ಶೀಘ್ರದಲ್ಲಿ ಲಿಂಗಾಯತ ಧರ್ಮ ಪ್ರಸಾರಕರ ವೇದಿಕೆ ಸ್ಥಾಪನೆ: ಚನ್ನಬಸವಾನಂದ ಶ್ರೀ

ಬಸವಕಲ್ಯಾಣ

ವಿಶ್ವದ ಸಮಸ್ಯೆಗಳಿಗೆ ಬಸವ ಸಿದ್ಧಾಂತವೇ ಪರಿಹಾರವಾಗಿದೆ. ಪ್ರತಿಯೊಬ್ಬರೂ ಬಸವ ತತ್ವದಲ್ಲಿ ನಂಬಿಕೆ ಇಡಬೇಕು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ದೊರಕಬೇಕಾದರೆ ಬುದ್ಧ ಬಸವ ಅಂಬೇಡ್ಕರರ ಮಾರ್ಗದಲ್ಲಿ ಸಾಗಬೇಕೆಂದು ಕಾಂಗ್ರೇಸ್ ಮುಖಂಡರಾದ ವಿಜಯಸಿಂಗ ತಿಳಿಸಿದರು.

ಪಟ್ಟಣದ ಸಸ್ತಾಪುರ ಬಂಗ್ಲಾ ಸಮೀಪದ ಎಂ.ಎಂ. ಬೇಗ್ ಸಭಾಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ೪ನೇ ಸ್ವಾಭಿಮಾನಿ ಕಲ್ಯಾಣ ಪರ್ವ ಉದ್ಘಾಟಿಸಿ ಮಾತನಾಡಿದರು.

ನಮ್ಮ ತಂದೆ ಧರ್ಮಸಿಂಗ್ ಅವರು ಮಾತಾಜಿಯವರ ಶಿಷ್ಯರಾಗಿದ್ದರು. ಮಾತಾಜಿ ಒಬ್ಬ ಮಹಿಳೆಯಾಗದೆ ದೇವರ ಸ್ಥಾನದಲ್ಲಿದ್ದರು ಎಂದು ನಮ್ಮ ತಂದೆಯವರು ಯಾವಾಗಲೂ ಹೇಳುತ್ತಿದ್ದರು. ಮಾತೆ ಮಹಾದೇವಿ ಅವರು ಬಸವಕಲ್ಯಾಣಕ್ಕೆ ಬಂದು ಈ ಪುಣ್ಯಭೂಮಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದರು ಎಂದು ತಿಳಿಸಿದರು.

ಸಾನಿಧ್ಯ ವಹಿಸಿರುವ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯದ ಶುದ್ಧಿಕರಣ ಮತ್ತು ಪರಿಷ್ಕರಣೆಯ ಅವಶ್ಯಕತೆ ಇದೆ. ಬಸವಾದಿ ಶರಣರು ಅನುಭವ ಮಂಟಪ ಪದ್ಧತಿ ಜಾರಿಗೆ ತಂದೇ ಇಂದು ಕೆಲವರು ಶಿವ ಪದವನ್ನು ಸೇರಿಸಿ ಶಿವಾನುಭವ ಎನ್ನುತ್ತಿದ್ದಾರೆ. ಶರಣರು ಎನ್ನುವ ಪದಕ್ಕೆ ಶಿವ ಸೇರಿಸಿ ಶಿವಶರಣರು ಎಂದು ಹೇಳಿ ಶೈವ ಸಂಸ್ಕೃತಿ ವಚನ ಸಾಹಿತ್ಯದೊಳಗೆ ನುಗ್ಗಿಸುವ ಕಾರ್ಯ ನಡೆಯುತ್ತಿರುವುದು ಖಂಡನೀಯ ಎಂದರು.

೧೨ನೇ ಶತಮಾನದಲ್ಲಿ ಬಸವಾದಿ ಶರಣರನ್ನು ಕೊಂಡಿ ಮಂಚಣ್ಣರು ಓಡಿಸಿದಾಗ ನೋವಿನಿಂದ ಶರಣರು ಚದುರಿದರು. ಮತ್ತು ೨೧ನೇ ಶತಮಾನದಲ್ಲಿ ಅದೇ ಮಣಿಹ ಹೊತ್ತು ಪೂಜ್ಯ ಮಾತಾಜಿಯವರ ನೇತೃತ್ವದಲ್ಲಿ ಕಲ್ಯಾಣಕ್ಕೆ ಬಂದು ಅಭಿವೃದ್ಧಿ ಮಾಡುತ್ತಿದ್ದರೆ, ಒಳಗಿನ ಮತ್ತು ಹೊರಗಿನ ಅದೇ ಕೊಂಡಿ ಮಂಚಣ್ಣ ಸಂತತಿಯವರು ವಿರೋಧಿಸಿದರು.

ನಿಜವಾದ ನಿಷ್ಠಾವಂತ ಪೂಜ್ಯರು ಮತ್ತು ಶರಣರು ಹೊರಗಿದ್ದೇವೆ. ಅನರ್ಹರು, ಬಂಡವಾಳಶಾಹಿಗಳು ಒಳಗಿದ್ದು ಬಸವ ಧರ್ಮ ಪೀಠವನ್ನು ಒಡೆಯುತ್ತಿದ್ದಾರೆ. ಪೀಠಾಧ್ಯಕ್ಷರಾಗಲು ಯೋಗ್ಯತೆ ಬೇಕು. ಸುಮ್ಮನೆ ಅವರವರನ್ನು ಕಂಡರೆ ಅವರವರಂತೆ ಹಾಡುವುದರಿಂದ ಬಸವ ತತ್ವ ಪ್ರಚಾರವಾಗಲು ಸಾಧ್ಯವಿಲ್ಲ ಎಂದು ಸ್ವಾಮೀಜಿ ಪ್ರತಿಪಾದಿಸಿದರು.

ಹಳ್ಳಿಹಳ್ಳಿಗಳಿಗೆ ಬಸವ ತತ್ವ ಪ್ರಚಾರ ಮಾಡಿ, ಲಿಂಗಾಯತ ಧರ್ಮದ ದೇವರು ಲಿಂಗದೇವ ಎಂದು ತಿಳಿಸಿಕೊಟ್ಟ ಮಾತಾಜಿಯವರ ಪೀಠದ ಮೇಲೆ ಕುಳಿತು ಗುರುವಿನ ಆದೇಶ ಮೀರುವವರು ಗುರುದ್ರೋಹಿಗಳು ಎಂದು ಗಂಗಾಮಾತಾಜಿಗೆ ಟಾಂಗ್ ನೀಡಿದರು.

ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿದ್ದೇ ರಾಷ್ಟ್ರೀಯ ಬಸವ ದಳದ ಮಾತಾಜಿ ಶಿಷ್ಯರಿಂದ. ಮಾತಾಜಿ ಬಸವ ಮಂಟಪ ಸ್ಥಾಪನೆ ಮಾಡಬಾರದಾಗಿತ್ತು ಎಂದು ಹೇಳುವ ಕೆಲವು ಮಠಾಧೀಶರು ಅಭಿಯಾನದ ಸಂದರ್ಭದಲ್ಲಿ ವಸತಿ ಮಾಡಿದ್ದೇ ಮಾತಾಜಿ ಸ್ಥಾಪಿಸಿದ ಬಸವ ಮಂಟಪಗಳಲ್ಲಿ. ಹಲವು ಮಠಾಧೀಶರು ಮಠ ಬಿಟ್ಟು ಹೊರಗಡೆ ಬಂದಿರಲಿಲ್ಲ. ಈಗ ಹೊರಗೆ ಬಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇವರಾರಿಗೂ ಅನ್ಯ ಜಿಲ್ಲೆಗಳಲ್ಲಿ ಶಿಷ್ಯರಿಲ್ಲ. ಇವರೆಲ್ಲ ನಂಬಿಕೊಂಡಿದ್ದೇ ಮಾತಾಜಿ ಶಿಷ್ಯರಿಗೆ ಎಂದು ತಿಳಿಸಿದರು.

ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಸರ್ವರಿಗೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೦೦ನೇ ಇಸವಿಯಲ್ಲಿ ಪೂಜ್ಯ ಮಾತಾಜಿಯವರನ್ನು ಕಲ್ಯಾಣಕ್ಕೆ ಕರೆತಂದು, ಜಾಗ ಕೊಡಿಸಿ ಇದೇ ಕಲ್ಯಾಣದ ಜನರಿಂದ ವಿರೋಧ ಕಟ್ಟಿಕೊಂಡು, ಪೊಲೀಸರಿಂದ ಪೆಟ್ಟು ತಿಂದು ಸಂಘಟನೆ ಮಾಡಿದೆವು. ಆದರೆ ನಿಜವಾದ ಮಾತಾಜಿ ಶಿಷ್ಯರು ಹೊರಗಿದ್ದೇವೆ. ಭ್ರಷ್ಟರು ಒಳಗಿದ್ದಾರೆ. ಬಸವ ಮಹಾಮನೆಯಲ್ಲಿರುವ ಇಂದಿನ ಸ್ವಾಮಿಯೊಬ್ಬರು ಗ್ರಂಥಾಲಯ ತೆಗೆದು ಮಾತಾಜಿಯವರ ಸಾಹಿತ್ಯ ನಾಶ ಮಾಡುವ ಕಾರ್ಯ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಇಂದಲ್ಲ ನಾಳೆ ನಾವು ನ್ಯಾಯ ಪಡೆದೇ ತೀರುತ್ತೇವೆ ಎಂದರು.

ನೇತೃತ್ವ ಚಿಕ್ಕಮಗಳೂರಿನ ಪೂಜ್ಯ ಡಾ. ಜಯಬಸವಾನಂದ ಸ್ವಾಮೀಜಿ, ಮಾತೆ ಸತ್ಯಾದೇವಿ, ಮಾತೆ ಶಾಂತಾದೇವಿ, ಧುಮ್ಮನಸೂರ ಮುಕ್ತಿನಾಥ ಮಠದ ಪೂಜ್ಯ ಶಂಕರಲಿಂಗ ಸ್ವಾಮೀಜಿ ವಹಿಸಿದ್ದರು.

ಅಧ್ಯಕ್ಷತೆಯನ್ನು ಚಿಕ್ಕಮಗಳೂರಿನ ರಾ.ಬ.ದಳ ಅಧ್ಯಕ್ಷ ಬಾಣೂರು ಚನ್ನಪ್ಪ ವಹಿಸಿದ್ದರು. ಇದೇ ವೇಳೆ ಸಚ್ಚಿದಾನಂದ ಚಟ್ನಳ್ಳಿ ವಿರಚಿತ ವಚನ ಪರುಷ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ವೇದಿಕೆ ಮೇಲೆ ಬೆಳಗಾವಿಯ ಅಶೋಕ ಬೆಂಡಿಗೇರಿ, ಡಾ. ಮಹೇಶ ಬಿರಾದಾರ, ಶಿವರಾಜ ಪಾಟೀಲ ಅತಿವಾಳ, ನ್ಯಾಯವಾದಿ ಅಶೋಕ ಮಾನೂರೆ, ರವಿಕಾಂತ ಬಿರಾದಾರ, ಗಣಪತಿ ದೇಶಮುಖ, ಹೈದರಾಬಾದನ ಭೀಮರಾವ ಬಿರಾದಾರ, ಓಂಪ್ರಕಾಶ ರೊಟ್ಟೆ, ಗಣಪತಿ ದೇಶಮುಖ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಳ್ಳಾರಿಯ ಅಂದ್ರಾಳು ರಾ.ಬ.ದಳದ ಕು. ಅಕ್ಕಮಹಾದೇವಿ ತಂಡ ವಚನ ನೃತ್ಯ ನಡೆಸಿಕೊಟ್ಟರು.

ಗಂಗಾವತಿ ವೀರೇಶ ನಿರೂಪಿಸಿದರೆ, ಬಸವರಾಜ ಪಾಟೀಲ ಶಿವಪುರ ಸ್ವಾಗತಿಸಿದರು. ಶ್ರೀನಾಥ ಕೋರೆ ವಂದಿಸಿದರು.

ಲಿಂಗಾಯತ ಧರ್ಮ ಪ್ರಸಾರಕರ ವೇದಿಕೆ ಸ್ಥಾಪನೆ

ಕೇವಲ ಬಸವ ತತ್ವ ಪ್ರಚಾರವನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಮಾಡಲು ಲಿಂಗಾಯತ ಧರ್ಮ ಪ್ರಸಾರಕರ ವೇದಿಕೆ ಸ್ಥಾಪನೆ ಮಾಡಲಾಗುತ್ತಿದೆ. ಈಗಾಗಲೇ ಎಲ್ಲಾ ಪ್ರಕ್ರಿಯೆ ಮುಗಿದಿವೆ. ನೊಂದಣಿ ಮಾಡಿಸಲಾಗುತ್ತಿದೆ. ಈ ವೇದಿಕೆಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಬಸವಪರ ಮಠಾಧೀಶರು ಸದಸ್ಯತ್ವ ಪಡೆಯಲಿದ್ದಾರೆ ಎಂದು ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ನಾಲ್ಕನೇ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ತಿಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LtQQbJpNF0P0HdzSbg74pu

Share This Article
1 Comment
  • ಒಳ್ಳೆಯ ಮತ್ತು ಸ್ವಾಗತಾರ್ಹ ಚಿಂತನೆ ಮತ್ತು ಬೆಳವಣಿಗೆ. ಶೀಘ್ರವಾಗಿ ಕಾರ್ಯಪ್ರವೃತ್ತವಾಗಲಿ.

Leave a Reply

Your email address will not be published. Required fields are marked *

ಬಸವ ತತ್ವ ಚಿಂತಕರು, ಬೀದರ