‘ಕೆಲವರು ಟೊಳ್ಳು ವ್ಯಕ್ತಿತ್ವದ ಹಣವಂತರನ್ನು ಹೊಗಳಿ ಆಧುನಿಕ ವಚನಕಾರರೆಂದು ಕರೆದುಕೊಂಡಿದ್ದಾರೆ’
ಶಿವಮೊಗ್ಗ
ಹತ್ತೊಂಭತ್ತನೆಯ ಶತಮಾನದಿಂದ ಇಂದಿನವರೆಗೂ ಹಲವರು ಆಧುನಿಕ ವಚನಗಳನ್ನು ರಚಿಸಿದ್ದಾರೆ. ರಚಿಸುತ್ತಿದ್ದಾರೆ. ಅವುಗಳಲ್ಲಿ ಬಹುತೇಕ ವಚನಗಳು, ವಚನ ಶೈಲಿಯ ರಚನೆಗಳೆನಿಸುತ್ತವೆಯೇ ಹೊರತು ನಿಜ ವಚನಗಳೆನಿಸುವುದಿಲ್ಲ, ಚಿಕ್ಕಮಗಳೂರು ಬಸವ ಮಂದಿರ ಹಾಗೂ ಶಿವಮೊಗ್ಗ ಬಸವಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ಬಸವ ಕೇಂದ್ರದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಇತ್ತೀಚೆಗೆ ಆಯೋಜಿಸಿದ್ದ ಮೂರನೇ ಶರಣ ಸಾಹಿತ್ಯ ಸಮ್ಮೇಳನದ ಸಾನಿಧ್ಯವಹಿಸಿ ಮಾತನಾಡುತ್ತ ಕೆಲವು ವಚನಕಾರರಂತೂ ಟೊಳ್ಳು ವ್ಯಕ್ತಿತ್ವದ ಹಣವಂತರನ್ನು, ನೇತಾರರನ್ನು ಹೊಗಳಿ ವಚನ ಶೈಲಿಯಲ್ಲಿ ಕೃತಿಗಳನ್ನು ರಚಿಸಿ ಆಧುನಿಕ ವಚನಕಾರರೆಂದು ಕರೆದುಕೊಂಡಿದ್ದಾರೆ ಎಂದು ವಿಮರ್ಶಿಸಿದರು.
ಇಂಥವರನ್ನು ವಚನಕಾರರೆಂದು ಕರೆಯುವುದು ವಚನ ಪರಂಪರೆಗೆ ಮಾಡುವ ಅವಮಾನವೆಂದೇ ನಮ್ಮ ಭಾವನೆ. ಇದರ ನಡುವೆ, ಕೆಲವರಾದರೂ ಆಧುನಿಕ ವಚನಕಾರರು ಬದ್ಧತೆಯ ಬದುಕು ನಡೆಸುತ್ತ, ತಮ್ಮ ಆತ್ಮದ ದನಿಗಳನ್ನು ವಚನದ ಮೂಲಕ ಅಭಿವ್ಯಕ್ತಿಸಿದ್ದಾರೆ. ಇವರನ್ನು ಆಧುನಿಕ ವಚನಕಾರರೆಂದರೆ ಯಾವ ತಪ್ಪೂ ಇಲ್ಲ! ಅಂತಹವರ ಸಂಖ್ಯೆ ಬಹಳ ಕಡಿಮೆ ಎಂದರು.
ಈ ಕಡಿಮೆ ಸಂಖ್ಯೆಯವರ ಸಾಲಿನಲ್ಲಿ, ಶರಣ ಪರಂಪರೆಯ ಮಠಗಳೊಂದಿಗೆ, ಸಾಧಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ, ಸಮ್ಮೇಳನಾಧ್ಯಕ್ಷೆ ತಾಯಿ ದಾಕ್ಷಾಯಣಿ ಜಯದೇವಪ್ಪನವರೂ ನಿಂತಿದ್ದಾರೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮೊದಲು ನಮ್ಮ ಡೊಂಕುಗಳನ್ನು, ನಮ್ಮ ತಪ್ಪುಗಳನ್ನು ನಾವು ತಿದ್ದಿಕೊಳ್ಳೋಣ, ಅನಂತರ ಬೇರೆಯವರ ಡೊಂಕು ತಿದ್ದೋಣ ಎಂಬುದು ವಚನಕಾರರು ಹಾಗೂ ಬಸವಣ್ಣನವರ ಆಶಯವಾಗಿತ್ತು ಎಂದರು. 12ನೇ ಶತಮಾನದ ಯಾವುದೇ ಶರಣರನ್ನು ಹಾಗೂ ಅವರ ವಚನಗಳನ್ನು ಗಮನಿಸಿದಾಗ, ಮೊದಲು ತಮ್ಮನ್ನು ತಿದ್ದುಕೊಂಡು ನಂತರ ಅವರು ಲೋಕವನ್ನು ತಿದ್ದಿದವರು.
ನಾನು ಸರಿ ಇದ್ದಲ್ಲಿ ಮಾತ್ರ ಬೇರೆಯವರಿಗೆ ಹೇಳುವ ನೈತಿಕತೆ ಇರುತ್ತದೆ. ನಾನೆ ಸರಿ ಇಲ್ಲ ಅಂದಮೇಲೆ ಬೇರೆ ಹೇಗೆ ಹೇಳುವುದು. ಬಸವಣ್ಣ, ಬುದ್ಧ, ಗಾಂಧೀ, ಅಂಬೇಡ್ಕರ್ ಅವರೆಲ್ಲ ಮಾಡಿದ್ದೂ ಇದೆ. ಅವರ ನಡೆ- ನುಡಿ ಒಂದಾಗಿದ್ದ ಕಾರಣದಿಂದಲೆ ಮಹಾನ್ ಪುರುಷರಾದವರು ಎಂದು ವಿಶ್ಲೇಷಿಸಿದರು.
ಅವರು, ಇನ್ನೊಬ್ಬರ ದೋಷವನ್ನು ಎತ್ತಿ ಹೇಳಬಾರದು ಅಂತ ಅಲ್ಲ, ಹೇಳುವ ನೈತಿಕತೆ ನಮ್ಮಲ್ಲಿ ಇದೆಯಾ ಅಂತ ಮೊದಲು ನಾವು ಪ್ರಶ್ನೆ ಮಾಡ್ಕೊಬೇಕು ಎಂದರು.
ಸಮ್ಮೇಳನಾಧ್ಯಕ್ಷೆ ದಾಕ್ಷಾಯಣಿ ಜಯದೇವಪ್ಪ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಆರ್.ಎಸ್. ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಹಾದೇವಿ ಇನ್ನಿತರರು ವೇದಿಕೆಯಲ್ಲಿ ಇದ್ದರು.