ಇತಿಹಾಸದಲ್ಲಿ ‘ಲಿಂಗಾಯತ’ರಿಗಿಂತ ಭಿನ್ನವಾಗಿದ್ದ ‘ವೀರಶೈವ’ರು

ವೀರಶೈವರೆಂದರೆ ಪರಧರ್ಮೀಯರೊಂದಿಗೆ ಹೋರಾಡುವ ಶೈವರು ಎಂದು ಅರ್ಥ. ಈ ಕೆಲಸವನ್ನು ಲಿಂಗಾಯತರು ಎಂದೂ ಮಾಡಲಿಲ್ಲ.

ಧಾರವಾಡ

‘ವೀರಶೈವ’ ಮತ್ತು ‘ಲಿಂಗಾಯತ’ ಪದಗಳು ಸಮಾಜದಲ್ಲಿ ಸೃಷ್ಟಿಸಿದ ಗೊಂದಲಗಳು ಅಷ್ಟಿಷ್ಟಲ್ಲ. ಇವುಗಳ ವಿಷಯದಲ್ಲಿ ಸ್ಪಷ್ಟತೆ ಸಿಗದೆ ಹೋದರೆ ಇನ್ನಷ್ಟು, ಮತ್ತಷ್ಟು ಸಿಕ್ಕುಗಳು ಹುಟ್ಟಿಕೊಳ್ಳುವುದಂತೂ ಖಚಿತ. ಇತಿಹಾಸದಲ್ಲೊಮ್ಮೆ ಇಣುಕಿ ಹಾಕಿದರೂ ಸಾಕು ಈ ಅನಗತ್ಯ ಗೊಂದಲಗಳಿಗೆ ಸಂಪೂರ್ಣ ವಿರಾಮ ನೀಡಬಹುದು.

ಕೆಲವರು ‘ವೀರಶೈವ’ ಮತ್ತು ‘ಲಿಂಗಾಯತ’ ಪದಗಳು, ‘ವೃಕ್ಷ ಮತ್ತು ‘ಮರ’ಗಳಂತೆ ಸಮಾನಾರ್ಥಕ ಪದಗಳು ಎಂದೂ, ಮತ್ತೆ ಕೆಲವರು ‘ಲಿಂಗಾಯತ’ಕ್ಕಿಂತ ‘ವೀರಶೈವ’ ಪ್ರಾಚೀನವಾದುದು ಎಂದೂ ವಾದಿಸುತ್ತಾರೆ.

ಇನ್ನೂ ಕೆಲವರು ‘ವೀರಶೈವ’ಕ್ಕಿಂತ ‘ಲಿಂಗಾಯತ’ ಉತ್ತಮ ಪದವೆಂದೂ, ಮತ್ತೂ ಕೆಲವರು, ‘ಲಿಂಗಾಯತ’ ಪದಕ್ಕಿಂತ ‘ವೀರಶೈವ’ ಉತ್ತಮ ಪದವೆಂದೂ ವಾದಿಸುತ್ತಾರೆ. ‘ವೀರಶೈವ’ ಪದದಲ್ಲಿನ ‘ವೀರ’ ಎಂಬ ವಿಶೇಷಣಕ್ಕೆ ಇರುವ ಸಂಭಾವ್ಯ ಅರ್ಥಗಳನ್ನು ಪರಿಶೀಲಿಸುವ ಮೂಲಕ, ನಾವು ಈ ವಿವಾದಕ್ಕೆ ಅಂತಿಮ ತೆರೆ ಎಳೆಯಬಹುದು.

ಮೊದಲಿಗೆ ‘ವೀರ’ ಎನ್ನುವ ಪದಕ್ಕೆ ವೀರಶೈವ ಧರ್ಮ ಅಥವಾ ಅದರ ಅನುಯಾಯಿ ಎಂಬ ಅರ್ಥವಿರಲಿಲ್ಲ. ವಾಸ್ತವವಾಗಿ, ಬಸವಾದಿ ಶರಣರ ಕಾಲದಲ್ಲಿ ಅಂತಹ ಪದವೇ ಇರಲಿಲ್ಲ ಎಂಬುದನ್ನು ಡಾ.ಕಲಬುರ್ಗಿಯವರು ತಮ್ಮ ‘ವೀರಶೈವ: ಇತಿಹಾಸ ಮತ್ತು ಭೂಗೋಲ’ ಎಂಬ ಪುಸ್ತಿಕೆಯಲ್ಲಿ (ಲಿಂಗಾಯತ ಅಧ್ಯಯನ ಅಕಾಡೆಮಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ, 2005) ಸಾಧಾರವಾಗಿ ಸಿದ್ಧಪಡಿಸಿದ್ದಾರೆ.

ಅಬ್ಬಲೂರಿನ ದೇವಸ್ಥಾನದಲ್ಲಿರುವ ಏಕಾಂತದ ರಾಮಯ್ಯನ ಮತ್ತು ಜೈನರ ಕಾದಾಟದ ಶಿಲ್ಪ

ಹಾಗಾದರೆ ಅದು ಯಾವಾಗ ಮೊದಲು ಬಳಸಲ್ಪಟ್ಟಿತು? ಯಾರಿಂದ? ಯಾವ ಅರ್ಥದಲ್ಲಿ? ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಮೊದಲು ಹರಿಹರ ತನ್ನ ರಗಳೆಗಳಲ್ಲಿ ವೀರ ಪದವನ್ನು ಯಾವ ಅರ್ಥದಲ್ಲಿ ಬಳಸಿದ್ದಾನೆ ನೋಡೋಣ.

  1. ಮಾರುಡಿಗೆಯ ನಾಚಿತಂದೆಯ ರಗಳೆ:
    ಮಾರುಡಿಗೆಯ ನಾಚಯ್ಯ ಜೈನ ವಿರೋಧಿಯಾದ ಶಿವಭಕ್ತ. ಹರಿಹರ ಅವನನ್ನು ‘ವೀರ ನಾಚಯ್ಯ’ ಎಂದೇ ವರ್ಣಿಸುತ್ತಾನೆ (ಸ್ಥಲ 1, ಸಾಲು 101). ಶಿವನು ಕನಸಿನಲ್ಲಿ ಬಂದು ನಾಚಯ್ಯನಿಗೆ ಜೈನರಿಂದ ಶಿವಭಕ್ತರಿಗಾಗುತ್ತಿರುವ ಹಿಂಸೆಯನ್ನು ನಿವೇದಿಸುತ್ತಾನೆ. ಅಲ್ಲದೆ, ‘ಮಾರುಡಿಗೆಯ ಪೆÇಕ್ಕು, ಸುಟ್ಟು, ಸೂರೆ ಹೊಯ್ದು, ವೀರಶಿವಲಿಂಗವ ನಿಲಿಸಯ್ಯ’ ಎಂದು ನಿರ್ದೇಶಿಸುತ್ತಾನೆ (ಸ್ಥ. 1, ಸಾ. 13-14).

ನಾಚಯ್ಯ ತನ್ನ ಹದಿಮೂರು ಗೆಳೆಯರನ್ನು ಸೇರಿಸಿಕೊಂಡು ಮಾರುಡಿಗೆಯ ಜೈನರನ್ನು ಸದೆಬಡಿಯಲು ಹಾಗೂ ಜಿನಮೂರ್ತಿಯನ್ನು ಕಿತ್ತು ಆ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಲು ಹೊರಡುತ್ತಾನೆ. ಈ ತೇರಾಸರು (ಹದಿಮೂರು ಜನರು) ‘ವೀರ ಶರಣರು’, ‘ವೀರ ಭಕ್ತಿ ಪಲ್ಲವಿಸಿದಂತಿರ್ದ ತಳಿರ ಬಂಡಿಯೋಳ್ … ಶಿವಲಿಂಗವನ್ನಿಟ್ಟು’ಅದರ ಕಾವಲಿಗೆ ಕೆಲವರನ್ನು ನೇಮಿಸಿದ ನಾಚಯ್ಯ, ಊರ ಮುಂದೆ ಬಂಡಿಗಳನ್ನು ನಿಲ್ಲಿಸುತ್ತಾನೆ.

ಸಂಜೆಯಾದ ಮೇಲೆ ‘ತ್ರಿಪುರಹರನ ಮೂರನೆಯ ಕಣ್ಣು’ ಎಂಬ ಬಿರುದಿಗೂ ‘ಬಹಳ ಶಕ್ತಿಗಳೆನಿಪ ವೀರಮಾಹೇಶ್ವರರು’ (ಸ್ಥ. 2, ಪ್ಯಾರಾ 3) ಎಂಬ ಬಿರುದಿಗೂ ಪಾತ್ರರಾದ ನಾಚಯ್ಯನೂ, ತೇರಾಸರೂ ಜೈನ ಬಸದಿಯಲ್ಲಿದ್ದ ಜಿನ ಮೂರ್ತಿಯನ್ನು ಕಿತ್ತು, ಅದರ ಜಾಗದಲ್ಲಿ ಲಿಂಗವನ್ನು ಸ್ಥಾಪಿಸುತ್ತಾರೆ. ಮಾರನೆಯ ಬೆಳಿಗ್ಗೆ, ‘ವೀರಭಕ್ತರು ಅರುಹರಂ’ (ಜೈನರನ್ನು) ನಾಶ ಮಾಡುವುದನ್ನು ನೋಡಲೆಂಬಂತೆ ಸೂರ್ಯ ಉದಯಿಸಿದನು.

  1. ಕೋವೂರು ಬೊಮ್ಮಿತಂದೆಯ ರಗಳೆ:
    ಜೈನರೇ ಹೆಚ್ಚಾಗಿದ್ದ ಕೋವೂರಿನಲ್ಲಿ ಬೊಮ್ಮಯ್ಯನೆಂಬ ಶಿವಭಕ್ತ ರಾಜನಿದ್ದ. ಮಂತ್ರಿ, ಲೆಕ್ಕಿಗರು, ಮುಂತಾದವರೆಲ್ಲ ಜೈನರೇ ಆಗಿದ್ದರೂ ಅವನಿಗೆ ನೆಚ್ಚಿನ 300 ಜನ ರಾವುತರಿದ್ದರು.

ಈ ರಾವುತರು ನಿಷ್ಠಾವಂತ ಶಿವಭಕ್ತರು. ಜೈನರಿಗೂ ಶಿವಭಕ್ತರಿಗೂ ಆಗಾಗ್ಗೆ ಸಣ್ಣಪುಟ್ಟ ಕದನಗಳು ಆಗುತ್ತಿದ್ದವು. ಒಂದು ಕದನದಲ್ಲಿ ಬೊಮ್ಮಯ್ಯ ಅನೇಕ ಜೈನರನ್ನು ಕೊಂದ. ಅವನ ಜೊತೆಯಲ್ಲಿ ಹೋರಾಡಿದ ನೆಚ್ಚಿನ ಶಿವಭಕ್ತ ಬಂಟರನ್ನು ಹರಿಹರ ‘ವೀರಮಾಹೇಶ್ವರರು’ ಎಂದು ಕರೆಯುತ್ತಾನೆ (ಸ್ಥಲ 2, ಪ್ಯಾರಾ 5).

ಬೊಮ್ಮಯ್ಯ ತನ್ನ ಕೊನೆಗಾಲದಲ್ಲಿ 300 ಬಂಟರೊಡನೆ ಆತ್ಮಸಮರ್ಪಣೆ ಮಾಡಿಕೊಳ್ಳಲು ಶಿವ ದೇವಾಲಯಕ್ಕೆ ಹೋಗುತ್ತಾನೆ (ಸ್ಥಲ 3). ಆಗ ಅವನು ಹೋಗುವುದು ‘ವೀರಮಾರ್ಗದಲ್ಲಿ’ (ಸಾ. 37). ಆ ಮುನ್ನೂರ್ವರು ‘ವೀರ ಘಂಟಾ ಠಣಾತ್ಕಾರದಿಂದ’, ಆಯುಧಗಳ ಸಮೇತ ಹೋಗುತ್ತಾರೆ (ಸಾ. 64-66). ಅವರದು ‘ವೀರ ಸಂತತಿ’ (ಸಾ.71); ಅವರು ‘ಹರನ ವೀರರು’, ವೀರಭದ್ರನ ಗಣಂಗಳು (ಸಾ.81).

ಈ ವೀರರ ಆತ್ಮಸಮರ್ಪಣಾ ವಿಧಾನ ಬಹಳ ಭಯಂಕರವಾದುದು. ಅವರು ಮೊಳೆಯ ಹಾವುಗೆಗಳನ್ನು ಮೆಟ್ಟಿ ಧುಮುಕುತ್ತಾರೆ (ಸಾ. 99); ತಮ್ಮ ಪಾದಗಳನ್ನು ಕಡಿದುಕೊಂಡು, ಕಡಿದುಕೊಂಡ ಭಾಗಕ್ಕೆ ಬಾಣಗಳನ್ನು ಸಿಕ್ಕಿಸಿಕೊಂಡು ಅದೇ ಕಾಲುಗಳಿಂದ ನಡೆದುಕೊಂಡು ಬಂದು ಲಿಂಗಕ್ಕೆ ಮಜ್ಜನಕ್ಕೆರೆಯುತ್ತಾರೆ; ಖಡ್ಗಗಳಿಂದ ತಮ್ಮ ಕರುಳುಗಳನ್ನು ಹೊರತೆಗೆದು ಲಿಂಗಕ್ಕೆ ಮಾಲೆಯಾಗಿ ಅರ್ಪಿಸುತ್ತಾರೆ; ತಮ್ಮ ದೇಹದ ವಿವಿಧ ಭಾಗಗಳನ್ನು ಕೊಡಲಿಯಿಂದ, ಗರಗಸದಿಂದ ಕತ್ತರಿಸಿ ವಿವಿಧ ದಿಕ್ಕುಗಳಿಗೆ ಚೆಲ್ಲುತ್ತಾರೆ. ಅವರ ದೇಹದ ಎಲ್ಲ ಕಡೆಯೂ ಗುಂಡಿಗಳಾಗಿರುತ್ತವೆ.

ಬೊಮ್ಮಯ್ಯ ಕೂಡ ಅವರನ್ನೇ ಅನುಸರಿಸುತ್ತಾನೆ. ಇವರಾರಿಗೂ ನೋವಿನ ಯಾತನೆಯಾಗಲಿ, ಸಾವಿನ ಭಯವಾಗಲಿ ಇಲ್ಲ, ಏಕೆಂದರೆ ಅವರು ವೀರರು. ಅಲ್ಲದೆ, ಅವರದು ವೀರಭಕ್ತಿಯಾದುದರಿಂದ ಶಿವನಿಗೆ ಅವರು ನಿರ್ಭೀತರಾಗಿ ಆತ್ಮಸಮರ್ಪಣೆ ಮಾಡಿಕೊಳ್ಳುತ್ತಾರೆ. ಕತ್ತರಿಸಲ್ಪಟ್ಟ ಈ ವೀರಮಾಹೇಶ್ವರರ ಕಾಲುಗಳು ಜೈನರನ್ನು ಅಟ್ಟಿಸಿಕೊಂಡು ಹೋಗಿ ಕೊಲ್ಲುತ್ತವೆ (ಸಾ. 101-104). ಈ ಮುನ್ನೂರ್ವರು ‘ವೀರಕುಲದವರು’, ಬೊಮ್ಮಯ್ಯ ‘ವೀರನಿಧಿ’(ಸಾ. 152, 155).

ಇದರಿಂದ, ಹರಿಹರನ ಪ್ರಕಾರ ಶಿವಸಮಯ ರಕ್ಷಕರೂ, ಪರಸಮಯ ನಿರ್ಮೂಲಿಗರೂ ಆದ ಶಿವಭಕ್ತರು ‘ವೀರಶರಣರು’, ‘ವೀರಭಕ್ತರು’, ‘ವೀರಮಾಹೇಶ್ವರರು’ ಎಂಬುದು ಸ್ಪಷ್ಟವಾಗುತ್ತದೆ. ಭಕ್ತ, ಮಹೇಶ, ಶರಣ ಎಂಬ ಪದಗಳು ‘ಶೈವ’ ಎಂಬ ಪದಕ್ಕೆ ಪರ್ಯಾಯ ಎಂಬುದನ್ನು ಗಮನಿಸಿದರೆ ಹರಿಹರನೇ – ಹೆಚ್ಚೂ ಕಡಿಮೆ – ‘ವೀರಶೈವ’ದ ಪರ್ಯಾಯ ಪದಗಳನ್ನು ಬಳಸಿದ ಮೊದಲಿಗ ಎಂಬುದೂ ಸ್ಪಷ್ಟವಾಗುತ್ತದೆ.

ಸೋಜಿಗದ ಸಂಗತಿಯೆಂದರೆ ‘ವೀರ’ ಪದವನ್ನು ಹರಿಹರ ಕನ್ನಡನಾಡಿನ ಶರಣರನ್ನು ಶ್ಲಾಘಿಸಲು ಮಾತ್ರ ಮೀಸಲಾಗಿಟ್ಟಿದ್ದಾನೆ. ಉದಾಹರಣೆಗೆ ನೋಡಿ: ವೈಷ್ಣವನೊಬ್ಬ ಉದ್ದ ನಾಮ ಧರಿಸಿಕೊಂಡು ಬರುತ್ತಿದ್ದುದನ್ನು ಇರಿಭಕ್ತಯ್ಯ ಎಂಬ ತಮಿಳುನಾಡಿನ ಶಿವಭಕ್ತ ನೋಡಿ ಆ ನಾಮವನ್ನು ಅಳಿಸಿ, ವಿಭೂತಿಯನ್ನು ಧರಿಸಿಕೊ ಎನ್ನುತ್ತಾನೆ; ಅದಕ್ಕೆ ಒಪ್ಪದ ಆ ವೈಷ್ಣವನನ್ನು ಇರಿದು ಕೊಲ್ಲುತ್ತಾನೆ. ಆದರೆ ಹರಿಹರ ಇರಿಭಕ್ತಯ್ಯನನ್ನು ವೀರಭಕ್ತ ಎಂದು ಕರೆಯುವುದಿಲ್ಲ.

ಅದೇ ರೀತಿ, ಏಣಾಧಿನಾಥನೆಂಬ ತಮಿಳುನಾಡಿನ ಶಿವಭಕ್ತ ಭವಿಗಳನ್ನು ಕಾಳಗದಲ್ಲಿ ಸೋಲಿಸಿ ಬಂದ ಹಣವನ್ನು ಶರಣರಿಗೆ ವಿನಿಯೋಗಿಸುತ್ತಾನೆ. ಅವನು ‘ವೀರಶ್ರೀ’ ಪಟ್ಟ ಕಟ್ಟಿಸಿಕೊಳ್ಳುತ್ತಾನೆ; ಆದರೆ ಹರಿಹರ ಅವನನ್ನು ವೀರಶರಣ, ವೀರಮಾಹೇಶ್ವರ ಎಂದು ವರ್ಣಿಸುವುದಿಲ್ಲ.

ಹರಿಹರ ‘ಆದಯ್ಯನ ರಗಳೆ ’ಯಲ್ಲಿ ವೀರ ಶಬ್ದವನ್ನೂ ಅದರ ಸಮಾನಾರ್ಥಕ ಪದಗಳಾದ ಧೀರ, ಕಲಿ, ಛಲಿ ಪದಗಳನ್ನೂ ಮತ್ತೊಂದು ಅರ್ಥದಲ್ಲಿ ಬಳಸುತ್ತಾನೆ. ಪರಮ ಶಿವಭಕ್ತನಾದ ಆದಯ್ಯನೂ ಜೈನ ಮತ ದ್ವೇಷಿಯೇ. ವಾಸ್ತವವಾಗಿ ಹರಿಹರನ ಪ್ರಕಾರ, ಆದಯ್ಯ ಶಿವನ ಆಣತಿಯಂತೆ ಭೂಮಿಯ ಮೇಲೆ ಜಿನಧರ್ಮದ ಪ್ರಭಾವವನ್ನು ಕಡಿಮೆ ಮಾಡಲೆಂದೇ ಹುಟ್ಟಿ ಬಂದವನು.
ಒಮ್ಮೆ ಜೈನ ಬಸದಿಯ ಬಾಗಿಲನ್ನು ಜೈನರು ಎಷ್ಟೇ ಪ್ರಯತ್ನಿಸಿದರೂ ತೆರೆಯಲಾಗದಿದ್ದಾಗ ಅಲ್ಲಿಗೆ ಬರುವ ಆದಯ್ಯನನ್ನು ಹರಿಹರ ‘ಅಸಮಾಕ್ಷನ ಘನ ವಿಕ್ರಮಚರಿತಂ, ಧರೆಯೋಳ್ಕಲಿ, ಛಲಿ’ (ಸ್ಥಲ 3, ಸಾ. 122-123) ಎಂದು ವರ್ಣಿಸುತ್ತಾನೆ.

ಇಲ್ಲಿ, ವೀರ, ಕಲಿ, ಛಲಿ ಎಂದರೆ ಖಡ್ಗ ಹಿಡಿದು ಹೋರಾಡುವವನಲ್ಲ, ಎಂಥ ಕೇಡುಗಾಲದಲ್ಲೂ ತನ್ನ ಶಿವನಿಷ್ಠೆ, ಶಿವಧರ್ಮ ನಿಷ್ಠೆಯನ್ನು ಬಿಡದವನು ಎಂದು. ಬಸವೇಶ್ವರರೂ ತಮ್ಮ ಮಾಹೇಶ್ವರ ಸ್ಥಲದ ವಚನಗಳಲ್ಲಿ ಸಾಧಕನನ್ನು ಛಲಿ, ವೀರಬ್ರತಿ ಎಂದೇ ಕರೆದಿದ್ದಾರೆ (ವ. 672, 673). ಅವರ ಪ್ರಕಾರ ನಿಜವಾದ ಶರಣನಿಗೆ ಪರಸತಿನೊಲ್ಲೆನೆಂಬ, ಪರಧನವನೊಲ್ಲೆನೆಂಬ ಛಲ ಬೇಕು.

ಅಬ್ಬಲೂರಿನ ದೇವಸ್ಥಾನದಲ್ಲಿರುವ ಏಕಾಂತದ ರಾಮಯ್ಯನ ಮತ್ತು ಜೈನರ ಕಾದಾಟದ ಶಿಲ್ಪ

ಜೈನ ಧರ್ಮದಲ್ಲೂ ‘ವ್ರತಿ’ ಪದವನ್ನು ‘ವೀರ’ ಎಂಬರ್ಥದಲ್ಲಿ ಬಳಸಲಾಗಿದೆ. ಅದು ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಅಸ್ತೇಯ ಮತ್ತು ಅಪರಿಗ್ರಹ ಎಂಬ ಐದು ವ್ರತಗಳನ್ನು ಸನ್ಯಾಸಿಗಳಿಗೆ ವಿಧಿಸಿದಂತೆ ಗೃಹಸ್ಥರಿಗೂ ವಿಧಿಸುತ್ತದೆ. ಆದರೆ ಗೃಹಸ್ಥರು ಪಾಲಿಸುವ ವ್ರತಗಳಿಗೆ ಅಣುವ್ರತಗಳೆಂದು ಹೆಸರು; ಬಹಳ ಕಟ್ಟುನಿಟ್ಟಾಗಿ ಪಾಲಿಸುವ ಸನ್ಯಾಸಿಗಳ ವ್ರತಗಳಿಗೆ ಮಹಾವ್ರತಗಳೆಂದು ಹೆಸರು.

ವ್ರತಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುವ ಶರಣರಿಗೆ ವೀರವ್ರತಿ, ಛಲಿ, ಕಲಿ ಎಂದು ಕರೆದಂತೆ ಜೈನರು ಮಹಾವ್ರತಿಗಳನ್ನು ವೀರಜೈನರು, ವೀರಶ್ರಮಣರು ಎಂದು ಕರೆಯುವುದಿಲ್ಲ.

ಕೊನೆಯದಾಗಿ, ‘ವೀರ’ ಪದವನ್ನು ‘ಸಿದ್ಧಾಂತ ಶಿಖಾಮಣೀ’ (5.16) ಈ ರೀತಿ ವಿಶ್ಲೇಷಣೆ ಮಾಡುತ್ತದೆ: ಶಿವಸ್ವರೂಪದ ವಿದ್ಯೆಯಲ್ಲಿ (ವೀ) ಯಾರು ರಮಿಸುತ್ತಾರೋ (ರ) ಅಂಥ ಶಿವಭಕ್ತರನ್ನು ವೀರಶೈವರೆಂದು ಕರೆಯುತ್ತಾರೆ.

ಈ ರೀತಿ ‘ವೀರ’ ಪದದ ವ್ಯುತ್ಪತ್ತಿ ಮಾಡುವುದು ತಪ್ಪು ಎಂದು ಎಸ್. ಎನ್. ದಾಸಗುಪ್ತ ವಾದಿಸುತ್ತಾರೆ. ವಿದ್ಯೆಯಲ್ಲಿ ರಮಿಸುವವನು ‘ವಿರ’ ಆಗಬೇಕೇ ಹೊರತು, ‘ವೀರ’ ಅಲ್ಲ; ಬ್ರಹ್ಮಸ್ವರೂಪದ ವಿದ್ಯೆಯಲ್ಲಿ ವೇದಾಂತಿಗಳೂ ರಮಿಸುತ್ತಾರೆ; ಅವರನ್ನೇಕೆ ವೀರ ಎನ್ನುವುದಿಲ್ಲ?

ಮೇಲಿನ ಪರಿಶೀಲನೆಯಿಂದ ವಚನಕಾರರೂ ಕವಿಗಳೂ ‘ವೀರ’ ಪದವನ್ನು ಈ ಕೆಳಗಿನ ನಾಲ್ಕು ಅರ್ಥಗಳಲ್ಲಿ ಬಳಸಿದ್ದಾರೆ ಎಂಬುದು ವ್ಯಕ್ತವಾಗುತ್ತದೆ.

  1. ಪರಸಮಯಿಗಳೊಡನೆ ಧೈರ್ಯದಿಂದ ಹೋರಾಡಿ, ಅವರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿ ಅವೇ ಸ್ಥಳಗಳಲ್ಲಿ ಶಿವಾಲಯ ಕಟ್ಟಿ, ಅಲ್ಲಿ ಶಿವಲಿಂಗ ಸ್ಥಾಪಿಸುವವರು ವೀರಶರಣರು.
  2. ಶಿವನಿಗೆ ಬೇಕಾಗಿರಲಿ, ಬೇಡವಾಗಿರಲಿ, ತಮ್ಮ ಅಂಗಾಂಗಗಳನ್ನು ವೀರಾವೇಶದಿಂದ ಕತ್ತರಿಸಿ ಶಿವನಿಗೆ ಅರ್ಪಿಸುವ ವೀರರು ವೀರಶಿವಭಕ್ತರು, ವೀರಶರಣರು.
  3. ಶಿವಧರ್ಮದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಛಲಿಗಳು ವೀರಶರಣರು.
  4. ಶಿವಸ್ವರೂಪದ ವಿದ್ಯೆಯಲ್ಲಿ ರಮಿಸುವವರು ವೀರಶೈವರು.

ಈಗ ಕೆಲವರು ಯಾರನ್ನು ವೀರಶೈವ ಅಥವಾ ಲಿಂಗಾಯತ ಎಂದು ಕರೆಯುತ್ತಾರೋ ಅವರಿಗೆ ಈ ನಾಲ್ಕು ವಿಶೇಷಣಗಳು ಅನ್ವಯವಾಗುತ್ತವೆಯೋ ಇಲ್ಲವೋ ನೋಡೋಣ.

ಹನ್ನೆರಡನೆಯ ಶತಮಾನ ಬಸವಾದಿ ಶರಣರು ಬೋಧಿಸಿದ ಧರ್ಮದ ಅನುಯಾಯಿಗಳನ್ನು ಸಧ್ಯಕ್ಕೆ ‘ಲಿಂಗಾಯತರು’ ಎಂದು ಕರೆಯೋಣ. ಲಿಂಗಾಯತರ ವಚನಗಳನ್ನು ಪರಿಶೀಲಿಸಿದರೆ ಅವರು ಪರಸಮಯಿಗಳೊಡನೆ ಹೋರಾಡಿ ಅವರ ಪ್ರಾರ್ಥನಾಮಂದಿರಗಳನ್ನು ಹಾಳುಮಾಡಿದ ಉದಾಹರಣೆಗಳು ಸಿಕ್ಕುವುದಿಲ್ಲ.

ಆ ಉದ್ದೇಶದಿಂದ ಹೋರಾಡುವವರು ವೀರಶೈವರಾದರೆ, ಲಿಂಗಾಯತರು ವೀರಶೈವರಲ್ಲ. ಈ ಅರ್ಥದಲ್ಲಿ ಏಕಾಂತದ ರಾಮಯ್ಯ ವೀರಶೈವ, ಲಿಂಗಾಯತನಲ್ಲ. ಅದೇ ರೀತಿ, ಅಂಗಾಂಗಗಳನ್ನು ಕತ್ತರಿಸಿ ಶಿವನಿಗೆ ಅರ್ಪಿಸಬೇಕು ಎಂಬ ಬೋಧನೆಯೂ ಲಿಂಗಾಯತರ ವಚನಗಳಲ್ಲಿ ಕಾಣುವುದಿಲ್ಲ. ಆದರೆ ಹಾಗೆ ಮಾಡುವ ವೀರ ಶಿವಭಕ್ತರಿದ್ದರು ಎಂಬುದು ಅವರಿಗೆ ಗೊತ್ತಿತ್ತು. ಹಾಗೆ ಮಾಡಿದ ಶಿವಭಕ್ತರನ್ನು ಅವರು ಮನಸಾರೆ ಹೊಗಳುತ್ತಾರೆ, ಆದರೆ ಅವರನ್ನು ಅನುಸರಿಸುವುದಿಲ್ಲ.

ಆದುದರಿಂದ, ಅಂಥ ಬೋಧನೆ ಲಿಂಗಾಯತರ ವಚನಗಳಲ್ಲಿ ಕಾಣುವುದಿಲ್ಲ. ಒಂದು ಧರ್ಮದ ನಿಯಮಗಳನ್ನು ನಿಷ್ಠೆಯಿಂದ ಪಾಲಿಸುವವರನ್ನು ವೀರಭಕ್ತರೆಂದು ಕರೆಯಬೇಕು ಎಂದಾದರೆ, ನಾವು ವೀರ ಕ್ರೈಸ್ತ, ವೀರ ಮುಸ್ಲಿಮ್, ಮುಂತಾದ ಪ್ರಯೋಗಗಳನ್ನು ಪ್ರಾರಂಭಿಸಬೇಕಾಗುತ್ತದೆ.

ಆದುದರಿಂದ, ವೀರಶೈವರೆಂದರೆ ಪರಸಮಯಿಗಳೊಡನೆ ಹೋರಾಡುವ ಶೈವರು ಎಂಬ ಅರ್ಥ ಮಾತ್ರ ಉಳಿದುಕೊಳ್ಳುತ್ತದೆ. ಈ ಅರ್ಥದಲ್ಲಿ ‘ವೀರಶೈವ’ ಮತ್ತು ‘ಲಿಂಗಾಯತ’ ಸಮಾನಾರ್ಥಕ ಪದಗಳಲ್ಲ. ಎಲ್ಲಾ ದೃಷ್ಟಿಯಿಂದಲೂ ಇವು ಅನ್ಯಪದಗಳಾಗಿವೆ.

ಲೇಖನ ಕೃಪೆ – ಬಯಲು

Share This Article
1 Comment
  • ಚಂದ್ರಗುಪ್ತನ ಕಾಲದಿಂದಲೂ ಕರ್ನಾಟಕ ಜೈನರ ಕರ್ಮಭೂಮಿ. 12 ನೇ ಶತಮಾನದಲ್ಲಿ ಈ ಏಕೋರಾಮ ನೋಂದಗಿನ ಪಂದ್ಯದಲ್ಲಿ ಸೊತು, ಬಸ್ತಿಗಳು ಶಿವಾಲಯ ಆದವು. ಬಹುತೇಕ ಎಲ್ಲ ಜೈನರು ಲಿಂಗಾಯತರಾದರು.
    ಜೈನ ಧರ್ಮದ ಆಚಾರ್ಯ ಪಂತ ಬಣಜಿಗರು, ಬಸ್ತಿ ಸೇವಕರು ಆದಿ ಬಣಜಿಗರು, ಆಡಳಿತ ನಡೆಸುತ್ತಿದ್ದ ಪಂಚಮರು ಪಂಚಮಸಾಲಿ ಗಳು, ಚತುರ್ಥರು ತೋಟಿಗರು ಹಾಗೂ ಕೊನೆಯ ಬೋಗಾರರು ಕೆಳ ವರ್ಗ ತೊಡೆದು ಹಾಕಲು ಇವೆ ಮೇಲಿನ ಪಂಗಡಗಳಲ್ಲಿ ಗುರುತಿಸಿಕೊಂಡು ಬೆರತು ಹೋದರು.

Leave a Reply

Your email address will not be published. Required fields are marked *