ಅರಕೇರಿ
ತಾಲೂಕಿನ ಜಾಗಿರಜಾಡಲದಿನ್ನಿ ಗ್ರಾಮದ ನೀಲಾಂಬಿಕ ಬಸವ ಯೋಗಾಶ್ರಮದಲ್ಲಿ 76ನೇ ಬಸವತತ್ವ ಚಿಂತನಾ ಗೋಷ್ಠಿಯಲ್ಲಿ ಶರಣರಾದ ಡಾ. ಫ. ಗು. ಹಳಕಟ್ಟಿ ಹಾಗು ಶರಣ ಹಡಪದ ಅಪ್ಪಣ್ಣ ಅವರ ಸ್ಮರಣೆ ಮಾಡಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ನೀಲಾಂಬಿಕ ಬಸವ ಯೋಗಾಶ್ರಮದ ಅಧ್ಯಕ್ಷರಾದ ಶ್ರೀ ವೀರಭದ್ರ ಸ್ವಾಮಿಗಳು ವಹಿಸಿ ಫ.ಗು. ಹಳಕಟ್ಟಿ ಹಾಗೂ ಬಸವಾದಿ ಶರಣ ಹಡಪದ ಅಪ್ಪಣ್ಣನವರ ಕುರಿತು ಅನುಭಾವ ನೀಡಿದರು.
ಫ.ಗು. ಹಳಕಟ್ಟಿ ಅವರ ಅಪರಿಮಿತ ತ್ಯಾಗದಿಂದ, ಅಮೋಘ ಕಾರ್ಯದಿಂದ ಬಸವಾದಿ ಶರಣರ ವಚನ ಸಾಹಿತ್ಯ ರಕ್ಷಣೆಯಾಗಿದೆ. ಅವರಿಂದ ನಮಗೆಲ್ಲ ಅವು ಸಿಗುವಂತಾಗಿವೆ.
ಬಸವಾದಿ ಶರಣರ ಅನುಭವ ಮಂಟಪದಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಮುಖ್ಯವಾಗಿತ್ತು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಬಸವಣ್ಣನವರ ಎಲ್ಲಾ ಕಾರ್ಯಗಳಲ್ಲಿ ಬಹುದೊಡ್ಡ ಕೆಲಸವನ್ನು ಅವರು ಮಾಡಿದರು ಎಂದು ಸ್ವಾಮೀಜಿ ಹೇಳಿದರು.

ಕಾರ್ಯಕ್ರಮದಲ್ಲಿ ಬಸವಾದಿ ಶಿವಶರಣರ ಸಾಮೂಹಿಕ ಪ್ರಾರ್ಥನೆಯನ್ನು ಶರಣ ಬೆಟ್ಟಪ್ಪ ಕಸ್ತೂರಿ ಅತ್ತನೂರು ನಡೆಸಿಕೊಟ್ಟರು. ನಿರೂಪಣೆಯನ್ನು ಶರಣ ಚಂದ್ರು ನಿಲಗಲ್ ಮಾಡಿದರು. ದಾಸೋಹ ಸೇವೆಯನ್ನು ಎಸ್.ಎನ್. ಅಮರಪ್ಪ ಶಾಖಾಪುರ ಮಾಡಿದರು. ಶರಣ ಮಸ್ತಾನಸಾಬ್ ಸಿರವಾರ, ಈರಣ್ಣ ಹೂಗಾರ ಸಂಗೀತ ಬಳಗದಿಂದ ಕಾರ್ಯಕ್ರಮ ನಡೆಯಿತು. ಜಾಗಿರಜಾಡಲದಿನ್ನಿ, ಮರಾಠ ಸಿರವಾರ, ಅತ್ತನೂರು, ಶಾಖಾಪುರ, ಕ್ಯಾದಿಗೆರ ಹಾಗೂ ಸುತ್ತಮುತ್ತಲ ಹಳ್ಳಿಯ ಶರಣರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.