ವೇದವನೋದಿ ವ್ಯಾಧಿ ಪರಿಹಾರವಾಗದು: ಹಂಪ ತಂದೆಗಳ ವಚನ ನಿರ್ವಚನ

ಗುಳೇದಗುಡ್ಡ

ಬಸವಕೇಂದ್ರದಿಂದ ಹಮ್ಮಿಕೊಂಡ ವಾರದ ಮನೆಯಲ್ಲಿ ಮಹಾಮನೆ ಶನಿವಾರ ಶರಣ ಪ್ರಶಾಂತ ಯಳಮೇಲಿ ಅವರ ಮನೆಯಲ್ಲಿ ಜರುಗಿತು.

ಅಂದು ಆಯ್ದುಕೊಂಡಿದ್ದು ಹೇಮಗಲ್ಲ ಹಂಪ ತಂದೆಗಳ ವಚನ –

ವೇದವನೋದಿ ವ್ಯಾಧಿ ಪರಿಹಾರವಾಗದು,
ಶಾಸ್ತ್ರವನೋದಿ ಸಂಕಲ್ಪ ಹಿಂಗದು,
ಪುರಾಣವನೋದಿ ಪೂರ್ವಕರ್ಮವ ಕಳೆಯಲರಿಯರು,
ಆಗಮವನೋದಿ ಅಂಗದೊಳು ಹೊರಗಿದ್ದ ಅಷ್ಟಮದವ ಕಳೆಯಲರಿಯರು,
ಇಂತು ವೇದಾಗಮಪುರಾಣವೆಂಬನಾದಿಯ ಮಾತ ಮುಂದಿಟ್ಟುಕೊಂಡು
ನಾ ಬಲ್ಲೆನೆಂದು ಗರ್ವ ಅಹಂಕಾರಿಕೆಯೆಂಬ ಅಜ್ಞಾನಕ್ಕೆ
ಗುರಿಯಾಗಿ ಕೆಟ್ಟರು ಅರುಹಿರಿಯರೆಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.

ಪ್ರತಿ ಮಹಾಮನೆಯಲ್ಲಿ ಆರಂಭಿಕವಾಗಿ ವಚನ ನಿರ್ವಚನ ಪ್ರಾರಂಭಿಸುತ್ತಿರುವ ಪ್ರೊ. ಶ್ರೀಕಾಂತ ಗಡೇದ ಅವರು ವೈದಿಕರು ಹುಟ್ಟು ಹಾಕಿದ ಜಾತಿ ವ್ಯವಸ್ಥೆಯನ್ನು ಕೊನೆಗೊಳಿಸಲು ಬುದ್ಧ, ಬಸವ, ಅಂಬೇಡ್ಕರ ಅವರ ಕೊಡುಗೆ ಅಪಾರ ಮತ್ತು ಆ ನಿಟ್ಟಿನಲ್ಲಿ ಹೋರಾಡಿ ಜನರಿಗೆ ಅರಿವು ನೀಡಿದವರು.

ವ್ಯಾದಿಗಳು, ಮದಗಳು ಕೇವಲ ಓದಿನ, ಮಾತಿನ ಮೂಲಕ ಕಳೆದುಕೊಳ್ಳಲಾಗದು. ಅವುಗಳ ಮೂಲವನ್ನು ಅರಿತು ನಡೆಯಬೇಕು. ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಶರಣರು ಪ್ರಮಾಣೀಕರಿಸಲಿಲ್ಲ. ನಾವು ಇವುಗಳ ಸತ್ಯದ ಅರಿವಿಲ್ಲದೆ ಬೆನ್ನು ಹತ್ತಿ, ದುಡಿಮೆಯ ಬಹುಪಾಲು ಫಲವನ್ನು ವ್ಯರ್ಥ ಮಾಡಿಕೊಳ್ಳುತ್ತೇವೆ. ನಾವು ನಂಬಿಕೆಯನ್ನು ಇಟ್ಟ ದೈವಕ್ಕೆ ಪದಾರ್ಥಗಳನ್ನು ಕೊಟ್ಟರೆ ಪರಿಹಾರ ಸಿಗದು. ಆ ನಿಟ್ಟಿನಲ್ಲಿ ಕಾರ್ಯ-ಕಾಯಕ ಕಾಯದಿಂದ ಮಾಡಿದರೆ ಸದಾ ಕಾಲ ಸುಖದಲ್ಲಿ ಆನಂದದಲ್ಲಿ ಇರಲು ಸಾಧ್ಯ ಎಂದು ಹೇಳಿದರು.

ಅನಂತರದಲ್ಲಿ ಅನುಭಾವವನ್ನು ಪ್ರಾರಂಭಿಸಿದ ಪ್ರೊ. ಸುರೇಶ ರಾಜನಾಳ ಅವರು ವೇದ, ಶಾಸ್ತ್ರ, ಪುರಾಣಗಳನ್ನು ಬರೆದರು ಹೊರತು ಅವುಗಳನ್ನು ಮನದಟ್ಟಾಗುವಂತೆ ಪ್ರಾಯೋಗಿಕವಾಗಿ ತೋರಿಸಲಿಲ್ಲ. ಜನರಿಗೆ ಮನಗಾಣಿಸಲಿಲ್ಲ ಎಂಬ ಸತ್ಯದ ಅರಿವನ್ನು ಶರಣರು ಮನಗಂಡಿದ್ದರು. ಓದಿನ/ಅರಿವಿನ ನಂತರ ಪರಿವರ್ತನೆ ಅಂದರೆ ನಮ್ಮನ್ನು ನಾವು ತಿದ್ದಿಕೊಳ್ಳಬೇಕು ಎಂಬುದು ಶರಣರ ಆಶಯವಾಗಿದೆ. ದೇವರ ಪ್ರತಿರೂಪವಾಗಿರುವ ನಾವು ನಿರಾಕಾರವನ್ನು ತಾಳಬೇಕು ಎಂಬುದು ಶರಣರ ಆಶಯವಾಗಿದೆ.

ಶರಣರ ವಿಚಾರಗಳನ್ನು ನಮಗೆಲ್ಲ ಅರಿವು ಪಡಿಸುವಲ್ಲಿ ಪೂಜ್ಯ ಲಿಂಗಾನಂದ ಸ್ವಾಮಿಗಳು, ಫ. ಗು. ಹಳಕಟ್ಟಿಯವರು, ಬಸವ ಸಂಘಟನೆಗಳು, ಅನೇಕ ಅನುಭಾವಿಗಳನ್ನು, ಸಾಧಕರನ್ನು ನಮಗೆಲ್ಲ ಸ್ಮರಣೆ ಮಾಡಿಕೊಟ್ಟರು. ಅವರೆಲ್ಲರ ಪರಿಶ್ರಮ, ತ್ಯಾಗದಿಂದ ನಾವೆಲ್ಲರೂ ಈ ಚಿಂತನೆಯಲ್ಲಿ ತೊಡಗಲು ಮತ್ತು ಈ ಶರಣರ ಪಥದಲ್ಲಿ ನಡೆಯುವಂತಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಅನುಭಾವಿ ಶರಣರು ಕನ್ನಡ ಪಂಡಿತರಾಗಿರುವ ಪ್ರೊ. ಮಹಾದೇವಯ್ಯ ನೀಲಕಂಠಮಠ ಅವರು ಸಮಾರೋಪವಾಗಿ ಮಾತನಾಡುತ್ತ, ವಚನ ನಿರ್ವಚನವನ್ನು ಅತ್ಯಂತ ಮೆಲುವಾಗಿ ಅದರ ಮೂಲ ಚಿಂತನೆಯನ್ನು ತಿಳಿಸಲು ಪ್ರಾರಂಭಿಸಿದರು. ಈವರೆಗಿನ ಅನುಭಾವಿಗಳ ಹೇಳಿಕೆಗಳನ್ನು ಸರಿಪಡಿಸುತ್ತ, ಹೇಮಗಲ್ಲ ಹಂಪ ಅವರ 17ನೇ ಶತಮಾನದಲ್ಲಿ ಬದುಕಿದವರು. ಅವರ 300 ವಚನಗಳು, 282 ಸ್ವರವಚನಗಳು ಮತ್ತು 1 ರಗಳೆಗಳನ್ನು ಕಾಣಬಹುದು.

ಕೇವಲ ವೇದ, ಪುರಾಣ, ಶಾಸ್ತ್ರಾಗಮಗಳನ್ನು ಓದಿದರೆ ಪರಿಹಾರ ಸಿಗದು. ಅವುಗಳು ಏನನ್ನು ಹೇಳುತ್ತವೆ ಆ ನಿಟ್ಟಿನಲ್ಲಿ ನಮ್ಮ ಬದುಕನ್ನು ಸಾಗಿಸಿದರೆ ಗರ್ವ, ಅಹಂತೆ, ಅಜ್ಞಾನಗಳನ್ನು ಕಳೆದುಕೊಳ್ಳಬಹುದು. ಸಂಕಲ್ಪಗಳನ್ನು ಈಡೇರಿಸಿಕೊಳ್ಳಬಹುದು. ತಮ್ಮ ಅನುಭವದಲ್ಲಿ ಕರ್ಮಗಳ ಬಗ್ಗೆ ಸವಿಸ್ತಾರವಾಗಿ ಅರಿವನ್ನು ಮೂಡಿಸಿದರು. ವೇದಾಗಮಗಳ ಒಳ್ಳೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಅನುಭವ ಮಾಡಿಕೊಳ್ಳಬೇಕು. ಆದರೆ ಜನರು, ಪಂಡಿತರು ವೇದಾಗಮಗಳಲ್ಲಿ ಹೇಳಿದ್ದನ್ನು ಸರಿಯಾಗಿ ಅರ್ಥೈಸಿಕೊಳ್ಳಲಾರದೆ ತಪ್ಪಾಗಿ ಆಚರಣೆ ಮಾಡಿದ್ದನ್ನು ಶರಣರು ಪ್ರಶ್ನಿಸುತ್ತ ಖಂಡಿಸಿದರು ಎಂದು ಪ್ರೊ. ನೀಲಕಂಠಮಠ ಅವರು ತಿಳಿಸಿದರು.

ಪ್ರಾರಂಭದಲ್ಲಿ ಶರಣೆ ಜಯಶ್ರೀ ಬ. ಬರಗುಂಡಿ ಹಾಗೂ ಸಂಗಡಿಗರಿಂದ ಸಾಮೂಹಿಕ ಶರಣರ ನೆನಹು ನಡೆಯಿತು. ಅನುಭಾವದ ನಂತರ ಶರಣೆಯರಿಂದ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು. ಈ ಮಹಾಮನೆಯಲ್ಲಿ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಬಸವಕೇಂದ್ರದ ಉಪಾಧ್ಯಕ್ಷರಾದ ಎಚ್. ಎಸ್. ಹುಳಿಪಲ್ಲೇದ, ರಾಚಣ್ಣ ಕೆರೂರ, ಚಂದ್ರಶೇಖರ ತೆಗ್ಗಿ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಸುರೇಶ ರಾಜನಾಳ, ಕಂಬಾಳಿಮಠ ಸರ್, ದಾಕ್ಷಾಯಣಿ ತೆಗ್ಗಿ, ಕವಿತಾ ಬರಗುಂಡಿ, ಸುರೇಖಾ ಗೆದ್ದಲಮರಿ, ವಚನಾ ಶೇಖಾ, ಶ್ರೀದೇವಿ ಶೇಖಾ, ವಿಶಾಲಕ್ಷಿ ಗಾಳಿ ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *