ಮಲ್ಲಿಕಾರ್ಜುನ ಶ್ರೀಗಳನ್ನು ಬಹುತೇಕ ಶಿಷ್ಯರು ಕರ್ಮಯೋಗಿ ಸಿದ್ಧರಾಮೇಶ್ವರರು ಎಂದು ಕರೆಯುತ್ತಿದ್ದರು.
ಸಾಣೇಹಳ್ಳಿ
ಇಲ್ಲಿನ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ೧೭ನೆಯ ಶ್ರದ್ಧಾಂಜಲಿ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರಿಗಳು ಮಲ್ಲಿಕಾರ್ಜುನ ಗುರುಗಳು ಸಿರಿಗೆರೆ ಮಠದ ಚರಪಟ್ಟಾಧ್ಯಕ್ಷರು. ಆ ಕಾಲದಲ್ಲಿ ಪಟ್ಟ, ಚರಪಟ್ಟ ಮತ್ತು ವಿರಕ್ತ ಹೀಗೆ ಮೂರು ಪರಂಪರೆಗಳು ನಮ್ಮ ಮಠದಲ್ಲಿದ್ದವು. ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ಮಠದ ಅಭಿವೃದ್ಧಿಯನ್ನು ಮಾಡಿದಂಥವರು.
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಪಟ್ಟಾಧ್ಯಕ್ಷರಾಗಿ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಹೊಸ ರೂಪವನ್ನು ಕೊಟ್ಟಂಥವರು. ಅವರಿಗಿಂತ ಪೂರ್ವದಲ್ಲಿ ಸಿರಿಗೆರೆ ಮಠ ಹೆಚ್ಚು ಪರಿಚಿತವಾಗಿರಲಿಲ್ಲ. ಮಠದ ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೆ. ಆಗ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ನಮ್ಮ ಜೊತೆಗೆ ದುಡಿಯಬೇಕೆಂದು ಮಲ್ಲಿಕಾರ್ಜುನ ಶ್ರೀಗಳನ್ನು ಚರಪಟ್ಟಾಧ್ಯಕ್ಷರಾಗಿ ಸಿರಿಗೆರೆ ಮಠಕ್ಕೆ ಆಯ್ಕೆ ಮಾಡಿದರು.
ಮಲ್ಲಿಕಾರ್ಜುನ ಸ್ವಾಮಿಗಳು ಬೀರೂರು ಹಾಗೂ ಕಾಶಿಯಲ್ಲಿ ಸಂಸ್ಕೃತ ಅಧ್ಯಯನ ಮಾಡಿದರು. ಸುಮಾರು ೬೦ ವರ್ಷಗಳ ಕಾಲ ಸಿರಿಗೆರೆ ಮಠಕ್ಕೆ ಹಾಗೂ ಮಠಕ್ಕೆ ಸಂಬಂಧಪಟ್ಟಂಥ ಬೇರೆ ಬೇರೆ ಶಾಖಾಮಠಗಳಿಗೆ ಎಷ್ಟರಮಟ್ಟಿಗೆ ದುಡಿದರು ಅಂತ ಹೇಳಿದರೆ ಈಗಿನವರಿಗೆ ಉತ್ಪ್ರೇಕ್ಷೆ ಅನಿಸಬಹುದು. ತಮ್ಮ ತನು, ಮನವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಮಠದ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡವರು.
ದುಗ್ಗಾಣಿ ಮಠವಾಗಿದ್ದ ಸಿರಿಗೆರೆಯ ಮಠವನ್ನು ದುಡಿಯುವ ಮಠವನ್ನಾಗಿ ಮಾಡಿದರು ಶಿವಕುಮಾರ ಶ್ರೀಗಳು ಹಾಗೂ ಮಲ್ಲಿಕಾರ್ಜುನ ಶ್ರೀಗಳು. ಮಲ್ಲಿಕಾರ್ಜುನ ಶ್ರೀಗಳನ್ನು ಬಹುತೇಕ ಶಿಷ್ಯರು ಕರ್ಮಯೋಗಿ ಸಿದ್ಧರಾಮೇಶ್ವರರು ಎಂದು ಕರೆಯುತ್ತಿದ್ದರು. ಸಿರಿಗೆರೆಯಲ್ಲಿ ಇರುತ್ತಿದ್ದದ್ದು ತುಂಬಾ ವಿರಳ. ಹಳ್ಳಿ ಹಳ್ಳಿಗೆ ಎತ್ತಿನ ಗಾಡಿಯಲ್ಲಿ ಹೋಗಿ ಒಂದೊಂದು ಊರುಗಳಲ್ಲಿ ತಿಂಗಳುಗಟ್ಟಲೆ ವಾಸ್ತವ್ಯ ಮಾಡಿ ಭಕ್ತರನ್ನು ಸಂಘಟಿಸುತ್ತಿದ್ದರು. ಆ ಕಾಲದಲ್ಲಿ ಮಠದ ಬಗ್ಗೆ ಸದ್ಭಾವನೆ, ಗೌರವ ಇತ್ತು. ಶಿಷ್ಯರಿಗೂ ಮಠದ ಬಗ್ಗೆ ಗೌರವ ಇತ್ತು.
ಸಿರಿಗೆರೆ ಹಾಗೂ ಶಾಖಾಮಠಗಳಲ್ಲಿ ಅಚ್ಚುಕಟ್ಟಾಗಿ ವ್ಯವಸಾಯವನ್ನು, ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಎಲ್ಲ ಶಾಖಾಮಠಗಳಿಗೆ ಆಗಿಂದಾಗ್ಗೆ ಹೋಗಿ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಸಿರಿಗೆರೆ ಮಠದಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ಅಡಿಕೆ, ತೆಂಗು, ಸಿರಿಧಾನ್ಯ ಹಾಗೂ ಹತ್ತಾರು ರೀತಿಯ ಧಾನ್ಯಗಳನ್ನು ಹಾಗೂ ತರಕಾರಿಗಳನ್ನು ಬೆಳೆಯುತ್ತಿದ್ದರು. ಅಂತಹ ಮತ್ತೊಬ್ಬ ಗುರುಗಳನ್ನು ನಮ್ಮ ಮಠದ ಪರಂಪರೆಯಲ್ಲಿ ಕಾಣುವುದು ವಿರಳ.

ಸಾರ್ವಜನಿಕ ಸ್ಮರಣ ಶಕ್ತಿ ತುಂಬಾ ದುರ್ಬಲ ಎನ್ನುವರು. ನಮ್ಮ ಹಿತಕ್ಕಾಗಿ ಯಾರು ದುಡಿಯುವರೋ ಅವರನ್ನು ಜನ ಬೇಗ ಮರೆಯುವರು. ಹಾಗೆಯೇ ಮಲ್ಲಿಕಾರ್ಜುನ ಗುರುಗಳು ಕೂಡ ಅನೇಕರ ನೆನಪಿನಲ್ಲಿ ಇಲ್ಲ. ಆದರೆ ಮಲ್ಲಿಕಾರ್ಜುನ ಗುರುಗಳು ಅಷ್ಟೊಂದು ಹೋರಾಟ ಮಾಡುತ್ತಿದ್ದರೆ, ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಜೊತೆ ದುಡಿಯದೇ ಇದ್ದರೆ ಇವತ್ತು ನಾವೆಲ್ಲ ನೆಮ್ಮದಿಯಿಂದ ಜೀವನ ಮಾಡಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಂಥವರನ್ನು ಮರೆಯದೇ ನೆನಪು ಮಾಡಿಕೊಂಡು ಅವರ ಆದರ್ಶಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಮಲ್ಲಿಕಾರ್ಜುನ ಗುರುಗಳು ಧಾರ್ಮಿಕ ಸಂಸ್ಕಾರ ಕೊಡಬೇಕೆಂಬ ಹಂಬಲವುಳ್ಳವರು. ಎಂದೂ ಪ್ರಚಾರವನ್ನು ಬಯಸಿದವರಲ್ಲ. ಹಗಲು ರಾತ್ರಿಯೆನ್ನದೇ ತೋಟಕ್ಕೆ ಹೋಗಿ ನೀರು ಬಿಡುತ್ತಿದ್ದರು. ಇಂತಹ ಕೃಷಿಕ ಗುರುಗಳು ಮುಂದೆ ನಮ್ಮ ಮಠಕ್ಕೆ ಬರಿತ್ತಾರೋ ಇಲ್ಲವೋ ಗೊತ್ತಿಲ್ಲ. ಭಕ್ತರ ಮನೆಗಳ ಇತಿಹಾಸ ಚೆನ್ನಾಗಿ ಗೊತ್ತಿತ್ತು. ಭಕ್ತರು ಮತ್ತು ಮಠಗಳ ಮಧ್ಯೆ ಸೇತುವೆಯಾಗಿ ದುಡಿದವರು.
೨೦೦೯ರಲ್ಲಿ ಮಲ್ಲಿಕಾರ್ಜುನ ಶ್ರೀಗಳು ಲಿಂಗೈಕ್ಯರಾದರು. ಆಗ ಸಾಣೇಹಳ್ಳಿ ಮಠದಲ್ಲಿ ಮಲ್ಲಿಕಾರ್ಜುನ ಶ್ರೀಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಐ.ಜಿ. ಚಂದ್ರಶೇಖರಯ್ಯನವರು `ಎಲೆಮರೆಯ ಕಾಯಿ’ ಎನ್ನುವ ಕೃತಿಯನ್ನು ಸಂಪಾದಿಸಿದರು. ಈ ಕೃತಿ ಇಲ್ಲದೇ ಇದ್ದರೆ ಅವರನ್ನು ಮರೀತಾ ಇದ್ದರೇನೋ. ಈ ಕೃತಿಯ ಮೂಲಕ ಅವರಿನ್ನೂ ನಮ್ಮ ಸ್ಮರಣೆಯಲ್ಲಿ ಉಳಿದುಕೊಂಡಿದ್ದಾರೆ.
ಮಲ್ಲಿಕಾರ್ಜುನ ಶ್ರೀಗಳು ಧಾರ್ಮಿಕ ಸಂಸ್ಕಾರ ಕೊಡುವುದರ ಬಗ್ಗೆ ವಿಶೇಷ ಕಾಳಜಿ ಹೊಂದಿದವರು. ಅವರೆಂದೂ ಪ್ರಚಾರಪ್ರಿಯರಲ್ಲ. ಬದಲಾಗಿ ಜನರಿಗೆ ಸಂಸ್ಕಾರ ಕೊಡಬೇಕೆಂಬ ಕಳಕಳಿ ಅವರಿಗಿತ್ತು. ಅವರು ಎಲೆಯ ಮರೆಯ ಕಾಯಿಯಾಗಿ ಹಗಲಿರುಳು ದುಡಿದರು ಎಂದು ಸ್ಮರಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಸಿದ್ಧಪ್ಪ ಮಾತನಾಡಿ; ಮಲ್ಲಿಕಾರ್ಜುನ ಶ್ರೀಗಳು ಕೃಷಿಯ ಮೂಲಕ ಮಠದ ಆರ್ಥಿಕ ಸ್ಥಿತಿಯನ್ನು ಉತ್ತುಂಗಕ್ಕೇರಿಸಿದರು. ತರಳಬಾಳು ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರಿಗೆ ಎಲ್ಲ ಕೆಲಸ ಕಾರ್ಯಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಿರಿಗೆರೆಯ ಮಠ ಏಳಿಗೆಗಾಗಿ ದುಡಿದವರು. ಸಿರಿಗೆರೆ ಮಠ ಈ ಸ್ಥಿತಿಗೆ ಬರಬೇಕಾದರೆ ಮಲ್ಲಿಕಾರ್ಜುನ ಶ್ರೀಗಳ ಪಾತ್ರ ಬಹಳ ಮುಖ್ಯವಾದದ್ದು.
ಸಿರಿಗೆರೆ, ಸಾಣೇಹಳ್ಳಿ, ಹಾಲ್ಕುರಿಕೆ ಮಠಗಳನ್ನು ಪ್ರಬುದ್ಧಮಾನಕ್ಕೆ ತಂದವರಲ್ಲಿ ಮಲ್ಲಿಕಾರ್ಜುನ ಶ್ರೀಗಳು ಒಬ್ಬರು. ಅಡಿಕೆ, ತೆಂಗು, ಬಾಳೆ ತೋಟಗಳು ಅವರ ಅವಧಿಯಲಿ ಹೆಚ್ಚಿನ ಪ್ರಮಾಣದಲ್ಲಿ ಆದಂಥವು. ಅವರನ್ನು ಮಣ್ಣಿನ ಮಗ ಎಂದು ಹೆಮ್ಮೆಯಿಂದ, ಅಭಿಮಾನದಿಂದ ಭಕ್ತರು ಕರೆಯುತ್ತಿದ್ದರು. ಮಲ್ಲಿಕಾರ್ಜುನ ಶ್ರೀಗಳು ಕೃಷಿ ಮಂತ್ರಿಗಳು ಎಂದು ಜಗಜ್ಜಾಹೀರ ಆದಂಥವರು. ರೈತಾಪಿ ವರ್ಗಕ್ಕೆ ಸಲಹೆ, ಸೂಚನೆ, ಮಾರ್ಗದರ್ಶನ ಮಾಡುತ್ತಿದ್ದರು. ಹಲವಾರು ರೈತರಿಗೆ ಪ್ರೋತ್ಸಾಹ ನೀಡಿ ತೋಟ ಮಾಡಿಸಿದ್ದುಂಟು. ಶಿವಕುಮಾರ ಶ್ರೀಗಳು ಹಾಗೂ ಮಲ್ಲಿಕಾರ್ಜುನ ಶ್ರೀಗಳು ಅವಿನಾಭಾವ ಸಂಬಂಧ ಹೊಂದಿದ್ದರು. ಎತ್ತಿನ ಗಾಡಿಯಲ್ಲಿ ಹೋಗಿ ದವಸ ಸಂಗ್ರಹಿಸುತ್ತಿದ್ದರು. ಎತ್ತಿನ ಗಾಡಿ, ಆನೆ, ಕುದುರೆಯ ಜೊತೆ ಪ್ರಯಾಣ ಬೆಳೆಸುತ್ತಿದ್ದರು. ಸಿರಿಗೆರೆ ಮಠದ ಎಲ್ಲ ಗುರುಪರಂಪರೆಯ ಗುರುಗಳು ರೈತರಿಗೆ ಹತ್ತಿರವಾದಂಥವರು. ಮಾಡಬೇಕಾದ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು ಎಂದು ಸ್ಮರಿಸಿಕೊಂಡರು.
ವಿದ್ಯಾರ್ಥಿಗಳಾದ ತೋರಣ ಹಾಗೂ ಪ್ರತೀಕ್ಷ ಪ್ರಾರ್ಥಿಸಿದರು. ಶಿಕ್ಷಕಿ ಸುಧಾ ಎಂ. ಸ್ವಾಗತಿಸಿ ನಿರೂಪಿಸಿದರು. ಉಭಯ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
