(ಫೆಬ್ರವರಿ ೧೩ ಡಂಬಳ ತೋಂಟದಾರ್ಯ ಮಠದ ರಥೋತ್ಸವ ಹಾಗೂ ೧೪ ರಂದು ನಡೆಯುತ್ತಿರುವ ರೊಟ್ಟಿ ಜಾತ್ರೆ ನಿಮಿತ್ತ ವಿಶೇಷ ವರದಿ)
ಮುಂಡರಗಿ
ಗದಗ ಜಿಲ್ಲೆ, ಮುಂಡರಗಿ ತಾಲ್ಲೂಕು, ಡಂಬಳ ಗ್ರಾಮ ಐತಿಹಾಸಿಕ ಸ್ಥಳ, ಲಿಂಗಾಯತ ವಿರಕ್ತ ಪರಂಪರೆಯಲ್ಲಿ ತೋಂಟದಾರ್ಯ ಮಠಕ್ಕೆ ತನ್ನದೆ ಆದ ವೈಶಿಷ್ಟತೆ ಇದೆ. ಲಿಂ.ಜ.ಡಾ. ತೋಂಟದ ಸಿದ್ದಲಿಂಗ ಸ್ವಾಮಿಗಳು ಶ್ರೀಮಠಕ್ಕೆ ೧೯ ನೇ ಪೀಠಾಧಿಪತಿಯಾದ ಮೇಲೆ ಡಂಬಳ ತೋಂಟದಾರ್ಯ ಮಠ ಕೋಮುಸೌಹಾರ್ದತೆಗೆ ಹೆಸರಾಗಿದೆ. ಶ್ರೀಗಳು ಪ್ರತಿಷ್ಠಿತ ರಾಷ್ಟ್ರೀಯ ಕೋಮುಸೌಹಾರ್ದತೆಯ ಪ್ರಶಸ್ತಿಗೆ ಬಾಜನರಾಗಿ ನಡೆದಾಡುವ ವಿಶ್ವವಾಗಿ ಕಾರ್ಯನಿರ್ವಹಿಸಿದರು.
೯೦೦ ವರ್ಷಗಳ ಇತಿಹಾಸ ಇರುವ ಕಲ್ಯಾಣದ ಅಲ್ಲಮಪ್ರಭುಗಳು, ಸಿದ್ದಲಿಂಗೇಶ್ವರರು ಏರಿದ ಪೀಠದ ನೇರ ವಾರಸುದಾರರಾಗಿರುವರು ಈ ಪರಂಪರೆಯ ಗುರುಗಳು.

ಈಗಿನ ೨೦ ನೇ ಪೀಠಾಧಿಪತಿ ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ತಮ್ಮ ದೂರದೃಷ್ಟಿಯಿಂದ ಈ ಭವ್ಯ ಪರಂಪರೆಯನ್ನು ಮುಂದುವರೆಸಿದ್ದಾರೆ. ಸಿದ್ದರಾಮ ಶ್ರೀ ಅವರು ಶ್ರೀಮಠದ ಸುತ್ತಲೂ ನೂತನ ಕಟ್ಟಡವನ್ನು ಯಡಿಯೂರ ಸಿದ್ದಲಿಂಗೇಶ್ವರ ಮಠದ ಮಾದರಿಯಲ್ಲಿ ಅಂದಾಜು ೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಇದು ಪೂರ್ಣಗೊಂಡ ನಂತರ ವಿಶೇಷ ಪ್ರವಾಸಿ ಧಾರ್ಮಿಕ ಕೇಂದ್ರವಾಗಲಿದೆ.
ಲಿಂ.ಡಾ, ತೋಂಟದ ಸಿದ್ದಲಿಂಗ ಸ್ವಾಮಿಗಳು ಭಕ್ತರು ಎಲ್ಲ ಜಾತಿ ಜನಾಂಗದವರು ಒಟ್ಟಾಗಿ ಜಾತಿ ಮರೆತು ಊಟ ಮಾಡಬೇಕು, ಎಂಬ ಮಹಾದಾಶೆಯಿಂದ ರೊಟ್ಟಿ ಜಾತ್ರೆ ಆರಂಭಿಸಿದರು. ಹಲವು ವರ್ಷಗಳಿಂದ ಡಂಬಳ ರೊಟ್ಟಿ ಜಾತ್ರೆ ಉತ್ತರ ಕರ್ನಾಟಕದಲ್ಲಿ ಖ್ಯಾತಿ ಪಡೆದಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಡಂಬಳ ಮತ್ತು ಸುತ್ತಲಿನ ಗ್ರಾಮಸ್ಥರ ಸಹಕಾರದಲ್ಲಿ ರೊಟ್ಟಿ ಜಾತ್ರೆ ವಿಶೇಷ ಆಚರಿಸಲಾಗುತ್ತಿದೆ, ರೊಟ್ಟಿ ಜಾತ್ರೆಗೆ ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಪಾಲ್ಗೊಳ್ಳುತ್ತಾರೆ, ಲಿಂ.ಜ.ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹಾಕಿ ಕೊಟ್ಟ ರೊಟ್ಟಿ ಜಾತ್ರೆಯನ್ನು ಈಗಿನ ಡಾ.ತೋಂಟದ ಸಿದ್ದರಾಮ ಸ್ವಾಮಿಗಳು ಮುಂದುವರೆಸಿಕೊಂಡು ಹೊರಟಿದ್ದಾರೆ ಎಂದು ಭೀಮಪ್ಪ ಗದಗಿನ ಅಧ್ಯಕ್ಷರು, ಜಾತ್ರಾ ಮಹೋತ್ಸವ ಸಮಿತಿ ಡಂಬಳ ಇವರು ಹೇಳುತ್ತಾರೆ.

ಫೆ. ೧೪ ರಂದು ರೊಟ್ಟಿ ಜಾತ್ರೆಗೆ ೨೫ ಚೀಲದ ಒಟ್ಟು ೪೦ ಸಾವಿರ ರೊಟ್ಟಿಗಳನ್ನು ಮಾಡಿಸಿದ್ದು, ಭಕ್ತರು ತಮ್ಮ ಮನೆಯಲ್ಲಿ ಸಿದ್ದಪಡಿಸಿದ ರೊಟ್ಟಿ ತರುವುದರ ಜತೆಗೆ ಧರ್ಮಸ್ಥಳ ಮಹಿಳಾ ಸಂಘದ ಸದಸ್ಯರು ಸ್ವಯಂಪ್ರೇರಣೆಯಿಂದ ಮಠದ ವತಿಯಿಂದ ಕೊಟ್ಟ ಜೋಳದಿಂದ ರೊಟ್ಟಿ ಸಿದ್ದಪಡಿಸಿದ್ದಾರೆ.
ಕಟಕ್ ರೊಟ್ಟಿ ಜತೆಗೆ ಸೊಪ್ಪುಗಳಾದ ೨ ಸಾವಿರ ಪುಂಡಿ ಸೊಪ್ಪು, ೫೦೦ ಸಿವುಡು ಹುಂಚಿಕ, ೫೦೦ ಸಬ್ಬಸಗಿ, ೫೦೦ ಪಾಲಕ ಹಾಗೂ ವಿವಿಧ ಶೆಂಗಾ, ವಠಾಣಿ, ಹೆಸರು ಇತರ ಕಾಳುಗಳಿಂದ ಭಜ್ಜಿ (ಪಲ್ಲೆ) ಸಿದ್ದಪಡಿಸಲಾಗಿದೆ. ೧೫ ಕ್ವಿಂಟಲ್ ಕರಿಹಿಂಡಿ ರೊಟ್ಟಿ ಜತೆಗೆ ಸಾಥ್ ಕೊಡುತ್ತದೆ, ೧ ಕ್ವಿಂಟಲ್ ಅಗಸಿ ಚಟ್ನಿ, ೮ ಕ್ವಿಂಟಲ್ ಬಾನ ( ಅನ್ನದ್ದು) ಭಕ್ತರಿಗೆ ಸಿದ್ದಗೊಂಡಿದೆ