ಪ್ರವಚನ ಪಿತಾಮಹ ಲಿಂಗಾನಂದ ಶ್ರೀಗಳ ಸಂಸ್ಮರಣೆಯಲ್ಲಿ…

ಹುಬ್ಬಳ್ಳಿ

ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು, ಬಸವ ತತ್ವವನ್ನು ಇಳೆಯಲ್ಲಿ ಬೆಳಗಲು ಬಂದ ಬಸವ ಭಾನುವಿನ ದಿವ್ಯ ಕಿರಣ, ಬಸವ ಧರ್ಮದ ರಾಯಭಾರಿ, ಬಸವ ಯುಗ ನಿರ್ಮಾಪಕರು, ಮಹಾನ್ ತ್ಯಾಗಿಗಳು ತಪಸ್ವಿಗಳು, ಜಂಗಮತ್ವಕ್ಕೆ ಜೀವಕೊಟ್ಟ ನಿಜ ಜಂಗಮರು.

ಬಸವ ಧರ್ಮದ ವೀರ ಸೇನಾನಿ, ಧರ್ಮಕ್ರಾಂತಿಯ ಧೀರಯೋಗಿ, ಮಹಿಳಾ ಜಗದ್ಗುರು ಪೀಠ ಸಂಸ್ಥಾಪಕರು, ಬಸವ ಧರ್ಮಪೀಠದ ನಿರ್ಮಾತೃಗಳು, ವಿಶ್ವಕಲ್ಯಾಣ ಮಿಷನ್‌ನ ಜನಕರು, ಮಾತೃ ಹೃದಯಿಗಳು, ಶ್ರೇಷ್ಠ ಸಾಹಿತಿಗಳು, ರಾಷ್ಟ್ರೀಯ ಬಸವದಳದ ಸಂಘಟಕರು, ಅಭಿನವ ವಿವೇಕಾನಂದರು, ಎಲ್ಲಕ್ಕೂ ಮಿಗಿಲಾಗಿ ವಿಶ್ವಧರ್ಮ ಪ್ರವಚನಕಾರರು. ಅಷ್ಟೇ ಅಲ್ಲ ವಿಶ್ವಧರ್ಮ ಪ್ರವಚನಕಾರರ ನಿರ್ಮಾಪಕರು.

ವಚನ

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಗುಂಟ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿರ್ದಿತ್ತಯ್ಯಾ ಶಿವನ ಪ್ರಕಾಶ
ಆ ಬೆಳಗಿನೊಳಗೊಪ್ಪುತ್ತಿರ್ದರಯ್ಯಾ ಅಸಂಖ್ಯಾತ ಶರಣ ಪ್ರಮಥ ಗಣಂಗಳು
ಶಿವಭಕ್ತನಿರ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೇ
ಶಿವಭಕ್ತನಿರ್ದ ದೇಶ ಪರಮ ಪಾವನವೆಂಬುದು ಹುಸಿಯೇ
ನಮ್ಮ ಗುಹೇಶ್ವರ ಲಿಂಗದಲ್ಲಿ ಎನ್ನ ಪರಮಾರಾಧ್ಯ ಗುರು
ಸಂಗನ ಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ.

ಅಂದಿನ ಕಾಲದಲ್ಲಿ ಗುರು ಬಸವಣ್ಣನವರು ಎಂಥಾ ಒಂದು ಅದ್ಭುತವಾದ ದೈವೀ ಸಮಾಜವನ್ನು ನಿರ್ಮಾಣ ಮಾಡಿದರು ಎನ್ನುವುದಕ್ಕೆ ಅಲ್ಲಮ ಪ್ರಭುದೇವರ ಈ ವಚನವು ಜೀವಂತ ಸಾಕ್ಷಿಯಾಗಿದೆ.

ಮರ್ತ್ಯ ಲೋಕದ ಈ ಕರ್ತಾರನ ಕಮ್ಮಟವನ್ನು ಸ್ವಾರ್ಥಿಯಾದ ಮಾನವನು ವರ್ಣ, ಜಾತಿ, ವರ್ಗ, ಅಂತಸ್ತು ಭೇದಗಳಿಂದ ಅಂದಗೆಡಿಸಿದ್ದನ್ನು ಕಂಡು, ಮನನೊಂದು ಕರ್ತನ ಮೇಲಿದ್ದ ಅಪಾರ ಅನನ್ಯವಾದ ಭಕ್ತಿಯಿಂದ, ಸೃಷ್ಟಿಯ ಬಗೆಗಿದ್ದ ಅಭಿಮಾನದಿಂದ, ಮಾನವ ಕುಲದ ಮೇಲಿನ ಉತ್ಕಟವಾದ ಪ್ರೀತಿಯಿಂದ ಗುರು ಬಸವಣ್ಣನವರು ಸುಧಾರಣೆಯನ್ನು ಕೈಗೊಂಡರು. ಮಾನವೀಯ ಮೌಲ್ಯಗಳನ್ನು ಜನಮನದಲ್ಲಿ ಬಿತ್ತಿದರು. ಜಾತಿ ವರ್ಣ ವರ್ಗರಹಿತವಾದ ಕಲ್ಯಾಣ ರಾಜ್ಯವನ್ನು ಕಟ್ಟಿದರು. ಆವರೆಗೂ ಜಗತ್ತು ಕಂಡರಿಯದ ಕೇಳಲರಿಯದ ಸಮಾನತೆಯನ್ನು ಸಮಾಜದಲ್ಲಿ ನೆಲೆಗೊಳಿಸಿದರು. ಧರ್ಮಶ್ರೀಯು ಜನಸಾಮಾನ್ಯರ ಮನ ಮನೆಗಳನ್ನು ಪ್ರವೇಶಿಸುವಂತೆ ವಚನ ವಾಙ್ಮಯವನ್ನು ಕೊಟ್ಟರಲ್ಲದೆ, ಅನುಭವ ಮಂಟಪವೆಂಬ ಸಂಸ್ಥೆಯ ಮೂಲಕ ಬಯಸಿ ಬಂದವರಿಗೆಲ್ಲ ದೀಕ್ಷಾ ಸಂಸ್ಕಾರ ನೀಡಿದರು. ಶತ ಶತಮಾನಗಳ ಕಾಲದಿಂದಲೂ ಧಾರ್ಮಿಕ ಸಂಸ್ಕಾರದಿಂದ ವಂಚಿತರಾಗಿದ್ದ ಅಸಂಖ್ಯಾತರು ಬಸವ ಧರ್ಮದ ಪಾವನ ಜಲದಲ್ಲಿ ಮಿಂದು ಪಾವನರಾದರು. ಆ ಲಿಂಗದೇವನ ಪ್ರಕಾಶದಲ್ಲಿ ನಲಿನಲಿದಾಡಿದರು.

ಆದರೆ ನಂತರ ಆದುದೇನು? ಯಾವಾಗ ಕಲ್ಯಾಣ ಕ್ರಾಂತಿಯಾಯಿತೋ ಆವಾಗ ಕಲ್ಯಾಣವೆಂಬ ಪ್ರಣತೆ ಒಡೆದು ಚೂರು ಚೂರಾಯಿತು. ಭಕ್ತಿ ರಸವೆಂಬ ತೈಲವೂ ಬತ್ತಿ ಹೋಯಿತು. ಬಸವಣ್ಣನೆಂಬ ಜ್ಯೋತಿ ನಂದಿಹೋಯಿತು. ಆಗ ಅಲ್ಲಿ ಲಿಂಗದೇವನ ಪ್ರಕಾಶ ಇಲ್ಲವೇ ಇಲ್ಲ. ಗುರು ಬಸವಣ್ಣನವರೆಂಬ ಕಲ್ಯಾಣದ ಭಾಗ್ಯರವಿ ಅಸ್ತಂಗತವಾದ ಮೇಲೆ ಪುನಃ ಎಲ್ಲೆಲ್ಲಿಯೂ ಕತ್ತಲೆ ಕವಿಯಿತು, ಅಜ್ಞಾನದ ಕತ್ತಲೆ ಮೌಢ್ಯತೆಯ ಕತ್ತಲೆ!

ಯಾವ ಅನಿಷ್ಟ ಆಚರಣೆಗಳನ್ನು ಬಸವಾದಿ ಪ್ರಮಥರು ಗುಡಿಸಿ ಮುಂಬಾಗಿಲಿನಿಂದ ಹೊರ ಹಾಕಿದ್ದರೋ ಆ ಅನಿಷ್ಟ ಆಚರಣೆಗಳನ್ನು ಅಜ್ಞಾನದ ಕತ್ತಲೆಯಲ್ಲಿ ಜನ ಪುನಃ ಅವುಗಳನ್ನು ಹಿಂಬಾಗಿಲಿನಿಂದ ಒಳಗೆ ಸೇರಿಸಿಕೊಂಡು ಲಿಂಗಾಯತ ಧರ್ಮದ ಆಚಾರ ವಿಚಾರಗಳನ್ನು ಕಲಬೆರಕೆ ಮಾಡಿದರು. ಪುನಃ ಇಲ್ಲಿ ಅಸಮಾನತೆ ಪುರೋಹಿತಶಾಹಿಯ ದಬ್ಬಾಳಿಕೆ ಮಠಾಧಿಕಾರಿಗಳ ವೈಭವ, ಶೋಷಣೆ, ಜಾತೀಯತೆ ಇಂಥ ಒಂದಲ್ಲ ಎರಡಲ್ಲ ಅನೇಕ ಅನಿಷ್ಟಗಳು ಈ ಸಮಾಜಕ್ಕೆ ಮುತ್ತಿಕೊಂಡವು. ಒಂದು ಕಾಲದಲ್ಲಿ ಶರಣ ಸಮಾಜವೇ ಇರಲಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮೌಢ್ಯತೆಯ ಕತ್ತಲೆ ತುಂಬಿತ್ತು ಈ ಸಮಾಜದಲ್ಲಿ.

ಇಂಥ ಸಂದರ್ಭದಲ್ಲಿ ಪೂಜ್ಯ ಅಪ್ಪಾಜಿಯವರು ಏನು ಮಾಡಿದರು ಎಂದರೆ ಇಡೀ ತಮ್ಮ ಜೀವನವನ್ನು ಬಸವ ತತ್ವಕ್ಕಾಗಿ ಮುಡುಪಾಗಿಟ್ಟು ತಮ್ಮ ದೇಹವನ್ನೇ ಪ್ರಣತೆಯನ್ನಾಗಿ ಮಾಡಿಕೊಂಡು ತ್ಯಾಗ, ತಪಸ್ಸು, ವೈರಾಗ್ಯವೆಂಬ ತೈಲವನ್ನೆರೆದು ತಮ್ಮ ತತ್ವನಿಷ್ಠೆಯೆಂಬ ಬತ್ತಿಯನ್ನಿಟ್ಟು, ಪ್ರವಚನವೆಂಬ ಜ್ಯೋತಿಯನ್ನು ಮುಟ್ಟಿಸಿದರು. ಆಗ ಪುನಃ ತೊಳಗಿ ಬೆಳಗತೊಡಗಿತು ಗುರು ಬಸವ ಪ್ರಕಾಶ.

ಗುರು ಬಸವಣ್ಣನವರ ಕಾಲದಲ್ಲಿ ಜನರು ಸತ್ಯದ ಸಾಧಕರು, ಶೋಧಕರೂ ಆಗಿದ್ದರಿಂದ ಧರ್ಮದ ಕಡೆ ಬಂದರು. ಕಲ್ಯಾಣದಲ್ಲಿ ತೊಳಗಿ ಬೆಳಗುತ್ತಿರ್ದ ಆ ಜ್ಯೋತಿಯಿಂದ ತಮ್ಮ ಬಾಳಿನ ಹಣತೆಯನ್ನು ಹೊತ್ತಿಸಿಕೊಂಡು ಭಕ್ತಿವಂತರಾದರು. ಆದರೆ ಅಪ್ಪಾಜಿಯವರು ಪ್ರವಚನ ಮಾಡುವ ಕಾಲದಲ್ಲಿ ಜನರು ಧರ್ಮದ ಕಡೆ ಬರುವಷ್ಟು ಪ್ರಜ್ಞಾವಂತರಿರಲಿಲ್ಲ. ಅದಕ್ಕಾಗಿ ಧರ್ಮವನ್ನೇ ಅವರ ಕಡೆ ಕೊಂಡೊಯ್ಯುವ ಉದ್ದೇಶದಿಂದ ಪೂಜ್ಯ ಅಪ್ಪಾಜಿಯವರು ಯಾವುದೇ ಮಠವನ್ನು ಒಂದು ಪ್ರಣತೆಯಾಗಿ ಮಾಡದೆ, ತಮ್ಮ ದೇಹವನ್ನೇ ಪ್ರಣತೆಯಾಗಿ ಮಾಡಿಕೊಂಡು ಪ್ರವಚನದ ಬೆಳಕನ್ನು ಹಿಡಿದು ಹೊರಟರು ಆಗ ಮತ್ತೆ ಜನರಲ್ಲಿಯ ಅಜ್ಞಾನದ ಕತ್ತಲೆಯಳಿದು ಸುಜ್ಞಾನದ ಬೆಳಕಿನಲ್ಲಿ ಬಾಳುವಂತಾಯಿತು.

ಇನ್ನೊಂದು ವೈಶಿಷ್ಟ್ಯವೇನೆಂದರೆ ಇಂಥ ಪ್ರವಚನ ಜ್ಯೋತಿಯ ಬಸವ ಪ್ರಕಾಶದಲ್ಲಿಯೇ ಪೂಜ್ಯ ಅಪ್ಪಾಜಿಯವರಿಗೆ ಅಮೂಲ್ಯ ರತ್ನವೊಂದು ಚಿನ್ಮೂಲಾದ್ರಿಯ ಚಿನ್ನದ ಗಣಿಯಲ್ಲಿ ದೊರೆಯಿತು. ಬಸವ ಗುರುವಿನ ಕೀರ್ತಿ ಮುಕುಟದಲ್ಲಿ ಬೆರೆತು, ಬಸವ ತತ್ವವನ್ನು ವಿಶ್ವದಾದ್ಯಂತ ಬೆಳಗಿದ ಆ ಅಮೂಲ್ಯ ರತ್ನವೇ ಪೂಜ್ಯ ಮಹಾಜಗದ್ಗುರು ಮಾತಾಜಿಯವರು.
ಪೂಜ್ಯ ಅಪ್ಪಾಜಿಯವರ ತ್ಯಾಗವು ಅತ್ಯಂತ ಶ್ರೇಷ್ಠವಾದುದು. ಅವರ ಜೀವನದುದ್ದಕ್ಕೂ ಹೋರಾಟವೇ. ಬದುಕಿನ ಪ್ರಥಮ ಹಂತದಲ್ಲಿ ಬಡತನದೊಡನೆ, ಎರಡನೇ ಹಂತದಲ್ಲಿ ಅನ್ಯಾಯದೊಡನೆ, ಮೂರನೇ ಹಂತದಲ್ಲಿ ಸಂಪ್ರದಾಯದೊಡನೆ ಹೋರಾಟ. ಅದರಲ್ಲಿಯೇ ಅವರ ತಪಸ್ಸು ಸಾಧನೆ ಸಿದ್ಧಿ ಎಲ್ಲವೂ.

ಅವರು ಪ್ರವಚನ ಆರಂಭಿಸಿದಾಗ ಈ ಸಮಾಜದ ಚಿತ್ರಣವನ್ನು ತೆಗೆದುಕೊಂಡರೆ ಅವರ ದಿಟ್ಟತನ ಧೈರ್ಯ ತ್ಯಾಗಗಳ ಅರಿವು ನಮಗಾಗಲು ಸಾಧ್ಯವಿದೆ. ಅಂದು ಬಸವಣ್ಣ ಎಂದರೆ ಎತ್ತಲ್ಲ ಅವರೊಬ್ಬ ಮಹಾಪುರುಷ ಎಂದರೆ ಜನ ಹೊಡೆಯುವಷ್ಟು ಅಜ್ಞಾನಿಗಳಾಗಿದ್ದರು. ಆದರೆ ಇಂದು ಬಸವಣ್ಣ ಎಂದರೆ ಎತ್ತು ಎಂದು ಹೇಳಿದರೆ ಜನ ಹೊಡೆಯುತ್ತಾರೆ. ನಿಜವಾಗಿಯೂ ಯುಗ ಪರಿವರ್ತಕರು ಪೂಜ್ಯ ಸ್ವಾಮೀಜಿಯವರು. ಆ ಕಾಲದಲ್ಲಿ ಈ ಸಮಾಜದಲ್ಲಿ ಸತ್ಯ ಪ್ರತಿಪಾದನೆ ಮಾಡುವುದೆಂದರೆ ಹುಲಿಯ ಮೀಸೆ ಹಿಡಿದು ಉಯ್ಯಾಲೆಯಾಡಿದಂತೆ, ಹಾವಿನ ಹೆಡೆಯ ಕೊಂಡು ಕೆನ್ನೆಯ ತುರಿಸಿ ಕೊಂಡಂತೆ. ಸತ್ಯವನ್ನು ಪ್ರತಿಪಾದನೆ ಮಾಡಲು ಹೊರಟ ಸಾಕ್ರೆಟಿಸನಿಗೆ ವಿಷಪ್ರಾಶನ, ಗೆಲಿಲಿಯೋಗೆ ಗಲ್ಲು ಶಿಕ್ಷೆ, ಗುರು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ, ಗಾಂಧೀಜಿಯವರಿಗೆ ಗುಂಡಿನೇಟು! ಇದನ್ನೆಲ್ಲಾ ಅರಿತೂ ಕೂಡ ಗುರು ಬಸವಣ್ಣನವರ ತತ್ವಗಳಲ್ಲಡಗಿದ ಸತ್ಯ ಪ್ರತಿಪಾದನೆ ಮಾಡುವ ಅದ್ಭುತ ಕಾರ್ಯಕ್ಕೆ ಕೈಹಾಕಿದ ಧೀಮಂತ ಗುರು ಪೂಜ್ಯ ಲಿಂಗಾನಂದ ಸ್ವಾಮೀಜಿಯವರು.

ಪೂಜ್ಯ ಸ್ವಾಮೀಜಿಯವರು ಪ್ರವಚನ ಪಿತಾಮಹರು, ಬಿಜಾಪುರ ಜಿಲ್ಲೆಯು ಕೇವಲ ಸ್ಥಾವರವಾದ ಒಂದು ಗೋಲಗುಮ್ಮಟಕ್ಕೆ ಕಾಣಿಕೆಯಾಗಿ ಕೊಡದೇ ಜಂಗಮವಾಗಿರುವ ಇನ್ನೂ ಮೂರು ಅಮೂಲ್ಯ ಗುಮ್ಮಟಗಳನ್ನೂ ಜಗತ್ತಿಗೆ ನೀಡಿದೆ. ೧. ಧರ್ಮಗುಮ್ಮಟ ಗುರುಬಸವಣ್ಣನವರು. ೨. ವಚನ ಗುಮ್ಮಟ ಫ.ಗು. ಹಳಕಟ್ಟಿಯವರು. ೩. ಪ್ರವಚನ ಗುಮ್ಮಟ ಪೂಜ್ಯ ಲಿಂಗಾನಂದ ಸ್ವಾಮಿಗಳು. ಗೋಲಗುಮ್ಮಟದಲ್ಲಿ ಒಮ್ಮೆ ಧ್ವನಿಸಿದ ಧ್ವನಿ ಏಳುಬಾರಿ ಪ್ರತಿಧ್ವನಿಸುತ್ತದೆ. ಆದರೆ ಪ್ರವಚನ ಗುಮ್ಮಟದಲ್ಲಿ ಒಮ್ಮೆ ಧ್ವನಿಸಿದ ‘ಬಸವ’ ಎಂಬ ಧ್ವನಿ, ಲಕ್ಷ ಲಕ್ಷ ಬಸವ ಭಕ್ತರ ಹೃದಯದಲ್ಲಿ ಪ್ರತಿಧ್ವನಿಸಿದೆ.

ಪ್ರವಚನ ಎನ್ನುವ ಒಂದು ಹೊಸ ಶೈಲಿಯನ್ನು ಹುಟ್ಟು ಹಾಕಿದವರೇ ಸ್ವಾಮೀಜಿಯವರು. ಅಲ್ಲಿಯವರಿಗೆ ಕೇವಲ ಪುರಾಣ ಕೀರ್ತನೆಗಳು ಮಾತ್ರ ನಡೆಯುತ್ತಿದ್ದವು, ವಚನ ಸಾಹಿತ್ಯದ ಮೇಲೆ ಅದು ತಿಂಗಳುಗಟ್ಟಲೆ ಪ್ರವಚನ ಮಾಡುವುದನ್ನು ರೂಢಿಸಿದ್ದಾರೆ. ಇನ್ನೊಂದು ರೀತಿಯಿಂದ ಹೇಳಬೇಕೆಂದರೆ, ಧರ್ಮಪಿತರು ಅಂದು ಅನುಭವ ಮಂಟಪ ಎಂಬ ಕಣದಲ್ಲಿ ರಾಶಿ ಮಾಡಿಕೊಟ್ಟ ವಚನ ಸಾಹಿತ್ಯ ಕಲ್ಯಾಣ ಕ್ರಾಂತಿಯ ನಂತರ ಇತಿಹಾಸವೆಂಬ ಹಗೆಹದಲ್ಲಿ ಇಡಲ್ಪಟ್ಟಿತ್ತು. ಇಂತಹ ಸಂದರ್ಭದಲ್ಲಿ ಬಹಳ ಕಷ್ಟಪಟ್ಟು ಪರಿಶ್ರಮದಿಂದ ಶರಣ ಫ.ಗು. ಹಳಕಟ್ಟಿಯವರು ಮನೆ ಮನೆಗೆ ಹೋಗಿ ವಚನ ಸಾಹಿತ್ಯದ ತಾಡೋಲೆಗಳನ್ನು ಸಂಗ್ರಹಿಸಿದರು. ಅವುಗಳ ಪ್ರಕಟಣೆಗಾಗಿ ತಮ್ಮ ಮನೆಯನ್ನೇ ಮಾರಿ ಮುದ್ರಣ ಯಂತ್ರ(Printing Press) ಹಾಕಿ ವಚನಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಿದ ತ್ಯಾಗಿ ವಚನ ಪಿತಾಮಹ ಫ.ಗು. ಹಳಕಟ್ಟಿಯವರು.

ಇಂಥ ಪ್ರಕಟಣೆಗೊಂಡ ವಚನ ಸಾಹಿತ್ಯ ಕೇವಲ ಪುಸ್ತಕಗಳಲ್ಲಿ ಉಳಿದರೆ ಸಾಲದು ಅದು ಜನ ಮನಗಳ ಬಾಗಿಲಿಗೆ ಮುಟ್ಟಬೇಕು ಎಂದು ತಿಳಿದು ಪ್ರವಚನದ ಮುಖಾಂತರ ಕರ್ನಾಟಕದಾದ್ಯಂತ ಅಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಬಿತ್ತಿ ಬಸವ ತತ್ವದ ಅಮೋಘ ಬೆಳೆಯನ್ನು ತೆಗೆದ ಆಧ್ಯಾತ್ಮ ಕೃಷಿಕ ಪೂಜ್ಯ ಸ್ವಾಮೀಜಿಯವರು.

ಬಸವಾದಿ ಪ್ರಮಥರ ವಚನ ನಂದನ ವನದೊಳಗೆ ವಿಹರಿಸಿ ವಚನವಾಙ್ಮಯ ರಸವನ್ನೀಂಟಿ ಬಸವ ಭಕ್ತಿಯ ಕೂಹೂ ಕೂಹೂ ರಾಗ ಹಾಡಿ ಅಸಂಖ್ಯಾತರ ಹೃನ್ಮನಗಳನ್ನು ತಣಿಸಿದ ದೇವ ಕೋಗಿಲೆಯಾದರು.

ಅವರ ಕಂಚಿನ ಕಂಠದಿಂದ ಕನ್ನಡ ಸಾಹಿತ್ಯದ ಕಿರೀಟವಾದ ವಚನ ಸಾಹಿತ್ಯದ ನುಡಿಗಳು ಹೊರ ಹೊಮ್ಮುತ್ತಿದ್ದರೆ ಅಲ್ಲಿ ಕನ್ನಡ ಸರಸ್ವತಿ ನಾಟ್ಯವಾಡಿದಂತೆ ಭಾಸವಾಗುತ್ತದೆ. ಆ ಕಂಠವೇ ಒಂದು ಅದ್ಭುತ ಸಿಂಹಗರ್ಜನೆ ಇದ್ದ ಹಾಗೆ. ಎಂಥವರನ್ನೂ ಮಂತ್ರ ಮುಗ್ಧವಾಗಿಸುವ ಆ ಕಂಠವನ್ನು ಕ್ಯಾಸೆಟ್‌ಗಳಲ್ಲಿ ಸೆರೆ ಹಿಡಿದು ಬಹು ದೊಡ್ಡ ಉಪಕಾರವನ್ನು ಪೂಜ್ಯ ಮಾತಾಜಿಯವರು ಮಾಡಿದ್ದಾರೆ.

ತತ್ವ ಪ್ರಸಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಶ್ರೀಗಂಧದಂಥ ತ್ಯಾಗ ಮಾಡಿದ್ದಾರೆ. ಶ್ರೀಗಂಧದ ಮರವು ತನ್ನ ಆಶ್ರಯದಲ್ಲಿ ಇರುವ ಮರಗಳಿಗೂ ಕೂಡ ಸುವಾಸನೆ ಬರುವಂತೆ ಮಾಡುತ್ತದೆ. ಕಡಿದು ತೇಯ್ದರೆ ಗಂಧವನ್ನು ನೀಡುತ್ತದೆ, ಸುಟ್ಟರೆ ಸುವಾಸನೆಯನ್ನು ಬೀರುತ್ತದೆ, ಕೆತ್ತಿದರೆ ಮೂರ್ತಿಯಾಗುತ್ತದೆ.
ಅದೇ ರೀತಿ ಸ್ವಾಮೀಜಿಯವರು ತಮ್ಮ ಆಶ್ರಯಕ್ಕೆ ಬಂದ ಪ್ರತಿಯೊಬ್ಬರಲ್ಲಿಯೂ ಬಸವ ಭಕ್ತಿಯ, ತತ್ವನಿಷ್ಠೆಯ ಪರಿಮಳವನ್ನು ತುಂಬಿದ್ದಾರೆ. ಧರ್ಮ ಪ್ರಸಾರಕ್ಕಾಗಿ ತಮ್ಮನ್ನು ತಾವು ಸವೆಸಿಕೊಂಡಿದ್ದಾರೆ. ಅನೇಕ ಕಷ್ಟಗಳ ಅಗ್ನಿಯಲ್ಲಿ ಬೆಂದು ಬಸವತತ್ವದ ಸುವಾಸನೆಯನ್ನು ಎಲ್ಲೆಲ್ಲಿಯೂ ಬೀರಿದ್ದಾರೆ. ಕೊನೆಗೆ ಬಸವ ಮಹಾಗುರುವೆಂಬ ಶಿಲ್ಪಿಯ ಕೈಗೆ ಸಿಕ್ಕಿ ಆದರ್ಶ ಮೂರ್ತಿಯಾಗಿದ್ದಾರೆ. ಎಂತಹದೇ ಸಂದರ್ಭದಲ್ಲಿ ಎದೆ ಗುಂದಲಿಲ್ಲ ಸತ್ಯವನ್ನು ಹೇಳಲು ಯಾರಿಗೂ ಹೆದರಲಿಲ್ಲ.

ಜಂಗಮತ್ವಕ್ಕೆ ಜೀವ ತಂದು ಕೊಟ್ಟು ಕಾವಿಬಟ್ಟೆಗೆ ಕೀರ್ತಿಯನ್ನು ತಂದಿದ್ದಾರೆ. ಪೂಜ್ಯರ ಸಾಹಿತ್ಯ ರಚನೆಯೂ ಕೂಡ ಅಷ್ಟೇ ಅದ್ಭುತವಾಗಿದೆ. ಇವರು ಬರೆದಿರುವ ಒಂದೊಂದು ಕೃತಿಯೂ ಕೂಡ ಉದ್ಧಾಮ ಕೃತಿಯೇ. ‘ದೇವರು’ ಎನ್ನುವಂಥ ಕೃತಿ ಬಹುಶಃ ಜಗತ್ತಿನ ಇನ್ನಾವುದೇ ಭಾಷೆಯಲ್ಲಿರಲಿಕ್ಕಿಲ್ಲ. ದೇವರ ಸ್ವಯಂಭು ಕಲ್ಪನೆಯನ್ನು ದೇವರ ಸ್ವರೂಪವನ್ನು ಅದರಲ್ಲಿ ಬಿಡಿ ಬಿಡಿಯಾಗಿ ಚಿತ್ರಿಸಿದ್ದಾರೆ.

ಗುರು ಬಸವಣ್ಣನವರ ವಚನ ವಾರಿಧಿಯಲ್ಲಿ ಮಿಂದ ಪೂಜ್ಯ ಅಪ್ಪಾಜಿಯವರ ಶರೀರದಲ್ಲಿ ಬಸವಣ್ಣನವರ ಕಾರಣ ಶರೀರ ವಾಸವಾಗಿದ್ದು ಇಂಥ ಅದ್ಭುತ ಕಾರ್ಯಗಳನ್ನು ಮಾಡಿಸಿದೆಯೇನೊ ಎನಿಸುತ್ತದೆ. ತಮ್ಮ ನುಡಿಯೇ ಬಸವಣ್ಣನ ನುಡಿಯಾಗಿ, ಬಸವಣ್ಣನವರ ನುಡಿಗೆ ತಾವು ತುಟಿಯಾಗಿ, ಬಸವಣ್ಣನವರ ನೋಟಕ್ಕೆ ತಾವು ಕಣ್ಣಾಗಿ, ಬಸವಣ್ಣನವರ ಕಾರ್ಯಕ್ಕೆ ತಾವು ಕಾರಣಕರ್ತರಾಗಿದ್ದರು.

ಪರಿಪೂರ್ಣವಾಗಿ ಧರ್ಮ ಪ್ರಚಾರ ಯಾವ ಯಾವ ಮಾಧ್ಯಮಗಳಿಂದ ಸಾಧ್ಯವೋ
ಆ ಎಲ್ಲಾ ಮಾಧ್ಯಮಗಳನ್ನು ಬಳಸಿಕೊಂಡು ಧರ್ಮ ಪ್ರಚಾರ ಗೈದಿದ್ದಾರೆ. ಪ್ರವಚನಕ್ಕೆ ಜನ ಕರೆದಾಗ ಮಾತ್ರ ಹೋಗದೆ, ತಾವೆ ಸ್ವತಃ ಊರೂರಿಗೆ ಹೋಗಿ ಪ್ರವಚನ ಮಾಡುವುದರ ಮುಖಾಂತರ, ಸಾಹಿತ್ಯ ರಚನೆಯ ಮುಖಾಂತರ, ಧ್ವನಿಸುರಳಿಗಳನ್ನು ರೆಕಾರ್ಡ್ ಮಾಡುವುದರ ಮುಖಾಂತರ, ಎಲ್ಲಕ್ಕೂ ಮಿಗಿಲಾಗಿ ಏನೂ ಅರಿಯದ ಮುಗ್ಧರು ಕೂಡ ಬಸವಣ್ಣನವರ ವ್ಯಕ್ತಿತ್ವವನ್ನು ಅರಿಯಲು, ಅನೇಕ ಕಷ್ಟಗಳನ್ನು ಸಹಿಸಿ ʼಕ್ರಾಂತಿಯೋಗಿ ಬಸವಣ್ಣʼ ಎಂಬ ಚಲನಚಿತ್ರ ಕೂಡ ನಿರ್ಮಿಸಿದ್ದಾರೆ.

ಪೂಜ್ಯ ಅಪ್ಪಾಜಿಯವರು ಜನಮನಗಳಲ್ಲಿ ವಚನ ಸಾಹಿತ್ಯದ ಬೀಜಗಳನ್ನು ನೆಟ್ಟು ಪ್ರವಚನವೆಂಬ ಅಮೋಘ ವರ್ಷಧಾರೆಗೈದು ಬಸವ ತತ್ವದ ಬೆಳೆಯನ್ನು ಬೆಳೆಸಿದ್ದಾರೆ. ಆದರೆ ಇಂದು ಅಂಥ ಮಳೆ ಇನ್ನು ಸಾಧ್ಯವಿಲ್ಲವಲ್ಲ ಎಂದು ದುಃಖವಾಗುತ್ತದೆ.

ಪೂಜ್ಯ ಗುರೂಜಿಯವರ ಇಂಥ ದಿವ್ಯವಾದ ಬದುಕನ್ನು ನೋಡಿದಾಗ.

ವಚನ:
ಲೋಕದಂತೆ ಬಾರರು, ಲೋಕದಂತೆ ಇರರು
ಲೋಕದಂತೆ ಹೋಗರು ನೋಡಾ, ಪುಣ್ಯದಂತೆ ಬಪ್ಪರು
ಜ್ಞಾನದಂತೆ ಇಪ್ಪರು ಮುಕ್ತಿಯಂತೆ ಹೋಹರು ನೋಡಯ್ಯ
ಉರಿಲಿಂಗದೇವಾ ನಿಮ್ಮ ಶರಣರು ಉಪಮಾತೀತರಾಗಿ ಉಪಮಿಸಬಾರದು

ಎನ್ನುವ ಉರಿಲಿಂಗದೇವ ಶರಣರ ವಚನದಂತೆ ತಾವು ಈ ಜಗತ್ತನ್ನು ಬಿಡುವ ಮೊದಲೇ ಎಂದೆಂದೂ ಅಳಿಯದಂಥ ತಮ್ಮ ಹೆಜ್ಜೆಗಳನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ. ಆ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಾವೆಲ್ಲರೂ ಏಕ ಮನಸ್ಸಿನಿಂದ ನಡೆದದ್ದೇ ಆದರೆ ಅವರ ಆ ೪೦ ವರ್ಷಗಳ ವಾಙ್ಮಯ ತಪಸ್ಸು ಸಾರ್ಥಕವಾದಂತಾಗುತ್ತದೆ ಎಂದು ತಿಳಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *