ಗುಳೇದಗುಡ್ಡ
ಮನೆಯಲ್ಲಿ ಮಹಾಮನೆ ಸಾಪ್ತಾಯಿಕ ಕಾರ್ಯಕ್ರಮವು ಶನಿವಾರದಂದು ಶರಣ ಈಶ್ವರಪ್ಪ ಮೇದಾರ ಅವರ ಮನೆಯಲ್ಲಿ ಜರುಗಿತು.
ವಾರದ ವಚನ ಮಹಾನುಭಾವಿ ಮೇದಾರ ಕೇತಯ್ಯಗಳ ವಚನ:
ಅರಿವಿನ ಕುಳವನರಿಯೆ
ಮರೆಹಿನ ತೆರನನರಿಯೆ,
ಅರಿವು ಮರಹಳಿದ ಗವರೇಶ್ವರ ಲಿಂಗಕ್ಕೆ ಅರಿವೇ ಅರ್ಪಿತ, ಮರವೇ ಅನರ್ಪಿತ,
ಮೊರನ ಹೆಣವ ಗೌರ, ನಾನೆತ್ತ ಬಲ್ಲೆನಯ್ಯ.
ಪ್ರಾರಂಭದಲ್ಲಿ ಶರಣೆಯರಾದ ಜಯತ್ರಿ ಬರಗುಂಡಿ ಹಾಗೂ ಶ್ರೀದೇವಿ ಶೇಖಾ ಅವರಿಂದ ಶರಣರ ನೆನೆದು ಭಜನೆ ಮಾಡೋಣ ಎಂಬ ಸಾಮೂಹಿಕ ಪ್ರಾರ್ಥನೆ ನಡೆಯಿತು.
ನಂತರ ಪ್ರೊ. ಶ್ರೀಕಾಂತ ಗಡೇದ ಅವರು ವಚನ ಕರ್ತೃ ಮೇದಾರ ಕೇತಯ್ಯ ತಂದೆಗಳ ಪರಿಚಯವನ್ನು ಮಾಡುತ್ತ, ಕೇತಯ್ಯನವರ ಐತಿಹಾಸಿಕ ದಾಖಲೆಗಳು ಲಭ್ಯ ಇಲ್ಲದಿದ್ದರೂ ಜನಪದ ಸಾಹಿತ್ಯ ಮತ್ತು ಮೇದಾರ ಕೇತಯ್ಯ ಸಾಂಗತ್ಯ ಎಂಬ ಕೃತಿಗಳಿಂದ ಅವರೊಬ್ಬ ಮಹಾನ್ ಶರಣರು ಎಂದು ವೇದ್ಯವಾಗುತ್ತದೆ. ಬಿದಿರಿನಿಂದ ಮೊರ, ಬುಟ್ಟಿ ಮಾಡುವದು ಅವರ ಕಾಯಕವಾದರೆ ಅವನ್ನು ಮಾರಿ ಅಡುಗೆ ಸಾಹಿತ್ಯ ಸಂಗ್ರಹಿಸಿ ದಾಸೋಹಗೈಯುವದು ಅವರ ಸತಿ ಸಾತಮ್ಮ ಶರಣೆಯದಾಗಿತ್ತು.
ಲಿಂಗಾಯತ ಧರ್ಮ ಸಂಸಾರಿಗರ ಧರ್ಮ ಎನ್ನುವದನ್ನು ಎತ್ತಿ ತೋರಿಸಿದವರು ಈ ಶರಣ ದಂಪತಿಗಳು. ಇಂದಿನ ದಿನಗಳಲ್ಲಿ ದಿನಕ್ಕೆ ಎಷ್ಟು ತಾಸುಗಳ ಕೆಲಸ ಮಾಡಬೇಕು ಎಂಬುದು ಚರ್ಚೆಯ ವಸ್ತುವಾಗಿರುವಾಗ ಅದು ಸಮಸ್ಯೆಯೇ ಅಲ್ಲ, ದಿನವೆಲ್ಲ ದುಡಿತದ ಕಾಯಕ, ಬಂದುದೆಲ್ಲ ಗುರು-ಲಿಂಗ-ಜಂಗಮರ ಪ್ರಸಾದಕ್ಕೆ ಸವೆಸುವುದು ದಾಸೋಹ ತತ್ತ್ವವು ಕೇತಯ್ಯ ಶರಣರದಾಗಿತ್ತು ಎಂದು ಅಭಿಪ್ರಾಯ ಪಟ್ಟರು.
ನಿವೃತ್ತ ಪ್ರಾಧ್ಯಾಪಕ, ಅನುಭಾವಿಗಳಾದ ಪ್ರೊ. ಮಹದೇವಯ್ಯಸ್ವಾಮಿ ನೀಲಕಂಠಮಠ ಅವರು ಇದೇ ವಚನವನ್ನು ವಿಶ್ಲೇಷಿಸುತ್ತ ಕೇತಯ್ಯನವರು ಕಾಯಕ ನಿರತ ಶರಣರ ಪ್ರತಿನಿಧಿಯಾಗಿ ಕಂಗೊಳಿಸುತ್ತಾರಲ್ಲದೆ. ಕಾಯಕ ಮತ್ತು ದಾಸೋಹಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ.
ತಮಗೆ ದೊರೆತ ಬಿದಿರಿನಲ್ಲಿ ಬಂಗಾರದ ವರಹಗಳು ಚೆಲ್ಲಿದರೆ ಅವನ್ನು ಹುಳು (ಗೆದ್ದಲು)ಗಳೆಂದು ಕರೆಯುತ್ತಾರೆಯೇ ವಿನಃ ಅದಕ್ಕಾಗಿ ಆಸೆಪಡುವುದಿಲ್ಲ. ಮನುಷ್ಯ ಅರಿವಿನಿಂದ ಬದುಕಬೇಕು. ಈ ಅರಿವು ಸ್ವಾನುಭಾವದ ನೆಲೆಗೆ ನಿಲ್ಲಬೇಕು. ಬದುಕಿನ ಕಷ್ಟ, ಸುಖಗಳಲ್ಲಿ ಮರೆವು ಸಹಜವೆನಿಸಿದರೂ ಈ ಮರೆವು ಗವರೇಶ್ವರ ಲಿಂಗಕ್ಕೆ ಅನರ್ಪಿತವಾದುದು.
ಕೇತಯ್ಯ ಶರಣರು ಭೃತ್ಯಾಚಾರಶೀಲ ಶರಣರು ತಮ್ಮನ್ನು ಸಾಮಾನ್ಯ ಗೌರನೆಂದು ಕರೆದುಕೊಂಡಿದ್ದಲ್ಲದೆ ಬಸವಣ್ಣನವರ ‘ಎನಗಿಂತ ಕಿರಿಯರಲ್ಲ’ ಎಂಬ ಹಾದಿಯಲ್ಲಿಯೇ ಮುನ್ನಡೆದಿದ್ದಾರೆ.
ಅವರು ಮಾತನಾಡಲಾರರು, ಹೇಳಲಾರರು ಆದರೆ ತತ್ವದಂತೆ ನಡೆಯಬಲ್ಲರು. ಅದಕ್ಕಾಗಿ ನಾನೆತ್ತ ಬಲ್ಲೆ ಎಂದು ವಿನೀತ ಭಾವವನ್ನೇ ವ್ಯಕ್ತಪಡಿಸುತ್ತಾರೆ. ಅಂತೆಯೇ ಮನದ ಹಿರಿತನವನ್ನೇ ತೋರ್ಪಡಿಸುತ್ತಾರೆ ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.
ಇದೇ ವಚನವನ್ನು ಕೈಗೆತ್ತಿಕೊಂಡ ಶರಣ ಸಿದ್ಧಲಿಂಗಪ್ಪ ಬರಗುಂಡಿಯವರು ಮಾತನಾಡುತ್ತ, ಮೇದಾರ ಕೇತಯ್ಯ ಶರಣರ ವಚನಗಳು ಇಲ್ಲಿಯವರಿಗೆ ದೊರೆತಿರುವ ಸಂಖ್ಯೆ ಕಡಿಮೆಯಿದ್ದರೂ ಬಹು ಮೌಲಿಕವಾಗಿವೆ. ಇಲ್ಲಿ ಮಹಾಲಿಂಗದ ನಿಲುವನ್ನು ಅತ್ಯಂತ ಸಹಜ, ಸುಲಭವಾಗಿ ಕೇತಯ್ಯನವರು ಪ್ರತಿವಾದಿಸಿದ್ದಾರೆ.
ಜ್ಞಾನವೆಂದರೆ ಲೌಕಿಕ ಮತ್ತು ಅಲೌಕಿಕವಾಗಿರುವಂಥ ಎರಡು ಬಗೆ ಅರ್ಥವನ್ನು ನೀಡುತ್ತದೆ. ಸಾಮಾನ್ಯವಾದ ಇಂದ್ರಿಯ ಜ್ಞಾನದಿಂದ ಮೀರಿದ ಅನುಭಾವ ಪ್ರಮಾಣವಾಗಿರುವ ಅಖಂಡ ಆನಂದವನ್ನು ನೀಡುವ, ಅಗಮ್ಯ, ಅಗೋಚರ ಅಪ್ರತಿಮವಾದ ಮಹಾಲಿಂಗ ಸಂಬಂಧಿಯಾದ ಹೀಗೆ ಸಂಬಂಧಿಯಾದ ತನ್ನ ಸ್ವ-ಸ್ವರೂಪವನ್ನು ಆಯ್ದುಕೊಳ್ಳುವದೆ ನಿಜವಾದ ಜ್ಞಾನವಾಗಿದೆ.
ತಾನು ಆ ಘನವಸ್ತುವಿನ ನಿಸ್ತೃತ ರೂಪ ಅಥವಾ ಶಿವಾಂಶಿಕವಾಗಿದ್ದೇನೆ ಎಂದುಕೊಳ್ಳದಿರುವುದೇ ಅಜ್ಞಾನ. ಇದೇ ನಮ್ಮ ಭವಬಂಧನಕ್ಕೆ ಅಂದರೆ ಲಿಂಗವಿರಹಿತ ನಡೆಗೆ ಕಾರಣವಾಗಿದೆ. ಇಂಥ ಜ್ಞಾನ ಪ್ರಾಪ್ತವಾದರೆ ತಾನು ಲಿಂಗಸಂಬಂಧಿಯಾಗುತ್ತಾನೆ. ಮರೆದರೆ ಲಿಂಗ ಸಂಬಂಧಿಯಾಗಿ ದುಃಖಿಯಾಗುತ್ತಾನೆ. ಕಾರಣ ಆ ಮಹಾತತ್ವಕ್ಕೆ ಅರಿವನ್ನು (ತನ್ನನ್ನು) ಅರ್ಪಿಸಿಕೊಳ್ಳಬೇಕೇ ವಿನಃ ಮರೆವನಲ್ಲ. ಯಾವುದನ್ನು ಶೂನ್ಯ, ಬಯಲು, ಘನ ಇತ್ಯಾದಿಗಳಿಂದ ಕರೆಯುತ್ತೇವೆಯೋ ಆ ಚಿದ್ಭವ ವಸ್ತುವನ್ನು ಕೇತಯ್ಯನವರು ಗವರೇಶ್ವರ ಲಿಂಗವೆಂದು ಕರೆದಿದ್ದಾರೆ. ಕೇತಯ್ಯ ಶರಣರು ತಾವು ಎಂತಹ ಶರಣರೆಂಬುದನ್ನು ಅನುಭಾವಿಗಳೆಂಬುದನ್ನು ಗವರೇಶ್ವರ ಲಿಂಗವನ್ನು ‘ಅರಿವು-ಮರಹು’ ಅಳಿದು ಲಿಂಗವೆಂದು ಕರೆಯುವುದರ ಮೂಲಕ ತೋರಿಸಿಕೊಟ್ಟದ್ದಾರೆ.
ಮೇಲೆ ವಿವರಿಸಿದಂತೆ ಅರಿವು ಮರೆಹುಗಳು ಪರಸ್ಪರ ಭಿನ್ನವಾಗಿದ್ದರೂ, ಜ್ಞಾನ-ಅಜ್ಞಾನ, ವಿದ್ಯೆ-ಅವಿದ್ಯೆಗಳ ಭಿನ್ನತೆಯನ್ನು ನಾವು ಬುದ್ಧಿಪೂರ್ವಕ ಹೇಳಬಲ್ಲೆವಾದರೂ ಆ ಪರಶಿವತತ್ವ ಇವೆರಡಕ್ಕಿಂತ ಭಿನ್ನವಾಗಿದೆಯೆಂಬುದನ್ನು ಕೇತಯ್ಯನವರು ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ. ಜ್ಞಾನಿ ಎನ್ನಿಸಿಕೊಂಡಾತನಿಗೆ ಅರಿವು-ಮರೆವುಗಳ ಸಂಬಂಧ ಎಲ್ಲಿಯವರೆಗೆ ಇರುತ್ತದೋ ಆತ ಅನುಭವಿಯಾಗಬಲ್ಲನೇ ವಿನಃ ಅನುಭಾವಿಯಾಗಲಾರ. ಇವು ದ್ವೈತದ ಭಿನ್ನಭಾವ. ಅರಿವು-ಮರೆವು ಎರಡು ಅಳಿದು ಒಂದಾಗಿ ಇರುವಂತಹ ಭಾವವೇ ಅನುಭಾವದ ಸ್ಥಿತಿ ಅದೇ ಅದರ ನೆಲೆ. ಹೀಗಾಗಿ ಮೇದಾರ ಕೇತಯ್ಯ ಶರಣರು ಅರಿವಿನ ಕುಳವನ್ನಾಗಲಿ, ಮರೆವಿನ ತೆರವನ್ನಾಗಲೀ ಅರಿಯದೆ ಯಾವ ಸಂದೇಹವಿಲ್ಲದ ಸಂದು ಭೇದವಿಲ್ಲದ ಅನುಪಮ ಶರಣರಾಗಿದ್ದರೆಂಬುದು ಸ್ಪಷ್ಟ ಎಂದು ಹೇಳುತ್ತ, ಭೃತ್ಯಾಚಾರದ ಅತ್ಯಂತ ವಿನೀತ ವ್ಯಕ್ತಿ ಕೇತಯ್ಯನವರು ಎಂದು ತಿಳಿಸಿದರು.
ಚರ್ಚಾ ಸಮಯದ ಮಧ್ಯದಲ್ಲಿ ಮೇದಾರ ಸಮುದಾಯದ ಶರಣ ಶರಣೆಯರು ಚಿದ್ರಿ (ಬೀದರ ಜಿಲ್ಲಾ) ಎಂಬಲ್ಲಿ ಮೇದಾರ ಕೇತಯ್ಯನವರ ಮೂರ್ತಿ ಪ್ರತಿಷ್ಠಾಪಿಸಲು ಹೋಗಿ ಬಂದ ವಿಷಯವನ್ನು ಕೇಳಿ ಇನ್ನು ಮೇಲೆ ನಮ್ಮೆಲ್ಲರ ಹೃದಯಮಂದಿರದಲ್ಲಿ ಕೇತಯ್ಯಗಳ ಹಾಗೂ ಇತರ ಶರಣರ ವಚನಗಳನ್ನು ನೆಲೆಗೊಳಿಸುವ ಕಾರ್ಯವಾಗಬೇಕೆಂದು ನೆರೆದ ಅನುಭಾವಿಗಳು ಆಶಯವನ್ನು ವ್ಯಕ್ತಪಡಿಸಿದರು.
ವಚನ ಮಂಗಲದೊಂದಿಗೆ ಮುಕ್ತಾಯವಾದ ಈ ಸಾಪ್ತಾಹಿಕ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಶರಣರಾದ ಪಾಂಡಪ್ಪ ಕಳಾಸಾ, ಸುರೇಶ ರಾಜನಾಳ, ದಾನಪ್ಪ ಬಂಡಿ, ಗಂಗಾಧರ ಕಂಠಿಗೌಡ್ರ, ಬಸಲಿಂಗಯ್ಯ ಕಂಬಾಳಿಮಠ, ಸಿದ್ಧಯ್ಯ ರೇವಣಸಿದ್ಧೇಶ್ವರಮಠ, ಶೇಖರಪ್ಪ ಬಡಿಗೇರ, ಮಹಾಲಿಂಗಪ್ಪ ಕರನಂದಿ, ಮೊದಲಾದವರಲ್ಲದೆ ಈಶ್ವರಪ್ಪ ಮೇದಾರ ಹಾಗೂ ಅವರ ಎಲ್ಲ ಪರಿವಾರದವರು, ಓಣಿಯ ಶರಣ ಶರಣೆಯರು, ಗೂಗಲ್ ಮೀಟ್ ಮೂಲಕ ಕಲಬುರ್ಗದ ಸಿ. ಎಸ್. ಮಂಗಳೂರ, ಬೆಂಗಳೂರಿನ ಕೃಷ್ಣಪ್ಪ ಶಿರೂರ ಇನ್ನೂ ಅನೇಕರು ಭಾಗವಹಿಸಿದ್ದರು.