ಎಲ್ಲ ರೀತಿಯ ಸಾಮಾಜಿಕ ಪಿಡುಗಿಗೆ ಬಸವಣ್ಣನವರ ತತ್ವದಲ್ಲಿ ಔಷಧಿ ಇದೆ.
ಬೀದರ್
ಬಸವತತ್ವವನ್ನು ಇಡೀ ವಿಶ್ವಕ್ಕೆ ಪಸರಿಸಲು ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದೆ. ಅವರ ವಿಚಾರಧಾರೆಗಳನ್ನು ಎಲ್ಲರಿಗೂ ತಲುಪಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಲು ಶ್ರಮಿಸುತ್ತಿದೆ ಎಂದು ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ತಿಳಿಸಿದರು.
ಬಸವ ಸೇವಾ ಪ್ರತಿಷ್ಠಾನದಿಂದ ನಗರದ ಪಾಪನಾಶ ಸಮೀಪದ ಬಸವಗಿರಿಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ 23ನೇ ವಚನ ವಿಜಯೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನ ತತ್ವಗಳು, ಆದರ್ಶಗಳನ್ನು ಸಮಾಜದ ಪ್ರತಿಯೊಬ್ಬನಿಗೂ ತಲುಪಬೇಕು. ಯುವ ಜನಾಂಗಕ್ಕೆ ಬಸವಣ್ಣ ನವರ ತತ್ವಗಳನ್ನು, ಸಂದೇಶಗಳನ್ನು ತಲುಪಿಸುವಲ್ಲಿ ವಚನ ವಿಜಯೋತ್ಸವ ಪೂರಕವಾಗಿದೆ ಎಂದರು.
ಎಲ್ಲ ರೀತಿಯ ಸಾಮಾಜಿಕ ಪಿಡುಗಿಗೆ ಬಸವಣ್ಣನವರ ತತ್ವದಲ್ಲಿ ಔಷಧಿ ಇದೆ. ನಮ್ಮ ಸಮಾಜ ಯಾವ ರೀತಿ ಇರಬೇಕೆಂದು 900 ವರ್ಷಗಳ ಹಿಂದೆ ಕಲ್ಯಾಣದಲ್ಲಿ ತೋರಿಸಿಕೊಟ್ಟಿದ್ದರು. ಅದನ್ನು ನಾವು ಪಾಲಿಸಬೇಕಷ್ಟೇ. ನಮ್ಮನ್ನು ನೋಡಿ ಬೇರೆಯವರು ಕೂಡ ಪಾಲಿಸುವಂತಾಗಬೇಕು ಎಂದು ಹೇಳಿದರು.

ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ʼ12ನೇ ಶತಮಾನದಲ್ಲಿ ವಚನಗಳನ್ನು ಸಂರಕ್ಷಿಸಲು ಅನೇಕ ಜನ ಶರಣರು ಪ್ರಾಣ ಕೊಟ್ಟಿದ್ದರು. ವಚನ ಸಾಹಿತ್ಯ ಸಂರಕ್ಷಣೆಗೆ ನಡೆದ ಹೋರಾಟದ ಸ್ಮರಣೆಗಾಗಿ ಕಳೆದ 2002ರಿಂದ ಪ್ರತಿ ವರ್ಷ ವಚನ ವಿಜಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆʼ ಎಂದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ʼಬಸವಣ್ಣನವರು ತಮ್ಮ ಸಮಾಜ ತೊರೆದು ಹೊಸ ಸಮಾಜ ನಿರ್ಮಿಸಿದ್ದು ಯಾಕೆ ಎಂಬ ಕುರಿತು ಇಂದು ಚರ್ಚೆ ಆಗಬೇಕಿದೆ. ಬಸವಣ್ಣನವರ ವಿಚಾರಗಳು ಮೈಗೂಡಿಸಿಕೊಂಡು ಅದಕ್ಕೆ ಬದ್ಧರಾಗಬೇಕು.ಇಡೀ ವಿಶ್ವಕ್ಕೆ ಈ ನೆಲದ ಶರಣರ ಸಂದೇಶ ತಲುಪಿಸಲು ಹೆಚ್ಚಿನ ಪರಿಶ್ರಮ ಹಾಕಬೇಕುʼ ಎಂದು ತಿಳಿಸಿದರು.

ಮೈಸೂರಿನ ಶಂಕರ ದೇವನೂರು ಅನುಭಾವ ನೀಡಿ ಬಸವಾದಿ ಶರಣರ ಮಾನವೀಯ ಮೌಲ್ಯಗಳ ಜಾಗೃತಿ ಕಾರ್ಯ ಹೆಚ್ಚೆಚ್ಚು ನಡೆಯಬೇಕಿದೆ. ಶತಶತಮಾನಗಳಿಂದ ತುಳಿತಕ್ಕೊಳಗಾದ ಜನರಿಗೆ ದನಿಯಾಗಿ ಸಾಮಾಜಿಕ ನ್ಯಾಯ ಕಲ್ಪಿಸಿದರು. ಎಲ್ಲ ಕಾಯಕ ಜೀವಿಗಳು ಜಗತ್ತಿಗೆ ನೀಡಿದ ವಚನ ಸಾಹಿತ್ಯ ಕಾಪಾಡಿಕೊಳ್ಳುವುದೇ ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿಯಾಗಿದೆʼ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಬೀದರ್ ಜಿಲ್ಲೆಯಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿರುವ ಶರಣರ ಎಲ್ಲ ಸ್ಮಾರಕಗಳ ಸಂರಕ್ಷಣೆಗೂ ಪ್ರಯತ್ನಿಸಲಾಗುವುದು. ರಾಜ್ಯದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ಧರಾಗಿದ್ದೇವೆ. ವಚನ ಸಾಹಿತ್ಯವು ನಮ್ಮ ಸಮಾಜದ ಶ್ರೇಯೋಭಿವೃದ್ಧಿಗೆ ನೇರವಾಗಿ ಪ್ರಭಾವ ಬೀರುತ್ತವೆ. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವು ಪ್ರತಿಯೊಬ್ಬರ ಬದುಕಿಗೆ ಬೆಳಕಾಗಬೇಕುʼ ಎಂದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಆಣದೂರ ಧಮ್ಮ ಭೂಮಿಯ ಧಮ್ಮಾನಂದ ಮಹಾಥೇರೋ, ಗುರುದ್ವಾರ ಪ್ರಬಂಧಕ ಕಮಿಟಿಯ ಬಲವಂತ ಸಿಂಗ್, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಸೋಮಶೇಖರ ಪಾಟೀಲ, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ, ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಮಡಿವಾಳ, ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಟಿಳೆಕರ್, ಮೇದಾರ ಕೇತಯ್ಯ ಸಮಾಜದ ಜಿಲ್ಲಾಧ್ಯಕ್ಷ ರಾಜಕುಮಾರ ನಾಗೇಶ್ವರ, ನೇಕಾರ ಸಮಾಜದ ಜಿಲ್ಲಾಧ್ಯಕ್ಷ ಸೋಮಶೇಖರ, ಡೋಹಾರ ಕಕ್ಕಯ್ಯ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗಜರೆ, ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಕಾಂತ ಹೂಗಾರ ಉಪಸ್ಥಿತರಿದ್ದರು.
ಶಿವಕುಮಾರ ಪಂಚಾಳ ವಚನ ಸಂಗೀತ ನಡೆಸಿಕೊಟ್ಟರು. ಸುವರ್ಣಾ ಚಿಮಕೋಡೆ ಸ್ವಾಗತಿಸಿದರು. ಜ್ಷಾನದೇವಿ ಬಬಚೋಡೆ ನಿರೂಪಿಸಿದರೆ, ಸಾವಿತ್ರಿ ಮಹಾಜನ್ ವಂದಿಸಿದರು.
ಅಮ್ಮಾ ತಾಯಿ, ಗಂಗವ್ವ, ರೊಕ್ಕ ಕೊಡುತ್ತಾರೆ ಅಂತ ಲಿಂಗಾಯತ ಧರ್ಮ ವಿರೋಧಿ RSS ದವರ ಬಸವ ರಥಕ್ಕೆ ಚಾಲನೆ ಕೊಟ್ಟಿ ಏನು?
ಲಿಂಗಾಯತ ಧಮ೯ವನ್ನು ನಯವಾಗಿ ವಂಚಿಸುತ್ತಿರುವ ಅಕ್ಕ ಗಂಗಾಂಬಿಕೆ ಗೆ ಬಸವೆಶ ಸದ್ಬುದ್ದಿಯನ್ನು ಕರುಣಿಸಲಿ.