ಅರಿಷಡ್ವರ್ಗಗಳ ತ್ಯಜಿಸಿದಾತನೇ ದೇವರು: ಕರೇಗೌಡ್ರ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

ವೈರಾಗ್ಯ ನಿಧಿ ಅಕ್ಕಮಹಾದೇವಿ ತಾಯಿಯವರು ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದವರು. ಅವರು ಕನ್ನಡದ ಮೊದಲನೇ ಕವಿಯತ್ರಿ, ವಚನಕಾರ್ತಿ. ಮೊದಲು ಅವರು ತನ್ನ ದೇವರು ಅಂದರೆ ಚೆನ್ನಮಲ್ಲಿಕಾರ್ಜುನನನ್ನು ಹೊರಗಡೆ ಹುಡುಕುತ್ತಿದ್ದರು. ಕೊನೆಗೆ ಕಲ್ಯಾಣದ ಬಸವಾದಿ ಶರಣರ ಸಂಘದ ಪರಿಣಾಮ ಅನುಭವ ಮಂಟಪದಲ್ಲಿ ನೆಲೆನಿಂತು ತನ್ನಲ್ಲಿಯೇ ಪರಮಾತ್ಮನಿರುವನೆಂಬ ಸತ್ಯ ಅರಿತುಕೊಂಡರು.

ಅವರು ಶ್ರೀಶೈಲದ ಕದಳಿ ವನದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದರು. ಇವರ ವಚನಗಳ ಬಗ್ಗೆ ಅನೇಕ ಶರಣರು ತಮ್ಮ ವಚನಗಳಲ್ಲಿ ಹಾಡಿ ಹೊಗಳಿದ್ದಾರೆಂದು, ಜೊತೆಗೆ ಅಕ್ಕಮಹಾದೇವಿ ಕೂಡಾ ತಮ್ಮ ಸಮಕಾಲೀನ ಶರಣರನ್ನು ಸ್ಮರಿಸಿದ್ದಾರೆಂದು ಬಸವದಳ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಅಕ್ಕನ ವೃತ್ತಾಂತ ಹೇಳಿದರು.

ಅವರು ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಇರಾನಿ ಕಾಲೋನಿಯ ಲಕ್ಷೀಬಾಯಿ ಡಿ. ನಾಗರಾಳ ಅವರು ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯಂಗವಾಗಿ ‘ವಚನ ಶ್ರಾವಣ-೨೦೨೫’ರ ಕಾರ್ಯಕ್ರಮದಲ್ಲಿ,
“ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು, ಸಂಸಾರ ಹುಟ್ಟಿದಲ್ಲಿ ಅಜ್ಞಾನ ಹುಟ್ಟಿತ್ತು, ಅಜ್ಞಾನ ಹುಟ್ಟಿದಲ್ಲಿ ಆಶೆ ಹುಟ್ಟಿತ್ತು, ಆಶೆ ಹುಟ್ಟಿದಲ್ಲಿ ಕೋಪ ಹುಟ್ಟಿತ್ತು, ಆ ಕೋಪಾಗ್ನಿಯ ತಾಮಸಧೂಮ್ರ ಮುಸುಕಿದಲ್ಲಿ, ನಾ ನಿಮ್ಮ ಮರೆದು ಭವದುಃಖಕ್ಕೀಡಾದೆ, ನೀ ಕರುಣದಿಂದೆತ್ತಿ ಎನ್ನ ಮರಹ ವಿಂಗಡಿಸಿ, ನಿಮ್ಮ ಪಾದವನರುಹಿಸಯ್ಯಾ, ಚೆನ್ನಮಲ್ಲಿಕಾರ್ಜುನಾ.”

ಅಕ್ಕನ ಈ ವಚನವನ್ನು ನಿರ್ವಚನ ಮಾಡುತ್ತ, ‘ನಾನು’ ಎಂಬ ಶಬ್ದವೇ ಅಹಂಕಾರಪೂರಿತವಾಗಿದ್ದು, ಇಲ್ಲಿ ನಾನು, ನನ್ನದು ಇವೆಲ್ಲ ಅಜ್ಞಾನವನ್ನು ಸೂಚಿಸುವವು. ಇವು ಹುಟ್ಟಿದಲ್ಲಿ ಸಂಸಾರ ಹುಟ್ಟುವುದು. ಸಂಸಾರ ಎಂಬ ಪದವು ಇಲ್ಲಿ ಮಾಯೆಯನ್ನು ಸೂಚಿಸುವುದು. ಆಶೆ, ಬಯಕೆ ಇವೆಲ್ಲ ಈ ವಚನದಲ್ಲಿ ಅಜ್ಞಾನ ಸೂಚಿಸುವವು. ಇಂದ್ರಿಯಾಸಕ್ತನಾದವಂಗೆ ಸಹಜವಾಗಿ ಆ ಬಯಕೆ ಈಡೇರದಿದ್ದ ಸಂದರ್ಭದಲ್ಲಿ ಕೋಪವುಕ್ಕುವುದು. ಅದೇ ದಾವಾನಲವಾಗಿ ಅಲ್ಲಿ ಮಾನವ ತನ್ನ ಮತಿಯನ್ನು ಕಳೆದುಕೊಳ್ಳುವನು. ಆ ಕೋಪಾಗ್ನಿ ಹುಟ್ಟಿದಾಕ್ಷಣ ಮಾನವ ಏನು ಮಾಡಬೇಕೆಂಬ ಅರಿವನ್ನೇ ಕಳೆದುಕೊಂಡು ಅಜ್ಞಾನದ ಕತ್ತಲೆಯು ಮುಸುಕುವುದು. ಇಂತಹ ಸಂಸಾರ ಜಂಜಾಟದಲ್ಲಿ ಪರಮಾತ್ಮನನ್ನು ಮರೆತು ಬಿಟ್ಟೆ ಎನ್ನುವರು. ಭವ ದುಃಖವೆಂದರೆ ಹುಟ್ಟು, ಸಾವುಗಳ ಭವ ಬಂಧನಕ್ಕೀಡಾದೆ ಆ ಕಾರಣ ಜ್ಞಾನನಿಧಿಯಾದ ಪರಮಾತ್ಮನೇ ನೀನು ನನಗೆ ಜ್ಞಾನ ನೀಡಿ ನನ್ನಲ್ಲಿರುವ ಅಜ್ಞಾನದ ಅರಿಷಡ್ವವರ್ಗಗಳ ಕತ್ತಲೆಯ ಕಳೆಯಯ್ಯಾ ಎಂದು ಇಷ್ಟಲಿಂಗ ದೇವರಲ್ಲಿ ಪ್ರಾರ್ಥಿಸುವದು ಎಂದರು.

ಇದೇ ವಚನ ಕುರಿತಾಗಿ ಎನ್.ಎಂ. ಪವಾಡಿಗೌಡ್ರ, ಗೌರಕ್ಕ ಬಡಿಗಣ್ಣನವರ ಮಾತನಾಡಿದರು. ಬಸವದಳದ ಶರಣೆಯರ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸರ್ವರನ್ನೂ ಶರಣೆ ಲಕ್ಷೀಬಾಯಿ ನಾಗರಾಳ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆ ಎಂ. ಬಿ. ಲಿಂಗದಾಳರು ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *