12ನೇ ಶತಮಾನದ ಶರಣ ಚಳುವಳಿ ಸೇರಿಕೊಂಡ ಅಲೆಮಾರಿ ಹೆಳವರು

ಇಂದಿಗೂ ಎತ್ತಿನ ಮೇಲೆ ಸವಾರಿ ಮಾಡುವ ಹಕ್ಕು ಇರುವುದು ಹೆಳವರಿಗೆ ಮಾತ್ರ. ಆ ಹಕ್ಕನ್ನು ಕೊಟ್ಟಿದ್ದು ಬಸವಣ್ಣನವರು.

ದುಬೈ

ಉತ್ತರ ಕರ್ನಾಟಕದ ಒಂದು ವಿಶೇಷ ಅಲೆಮಾರಿ ಜನಾಂಗವೆಂದರೆ ಹೆಳವರು. ಇವರ ಕುಲಕಸುಬು ಎಂದರೆ ಇವರು ಕೆಲವು ನಿರ್ದಿಷ್ಟ ಮನೆತನಗಳ ವಂಶವೃಕ್ಷದ ದಾಖಲಾತಿ ಇಟ್ಟುಕೊಳ್ಳುವ ಕಾಯಕದವರು.

ಒಂದು ಮನೆತನದವರು ಮೂಲತಃ ಎಲ್ಲಿಯವರು, ಯಾರ ತಲೆಮಾರಿನಲ್ಲಿ ಯಾವ ಊರಿಗೆ ಬಂದರು, ಅವರಿಗೆ ಎಷ್ಟು ಜನ ಮಕ್ಕಳು? ಅವರು ಅವರೆಲ್ಲಾ ಇರುವ ಜಾಗ ಯಾವುದು? ಉದ್ಯೋಗವೇನು? ಅಂತೆಲ್ಲ… ಇವರ ಪುಸ್ತಕದಲ್ಲಿ ಯಾವ್ಯಾವ ಮನೆತನಗಳ ವಿವರಗಳು ಇವೆಯೋ, ಅವರ ವಂಶದ ಕುಡಿಗಳು ಇರುವ ಎಲ್ಲ ಜಾಗಗಳಿಗೂ ಹೋಗಿ, ಅವರ ಮನೆಯಲ್ಲಿ ಕುಳಿತು, ಅವರೆದುರಿಗೆ ತಮ್ಮ ದಾಖಲಾತಿ ಪುಸ್ತಕದ ವಿವರಗಳನ್ನು ಹಾಡುತ್ತಾ ನಿರೂಪಣೆ ಮಾಡುತ್ತಾರೆ. ಬೆನ್ನಿಗೊಂದು ಗುಲಾಬಿ ಬಣ್ಣದ ಶಾಲು, ತಲೆಗೊಂದು ಮುಂಡಾಸು ಸುತ್ತಿ ಬಿಜಾಪುರ ಶೈಲಿಯ ಕಚ್ಚೆ ತೊಟ್ಟುಕೊಂಡು ಊರೂರು ಸುತ್ತುವುದನ್ನು ನಾವು ಇಂದಿಗೂ ನೋಡಬಹುದು.

ನಾನು ಸಣ್ಣವನಿದ್ದಾಗ ಇವರು ಪ್ರತಿ ವರ್ಷವೂ ನಮ್ಮ ಮನೆಗೆ, ನಮ್ಮೂರಿನಲ್ಲಿರುವ ಬಂಧುಗಳ ಮನೆಗೆ ಬಂದು ಹೋಗುತ್ತಿದ್ದರು.

೧೨ ನೇ ಶತಮಾನದಲ್ಲಿ ನಡೆದ ಬಸವಣ್ಣನವರ ವಚನ ಚಳುವಳಿಗೂ ಮತ್ತು ಹೆಳವರಿಗೂ ಒಂದು ವಿಶೇಷ ಸಂಬಂಧವಿದೆ. ಬಸವಣ್ಣನ ಕೀರ್ತಿ ದೇಶದ ಎಲ್ಲೆಡೆ ಹರಡಿ ಕಾಶ್ಮೀರದಿಂದ, ಗುಜರಾತನಿಂದ, ಮಧ್ಯಪ್ರದೇಶ, ತಮಿಳುನಾಡಿನಿಂದ ಮಹಾರಾಷ್ಟ್ರದಿಂದ ಹಲವಾರು ಶರಣರು ಬಂದು ಅನುಭವ ಮಂಟಪದಲ್ಲಿ ಸೇರಿದ್ದನ್ನ ನಾವು ಇತಿಹಾಸದಲ್ಲಿ ಕಾಣುತ್ತೇವೆ.

ಅಂತೆಯೇ ಬಸವಣ್ಣನವರ ಕೀರ್ತಿಗೆ ಆಕರ್ಷಿತನಾಗಿ ಒಬ್ಬ ಹೆಳವರು ಅನುಭವ ಮಂಟಪಕ್ಕೆ ಬರುತ್ತಾರೆ ಆದರೆ ಅವರ ಕಾಲುಗಳು ನಡೆಯಲು ಬಾರದಾಗಿದ್ದವು, ಕಾಲೆಳೆಯುತ್ತ ಎಳೆಯುತ್ತಾ ಹೇಗೋ ಅನುಭವ ಮಂಟಪ ತಲುಪಿದರು, ತಲುಪಿ ಅಲ್ಲಿ ಸೇರುವ ಬಗೆಯನ್ನು ಇತರರಿಂದ ತಿಳಿಯುತ್ತಾರೆ. ಮುಖ್ಯವಾಗಿ ಅಲ್ಲಿ ಸೇರುವವರು ಕಾಯಕದಿಂದ ದಾಸೋಹ ಮಾಡುತ್ತಾ ಆತ್ಮೋದ್ಧಾರ ಮಾಡಿಕೊಳ್ಳಬೇಕೆನ್ನುವುದನ್ನ ತಿಳಿಯುತ್ತಾರೆ.

ಅಷ್ಟರಲ್ಲಿ ಪ್ರಸಾದದ ಸಮಯವಾಗುತ್ತದೆ, ಶರಣರೆಲ್ಲರೂ ಕೂಡಿ ಪ್ರಸಾದಕ್ಕೆ ಅಣಿಯಾಗುತ್ತಾರೆ, ಆದರೆ ಅಲ್ಲಿಗೆ ಬಂದ ಹೆಳವರು ಪ್ರಸಾದಕ್ಕೆ ಒಪ್ಪದೆ ಸ್ವೀಕರಿಸುವುದಿಲ್ಲ. ಕಾರಣ ಅವರು ಅಂಗವಿಕಲರಾದ್ದರಿಂದ ಯಾವ ಕಾಯಕವೂ ಅವರಲ್ಲಿರಲಿಲ್ಲ ಮತ್ತು ಕಾಯಕವಿಲ್ಲದೆ ಪ್ರಸಾದ ಸ್ವೀಕರಿಸಬಾರದು ಎಂದು ಅರಿತಿರುತ್ತಾರೆ.

ಈ ವಿಷಯ ತಿಳಿದು ಅಲ್ಲಿಗೆ ಬಸವಣ್ಣನವರು ಬಂದು ಅವರನ್ನು ಮಾತಾಡಿಸಿ, ಸರಿ ಯಾವ ಕಾಯಕ ಮಾಡಬಹುದು ಎಂದು ಯೋಚಿಸಿ ಇನ್ನು ಮುಂದೆ ನೀವು ಅನುಭವ ಮಂಟಪದಲ್ಲಿರುವ ಪ್ರತಿ ಶರಣರ ದಾಖಲೆ ಬರೆದುಕೊಳ್ಳುವ ಕಾಯಕ ಮಾಡಬೇಕು ಎನ್ನುತ್ತಾರೆ. ಅಂದಿನಿಂದ ಆ ಹೆಳವರು ಅನುಭವ ಮಂಟಪದ Registrar General ಆಗುತ್ತಾನೆ.

ಅಷ್ಟೇ ಅಲ್ಲ ಹೆಳವರಿಗೆ ಹೋಗಿ ಬರಲು ಒಂದು ಎತ್ತನ್ನು ಕೂಡ ಕೊಡಿಸುತ್ತಾರೆ, ಇಂದಿಗೂ ಎತ್ತಿನ ಮೇಲೆ ಸವಾರಿ ಮಾಡುವ ಹಕ್ಕು ಕೇವಲ ಹೆಳವರಿಗೆ ಮಾತ್ರ ಇರೋದು ಮತ್ತು ಆ ಹಕ್ಕನ್ನು ಕೊಟ್ಟಿದ್ದು ಬಸವಣ್ಣ.

ಶರಣ ಸಂಕುಲದಲ್ಲಿ ಆ ಹೆಳವ ಮುಂದೆ ದೋಗಯ್ಯ ಎಂಬ ಹೆಸರಿನಿಂದ ಪ್ರಸಿದ್ಧಿಯಾಗುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia

Share This Article
1 Comment
  • ತುಂಬಾ ಉಪಯುಕ್ತವಾದ ಮತ್ತು ಕುತೂಹಲಕಾರಿಯಾದ ವಿಷಯ. ನಮ್ಮೂರಿಗೆ ಮತ್ತು ನಮ್ಮ ಮನೆಗೂ ಸುಮಾರು 2000 ನೇ ಇಸವಿಯವರೆಗೂ ಬರುತ್ತಿದ್ದರು. ನೀವು ಹೇಳಿದ ಹಾಗೆ ಎತ್ತಿನ ಗಾಡಿ ಕಟ್ಟಿಕೊಂಡು ಸಂಸಾರ ಸಮೇತ ಬಂದು ಊರಿನ ಹೊರಗಿನ ಜಾಗದಲ್ಲಿ ಅಥವಾ ರಾಜಾ ದಿನಗಳಾದರೆ ಶಾಲೆಗಳ ಪಡಸಾಲೆಯಲ್ಲಿ ತಂಗುತ್ತಿದ್ದರು. ಅವರುಗಳು ನಿರ್ಧಿಷ್ಟವಾದ ಮನೆಗಳನ್ನು ಹಂಚಿಕೊಂಡು ಅವರಿಗಳಿಗೆ ಸಂಬಂಧಪಟ್ಟ ಮನೆಗಳಿಗೆ ಭೇಟಿಕೊಟ್ಟು ಬೇಕಿದ್ದರೆ ಹಿಂದಿನ ವಿವರಗಳನ್ನೆಲ್ಲ ಹೇಳಿ ಮನೆಯಲ್ಲಿನ ಹೊಸ ಸೇರ್ಪಡೆಗಳಾದ ಹೊಸ ಸೊಸೆಯಂದಿರು, ಅವರು ಯಾವ ಊರಿನಿಂದ ಮತ್ತು ಯಾವ ವಂಶದಿಂದ ಎಂಬ ಎಲ್ಲಾ ವಿವರಗಳನ್ನು ಪಡೆದುಕೊಳ್ಳುತ್ತಿದ್ದರು. ಜೊತೆಗೆ ಹೊಸದಾಗಿ ಹುಟ್ಟಿದ ಮಕ್ಕಳ ವಿವರಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ಅದಷ್ಟೇ ಅಲ್ಲದೇ ಬೇರೆ ಬೇರೆ ಊರುಗಳಿಗೆ ವಲಸೆ ಹೋದ ವಿವರಗಳೂ ಅವರಲ್ಲಿ ದೊರಕುತ್ತಿದ್ದವು. ತುಂಬಾ ಕರಾರುವಾಕ್ಕಾದ ಮಾಹಿತಿ ಸಿಗುತ್ತಿತ್ತು. ಧಾನ್ಯ, ಹಳೆ ಬಟ್ಟೆಗಳ ಜೊತೆಗೆ ಕೆಲವೊಮ್ಮೆ ಹಸು/ಕರುಗಳನ್ನು ಕೇಳಿ ಪಡೆಯುತ್ತಿದ್ದರು ಕೊಡದಿದ್ದಲ್ಲಿ ಕೆಲವೊಮ್ಮೆ ಒತ್ತಾಯಕಪೂರವಾಗಿ ಒಂದೆರಡು ದಿನ ಅಲ್ಲಿಯೇ ಇದ್ದು ಪಡೆಯುತ್ತಿದ್ದುದೂ ಉಂಟು. ಜನರೂ ಕೂಡ ಪ್ರೀತಿಯಿಂದ ಬೈಯ್ಯುತ್ತಲೇ ಕೊಡುತ್ತಿದ್ದರು.

    ಈ ಜನಾಂಗದವರನ್ನು ಜಾತಿ ಗಣತಿ, ಜನ ಗಣತಿ ಮತ್ತು ಇತರೆ ಯಾವುದೇ ಗಣತಿಗೆ ಸಂಭಂಧಿಸಿದ ಕೆಲಸಗಳಿಗೆ ಸರ್ಕಾರಗಳು ನೇಮಿಸಿಕೊಂಡರೆ ಹೇಗೆ?

Leave a Reply

Your email address will not be published. Required fields are marked *