ಶರಣರು ನಮಗಾಗಿ ಉಳಿಸಿಕೊಟ್ಟಿರುವ ವಚನ ಸಾಹಿತ್ಯದ ಹಿಂದೆ ತ್ಯಾಗ ಬಲಿದಾನವಿದೆ
ಭಾಲ್ಕಿ
ತಾಲೂಕಿನ ಮೊರಂಬಿ ಗ್ರಾಮದಲ್ಲಿ 2025 ವಚನ ವಿಜಯೋತ್ಸವ ಕಾರ್ಯಕ್ರಮ ಮತ್ತು ವಚನ ಮೆರವಣಿಗೆ ಲಿಂಗಾಯತ ಮಹಾಮಠದಿಂದ ವಿಜ್ರಂಭಣೆಯಿಂದ ನೆರವೇರಿತು.
ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶರಣ ಸಾಹಿತಿ ರಮೇಶ ಮಠಪತಿಯವರು, 12ನೇ ಶತಮಾನದಲ್ಲಿ ಶರಣರು ನಮಗಾಗಿ ಉಳಿಸಿಕೊಟ್ಟಿರುವ ವಚನ ಸಾಹಿತ್ಯದ ಹಿಂದೆ ತ್ಯಾಗ ಬಲಿದಾನವಿದೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಹರಳಯ್ಯ ಮಧುವಯ್ಯ ಶೀಲವಂತರ ಎಳೆಹೂಟಿಯ ನಂತರ ಕಂಗೆಟ್ಟಿತು ಕಲ್ಯಾಣ.
ಕಲ್ಯಾಣದ ಬೀದಿಬೀದಿಗಳು ವಧಾ ತಾಣಗಳಾದವು. ಪುರೋಹಿತಶಾಹಿ ರಾಜಶಾಹಿ ಒಂದಾಗಿ ಶರಣರ ಮೇಲೆ ದಾಳಿಯಿಟ್ಟರು. ಶರಣರ ರುಂಡ ಚಂಡಾಡತೊಡಗಿದರು. ಕೆಲವರು ಶರಣರ ಮನೆಗಳಿಗೆ ಬೆಂಕಿ ಇಟ್ಟರು. ಶರಣರನ್ನು ನಿರ್ನಾಮ ಮಾಡುವ ಉದ್ದೇಶ ಅವರದಾಗಿತ್ತು. ಎಲ್ಲಿ ನೋಡಿದಲ್ಲಿ ಹಾಹಾಕಾರವೆದ್ದಿತು.
ಬಂದ ಬವಣೆಯನ್ನು ಕಳೆಯುವುದಕ್ಕೆ ಶರಣರು ಅನುಭವ ಮಂಟಪದಲ್ಲಿ ಸೇರಿದರು. ಮುಂದೇನು ಮಾಡಬೇಕೆಂದು ಯೋಚಿಸಿದರು. ಪುರೋಹಿತ ವರ್ಗದವರು ವಚನ ಸಾಹಿತ್ಯ ನಾಶಕ್ಕೆ ಕೈಯಿಡಲಿದ್ದಾರೆಂದು ಗುಪ್ತ ಸುದ್ದಿ ತಲುಪಿತು. ಶರಣರೆಲ್ಲರೂ ಸೇರಿ ನಮ್ಮ ಪ್ರಾಣಕ್ಕಿಂತ ವಚನಗಳು ಮುಖ್ಯವೆಂದರು. ‘ವಚನಗಳೇ ಶರಣ ಧರ್ಮದ ಸಂಪತ್ತು. ಮಾನವ ಕುಲದ ಬೆಳಕು. ಕ್ರಾಂತಿಯ ಬೀಜಗಳಿರುವುದು ವಚನದಲ್ಲಿ. ಹುಟ್ಟಿದವರು ಸಾಯಲೇಬೇಕು, ಪ್ರಾಣತೆತ್ತಾದರೂ ವಚನ ವಾಗ್ಮಯ ಉಳಿಸಬೇಕೆಂದು’ ಪಣತೊಟ್ಟರು.

ತಮ್ಮ ಆಸ್ತಿಪಾಸ್ತಿಗಳನ್ನೆಲ್ಲ ತೊರೆದು ವಚನಗಳನ್ನು ಬೆನ್ನಿಗೆ ಕಟ್ಟಿಕೊಂಡು ಕಲ್ಯಾಣ ತೊರೆಯುವುದೆಂದು ನಿರ್ಧರಿಸಿದರು. ರಾತ್ರಿ ಇಡೀ ಸಾವಿರಾರು ಶರಣರಿಂದ ಅನುಭವ ಮಂಟಪ ತುಂಬಿ ಜೇನುಗೂಡಂತಾಯಿತು. ಒಬ್ಬೊಬ್ಬ ಜಂಗಮರ ಚೋಳಿಗೆಗಳಲ್ಲಿಯೂ ವಚನ ಕಟ್ಟುಗಳನಿಟ್ಟು, ವಿರೋಧಿಗಳಿಗೆ ತಿಳಿಯದಂತೆ ಸಣ್ಣ ಸಣ್ಣ ತಂಡಗಳನ್ನು ಮಾಡಿ ಬೇರೆ ಬೇರೆ ದಿಕ್ಕುಗಳಿಗೆ ಹೊರಟರು.
ಉಳುವಿಯಲ್ಲಿ ಬಂದು ತಲುಪಿದ ಶರಣರಿಗೆ ಮತ್ತೆ ಕಷ್ಟಗಳು ಆರಂಭವಾದವು, ಮಳೆಗಾಲ ಆರಂಭವಾಯಿತು. ಸುರಿಯುವ ಮಳೆಯೊಂದಿಗೆ ಜಿಗಣಿಗಳ ಕಾಟ ಶುರುವಾಯಿತು. ಜಿಗಣಿಗಳು ರಕ್ತ ಹೀರಿ ಮೈಗೆ ಭಾರವಾದಾಗಲೇ ಅವುಗಳು ರಕ್ತ ಹೀರುವುದು ತಿಳಿಯುತ್ತಿತ್ತು. ಮರದೆಲೆಗಳ ಗುಡಿಸಲುಗಳಲ್ಲಿ ವಾಸಿಸುವುದು ಅಸಾಧ್ಯವಾಯಿತು. ಅನೇಕ ಶರಣರು ಗಿಡಮರಗಳ ಟೊಂಗೆಗಳ ಮೇಲೆ ಸುರಿಯುವ ಮಳೆಯಲ್ಲಿ ದಿನ ರಾತ್ರಿಗಳನ್ನು ಕಳೆಯಬೇಕಾಯಿತು. ಮರದ ಉದ್ದವಾದ ಬಿಳಿಲುಗಳನ್ನು ಬಿಳಿಲುಗಳನ್ನು ಒಂದಕ್ಕೊಂದು ಬಿಗಿದು ಉಯ್ಯಾಲೆ ಮಾಡಿ ಕುಳಿತಿರಬೇಕಾಯಿತು. ಕೊರೆಯುವ ಚಳಿ ಬೇರೆ. ಹೊಟ್ಟೆಗೆ ಏನು ಸಿಗದಂತಾಯಿತು. ಎಡೆಬಿಡದ ಸುರಿಯುವ ಮಳೆಯಲ್ಲಿ, ಕೊರೆಯುವ ಚಳಿಯಲ್ಲಿ ತತ್ತರಿಸಿದರು ಶರಣರು. ಕುಳಿತಲ್ಲೇ ಮರಗಟ್ಟಿ ಹೋದವರೆಷ್ಟೋ?

ವಚನ ರಕ್ಷಣೆಯ ಹೋರಾಟದಲ್ಲಿ ಲೆಕ್ಕವಿಲ್ಲದ ಶರಣ ಚೇತನಗಳು ಮಾರ್ಗ ಮಧ್ಯದಲ್ಲಿಯೇ ಪ್ರಾಣಾರ್ಪಣೆ.
“ಶರಣರು ಉಳವಿ ಕಾಡಿನಲ್ಲಿ ಉಯ್ಯಾಲೆಯಲ್ಲಿ ಕುಳಿತು ತೂಗಿ ತೂಗಿ ಕೈಲಾಸಕ್ಕೇರಿದರೆಂದು” ಜನಪದರು ಹಾಡಿ ಅಶ್ರುತರ್ಪಣೆಗೈದರು. ವಚನ ಸಾಹಿತ್ಯದ ಜ್ಯೋತಿ ನಂದದಂತೆ ಸಂರಕ್ಷಿಸಿಕೊಡಲು ಶರಣರು ಅಪಾರ ಕಷ್ಟ ಕಾರ್ಪಣ್ಯ ಎದುರಿಸಿದರು. ತಮ್ಮ ಜೀವತೆತ್ತು ಮನುಕುಲ ಬದುಕಲೆಂದು ವಚನಗಳನ್ನು ಲೋಕಕ್ಕಿತ್ತರು!
ಮಳೆಗಾಲದ ನಂತರ ‘ಅಳಿದುಳಿದ’ ಶರಣರು ಅಕ್ಕನಾಗಲಾಂಬಿಕೆಯ ನೇತೃತ್ವದಲ್ಲಿ ‘ಧರ್ಮಜ್ಯೋತಿ’ ಹಿಡಿದು ಉಳಿವಿಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದರು! ವಚನ ಜ್ಯೋತಿ ನಂದದಂತೆ ಸಂರಕ್ಷಿಸಿದರು ಎಂದರು.

ಅನುಭಾವಗೋಷ್ಠಿಗಳು ಆರಂಭವಾದವು ತತ್ವಗಳ ಚಿಂತನೆ ಭರದಿಂದ ಸಾಗಿತು.
ವಚನ ಸಾಹಿತ್ಯದ ಉಳಿಸಿದ ಸವಿನೆನಪಿಗಾಗಿ ಲಿಂಗಾಯತ ಮಹಾಮಠದ ಲಿಂಗೈಕ್ಯ ಪೂಜ್ಯಶ್ರೀ ಅಕ್ಕ ಅನ್ನಪೂರ್ಣ ತಾಯಿಯವರು ವಚನಗಳಿಗೆ ಪಟ್ಟ ಕಟ್ಟುವ ಮುಖಾಂತರವಾಗಿ, ವಚನಗಳನ್ನು ಮೆರವಣಿಗೆ ಮಾಡುವ ಮುಖಾಂತರವಾಗಿ ಹೊಸ ಕ್ರಾಂತಿ ಮಾಡಿದರೆಂದು ಹೆಮ್ಮೆ ಪಡುವ ಮೂಲಕ ರಮೇಶ ಅವರು ಮಾತುಗಳನ್ನು ಆಡಿದರು.
ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯ ಪ್ರಭುದೇವ ಮಹಾಸ್ವಾಮಿಜಿ,
ಮಂಟಪದ ಹೆಚ್ಚೇನು ಗಂಟೇರು ಕೆಡಿಸಿದರೆ ಕುಂಟಿತವೆ ಜೇನು ನೊಣಗಳಿಗೆ |
ಹುಟ್ಟಿಡಲು ಬಂಟ ಶರಣರಿಗೆ ಕಂಟಕವೆ ಎಂಬ ಜನಪದ ಹಾಡನ್ನು ಸ್ಮರಿಸಿಕೊಂಡರು.
ಶರಣರು ಜೇನುನೊಣಗಳಂತೆ. ಸ್ವಾರ್ಥಿ ಮಾನವ ಜೇನು ಕದಿಯಬಹುದು ಆದರೆ ಜೇನು ತಯಾರಿಸುವ ಕಲೆಯನ್ನಲ್ಲ. ಹಾಗೆಯೇ ಪುರೋಹಿತಶಾಹಿಗಳು ವಚನ ನಾಶ ಮಾಡಲು ಪ್ರಯತ್ನಿಸಿದರು, ಆದರೆ ಶರಣರೆಲ್ಲ ಸೇರಿ ಉಳಿವಿಯಲ್ಲಿ ನೆಲೆನಿಂತು ಮತ್ತೆ ವಚನ ಸಾಹಿತ್ಯ ಬಿತ್ತಿ ಬೆಳೆಯ ತೊಡಗಿದರು.

ಹರಭಜನೆ ಗುರುಸೇವೆ ಉರುತರದಿ ಮಾಡುತಲಿ
ಶರಣಗಣ ಕೂಡಿ ಉಳಿವೆಯೊಳು | ಮರುದಿನವೆ
ಮೆರೆಸಿದರು ತತ್ತ್ವ ಮಂಟಪವ.
ಎಂಬ ಜನಪದ ನುಡಿಯಂತೆ ಅಕ್ಕನಾಗಮ್ಮ ತಾಯಿ ವಚನ ಸಾಹಿತ್ಯವನ್ನು ಮೆರೆಸಿದರು. ಅದರ ಎಳೆವಿಡಿದು ಯಾವ ನೆಲದಿಂದ ವಚನ ಸಾಹಿತ್ಯ ಹೊರದಬ್ಬಲ್ಪಟ್ಟಿತ್ತು ಅದೇ ನೆಲದಲ್ಲಿ ಮತ್ತೊಮ್ಮೆ ವಚನ ಸಾಹಿತ್ಯವನ್ನು ಮೆರೆಸಬೇಕೆಂಬ ಸಂಕಲ್ಪ ಹೊಂದಿದವರು ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರು.
ವಚನ ಸಾಹಿತ್ಯದ ಮೆರವಣಿಗೆ, ವಚನಗಳಿಗೆ ಪಟ್ಟ ಕಟ್ಟುವ, ವಚನ ಪಠಣ ಅಭಿಯಾನ,
ಶಿವಯೋಗ ಸಾಧಕರ ಕೂಟ, ಬಸವ ಭಾರತಿ ಸಂಸ್ಕಾರ ಶಿಬಿರದ ಮುಖಾಂತರವಾಗಿ ವಚನಗಳು ಜನಮಾನಸದಲ್ಲಿ ಬಿತ್ತಿ ಬೆಳೆದರು ಅಕ್ಕನವರು ಎಂದು ನುಡಿಗಳನ್ನಾಡಿದರು.

ರಮೇಶ ಮಠಪತಿಯವರಿಗೆ ಗುರುಬಸವ ಪುರಸ್ಕಾರ
ಶರಣ ರಮೇಶ ಮಠಪತಿ ನಿವೃತ್ತ ಉಪನಿರ್ದೇಶಕರು, ಗ್ರಾಮೀಣ ಕೈಗಾರಿಕೆಗಳು ಜಿ.ಪಂ. ಬೀದರ ಇವರ ಬಗ್ಗೆ
ಶರಣ ರಮೇಶ ಕಾರ್ತಿಕಸ್ವಾಮಿ ಕನಕಟ್ಟಾರವರು ಮಾತನಾಡುತ್ತಾ, ಶರಣ ಸಾಹಿತಿಗಳಾಗಿ, ಏಕಗುರು ನಿಷ್ಠಾವಂತರಾಗಿ, ಬಸವ ತತ್ತ್ವವನ್ನು ಮೈಗೂಡಿಸಿಕೊಂಡ ರಮೇಶ ಮಠಪತಿಯವರದು ಶಿಸ್ತುಬದ್ಧ ಜೀವನ. ಹಿರಿಯರಲ್ಲಿ ಹಿರಿಯರಾಗಿ, ಕಿರಿಯರಲ್ಲಿ ಕಿರಿಯರಾಗಿ ಶರಣ ಬಳಗಕ್ಕೆ ಅಚ್ಚು ಮೆಚ್ಚಾದವರು.
ಕಾಯಕನಿಷ್ಠರು, ದಾಸೋಹ ಸಂಪನ್ನರಾದ ಮಠಪತಿಯವರು ಪೂಜ್ಯಶ್ರೀ ಡಾ. ಅಕ್ಕ ಅನ್ನಪೂರ್ಣತಾಯಿಯವರ ಬಸವ ತತ್ತ್ವದ ಕಾರ್ಯದಲ್ಲಿ ಹೆಗಲಿಗೆ ಹೆಗಲು ನೀಡಿ ಸೇವೆ ಸಲ್ಲಿಸುತ್ತಿದ್ದವರು. ಅಕ್ಕನವರ ಪ್ರವಚನ ಸಾರವನ್ನು ಅಕ್ಷರ ರೂಪದಲ್ಲಿ ಅಕ್ಷರಗೊಳಿಸಿದವರು. ‘ಶ್ರಾವಣ ಸಂಪದ’, ‘ಜೀವನ ದರ್ಶನ’, ‘ಸಂಸಾರದಲ್ಲಿ ಸದ್ಗತಿ’, ‘ಅನುಭವ ಮಂಟಪದಲ್ಲಿ ಸಿದ್ದರಾಮ’, ‘ಗುರು ಕರುಣೆ’, ‘ಅಕ್ಕನ ದರ್ಶನ’, ‘ವಚನಕ್ಕೊಂದು ಕಥೆ’, ಕೃತಿಗಳನ್ನು ಸಂಪಾದಿಸಿ ಗುರು ಕರುಣೆಗೆ ಪಾತ್ರರಾದವರು.
‘ಬಾವನ್ನ ಬಸವಣ್ಣ’ ಪ್ರವಚನ ಸಾರವನ್ನು ಮೂರು ತಿಂಗಳಲ್ಲೆ ಸಾವಿರ ಪುಟಗಳಲ್ಲಿ ಬರೆದು : ಪೂಜ್ಯಶ್ರೀ ಅಕ್ಕನವರಿಗೆ ಅರ್ಪಿಸಿದರು. ಇವರಿಂದ ಹೊರಬಂದ ಕೃತಿಗಳು ನಾಡಿನ ಪ್ರವಚನಕಾರರಿಗೆ ಕೈದೀವಿಗೆಯಾಗಿವೆ. ಲಿಂಗಾಯತ ಮಹಾಮಠದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಚನ ವಿಜಯೋತ್ಸವ, ಮಾಸಿಕ ಶರಣ ಸಂಗಮ, ಬಸವ ಭಾರತಿ ಸಂಸ್ಕಾರ ಶಿಬಿರಗಳಲ್ಲಿ ಯಾವುದೇ ಕುಂದು ಕೊರತೆ ಬರದಂತೆ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ ಇವರ ಸೇವೆ ಮರೆಯಲಾಗದು. ವೃತ್ತಿಯಲ್ಲಿ ಉಪನಿರ್ದೇಶಕರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಸಮೂಹ ಸಂವಹನ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಕೃತಿ ಚಿಕಿತ್ಸೆಯಲ್ಲಿ ಡಾಕ್ಟರ್ ಪದವಿ ಪಡೆದಿರುವುದು. ಇವರು ಸದಾ ಅಧ್ಯಯನ ಶೀಲರಾಗಿದ್ದಾರೆ.
ಕ್ರಿಯಾಶೀಲತೆಯ ಹಾಗೂ ಅರಿವಿನ ಗಳಿಕೆಯ ಹಂಬಲಕ್ಕೆ ಸಾಕ್ಷಿಯಾಗಿದೆ. ಇವರ ಈ ಅನನ್ಯ ಸೇವೆ ಕಂಡು ಮೋರಂಬಿಯ “ವಚನ ವಿಜಯೋತ್ಸವದಲ್ಲಿ ‘ಗುರು ಬಸವ ಪುರಸ್ಕಾರ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.”
ಕಾರ್ಯಕ್ರಮವನ್ನು ಸೋಮನಾಥಪ್ಪಾ ಅಷ್ಟೂರೆ ಉದ್ಘಾಟಿಸಿದರು. ಮಾಣಿಕಪ್ಪಾ ಗೋರನಾಳೆ, ಚನ್ನಬಸಯ್ಯ ಶಂಕ್ರಯ್ಯಾ ಗಣಾಚಾರಿ, ಪ್ರಕಾಶ ಮಠಪತಿ, ಚನ್ನಬಸವ ಹಂಗರಗಿ, ರಮೇಶ ಚಿದ್ರಿ, ಸಿದ್ರಾಮ ಪಾಟೀಲ, ವೀರಶೆಟ್ಟಿ ಹುಲಸೂರೆ, ಕಲ್ಲಪ್ಪಾ ಹೂಗಾರ, ಬಿರ್ಜು ಜೋಷಿ ಮುಖ್ಯ ಅತಿಥಿಗಳಾಗಿದ್ದರು.
ಅಧ್ಯಕ್ಷತೆಯನ್ನು ಶರಣ ಸೋಮನಾಥಪ್ಪಾ ಎಸ್.ರಾಜೇಶ್ವರ ವಹಿಸಿದ್ದರು.
ನಿರೂಪಣೆಯನ್ನು ಅವಿನಾಶ ಹಿರೇಮಠ, ಸ್ವಾಗತವನ್ನು ಮಹಾದೇವ ಮಾನಕರೆ ಮಾಡಿದರು. ಸಾವಿರಾರು ಜನ ಶರಣ-ಶರಣೆಯರು ವಿಜಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
💐💐🙏🙏🙏🙏🙏