ದೇವರು ಒಬ್ಬನೆ, ಅರಿವೇ ಗುರು, ತನ್ನ ತಾನರಿದಡೆ ತಾನೇ ದೇವರು, ದೇಹವೇ ದೇಗುಲ, ಕಾಯಕವೇ ಕೈಲಾಸ.
ಧಾರವಾಡ
ಬಸವಣ್ಣನವರು ನೂತನ ಸಂಸ್ಕೃತಿಯೊಂದರ ನಿರ್ಮಾಪಕರು. ಅವರು ರೂಪಿಸಿದುದು ನಿಜವಾದ ಕನ್ನಡ ಸಂಸ್ಕೃತಿ. ಕಾಯಕ ಜೀವಿಗಳ ಸಾಂಘಿಕ ಶಕ್ತಿಯಿಂದ ರೂಪಿತವಾದ ಶ್ರಮಸಂಸ್ಕೃತಿ. ಅದನ್ನು ಶರಣಸಂಸ್ಕೃತಿ, ಬಸವಸಂಸ್ಕೃತಿ ಎಂದು ಕರೆಯಲಾಗುತ್ತದೆ.
ಈ ಸಂಸ್ಕೃತಿಯಲ್ಲಿ ಶ್ರೇಣೀಕೃತ ಸಮಾಜ ವ್ಯವಸ್ಥೆಯಿಲ್ಲ. ವರ್ಗ-ವರ್ಣ-ಲಿಂಗ ಭೇದದ ತಾರತಮ್ಯವಿಲ್ಲ. ಅನೇಕ ದೇವರುಗಳ ಆರಾಧನೆ ಸ್ಥಾವರ ದೇವರ ಪೂಜೆ ಇಲ್ಲ. ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರ, ಹರಕೆ-ವ್ರತ-ನೇಮ, ಪಶುಬಲಿ, ಯಜ್ಞ-ಯಾಗ, ಮಡಿ-ಮೈಲಿಗೆ, ಸೂತಕ-ಪಾತಕಗಳಿಲ್ಲ. ಯಂತ್ರ-ತಂತ್ರ, ವಾರ-ತಿಥಿ-ನಕ್ಷತ್ರ, ಸೂತ್ರ-ಗೋತ್ರ-ಜ್ಯೋತಿಷ್ಯಗಳಿಲ್ಲ. ಪಾಪ-ಪುಣ್ಯ, ಸ್ವರ್ಗ-ನರಕಗಳಿಲ್ಲ, ಪೂರ್ವಜನ್ಮ-ಪುನರ್‌ಜನ್ಮ, ಮೋಕ್ಷ, ಕರ್ಮಫಲಗಳಿಲ್ಲ.
ಇಲ್ಲಿರುವುದು ಎಲ್ಲರೂ ಸಮಾನರೆಂಬ ಸಮಸಮಾಜ ವ್ಯವಸ್ಥೆ.
ದೇವರು ಒಬ್ಬನೆ, ಅರಿವೇ ಗುರು, ತನ್ನ ತಾನರಿದಡೆ ತಾನೇ ದೇವರು, ದೇಹವೇ ದೇಗುಲ, ಕಾಯವೇ ಕೈಲಾಸ. ಇಷ್ಟಲಿಂಗ ಒಂದೇ ದೇವರು ಎಂಬ ಏಕದೇವೋಪಾಸನೆ; ಕಂದಾಚಾರ ರಹಿತ ಲಿಂಗಾಚಾರ. ಅದುವೇ ಸದಾಚಾರ. ಇಲ್ಲಿರುವುದು ಒಂದೇ ಲೋಕ. ಅದುವೇ ಮರ್ತ್ಯಲೋಕ. ಅದು ಕರ್ತಾರನ ಕಮ್ಮಟ. ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು.
ಈ ಸಂಸ್ಕೃತಿಯಲ್ಲಿ ಸಂಸಾರ ಧರ್ಮಕ್ಕೆ ಆದ್ಯತೆ. ಜನವಾಣಿಗೆ ಮನ್ನಣೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ. ಇಲ್ಲಿ ದುಡಿಯದೇ ಇರುವವರಿಗೆ, ಅನ್ಯರ ದುಡಿಮೆಯಲ್ಲಿ ಹೊಟ್ಟೆ ಹೊರೆಯುವವರಿಗೆ ಪ್ರವೇಶವಿಲ್ಲ. ಕಾಯಕ-ದಾಸೋಹ ನಿರತ ನಿಷ್ಠಾವಂತರಿಗೆ ಮಾತ್ರ ನಿಜದ ನೆಲೆ. ಇದು ಸಹಜ ಸಂಸ್ಕೃತಿ; ಸರಳ ಸಂಸ್ಕೃತಿ. ವೈಚಾರಿಕ ತಳಹದಿಯಮೇಲೆ ರೂಪಿಸಿದ ಮಾನವ ಸಂಸ್ಕೃತಿ, ಪ್ರಜಾಪ್ರಭುತ್ವದ ಮಾದರಿಯಲ್ಲಿ ಕಟ್ಟಿದ ಅನುಭವಮಂಟಪದಲ್ಲಿ ಸಂವಿಧಾನಗೊಂಡ ಸ್ವತಂತ್ರ ಸಂಸ್ಕೃತಿ.
ಈ ವಿಶಿಷ್ಟ-ವಿನೂತನ ಸಂಸ್ಕೃತಿಯ ನಾಯಕ ಬಸವಣ್ಣನವರು.