ಶರಣ ಸಂಗಮ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ, ಶ್ರೀ ಕೂರಾ ಪಾಂಡುರಂಗ ಕೂರಾ ಈಶ್ವರಪ್ಪ ಶೆಟ್ಟಿ ಇವರ ಹೆಸರಿನಲ್ಲಿ ಪ್ರೊ. ಎಂ. ಬಸವರಾಜ ಮಟಮಾರಿ ನೀಡಿದ ದತ್ತಿ ಕಾರ್ಯಕ್ರಮದಲ್ಲಿ ‘ಶರಣರ ಜೀವನ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂದು ಶರಣರು ಶರಣತ್ವದ ಕಟ್ಟಡವನ್ನು ಬರೀ ಕಲ್ಲುಮಣ್ಣಿನಿಂದ ಕಟ್ಟಲಿಲ್ಲ, ದೈವತ್ವ ಪ್ರೀತಿ, ಭಕ್ತಿಯಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಇಲ್ಲಿ ಭಕ್ತಿಯ ಮತ್ತೊಂದು ರೂಪವೇ ಪ್ರೇಮವಾಗಿದೆ. ಅಂದು ಶರಣರ ಈ ಪ್ರೇಮತ್ವ ಗುಣಕ್ಕೆ ಆಕರ್ಷಿತರಾಗಿ ಬಹುಸಂಖ್ಯೆಯಲ್ಲಿ ಜನ ಕಲ್ಯಾಣಕ್ಕೆ ಆಗಮಿಸಿ, ಶರಣರ ಜೊತೆ ಮಿಳಿತಗೊಂಡು ತಾವು ಶರಣರಾದರು. ‘ಶರಣ’ ಈ ಪದವೇ ವಿಶಾಲಾರ್ಥ ಹೊಂದಿದೆ. ಶರಣರೆಂದರೆ ಅವರು ಒಂದು ಜಾಗ, ಪ್ರದೇಶಕ್ಕೆ ಸೀಮಿತವಾದವರಲ್ಲ. ಅವರು ಇಡೀ ಜಗತ್ತಿಗೆ ಸಂಬಂಧಿಸಿದವರೆಂದು ಗಿರಿಜಕ್ಕನವರು ತಿಳಿಸಿದರು.

ಆರಂಭದಲ್ಲಿ ಎನ್. ಎಚ್. ಹಿರೇಸಕ್ಕರಗೌಡ್ರ ಅವರು ಶರಣೆ ಸತ್ಯಕ್ಕನವರ ಎರಡು ವಚನಗಳನ್ನು ನಿರ್ವಚನ ಗೈಯ್ದರು.

ಪ್ರಾರಂಭದಲ್ಲಿ ವಚನ ಪ್ರಾರ್ಥನೆ ರೇಣಕ್ಕ ಕರೇಗೌಡ್ರ ಇವರಿಂದ ಜರುಗಿತು. ಆರಂಭದಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನಸಿಂಗರಿಗೆ ಮೌನ ಆಚರಿಸಿ ಶ್ರದ್ದಾಂಜಲಿ ಕೋರಲಾಯಿತು. ಸ್ವಾಗತವನ್ನು ಎಸ್. ಎ. ಮುಗದ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸಿ ಮಾತನಾಡಿದರು. ನಿರೂಪಣೆಯನ್ನು ಗದಗ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅಸುಂಡಿಯವರು ನಡೆಸಿಕೊಟ್ಟರು. ಶರಣು ಸಮರ್ಪಣೆಯನ್ನು ಗದಗ ತಾಲೂಕ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಎಂ. ಐಹೋಳೆ ಗೈದರು. ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು. ಕಾರ್ಯಕ್ರಮದಲ್ಲಿ ಬಸವದಳದ ಶರಣ, ಶರಣೆಯರು ಭಾಗವಹಿಸಿದ್ದರು.

Share This Article
1 Comment
  • ಸತ್ಯದ ಮಾತು ಶರಣ ಎಂಬ ಸಾಧನೆಯ ಪಥವಾಗಿದೆ..ಲಕ್ಷದ ಮೇಲೆ ತ್ತೊಂಬಾತ್ತಾರು ಪ್ರಮಥರಲ್ಲಿ 770 ಲಿಂಗಾನುಭಾವಿಗಳು ಶರಣಪಥವನ್ನ ಮುಟ್ಟಿದ್ದಾರೆ. ಆದರೆ ಲಿಂಗಸಾಧನೆಯನ್ನ ಸಾಧಿಸಿದರೆ ಯಾರು ಬೇಕಾದರು ಶರಣರಾಗಬಹುದು.

Leave a Reply

Your email address will not be published. Required fields are marked *