‘ಸತ್ಯದ ಅರಿವಿನಿಂದ ಜ್ಞಾನದ ಪರಮಾನಂದ ಸಾಧಿಸಿದ ಹಳಕಟ್ಟಿ’

ಬಸವ ಮೀಡಿಯಾ
ಬಸವ ಮೀಡಿಯಾ

ಶಿವಮೊಗ್ಗ

ಕನ್ನಡ ಸಾಹಿತ್ಯ ಪರಂಪರೆಗೆ ದೊಡ್ಡ ಕೊಡುಗೆಯಾದ ವಚನಗಳನ್ನು ಸಂರಕ್ಷಿಸುವ ಜೊತೆಗೆ ಕನ್ನಡ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಡಾ.ಫ.ಗು. ಹಳಕಟ್ಟಿಯವರ ಮೌಲ್ಯಗಳನ್ನು ನಾವು ಅಳವಡಿಸಿಕೊಂಡಲ್ಲಿ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಶಿವಮೊಗ್ಗ ಬಸವಕೇಂದ್ರ ಹಾಗೂ ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠದ ಡಾ.ಶ್ರೀ ಬಸವ ಮರಳಸಿದ್ದ ಸ್ವಾಮಿಗಳು ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಬುಧವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ವಚನ ಸಂರಕ್ಷಣೆ ಮೂಲಕ ಕನ್ನಡದ ಅಸ್ಮಿತೆ ಕಾಪಾಡಿರುವ ಹಳಕಟ್ಟಿಯವರು ಅತ್ಯಂತ ಮೌಲಿಕವಾದ ಜೀವನ ನಡೆಸಿದ್ದಾರೆ. ಮಹಾಕಾವ್ಯಗಳು, ರಗಳೆ ಚಂಪೂ ಕಾವ್ಯ, ಇತರೆ ವಿವಿಧ ಪ್ರಾಕಾರದ ಕಾವ್ಯಗಳಿಗೆ ಸೀಮಿತವಾಗಿದ್ದ ಸಮಯದಲ್ಲಿ ಸಾಮಾನ್ಯ ಜನತೆಗೆ ಅರ್ಥವಾಗುವಂತೆ ರಚಿಸಲಾದ ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ತಿರುವನ್ನು ನೀಡಿತು. ಇಂತಹ ವಚನ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸವನ್ನು ಮಾಡುವಲ್ಲಿ ನಾಲ್ಕನೇ ಕಾಲಘಟ್ಟಕ್ಕೆ ಸೇರಿದ ಫ. ಗು. ಹಳಕಟ್ಟಿಯವರ ಪಾತ್ರ ಮತ್ತು ಸಾಧನೆ ಅಸಾಧಾರಣವಾಗಿದೆ.

ವಚನ ಸಾಹಿತ್ಯ ಸಂಗ್ರಹ, ಸಂಪಾದನೆ ಮತ್ತು ಮುದ್ರಣಗೊಳಿಸುವುದೊಂದೇ ಅವರ ಜೀವನದ ಮುಖ್ಯ ಧೈಯವಾಗಿತ್ತು. ಅವರಲ್ಲಿ ಆಸೆ, ಭಯ ಇರಲಿಲ್ಲ, ನಿರಪೇಕ್ಷ ಭಾವದ, ಭಾವಗಳಲ್ಲಿ ದಿಗಂಬರತ್ವ ಅಳವಡಿಸಿಕೊಂಡಿದ್ದ ಇವರು ಸತ್ಯದ ಅರಿವು ಮೂಡಿಸಿಕೊಂಡು ಜ್ಞಾನದ ಪರಮಾನಂದದಲ್ಲಿ ಇದ್ದರು. ನಿಸ್ವಾರ್ಥ ಸೇವೆಗೆ ಇನ್ನೊಂದು ಹೆಸರೇ ಫ.ಗು. ಹಳಕಟ್ಟಿಯಾಗಿದ್ದು ಸರಳವಾದ ವ್ಯಕ್ತಿತ್ವ ಹೊಂದಿದ್ದರು. ಕಠಿಣಾತಿಕಠಿಣ ಸಂದರ್ಭ ಬಂದರೂ ಸ್ವಾರ್ಥಿಗಳಾಗಲಿಲ್ಲ. ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳದೇ ಸ್ಥಿತಪ್ರಜ್ಞರಾಗಿದ್ದರು. ಮಗನ ಸಾವಿನ ಸಂದರ್ಭದಲ್ಲೂ ‘ಶಿವ ಕೊಟ್ಟು ತೆಗೆದುಕೊಂಡ’ ಎಂಬ ಭಾವದಲ್ಲಿ ತಮ್ಮ ನೋವು ನುಂಗಿ ವಚನ ಸಂರಕ್ಷಣಾ ಕಾರ್ಯವನ್ನು ಮುಂದುವರೆಸಿದರು. ಸಂತನಿಗೂ ನೀಡದ ಗೌರವವನ್ನು ಜನ ಸಮೂಹ ಅವರಿಗೆ ನೀಡುತ್ತಿತ್ತು ಎಂದು ನೆನೆದರು.

ವಚನ ಸಾಹಿತ್ಯ ಸಂಗ್ರಹ ಕಾರ್ಯ ಸುಲಭದ್ದಾಗಿರಲಿಲ್ಲ. ತಾಳೆಗರಿಯಲ್ಲಿನ ವಚನಗಳನ್ನು ಮನೆ ಮನೆಗಳಿಗೆ ತೆರಳಿ ಸಂಗ್ರಹಿಸುತ್ತಿದ್ದರು. ಕಾಲಾನುಕ್ರಮದಲ್ಲಿ ಜನರು ಇವನ್ನು ದೇವರ ಕೋಣೆಯಲ್ಲಿರಿಸಿ ಪೂಜೆ ಮಾಡಲು ಶುರು ಮಾಡಿದ್ದರು. ಮೌಡ್ಯತೆಯೆಡೆಗೆ ತಿರುಗಿ ಜ್ಞಾನಭಂಡಾರ ವಿನಾಶದ ಕಡೆ ಹೋಗುವ ಸಂದರ್ಭದಲ್ಲಿ ಚದುರಿ ಹೋಗಿದ್ದ ವಚನಗಳನ್ನು ರಕ್ಷಣೆ ಮಾಡಲು ಜೀವನವನ್ನೇ ಮುಡಿಪಾಗಿಟ್ಟರು.

ಹಿಂದೆ ಪ್ರಿಂಟಿಂಗ್ ಪ್ರೆಸ್ ವ್ಯವಸ್ಥೆ ತೀರಾ ವಿರಳವಾಗಿದ್ದು, ಮಂಗಳೂರಿನಲ್ಲಿದ್ದ ಬಾಸೆಲ್ ಮಿಷನ್‌ನವರು ವಚನಗಳನ್ನು ಮುದ್ರಿಸದೇ ಇದ್ದಾಗ ತಮ್ಮ ಮನೆಯನ್ನು ಮಾರಾಟ ಮಾಡಿ ‘ಹಿತ ಚಿಂತಕ’ ಮುದ್ರಣಾಲಯ ಸ್ಥಾಪಿಸಿ ಸಂಪುಟಗಳನ್ನು ಮುದ್ರಿಸುತ್ತಾರೆ.

ಸಂಗ್ರಹ, ಮುದ್ರಣಕ್ಕೂ ಮುನ್ನ ಕೇವಲ 50 ರಿಂದ 60 ವಚನಗಳು ಮಾತ್ರ ಲಭ್ಯವಿದ್ದು, ವಚನ ಶಾಸ್ತ್ರಸಾರ ಸಂಪುಟಗಳಲ್ಲಿ 10 ಸಾವಿರಕ್ಕೂ ಹೆಚ್ಚು ವಚನಗಳನ್ನು ಮುದ್ರಿಸಿದರು. ಹಿಂದೆ ಹಲವಾರು ವಿರಕ್ತರು ಮಾಡಿದ ಕೆಲಸವನ್ನು ಇವರೊಬ್ಬರೇ ಮಾಡುತ್ತಾರೆ. ಸಮುದ್ರಕ್ಕಿರುವ ಶಕ್ತಿ ಅವರೊಬ್ಬರಲ್ಲಿತ್ತು.

ಶಿವಾನುಭವ ಪತ್ರಿಕೆ ಆರಂಭಿಸುತ್ತಾರೆ. ಈ ಪತ್ರಿಕೆ ಬಹಳ ದೊಡ್ಡ ವಿದ್ವಾಂಸರಿಗೆ ಸಂಶೋಧನೆಗೆ ವೇದಿಕೆ ಕಲ್ಪಿಸಿಕೊಟ್ಟಿತು. ಕನ್ನಡಿಗರನ್ನು ಸಂಘಟಿಸಲು, ಕರ್ನಾಟಕ ಏಕೀಕರಣಕ್ಕಾಗಿ ನವ ಕರ್ನಾಟಕ ವಾರಪತ್ರಿಕೆ ಶುರು ಮಾಡುತ್ತಾರೆ. ನಾಡು ಕಟ್ಟುವ ಮತ್ತು ಕನ್ನಡ ಭಾಷಾ ಸಂಸ್ಕೃತಿ ಉಳಿಸುವ ಎರಡೂ ಕೆಲಸಗಳನ್ನು ಮಾಡುತ್ತಾರೆ.

ಪ್ರತಿಭಾವಂತ ವಕೀಲರಾಗಿದ್ದ ಹಳಕಟ್ಟಿಯವರು ದೂರದೃಷ್ಟಿವುಳ್ಳವರಾಗಿದ್ದರು. ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಸಹಕಾರ, ನೇಕಾರಿಕೆ, ಹೀಗೆ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟುತ್ತಾರೆ. ಬಿಜಾಪುರ ನಗರ ಸಭೆ ಅಧ್ಯಕ್ಷರಾಗಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುತ್ತಾರೆ. ಮರಾಠಿ, ಉರ್ದುಮಯವಾದ ಭಾಗದಲ್ಲಿ ಕನ್ನಡ ಶಾಲೆಗಳನ್ನು ತೆರೆಯುತ್ತಾರೆ. ಹತ್ತು ಹಲವು ಸಹಕಾರ ಸಂಘಗಳ ಸ್ಥಾಪನೆ ಮಾಡಿದರು. ಅವರ ಸೇವೆಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತದೆ. ರಾವ್ ಬಹದ್ದೂರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಲ್ಲುತ್ತವೆ. ಬಿಎಲ್‌ಡಿಇಎ ಸಂಸ್ಥೆ ಇವರ ಅಧ್ಯಯನ ಪೀಠ, ಸಂಗ್ರಹಾಲಯ, ಮತ್ತು ಇವರ ಸಮಗ್ರ ಸಾಹಿತ್ಯ ಪ್ರಕಟಿಸಿದೆ. ಈ ಹಿಂದೆ ಸರ್ಕಾರ 22 ಸಾವಿರ ವಚನಗಳನ್ನು 15 ಸಂಪುಟಗಳಲ್ಲಿ ಮುದ್ರಿಸಿತ್ತು. ನಂತರ ಕೇವಲ 2 ಸಂಪುಟಗಳಲ್ಲಿ ಮುದ್ರಿಸಿ ಕಡಿಮೆ ಬೆಲೆಯಲ್ಲಿ ನೀಡಿದೆ. ಅಪರೂಪದ ಸಾಹಿತ್ಯವಾದ ವಚನಗಳನ್ನು ನಾವೆಲ್ಲ ಓದಿ, ಅಳವಡಿಸಿಕೊಂಡು ಉಳಿಸಿಕೊಂಡು ಹೋಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್. ರವಿಕುಮಾರ ಮಾತನಾಡಿ, ಡಾ.ಫ.ಗು. ಹಳಕಟ್ಟಿಯವರು ಕಷ್ಟಪಟ್ಟು ಸಂಗ್ರಹಿಸಿದ್ದರಿಂದ ಇಷ್ಟೊಂದು ವಚನಗಳು ನಮಗೆ ಓದಲು ಲಭ್ಯವಿದೆ. ಇಂತಹ ಮಹಾನ್ ಸಾಧನೆ ಮಾಡಿದ ಮಹನೀಯರ ಜನ್ಮ ದಿನಾಚರಣೆಯನ್ನು ನಾವೆಲ್ಲ ಅರ್ಥಪೂರ್ಣವಾಗಿ ಆಚರಿಸಿ ಅವರ ಹಾದಿಯಲ್ಲಿ ನಡೆಯೋಣವೆಂದು ಕರೆ ನೀಡಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ಮಾತನಾಡಿ, ವಚನ ಸಾಹಿತ್ಯದ ಸಂರಕ್ಷಣೆ ಅತ್ಯಂತ ಮಹತ್ವವಾದ ಕೆಲಸ. ಫ.ಗು. ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣಾ ಕಾರ್ಯ ಸೇರಿದಂತೆ ಅವರ ಹಲವಾರು ಜನಪರ ಕೆಲಸಗಳು, ಸಾಧನೆಗಳು ಅತ್ಯಂತ ಅಮೂಲ್ಯವಾಗಿದ್ದು ಮಾದರಿಯಾಗಿದೆ. ಸಾಮಾನ್ಯ ವ್ಯಕ್ತಿಯಾದ ಹಳಕಟ್ಟಿಯವರು ಎಲ್ಲ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಸಾಮಾನ್ಯ ಸಾಧನೆ ಮಾಡಿದ್ದು ಅವರು ಕಟ್ಟಿದ ಸಂಘ ಸಂಸ್ಥೆಗಳು ಇಂದಿಗೂ ಜೀವಂತವಾಗಿವೆ ಎಂದರು.

ಹೊಸನಗರ ತಾಲ್ಲೂಕಿನ ಮೂಲಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *