(ಜುಲೈ ೨, ಡಾ. ಫ. ಗು. ಹಳಕಟ್ಟಿಯವರ ೧೪೫ ನೇ ಜನ್ಮದಿನ ನಿಮಿತ್ಯ ಲೇಖನ)
ಗದಗ
ಬಸವಾದಿ ಶಿವಶರಣರ ವಚನಗಳು ಅನುಭಾವದ ನುಡಿಮುತ್ತುಗಳು. ಯಾವುದೇ ಸಾಹಿತ್ಯದಿಂದ, ಧರ್ಮದಿಂದ, ಪ್ರಭಾವದಿಂದ ಬಂದವುಗಳಲ್ಲ, ಎರವಲು ಪಡೆದಿದ್ದಲ್ಲ, ಇವು ಜೀವನಾನುಭವದಿಂದ ಬಂದವುಗಳು.
೧೨ ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃದಲ್ಲಿ ಲಕ್ಷದ ಮೇಲೆ ತೊಂಭತ್ತಾರು ಸಾವಿರ ಶರಣರು ಅಂದು ಕಲ್ಯಾಣದಲ್ಲಿ ಸೇರಿ, ಜಗತ್ತಿನ ಮೊಟ್ಟಮೊದಲ ಪಾರ್ಲಿಮೆಂಟ್ ಎಂದು ಖ್ಯಾತಿ ಪಡೆದ ‘ಅನುಭವ ಮಂಟಪ’ವೆಂಬ ಅರಿವಿನ ಗರಡಿಮನೆಯಲ್ಲಿ ಬಸವಣ್ಣ, ಪ್ರಭುದೇವರು, ಚನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮೇಶ್ವರ, ಮಡಿವಾಳ ಮಾಚಯ್ಯ ಮುಂತಾದ ಶಿವಶರಣರು ಚಿಂತನ-ಮಂಥನ ಮಾಡಿ ಅನುಭಾವದ ವಚನಗಳನ್ನು ರಚಿಸಿ, ಜನ ಬದುಕಲಿ – ಜಗ ಬದುಕಲಿ ಎಂಬ ಮಹದಾಸೆಯಿಂದ ಕಾಯಕ-ದಾಸೋಹ-ಶಿವಯೋಗದ ಮೂಲಕ ಜನಸಾಮಾನ್ಯರು ಶರಣರಾಗಲು ಸಾಧ್ಯವೆಂಬುದನ್ನು ತೋರಿಸಿಕೊಟ್ಟವರು ಬಸವಾದಿ ಶಿವಶರಣರು, ಇವರಿಗೆಲ್ಲ ಗುರುವಾಗಿ-ಲಿಂಗವಾಗಿ-ಜಂಗಮವಾಗಿ ಮಾರ್ಗದರ್ಶನ ಮಾಡಿದವರು. ಲಿಂಗಾಯತ ಧರ್ಮ ಸಂಸ್ಥಾಪಕ, ಇಷ್ಟಲಿಂಗ ಜನಕ, ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು.
ಮೇಲು-ಕೀಳು, ಜಾತಿ-ಮತ-ಪಂಥ-ವರ್ಗ-ವರ್ಣ-ಬೇಧ ರಹಿತ, ಲಿಂಗ ತಾರತಮ್ಯ ಮಾಡದೇ ಎಲ್ಲರೂ ಸಮಾನರು ಎಂಬ ತತ್ವದಡಿಯಲ್ಲಿ ಬಾಳಿ ಬದುಕಿದವರು ಶರಣರು. ೩೬ ವರ್ಷಗಳ ಕಾಲ ಕಲ್ಯಾಣ ಕೈಲಾಸವಾಗಿತ್ತು, ಬಿಜ್ಜಳನ ರಾಜ್ಯದಲ್ಲಿ ಎಲ್ಲರೂ ಸುಖ-ಶಾಂತಿಯಿಂದ, ಪ್ರೀತಿ-ವಿಶ್ವಾಸದಿಂದ ಲಿಂಗಾಯತ ಧರ್ಮದ ತತ್ವಗಳಲ್ಲಿ ನಂಬಿಕೆ ಇಟ್ಟು ಬದುಕಿದ ಪರಿಣಾಮವೆಂದರೆ ಆ ಕಾಲದಲ್ಲಿ ಒಂದೂ ಯುದ್ಧಗಳಾಲಿಲ್ಲ, ಯಾವ ರಾಜರೂ ದಂಡೆತ್ತಿ ಬರಲಿಲ್ಲ, ಏಕೆಂದರೆ ಬಸವಣ್ಣನವರ ಪ್ರೀತಿ, ದಯೆ, ನಡೆ-ನುಡಿಗಳಿಂದ ಪ್ರಭಾವಿತರಾಗಿದ್ದರು. ಆದರೆ ಇದನ್ನೆಲ್ಲ ಸಹಿಸಿದ ಮನಸ್ಸುಗಳು ರಾಜನಿಗೆ ಪಿತೂರಿ ಮಾಡಿ ಕ್ರಾಂತಿಗೆ ಕಾರಣರಾದರು.
ಕಲ್ಯಾಣ ಕ್ರಾಂತಿಯ ನಂತರ ಶರಣರು ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಾ, ವಚನ ಸಾಹಿತ್ಯವನ್ನು ರಕ್ಷಿಸುತ್ತಾ, ಯಾರದೋ ಮನೆಗಳಲ್ಲಿ, ಮಠ-ಮಂದಿರಗಳಲ್ಲಿ, ಗುಡಿ-ಗುಂಡಾರ, ಗುಡ್ಡ-ಬೆಟ್ಟ-ಮರದ ಪೊದೆಗಳಲ್ಲಿ, ಗುಡಿಸಲುಗಳಲ್ಲಿ ವಚನಗಳ ಕಟ್ಟುಗಳನ್ನು ಬಿಟ್ಟು, ಉಳಿದ ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು, ಬೆನ್ನಿಗೆ ಕಟ್ಟಿಕೊಂಡು ನಾಡಿನ ಮೂಲೆ ಮೂಲೆಗಳಲ್ಲಿ ಶರಣರು ಸಂಚರಿಸಿ ಅಮೂಲ್ಯವಾದ ವಚನ ಸಾಹಿತ್ಯವನ್ನು ಬಿಟ್ಟು ಹೋಗಿದ್ದಾರೆ. ಮುಂದೆ ಇಂತಹ ಶರಣ ಸಾಹಿತ್ಯವನ್ನು ಮಹಾಕವಿ ಹರಿಹರ ತನ್ನ ರಗಳೆಗಳಲ್ಲಿ, ರಾಘವಾಂಕ ತನ್ನ ಕಾವ್ಯಗಳಲ್ಲಿ, ಚಾಮರಸ ಕವಿ ತನ್ನ ಕೃತಿಗಳಲ್ಲಿ ಹೀಗೆ ಮುಂತಾದ ಶರಣ ಕವಿಗಳು ಇಲ್ಲಿಯವರೆಗೂ ಬರೆಯುತ್ತಾ ಉಳಿಸುತ್ತಾ ಬಂದಿದ್ದಾರೆ.

ಹೀಗೆ ಬಸವಾದಿ ಶಿವಶರಣರ ವಚನ ಸಾಹಿತ್ಯವೆಂಬ ರಾಶಿ ಸೂರೆಗೊಂಡು ಚೆಲ್ಲಾಪಿಲ್ಲಿಯಾಗಿ ಹೋಗಿತ್ತು. ಇದನ್ನು ಮನಗಂಡ ನೂರೊಂದು ವಿರಕ್ತರು ೧೫ ನೇ ಶತಮಾನದಲ್ಲಿ ಹಂಪೆಯ ಪ್ರೌಢದೇವರಾಯನ ಕಾಲದಲ್ಲಿ ಬಸವಾದಿ ಶರಣರ ವಚನಗಳು ಸಂಕನಲಗೊಂಡು, ಬಹುಪಾಲು ಹಾಗೆಯೇ ಉಳಿದಿತ್ತು. ಮುಂದೆ ೧೬ ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳು ತಮ್ಮ ೭೦೧ ಶಿಷ್ಯರೊಂದಿಗೆ ವಚನ ಸಾಹಿತ್ಯ ಪ್ರಸಾರ ಮಾಡುತ್ತಾ, ವಚನಗಳ ಅಧ್ಯಯನದಿಂದ ತಾವೇ ಸ್ವತಃ ವಚನಗಳನ್ನು ರಚಿಸುತ್ತಾ, ಸಂರಕ್ಷಿಸುತ್ತಾ ಸಾಗಿಬಂದರು. ಮುಂದೆ ಅನೇಕ ಕವಿಗಳು ತಮ್ಮ ಕಾವ್ಯಗಳಲ್ಲಿ ಶರಣರ ಚರಿತ್ರೆ, ವಚನಗಳ ಮಹತ್ವ ದಾಖಲಿಸುತ್ತಾ ಲಿಂಗಾಯತ ಧರ್ಮದ ತತ್ವಗಳನ್ನು ಪ್ರಸಾರಗೊಳಿಸಿದರು.
೨೦ ನೇ ಶತಮಾನ ಬಸವಾದಿ ಶಿವಶರಣರ ವಚನ ಸಾಹಿತ್ಯ ಸಂಗ್ರಹ, ಸಂಪಾದನೆ, ಸಂಕಲನ, ಮುದ್ರಣಗೊಂಡು ಜನಸಾಮಾನ್ಯರಿಗೆ ದೊರೆತ ಶತಮಾನ. ಈ ಶತಮಾನದ ಕಾರಣಿಕ ಪುರುಷ ವಚನ ಸಂಶೋಧನೆಯ ಪಿತಾಮಹ ಶರಣ ಡಾ. ಫ. ಗು. ಹಳಕಟ್ಟಿಯವರ ಪರಿಶ್ರಮದಿಂದ ವಚನ ಸಾಹಿತ್ಯದ ಸಂರಕ್ಷಣೆ ಸಾಧ್ಯವಾಯಿತು.
ಇವರು ಧಾರವಾಡದಲ್ಲಿ ದಿನಾಂಕ ೦೨-೦೭-೧೮೮೦ ರಂದು ತಂದೆ ಗುರುಬಸಪ್ಪ ತಾಯಿ ದಾನಮ್ಮ ಉದರದಲ್ಲಿ ಫಕ್ಕೀರಪ್ಪನವರ ಜನನ. ಹುಟ್ಟಿದ ಊರಿನಲ್ಲಿಯೇ ಪ್ರಾಥಮಿಕ-ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮುಗಿಸಿದ ಫಕ್ಕೀರಪ್ಪನವರು ಮುಂದೆ ಉನ್ನತ ಶಿಕ್ಷಣವನ್ನು ಮುಂಬಯಿನ ಸೇಂಟ್ ಝೇವಿಯರ ಕಾಲೇಜಿನಲ್ಲಿ ಬಿ.ಎ., ಎಲ್.ಎಲ್.ಬಿ. ಪದವಿಯನ್ನು ಪಡೆದು, ಬೆಳಗಾವಿಯಲ್ಲಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿ, ಮುಂದೆ ಬಿಜಾಪುರಕ್ಕೆ ಪತ್ನಿ ಭಾಗೀರಥಿಯೊಂದಿಗೆ ಆಗಮಿಸಿ ವಕೀಲಿ ವೃತ್ತಿಯನ್ನು ಮಾಡತೊಡಗಿದರು.
ಬಸವಾದಿ ಶಿವಶರಣರ ವಚನ ಸಾಹಿತ್ಯಕ್ಕೆ ಪ್ರಭಾವಿತರಾದ ಹಳಕಟ್ಟಿಯವರು. ಕಲ್ಯಾಣ ಕ್ರಾಂತಿಯ ನಂತರ ಹರಿದು ಹಂಚಿಹೋಗಿದ್ದ ಬಸವಾದಿ ಶಿವಶರಣರ ವಚನ ಸಾಹಿತ್ಯದ ತಾಡೋಲೆ ಹಸ್ತಪ್ರತಿ ಕಟ್ಟುಗಳು ಮಠದ ಗದ್ದುಗೆಗಳ ಮೇಲೆ ಮತ್ತು ಮನೆಗಳ ಜಗಲಿಯ ಮೇಲೆ ಪೂಜಿಸಲ್ಪಡುತ್ತಿರುವ ವಚನಗಳ ಕಟ್ಟುಗಳು ಎಷ್ಟೋ ಹಾಳಾಗಿ, ಗೆದ್ದಲು ಹತ್ತಿ ಅಟ್ಟ-ನಾಗೊಂದಿಗಳಲ್ಲಿ ನಾಶವಾಗುತ್ತಿದ್ದವು.
ಇಂತಹವುಗಳಲ್ಲಿಯ ಒಂದು ಕಟ್ಟು ಶರಣ ಶಿವಲಿಂಗಪ್ಪ ಮಂಚಾಲೆಯವರ ಮನೆಯಲ್ಲಿ “ಪ್ರಭುದೇವರ ವಚನಗಳ” ತಾಳೆಗರಿಗಳನ್ನು ಹಳಕಟ್ಟಿಯವರು ನೋಡಿ ಪ್ರಭಾವಿತರಾದರು. ಬಸವಾದಿ ಶರಣರ ವಚನ ಸಾಹಿತ್ಯ ಅಧ್ಯಯನ ಸಂಗ್ರಹ, ಶರಣರ ವಚನಗಳ ಮಹತ್ವ ತಿಳಿದು, ಇದನ್ನು ಜನಸಾಮಾನ್ಯರಿಗೆ ಮುಟ್ಟಿಸಲು ತಮ್ಮ ವಕೀಲಿ ವೃತ್ತಿಯ ಜೊತೆಗೆ ವಚನಗಳ ಸಂಗ್ರಹ ಸಂಪಾದನೆ-ಸಂಕಲನಗೊಳಿಸಿ ಪರಿಷ್ಕರಿಸಿ, ಮುದ್ರಣ ಮಾಡಲು “ಹಿತಚಿಂಕ” ಎಂಬ ಮುದ್ರಣಾಲಯವನ್ನು ೧೯೨೫ ರಲ್ಲಿ ಪ್ರಾರಂಭಿಸಿದರು. ಇದರ ಮೂಲಕ “ಶಿವಾನುಭವ” ಪತ್ರಿಕೆಯನ್ನು ತೆಗೆದು ಜನಸಾಮಾನ್ಯರಿಗೆ ಓದಲು ತಲುಪಿಸಿದರು. ೧೯೨೭ ರಲ್ಲಿ “ನವಕರ್ನಾಟಕ” ವಾರಪತ್ರಿಕೆ ಮೂಲಕ ಸಾಮಾಜಿಕ, ರಾಜಕೀಯ, ಔದ್ಯೋಗಿಕ, ಶೈಕ್ಷಣಿಕ ವಿಷಯಗಳನ್ನು ಪ್ರಕಟಿಸುತ್ತಿದ್ದರು.

ಶರಣ ಫ. ಗು. ಹಳಕಟ್ಟಿಯವರು ಬಸವಾದಿ ಶರಣರ ರಾಶಿ ರಾಶಿ ವಚನಗಳನ್ನು ಸಂಗ್ರಹಿಸಿ ಮುದ್ರಿಸತೊಡಗಿದರು. ಇವರಕ್ಕಿಂತ ಮುಂಚೆ ಕೇವಲ ೫೦ ವಚನಕಾರರು ಹಾಗೂ ಕೆಲವೇ ವಚನಗಳು ಬೆಳಕು ಕಂಡಿದ್ದವು. ಇವರ ಶ್ರಮದ ಹುಡುಕಾಟದಿಂದ ೨೫೦ ವಚನಕಾರರು ಮತ್ತು ಅವರ ವಚನಗಳು, ವಚನಾಂಕಿತಗಳು ಬೆಳಕು ಕಂಡವು.
ಹಳಕಟ್ಟಿಯವರು ಕುಟುಂಬದಲ್ಲಿ ಬಡತನ ಮತ್ತು ಅನಾರೋಗ್ಯ ಪೀಡಿತರಾದರೂ ವಚನಗಳ ಮುದ್ರಣ ನಿಲ್ಲಲಿಲ್ಲ. ವಚನಶಾಸ್ತ್ರಸಾರ ಭಾಗ-೧ ಹಾಗೂ ಶಿವಶರಣರ ಚರಿತ್ರೆಗಳು, ಶಿವಾನುಭವ ಶಬ್ದಕೋಶ, ಶರಣರ ವಚನ ಸಂಪಾದನೆ, ಶಾಸನ ಸಂಪಾದನೆ, ರಗಳೆ ಸಂಪಾದನೆ, ಕಾವ್ಯ ಸಂಪಾದನೆ, ಗದ್ಯ ಸಂಪಾದನೆ, ಪತ್ರಿಕೆ ಸಂಪಾದನೆ, ಲೇಖನಗಳು, ಲಿಂಗಾಯತ ಧರ್ಮದ ತತ್ವಗಳು, ಐತಿಹಾಸಿಕ ಸಂಗತಿಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳು, ಸಂಘಟನೆ ಮುಂತಾದವುಗಳನ್ನು ಮುದ್ರಣ ಮಾಡಿ ಜನಸಾಮಾನ್ಯರಿಗೆ ಓದಲು ಮುಟ್ಟಿಸಿ, ಬಸವಾದಿ ಶಿವಶರಣರ ವಚನ ಸಾಹಿತ್ಯದ ಪ್ರಸಾರ ಮತ್ತು ಸಂರಕ್ಷಣೆ ಮಾಡಿದ ಕೀರ್ತಿ ಡಾ. ಫ. ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ.
ಇಂತಹ ಕಾರಣಿಕ ಪುರುಷನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಂಥಹ ಮಹಾತ್ಮನಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ದೊರೆತಿವೆ. ಡಾ. ಫ. ಗು. ಹಳಕಟ್ಟಿಯವರು ದಿನಾಂಕ ೨೯-೦೬-೧೯೬೪ ರಲ್ಲಿ ಧರ್ಮಗುರು ಬಸವಣ್ಣನವರ ಮಹಾಬಯಲಿನಲ್ಲಿ ಬಯಲಾದರು. ಕರ್ನಾಟಕ ಸರಕಾರ ಇವರ ಜನ್ಮ ದಿನವನ್ನು “ವಚನ ಸಾಹಿತ್ಯ ಸಂರಕ್ಷಣೆ ದಿನ” ವನ್ನಾಗಿ ಆಚರಿಸಲು ಆದೇಶಿಸಿರುವುದು ಕನ್ನಡಿಗರಿಗೆ ಹಾಗೂ ಬಸವಾಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ. ಕರ್ನಾಟಕ ಸರಕಾರಕ್ಕೆ ಅನಂತ ಧನ್ಯವಾದಗಳು. ದಿ. ೨-೭-೨೦೨೫ ರಂದು ನಡೆಯಲಿರುವ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ನಾವು ನೀವೆಲ್ಲರೂ ಪಾಲ್ಗೊಳ್ಳೋಣ. ಶರಣು ಶರಣಾರ್ಥಿಗಳು.