ಶಹಾಪುರ
ದೇವ ಕೇಂದ್ರಿತ ಆಧ್ಯಾತ್ಮ. ವಸ್ತು ಕೇಂದ್ರಿತ ವಿಜ್ಞಾನ ಇವೆರಡರ ನಡುವೆ ಮನುಷ್ಯ ಕೇಂದ್ರಿತ ಚಿಂತನೆಗಳು ಇಂದು ತುಂಬಾ ಅಗತ್ಯವಾಗಿವೆ. ಬಸವಣ್ಣನವರು ಇದೆಲ್ಲವನ್ನು ಅರಿತುಕೊಂಡಿದ್ದ ಮಹಾಜ್ಞಾನಿಯಾಗಿದ್ದರು.
ಆದ್ದರಿಂದಲೆ ಇಂದಿಗೂ ಬಸವಣ್ಣನೆಂದರೆ ಬೆಳಕು, ಬಸವಣ್ಣನೆಂದರೆ ಬದುಕು. ಬಸವಣ್ಣನೆಂದರೆ ಬೆರಗು. ಬಸವಣ್ಣನವರ ಬದುಕು ಮತ್ತು ಬೋಧೆಯನ್ನು ಓದಿಕೊಂಡರೆ ಸಾಕು ಮನುಷ್ಯ ಕಲ್ಪಿತ ದೇವರನ್ನು ದೂರ ಸರಿಸಬೇಕೆನಿಸುತ್ತದೆ ಎಂದು ಶರಣ ಧನರಾಜ ಮುಜಗೊಂಡ ನುಡಿದರು.
ಸ್ಥಳಿಯ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ, ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು ೧೨೩ರ ಕಾರ್ಯಕ್ರಮದಲ್ಲಿ ದೊಡ್ಡವ್ವ ಸುಬ್ರಾಯಗೌಡ ಲಾಳಸೇರಿ ಮತ್ತು ಅಂಬಣ್ಣ ಲಾಳಸೇರಿ ಅವರ ಸ್ಮರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೀರ ಕಂಡಲ್ಲಿ ಮುಳುಗುವರಯ್ಯಾ ಎಂಬ ವಿಷಯ ಕುರಿತು ಮಾತನಾಡಿದರು.

ನಾನೂ ಉತ್ತರ ಭಾರತದ ಪ್ರಯಾಗದಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿ ಗಂಗೆಯಲ್ಲಿ ಮುಳುಗಿ ಬಂದವನು. ಆದರೆ ಅಲ್ಲಿ ಹೋಗಿ ಬಂದ ಮೇಲೆ ನನಗನಿಸಿತು. ನಾನು ನನ್ನ ಸಮಯ, ಸಂಪತ್ತನ್ನು ಹಾಳು ಮಾಡುತ್ತಿದ್ದೆನಲ್ಲ ಎಂದು ವ್ಯಥೆಯಾಯ್ತು. ಬಸವಣ್ಣನವರ ಬದುಕನ್ನು ಸಂಪೂರ್ಣ ಅರ್ಥ ಮಾಡಿಕೊಂಡಾದ ಮೇಲೆ ದೇವಮಾನವರು, ಬಾಬಾಗಳೆನ್ನುವವರ ಹತ್ತಿರ ಹೋಗುವ ಅವಶ್ಯಕತೆ ಇಲ್ಲ ಎಂದು ಖಚಿತವಾಯ್ತು ಸ್ಪಷ್ಟವಾಗಿ ಹೇಳಿದರು.
ಸಹೋದರ ಅಂಬಣ್ಣ ಲಾಳಸೇರಿಯವರು ಸಾಮಾಜಿಕ ಕನಸು ಉಳ್ಳವರು. ಅವರ ಹೆಸರಿನಲ್ಲಿ ಟ್ರಸ್ಟ್ ಮಾಡಿ ಅವರ ಸಂಪೂರ್ಣ ಹಣವನ್ನು ಸಾರ್ವಜನಿಕವಾಗಿ ತೊಡಗಿಸುವೆ. ಅವರ ಕಂಡ ಕನಸುಗಳನ್ನೆಲ್ಲ ಜಾರಿಗೆ ತರಲು ಅಹರ್ನಿಶಿ ಶ್ರಮಿಸುವೆ ಎಂದು ಲಕ್ಷಣ ಲಾಳಸೇರಿ ತಿಳಿಸಿದರು.
ಮುಂದುವರೆದು ಮಾತನಾಡಿ ಅವರು ಆಧ್ಯಾತ್ಮವನ್ನು ವಯಸ್ಸಾದ ಮೇಲೆ ಮಾಡುವಂಥದ್ದಲ್ಲ. ಅರಿವು ಮತ್ತು ಆಚಾರವನ್ನು ಜೊತೆಗೂಡಿಕೊಂಡು ನಡೆದ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡು ಹೋಗುವುದು ತುಂಬಾ ಅವಶ್ಯಕವಾಗಿದೆ. ಮೌಢ್ಯಗಳು ಸಮಾಜದ ಪ್ರಗತಿಗೆ ಕಂಟಕವಾಗಿವೆ. ಮೌಢ್ಯ ಮತ್ತು ಕಂದಾಚಾರಗಳು ಧರ್ಮದ ಆಚರಣೆಗಳಲ್ಲ. ಮನೆಯನ್ನು ಮಹಾಮನೆಯನ್ನಾಗಿ ಮಾಡಿಕೊಂಡು ಮನಸ್ಸನ್ನು ಬೆಳಗಿಸಿಕೊಳ್ಳಬೇಕು ಎಂದರು.

ಕಾಡಸಿದ್ದೇಶ್ವರ ಮಠದ ಕನ್ನೆರಿ ಸ್ವಾಮೀಜಿಗಳು ಲಿಂಗಾಯತರನ್ನು ಬಸವ ತಾಲಿಬಾನಿಗಳು ಎಂದು ಕರೆದು ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ. ತಾವು ಪ್ರತಿನಿಧಿಸುವ ಕಾಡಸಿದ್ದೇಶ್ವರರೆ ವೇದಭಂಜವಾದ ಹಲವು ವಚನಗಳನ್ನು ಬರೆದಿದ್ದಾರೆ. ಲಿಂಗಾಯತರು ಕರ್ಮಠರಾಗಿದ್ದರೆ ಕನ್ನೇರಿ ಸ್ವಾಮೀಜಿ ಮಠಾಧೀಶರೆ ಆಗುತ್ತಿರಲಿಲ್ಲ. ಇದಕ್ಕೆಲ್ಲ ಕಾರಣ ಬಸವಣ್ಣನವ ತತ್ವಗಳು ಎಂಬ ಅರಿವು ಇಟ್ಟುಕೊಂಡು ಸ್ವಾಮೀಜಿ ಎಚ್ಚರಿಕೆಯ ಹೇಳಿಕೆ ನೀಡಬೇಕೆಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಲ್ಲಣ್ಣ ಗುಬ್ಯಾಡ, ಬಸವಣ್ಣನವರ ವಿಚಾರಧಾರೆಯ ಹಿಂದೆ ಜಗತ್ತು ಹೊರಟಿದೆ. ಜಾತಿಯತೆ, ಮೌಢ್ಯ, ಕಂದಾಚಾರದ ಬಲೆಯಲ್ಲಿ ಬಿದ್ದು ಕೊಳೆಯುವುದು ನಮ್ಮನ್ನು ನಾವೆ ಹಾಳು ಮಾಡಿಕೊಂಡಂತೆ. ನಿತ್ಯ ಒಂದಾದರೂ ವಚನಗಳನ್ನು ಓದಿ ಬದುಕಿನ ದಾರಿಯನ್ನು ನಮಗೆ ನಾವೆ ಕಂಡುಕೊಳ್ಳಬೇಕೆಂದು ಸಭೆಗೆ ಮನವರಿಕೆ ಮಾಡಿಕೊಟ್ಟರು.
ಇದೆ ಸಂದರ್ಭದಲ್ಲಿ ಕಾವೇರಿ ಲಾಳಸೇರಿ ಅವರನ್ನು ಸನ್ಮಾನಿಸಲಾಯಿತು. ಫಜಲುದ್ಧಿನ ಖಾನ ವಚನ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಸಂಗನಬಸವ ಲಾಳಸೇರಿ ಸ್ವಾಗತಿಸಿದರು. ಚೇತನ ಪಾಟೀಲ ವಂದಿಸಿದರು. ಸಭೆಯಲ್ಲಿ ಅಡಿವೆಪ್ಪ ಜಾಕಾ, ಶಿವು ಆವಂಟಿ, ಚಂದ್ರಕಲಾ ಕುಂಬಾರ, ಸಲಾದಪುರ ಶರಣಪ್ಪ, ಸಿದ್ದಲಿಂಗಪ್ಪ ಆನೇಗುಂದಿ, ಕಮಲಮ್ಮ ಸತ್ಯಂಪೇಟೆ, ಅಡಿವೆಪ್ಪ ಜಾಕಾ, ಬಸವರಾಜ ಹೇರುಂಡಿ, ಕವಿತಾ ಗುಡಗುಂಟಿ, ಜ್ಯೋತಿ ವಾಗಾ, ಕವಿತಾ ಗುಡಗುಂಟಿ, ಕಾವೇರಿಪಾಟೀಲ, ಪ್ರಶಾಂತ ಗುಗ್ಗರಿ, ಅಪ್ಪಾಸಾಬ ಮಲ್ಲಾಡ, ಶ್ರೀಶೈಲ ಹೊಸ್ಮನಿ, ಮಲ್ಲಿಕಾರ್ಜುನ ಪೂಜಾರಿ, ಪರಶುರಾಮ ಹೊಸ್ಮನಿ, ಶಿವು ಕರದಳ್ಳಿ, ಸುರೇಶ ಅರುಣಿ, ಸಾವಿತ್ರಿ ಕೋರಿಶೆಟ್ಟಿ, ರಾಯಪ್ಪಪೂಜಾರಿ, ಮೀನಾಕ್ಷಿ ಗಾಮ್ನೆ, ಇಂದ್ರಮ, ಕವಿತಾ ಸುಮಂಗಲಾ, ರವಿಕುಮಾರ, ಶರಣು ಗೋಗಿ ಮೊದಲಾದವರು ಭಾಗವಹಿಸಿದ್ದರು.