ಮೇಲ್ನೋಟಕ್ಕೆ ಅಪಘಾತದಂತೆ ಕಂಡರೂ, ಕೂಲಂಕುಷವಾಗಿ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲಾಗುವುದು
ಭಾಲ್ಕಿ
ತಡ ರಾತ್ರಿ ಕಬ್ಬು ತುಂಬಿದ ಲಾರಿಯಿಂದ ಸಂಭವಿಸಿರುವ ಅಪಘಾತದಿಂದ ತಾಲ್ಲೂಕಿನ ದಾಡಗಿ ಕ್ರಾಸಿನಲ್ಲಿರುವ ಬಸವಣ್ಣನವರ ಪ್ರತಿಮೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಬೀದರ್ ಜಿಲ್ಲಾ ಪೊಲೀಸ್ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಸ್ಥಳೀಯ ಪತ್ರಕರ್ತರ ವಾಟ್ಸ್ ಆಪ್ ಗುಂಪಿನಲ್ಲಿ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಒಂದು ಹೇಳಿಕೆ ಹಂಚಿಕೊಂಡಿದ್ದಾರೆ.
ಪ್ರತಿಮೆ ಮೇಲಿನ ಕಬ್ಬು ಸವರಿದ ಗುರುತು, ಕಬ್ಬಿನ ರಸದ ಕಲೆ ಮತ್ತು ಮುರಿದ ಬಲಿಷ್ಠ ರಾಡ್ ನೋಡಿದಾಗ ಮೇಲ್ನೋಟಕ್ಕೆ ಕಬ್ಬು ತುಂಬಿದ ಲಾರಿ ತಗುಲಿ ಈ ಹಾನಿಯಾಗಿದೆ ಎಂದು ಕಾಣುತ್ತಿದೆ.
ಆದರೂ ಯಾರಾದರೂ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವೇ ಎಂದು ಕೂಲಂಕುಷವಾಗಿ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲಾಗುವುದು. ಘಟನೆ ನಡೆದ ಸ್ಥಳಕ್ಕೆ ತಹಶೀಲ್ದಾರ್, ಡಿಎಸ್ಪಿ ಭಾಲ್ಕಿ ಮತ್ತು ನಾನು ಬೇಟಿ ನೀಡಿ, ಸ್ಥಳದಲ್ಲಿದ್ದ ಜನರ ಸಮಕ್ಷಮ ಪರಿಶೀಲಿಸಿದ್ದೇವೆ, ಎಂದು ಪ್ರದೀಪ ಗುಂಟಿ ಹೇಳಿದ್ದಾರೆ.
ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆ ವಿರೂಪವಾದ ಮೇಲೆ ಇಂದು ಬೆಳಿಗ್ಗೆ ಎರಡು ಗಂಟೆ ಭಾಲ್ಕಿ-ಹುಮನಾಬಾದ್ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತು.
ಬೆಳಿಗ್ಗೆ ವಿರೂಪಗೊಂಡ ಬಸವಣ್ಣನವರ ಪ್ರತಿಮೆಯನ್ನು ಗಮನಿಸಿದ ಗ್ರಾಮಸ್ಥರು, ಸಾರ್ವಜನಿಕರು ರಸ್ತೆಗಿಳಿದು ಬೆಂಕಿ ಹಚ್ಚಿ, ವಾಹನ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಧಾವಿಸಿದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಗಂಭೀರವಾದ ಪ್ರಯತ್ನ ಮಾಡುತ್ತೇವೆಂದ ಮೇಲೆ ಪ್ರತಿಭಟನೆಕಾರರು ವಾಹನ ಸಂಚಾರಕ್ಕೆ ಮತ್ತೆ ಅವಕಾಶ ನೀಡಿದರೆಂದು ತಿಳಿದು ಬಂದಿದೆ. ಪ್ರತಿಮೆಗೆ ಈಗ ಬಟ್ಟೆ ಮುಚ್ಚಲಾಗಿದೆ.
ಬಸವಕಲ್ಯಾಣ, ಹುಮನಾಬಾದ್ ಕಡೆ ತೆರಳುವ ವಾಹನಗಳು ದಾಡಗಿ ಕ್ರಾಸ್ ಬಳಿ ಭಾರೀ ಪ್ರಮಾಣದಲ್ಲಿ ಜಮಾಯಿಸಿದ್ದರಿಂದ ಸಂಚಾರ ಸಂಪೂರ್ಣ ಎರಡು ಗಂಟೆ ಸ್ಥಗಿತಗೊಂಡಿತ್ತು