ಬೆಂಗಳೂರು
ನಗರದ ಅರಮನೆ ಮೈದಾನದಲ್ಲಿ ಭಾನುವಾರ ‘ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಅದ್ಧೂರಿಯಾಗಿ ಜರುಗಿತು.
ಲಿಂಗಾಯತ ಧರ್ಮದ ನೂರಾರು ಸ್ವಾಮೀಜಿಗಳ ಸಾನಿದ್ಯದಲ್ಲಿ ಹಾಗೂ ಸಮುದಾಯದ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿಯ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಲಿಂಗಾಯತರಿಗೆ ‘ಧರ್ಮ’ ಮಾನ್ಯತೆಗೆ ನಿರಂತರ ಜಾಗೃತಿ, ಉಪ ಪಂಗಡಗಳ ನಡುವೆ ವಿವಾಹ ಸೇರಿ ಪಂಚ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಆನಂದಪುರದ ಮುರುಘಾ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಲಿಂಗಾಯತ ಮಠಾಧೀಶರ ಒಕ್ಕೂಟದ ಪರವಾಗಿ ನಿರ್ಣಯಗಳನ್ನು ಮಂಡಿಸಿದರು.
1) ಲಿಂಗಾಯತರೆಲ್ಲರೂ ಮೊದಲು ಭಾರತೀಯರು. ಲಿಂಗಾಯತ ಧರ್ಮ ಕನ್ನಡದ ಧರ್ಮ. ಧರ್ಮಕ್ಕಿಂತ ದೇಶ ಮೊದಲು. ರಾಷ್ಟ್ರಪ್ರಜ್ಞೆಯೊಂದಿಗೆ ದೇಶದ ಐಕ್ಯತೆಗೆ ಸದಾ ಶ್ರಮಿಸುವುದು.
2) ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ. ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದು.
3) ಲಿಂಗಾಯತರಲ್ಲಿನ ಸಣ್ಣ, ಹಿಂದುಳಿದ ಉಪಪಂಗಡಗಳನ್ನು ನಾವೆಲ್ಲರೂ ಅಪ್ಪಿಕೊಂಡು, ಅವರ ಅಭುದ್ಯಯಕ್ಕಾಗಿ ಶ್ರಮಿಸುತ್ತಾ, ಎಲ್ಲ ಒಳಪಂಗಡಗಳ ಭೇದ ತೊರೆದು, ಉಪಜಾತಿಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು.
4) ಲಿಂಗಾಯತರೆಲ್ಲರೂ ನಮ್ಮ ಅರಿವಿನ ಕುರುಹು, ಅಸ್ಮಿತೆ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧಾರಣೆ ಮಾಡುವುದು.
5) ಲಿಂಗಾಯತ ಧರ್ಮೀಯರು ತಮ್ಮ ಮನೆಗಳಲ್ಲಿ ಜನನದಿಂದ ಮರಣದವರೆಗೆ ಶರಣ ಸಂಸ್ಕೃತಿ ಆಚರಣೆಗಳನ್ನು ಸದಾ ಅನುಸರಿಸಬೇಕು.
ಸಮಾರೋಪ ಸಮಾರಂಭ ಒಂದು ಐತಿಹಾಸಿಕ ಮಹತ್ವದ ಸಂಗತಿ. ಇಲ್ಲಿಯವರೆಗೆ ಇದಕ್ಕಾಗಿ ತಮ್ಮ ತಾನು ಮನ ಹಾಗೂ ಧನ ಸೇವೆ ಮಾಡಿದ ಪ್ರತಿಯೊಬ್ಬರಿಗೂ ಅನಂತ ಅನಂತ ಧನ್ಯವಾದಗಳು. ಕೈಗೊಂಡ ಎಲ್ಲ ನಿರ್ಣಯಗಳು ಸಮಯೋಚಿತ ಹಾಗೂ ಸಮರ್ಥನೀಯವಾಗಿವೆ.
ಆದರೆ ೫ ನೇ ನಿರ್ಣಯ ಈಗಿನ ಸಂದರ್ಭದಲ್ಲಿ ಕಷ್ಟ ಸಾಧ್ಯ. ಏಕೆಂದರೆ ಜನನದಿಂದ ಮರಣದ ವರೆಗಿನ ಕ್ರಿಯೆಗಳನ್ನು ಶರಣ ಸಂಸ್ಕೃತಿಗೆ ತಕ್ಕುದಾಗಿ ಮಾಡುವ ಬಗೆ ಹೇಗೆ ಎಂಬುದರ ಬಗ್ಗೆ ಮಾಹಿತಿಯ ಕೊರತೆ ಇದೆ. ಈ ಬಗ್ಗೆ ಪ್ರಜ್ಞಾವಂತರು ಮುಖ್ಯವಾಗಿ ನಮ್ಮ ವಿರಕ್ತ ಮಠಾಧೀಶರು ಬೆಳಕು ಚೆಲ್ಲಬೇಕು.
ಶರಣು ಶರಣಾರ್ಥಿ