ಸಂಯಮ ಕಳೆದುಕೊಂಡು ಮಾತನಾಡುವುದನ್ನು ನೋಡಿದರೆ ರಂಭಾಪುರಿ ಶ್ರೀಗಳು ಭ್ರಮನಿರಸನಗೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.
ಸಿಂಧನೂರು
ಕೆಲ ಪಂಚಾಚಾರ್ಯರು ಯಾವುದೇ ಧರ್ಮದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಹಗುರವಾಗಿ ಮಾತನಾಡುವುದು ಕಲಿತಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಪಿ. ರುದ್ರಪ್ಪ ಕುರಕುಂದಿ ಹೇಳಿದರು.
ರಂಭಾಪುರಿ ಪೀಠದ ವೀರ ಸೋಮೇಶ್ವರ ಸ್ವಾಮೀಜಿ ಲಿಂಗಾಯತ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದರೆ ಅವರು ಯಾವುದೇ ಚಿಂತಕರಿಗೆ ಹಗುರವಾಗಿ ಮಾತನಾಡುವ ಕೆಲಸ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.
ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಬಸವಪರ ಸಂಘಟನೆಗಳಿಂದ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮಾರ್ಚ್ 4 ರಂದು ಲಿಂಗಸೂಗೂರಿನಲ್ಲಿ ಸುದ್ದಿಘೋಷ್ಠಿ ಕರೆದು ರಂಭಾಪುರಿ ಶ್ರೀ ಮತ್ತು ಕೇದಾರ ಪೀಠದ ಭೀಮಾಶಂಕರ ಸ್ವಾಮೀಜಿಯವರು ಲಿಂಗಾಯತ ಧರ್ಮ ಮತ್ತು ಗೊರುಚ ಅವರ ಮೇಲೆ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಎಲ್ಲಾ ಬಸವ ಪರ ಸಂಘಟನೆಗಳು ಸೇರಿ ಇಂದು ಪ್ರತಿಕ್ರಿಯೆ ನೀಡಿದವು.
ಇತ್ತೀಚಿಗೆ ಬೆಂಗಳೂರಿನಲ್ಲಿ ಹಿರಿಯ ಶರಣ ಸಾಹಿತಿ ಗೋ.ರು. ಚನ್ನಬಸಪ್ಪನವರು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ದೊರೆತರೆ ಇಡೀ ಮನುಕುಲಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ, ಇದಕ್ಕೆ ರಂಭಾಪುರಿ ಸ್ವಾಮೀಜಿ ಹಿರಿಯ ಸಾಹಿತಿ ಚನ್ನಬಸಪ್ಪನವರಿಗೆ ಏಕವಚನದಿಂದ ಮಾತನಾಡಿ, ಅವರಿಗೆ ಅಗೌರವ ತರುವ ಪದವನ್ನು ಬಳಸಿದ್ದಾರೆ, ಎಂದು ರುದ್ರಪ್ಪ ಹೇಳಿದರು.
ಇದನ್ನು ಎಲ್ಲಾ ಬಸವಪರ ಸಂಘಟನೆಗಳ ಬಸವಾನುಯಾಯಿಗಳು ತೀವ್ರವಾಗಿ ಖಂಡಿಸುತ್ತಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ದೊಡ್ಡ ಪೀಠದ ಗುರುಗಳಾದವರ ಬಾಯಿಂದ ಕನಿಷ್ಠ ಶಬ್ದಗಳು ಬರಬಾರದೆಂದು ಸಮಾಜ ಇಚ್ಛಿಸುತ್ತದೆ. ಈ ರೀತಿ ಮತ್ತೊಬ್ಬ ಹಿರಿಯ ಜೀವಿಗಳನ್ನು ಅವನು ಇವನು ಎಂದು ಏಕವಚನದಲ್ಲಿ ಸಂಭೋಧಿಸುವುದು ಅವರ ಘನತೆಗೆ ಕುಂದುಂಟಾಗುತ್ತದೆ. ಸಾಮಾನ್ಯರಂತೆ ಸಂಯಮ ಕಳೆದುಕೊಂಡು ಮಾತನಾಡುವುದನ್ನು ನೋಡಿದರೆ ಅವರು ಭ್ರಮನಿರಸನಗೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.
ಹಿರಿಯ ಮುಖಂಡ ವೀರಭದ್ರಗೌಡ ಅಮರಾಪುರ ಮಾತನಾಡಿ, ರಂಭಾಪುರಿ ಶ್ರೀಗಳು ಸಾಹಿತಿ ಚನ್ನಬಸಪ್ಪನವರ ಇತಿಹಾಸ ತಿಳಿಯದೆ ಮಾತನಾಡಿದ್ದಾರೆ. ಸಾಹಿತಿ ಚನ್ನಬಸಪ್ಪನವರು ನೇರನುಡಿಯ ಮಾತುಗಾರರು ಆಗಿದ್ದಾರೆ, ನಿಜವಾಗಲೂ ವೀರಶೈವ ಧರ್ಮ ಅಳಿದು ಹೋಗುತ್ತದೆ, ಮುಂದೆ ಲಿಂಗಾಯತ ಧರ್ಮ ಮಾತ್ರ ಇರುತ್ತದೆ ಎಂಬ ಅವರ ಮಾತು ಅರ್ಥಮಾಡಿಕೊಳ್ಳಬೇಕು ಎಂದರು.
ಬಸವಣ್ಣನವರ ವಿಚಾರಗಳನ್ನು ಇಡೀ ವಿಶ್ವವೇ ಸ್ವೀಕರಿಸುತ್ತಿದೆ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಪೀಠಕ್ಕಾಗಿ ಬಸವಣ್ಣನವರ ವಿಚಾರಧಾರೆಗಳು ಹೊರ ಬಾರದಂತೆ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಇದನ್ಳು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಅರ್ಥಮಾಡಿಕೊಳ್ಳಬೇಕು ಎಂದು ಗಂಭೀರವಾಗಿ ಹೇಳಿದರು.
ಬಸವ ಕೇಂದ್ರದ ಅಧ್ಯಕ್ಷ ಕರೇಗೌಡ ಪೋಲೀಸಪಾಟೀಲ ಮಾತನಾಡಿ, ಬಸವಣ್ಣನವರು ಒಂದು ಜಾತಿಗೆ ಸೀಮಿತರಲ್ಲ, ಇಡೀ ಮನುಕುಲದ ಉದ್ಧಾರಕ ಆಗಿದ್ದಾರೆ, ಅವರ ಆದರ್ಶ, ತತ್ವ ಸಿದ್ಧಾಂತವನ್ನು ಪಾಲಿಸಬೇಕು. ಅವರ ನೇರ ನುಡಿಯ ಬಗ್ಗೆ ಅವರ ಅನುಯಾಯಿಗಳು ಮಾತನಾಡುತ್ತಿದ್ದಾರೆಯೇ ಹೊರತು ಯಾವುದೇ ಕಥೆ ಕಟ್ಟಿ ಮಾತನಾಡುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಬಸವಪರ ಸಂಘಟನೆಗಳ ಪ್ರಮುಖರಾದ ಕೆ.ಶಾಂತಪ್ಪ ಚಿಂಚರಕಿ, ಕೆ.ಶರಣಪ್ಪ ಟೆಂಗಿನಕಾಯಿ, ಮುದ್ದನಗೌಡ, ಚಂದ್ರಗೌಡ ಹರೇಟನೂರ, ವೀರನಗೌಡ ಸಣ್ಣಗೌಡ್ರು, ಮಲ್ಲಿಕಾರ್ಜುನ ಹೊಗರನಾಳ, ಬಸನಗೌಡ ಬಸವಪುರ ಸೇರಿದಂತೆ ಇತರರು ಇದ್ದರು.
ಮಹಾಬಯಲಾದ ಗುರು ಬಸವಣ್ಣನವರನ್ನು ಬಸವ ತತ್ವವನ್ನು ಹಿಡಿದು ಬಂದಿಸುವ ಪ್ರಯತ್ನ . ಆದರೆ ಅದು ಆಗುವುದಿಲ್ಲ ಎಂಬ ಸತ್ಯವನ್ನು ರ೦ಬಾಪುರಿ ಶ್ರೀಗಳು ಅರ್ಥಮಾಡಿಕೊಳ್ಳಬೇಕು ಅಷ್ಟೇ . ಪಂಚಪೀಠಗಳ ಪರಂಪರೆ ನಮಗೆ ಅವಶ್ಯಕತೆ ಇಲ್ಲ ಎಂದು ನಾವು ಎದೆತಟ್ಟಿ ಹೇಳುತ್ತಿದ್ದೇವೆ ಅಂದರೆ ವೀರಶೈವವನ್ನು ಬಿಟ್ಟು ನಾವು ಬದುಕಲು ಸಿದ್ದರಾಗಿದ್ದೇವೆ ಎಂದ ಮೇಲೆ ನೀವು ಕೂಡ ಗುರುಬಸವನವರನ್ನು ಬಿಟ್ಟು ಬದುಕಿ . ಪಂಚಪೀಠದವರನ್ನು ಗುರುವೆಂದು ಒಪ್ಪದ ಸಿದ್ಧಾಂತ ಶಿಖಾಮಣಿಯನ್ನು ಧರ್ಮ ಗ್ರಂಥಿ ಎಂದು ಒಪ್ಪದ ಬಸವ ಅನುಯಾಯಿಗಳ ಅವಶ್ಯಕತೆ ಆದರೂ ಏನಿದೆ ಶ್ರೀಗಳೆ ? ಎಲ್ಲೋ ಒಂದು ಕಡೆ ಇವರಿಗೆ ಭ್ರಮ ನಿರಸನ ಉಂಟಾಗಿದೆ .