ಕಲಬುರ್ಗಿ
ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 28ನೇ ದಿನದಂದು ಬೆಳಗಾವಿಯ ಬಸವ ಬೆಳವಿಯ ಚರಂತೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ ಶರಣರು ನಿತ್ಯ ಸುಖಿಗಳು ಎಂದು ಹೇಳಿದರು.
ಲಿಂಗವಂತರದು ಅನುಭವ ಮಂಟಪ ಸಂಸ್ಕೃತಿಯಾಗಿದೆ. ಎಲ್ಲಾ ಜಾತಿಗಳ ಸಂಕುಚಿತತೆಯನ್ನು ಕಳೆದು ಎಲ್ಲರನ್ನೂ ಗೌರವ, ಸ್ವಾಭಿಮಾನದಿಂದ ಬದುಕುವಂತೆ ಮಾಡಿರುವುದೇ ಶರಣ ಧರ್ಮವಾಗಿದೆ.
ಶರಣರ ವಚನಗಳು ನೈತಿಕತೆ, ವೈಚಾರಿಕತೆ, ಸಾಮಾಜಿಕ ಭಾತೃತ್ವ, ಆರ್ಥಿಕತೆ ಎಲ್ಲವನ್ನು ಒಳಗೊಂಡಿವೆ. ವಚನ ಸಾಹಿತ್ಯವು ಶರಣರ ಸ್ವಾನುಭವದ ನೆಲೆಯಲ್ಲಿ ವಿನೂತನವಾಗಿ ರೂಪಗೊಂಡವುಗಳಾಗಿವೆ. ಜಗತ್ತಿನ ಇದುವರೆಗಿನ ಸಿದ್ಧಾಂತಗಳನ್ನು ಅಧ್ಯಯನ ಮಾಡಿ ವಿಮರ್ಶಿಸಿ ವಿನೂತನ ಮಾರ್ಗ ಶರಣರು ಕಂಡುಹಿಡಿದರು.

ಜೀವನದ ಕಷ್ಟ ಸುಖಗಳು ಲಿಂಗ ಭೋಗವೆಂದು ಸ್ವೀಕರಿಸಬೇಕೆಂದು ಉಪದೇಶಿಸಿದರು. ಬೆಳೆ ಬೆಳೆಯಲು ಕಷ್ಟ ಪಡಬೇಕಾಗುತ್ತದೆ, ಆದರೆ ಕಸ ಬೆಳೆಯಲು ಕಷ್ಟ ಪಡಬೇಕಾಗಿಲ್ಲ, ತಾನೇ ಬೆಳೆಯುತ್ತದೆ. ಮಾನವ ಸದ್ಗುಣ ರೂಡಿಸಿಕೊಳ್ಳಲು ಕಷ್ಟ ಪಡಬೇಕಾಗುತ್ತದೆ, ದುರ್ಗುಣ ತಾನಾಗಿಯೇ ಬೆಳೆಯುತ್ತವೆ. ಶರೀರವೆಂಬ ಹೊಲವನ್ನು ಹಸನು ಮಾಡಿ ದೇವರ ಬೆಳೆ ಬೆಳೆದುಣ್ಣಬೇಕು.
ಭವರೋಗ ದಾಟಿ ಹೋದವರು ಪಾರಮಾರ್ಥದ ಶಾಶ್ವತ ಸುಖ ಅನುಭವಿಸುತ್ತಾರೆ. ಮನುಷ್ಯನ ಬಾಲ್ಯ, ಯೌವ್ವನ ಮುಪ್ಪಿನಲ್ಲಿ ವಿಭಿನ್ನ ಅವಗುಣಗಳು ಬೆಳೆದಿರುತ್ತವೆ, ಆದರೆ ಮನುಷ್ಯ ತನ್ನ ಪ್ರಯತ್ನದಿಂದ ಇವುಗಳನ್ನು ಕಿತ್ತು ತೆಗೆಯಬೇಕು. ಶರಣರ ಸತ್ಸಂಗ ಮಾಡಿ ಇಷ್ಟಲಿಂಗ ಪೂಜೆ ಮಾಡಬೇಕು. ಪ್ರವಚನ ಶ್ರವಣ ಮಾಡಿದ ಜ್ಞಾನವು ಕ್ರಿಯೆಯಲ್ಲಿ ಆಚರಣೆಯಲ್ಲಿ ಬಂದರೆ ಮಾತ್ರ ಸಾರ್ಥಕವಾಗುತ್ತದೆ. ಮನುಷ್ಯನ ದುರ್ಗುಣಗಳು ಆತನನ್ನು ದುರ್ಮಾರ್ಗಕ್ಕೆ ಕರೆದೊಯ್ದು ಶಿವಚಿಂತೆ ಶಿವಧ್ಯಾನದಿಂದ ದೂರ ಮಾಡುತ್ತವೆ. ಆದ್ದರಿಂದ ಮನುಷ್ಯ ಸಜ್ಜನರ ಸಂಘದಲ್ಲಿರಬೇಕೆಂದು ಹೇಳಿದರು.

ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಸುಭಾಷ ಬಣಗಾರ, ಉದಯವಾಣಿ ದಿನಪತ್ರಿಕೆಯ ಸಂಪಾದಕರಾದ ಹಣಮಂತರಾಯ ಬೈರಾಮಡಗಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು .
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ ಪಾಳಾ, ಡಾ. ಕೆ. ಎಸ್. ವಾಲಿ, ಹನುಮಂತರೆಡ್ಡಿ ಮುದ್ನಾಳ, ವಿಜಯಲಕ್ಷ್ಮೀ ಬಸವರಾಜ, ಸಿದ್ದಣ್ಣ, ಉದಯಕುಮಾರ, ಗೀತಾ, ಶಾಂತಬಾಯಿ, ವೀರೇಶ ನಾಗಣ್ಣ, ಪ್ರಭುಲಿಂಗ ಅವರು ಹಾಜರಿದ್ದರು.