ಬೀದರ:
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಕಲಬುರಗಿಯಲ್ಲಿ ಇರುವ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಮಹಾತ್ಮ ಬಸವೇಶ್ವರ ವಿಶ್ವವಿದ್ಯಾಲಯವೆಂದು ನಾಮಕರಣ ಮಾಡಬೇಕೆಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬರೆದ ಮನವಿ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರಿಗೆ ಪ್ರಕಟಣೆ ಹೊರಡಿಸಿದ ಅವರು ಇದು ಹಲವಾರು ವರ್ಷಗಳ ನಮ್ಮ ಬೇಡಿಕೆ ಆಗಿದೆ. ಈ ಕುರಿತು ಕೂಡಲ ಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷರಾಗಿದ್ದ ವಿಶ್ವದ ಪ್ರಪ್ರಥಮ ಮಹಿಳಾ ಮಹಾಜಗದ್ಗುರು ಪೂಜ್ಯ ಡಾ. ಮಾತೆ ಮಹಾದೇವಿ ಮಾತಾಜಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ಸೇರಿದಂತೆ ಹಲವಾರು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ 1995-96ರ ಅವಧಿಯಲ್ಲಿ ತೀವ್ರವಾದ ಹೋರಾಟ ನಡೆದಿದೆ.
ಆಗಿನ ಸಂದರ್ಭದಲ್ಲಿ ಸನ್ಮಾನ್ಯ ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು, ಸನ್ಮಾನ್ಯ ಜೆ.ಎಚ್.ಪಟೇಲರು ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದರು, ತಾವು ಹಣಕಾಸು ಸಚಿವರು ಆಗಿ ಸಂಪುಟದಲ್ಲಿ ಇದ್ದೀರಿ. ಆ ಸಂದರ್ಭದಲ್ಲಿ ರಾಜ್ಯದಾದ್ಯಂತ ಹೋರಾಟ ತೀವ್ರವಾಗಿತ್ತು. ಸನ್ಮಾನ್ಯ ದೇವೇಗೌಡರು ಮತ್ತು ಮಾನ್ಯ ಜೆ.ಎಚ್.ಪಟೇಲ ಅವರು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ಹೆಸರು ಸೂಕ್ತವಾಗಿದೆ ಎಂದು ವಿಧಾನ ಸಭೆಯಲ್ಲಿ ಘೋಷಣೆ ಮಾಡಿ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಆದ್ದರಿಂದ ಹೋರಾಟವನ್ನು ಪರಮಪೂಜ್ಯ ಮಾತೆ ಮಹಾದೇವಿ ತಾಯಿಯವರು ಹಿಂತೆಗೆದುಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಹಲವಾರು ಒತ್ತಡಗಳು ಉಂಟಾಗಿ ಅದು ಇಲ್ಲಿಯವರೆಗೆ ನೆನೆಗುದಿಗೆ ಬಿದ್ದಿದೆ ಎಂದರು.

ಗುಲಬರ್ಗಾ ವಿ.ವಿ. ಗೆ ಬಸವೇಶ್ವರರ ಹೆಸರೇ ಇಡುವುದು ಏಕೆ ಸೂಕ್ತ ಎಂದರೆ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ಸ್ಥಾಪನೆಯಾದ ಪವಿತ್ರ ಕ್ಷೇತ್ರ ಬಸವಕಲ್ಯಾಣ. ಇದು ಗುಲಬರ್ಗಾ ವಿಭಾಗದಲ್ಲಿ ಬರುತ್ತದೆ. ಈಗಿನ ಕಲಬುರಗಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾಗಿದೆ. ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊಟ್ಟಮೊದಲ ಸ್ಥಾಪನೆಯಾದ ಏಕೈಕ ವಿಶ್ವವಿದ್ಯಾಲಯ ಅದು ಗುಲಬರ್ಗಾ ವಿಶ್ವವಿದ್ಯಾಲಯ. ಆದ್ದರಿಂದ ಬಸವಾದಿ ಶರಣರ ಸಂದೇಶಗಳನ್ನು ವಚನ ಸಾಹಿತ್ಯದ ಮೌಲ್ಯಗಳನ್ನು ಸಮಾನತೆ, ಕಾಯಕ, ದಾಸೋಹ, ಸಾಮಾಜಿಕ ನ್ಯಾಯ ಈ ಎಲ್ಲಾ ಮೌಲ್ಯಗಳನ್ನು ಒಳಗೊಂಡ ವಚನ ಸಾಹಿತ್ಯದ ಪ್ರಚಾರ ಪ್ರಸಾರ ಕಲ್ಯಾಣ ಕರ್ನಾಟಕ ಭಾಗದಿಂದ ಅಥವಾ ಕಲಬುರಗಿ ವಿಭಾಗದಿಂದ ಆಗಬೇಕಾದ ಅಗತ್ಯವಿದೆ ಎಂಬುದನ್ನು ಗುಲಬರ್ಗಾ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವಾಗ ಪೀಠಿಕೆಯಲ್ಲಿಯೂ ಹೇಳಲಾಗಿದೆ. ಇದಕ್ಕೆ ಹಲವಾರು ದಲಿತ ಸಂಘಟನೆಗಳು ಮತ್ತು ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರರು ಸೇರಿದಂತೆ ಎಲ್ಲಾ ಸಂಘಟನೆಗಳ ಬೆಂಬಲವೂ ಕೂಡ ಆ ಸಂದರ್ಭದಲ್ಲಿ ಸಿಕ್ಕಿತ್ತು.
ಹೀಗಾಗಿ ರಾಜಕೀಯವಾಗಿ ಕೆಲವೊಂದು ಗೊಂದಲಗಳು ಉಂಟಾಗಿ ಅಂದು ಗುಲಬರ್ಗಾ ವಿ.ವಿ. ಗೆ ಬಸವೇಶ್ವರರ ಹೆಸರಿಡಲು ಸಾಧ್ಯವಾಗಿಲ್ಲ. ಅನೇಕ ರೀತಿಯ ಹೋರಾಟಗಳು ಮೂರ್ನಾಲ್ಕು ವರ್ಷಗಳ ವರೆಗೆ ನಡೆದರೂ ಕೂಡ ಅದು ಸಾಧ್ಯವಾಗಿಲ್ಲ. ಈಗ ತಾವು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ವಿವಿಧ ಮಹಾತ್ಮರ ಹೆಸರುಗಳನ್ನು ನಾಮಕರಣ ಮಾಡಬೇಕೆಂಬ ಆಶಯ ಹೊಂದಿರುವುದರಿಂದ ಗುಲಬರ್ಗಾ ವಿ.ವಿ.ಗೆ ಬಸವೇಶ್ವರ ಹೆಸರನ್ನು ಇಟ್ಟು, ಗುರುಬಸವಣ್ಣನವರ ತತ್ವಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರವಾಗಲು ಮತ್ತೊಮ್ಮೆ ತಮ್ಮಿಂದ ದೊಡ್ಡ ಸೇವೆ ಆಗಲಿದೆ. ಬಸವೇಶ್ವರ ಹೆಸರಿಟ್ಟರೆ ಪೂಜ್ಯ ಮಾತೆ ಮಹಾದೇವಿಯವರು ಮಾಡಿದ್ದ ಹೋರಾಟಕ್ಕೆ ಮತ್ತು ಸಂಕಲ್ಪಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದು ಪೂಜ್ಯರು ತಿಳಿಸಿದರು.

ತಾವು ಈಗಾಗಲೇ ವಿಜಯಪುರದ ಮಹಿಳಾ ವಿ.ವಿ. ಗೆ ಅಕ್ಕಮಹಾದೇವಿ ವಿ.ವಿ. ಎಂದು ನಾಮಕರಣ ಮಾಡಿದ್ದೀರಿ. ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೀರಿ. ಬಸವೇಶ್ವರರ ಭಾವಚಿತ್ರಗಳನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಆದೇಶ ಮಾಡಿ ಅದನ್ನು ಜಾರಿಗೆ ಕೂಡ ತಂದಿದ್ದೀರಿ. ಬಸವ ಜಯಂತಿ ದಿನವೇ ತಾವು ಪ್ರಮಾಣ ವಚನ ಸ್ವೀಕಾರ ಮಾಡಿದ್ದೀರಿ. ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ತಮ್ಮಿಂದ ಮಾತ್ರ ನಾವು ಇದನ್ನು ನಿರೀಕ್ಷೆ ಮಾಡಲು ಸಾಧ್ಯವಿದೆ. ತಾವು ಅಪ್ಪಟ ಬಸವ ಭಕ್ತರು. ಬಸವೇಶ್ವರರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಗುರುಬಸವಣ್ಣನವರ ಕಾಯಕ ಮತ್ತು ದಾಸೋಹ ಸಿದ್ಧಾಂತದಲ್ಲಿ ಅಪಾರ ನಂಬಿಕೆಯುಳ್ಳ ತಾವು ಗುಲಬರ್ಗಾ ವಿ.ವಿ. ಗೆ ಬಸವೇಶ್ವರ ವಿಶ್ವವಿದ್ಯಾಲಯ ವೆಂದು ಮರುನಾಮಕರಣ ಮಾಡುವ ಮೂಲಕ ಮತ್ತೊಮ್ಮೆ ತಾವು ಬಸವ ತತ್ವದ ಅಭಿಮಾನಿಗಳೆಂಬ ನಿರೀಕ್ಷೆ ಮಾಡುತಿದ್ದೇವೆ.
ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕದ ಯಾವುದೇ ಸರಕಾರಿ ಸಂಸ್ಥೆಗಳಿಗೆ ಹೆಸರಿಡುವಾಗ ಮತ್ತು ಬೀದರ ವಿ.ವಿ. ಗೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಇದ್ದ 770 ಅಮರ ಗಣಂಗಳಲ್ಲಿ ಯಾರಾದರೂ ಒಬ್ಬ ಶರಣರ ಹೆಸರಿಡಬೇಕು. ವಿಶ್ವದ ಪ್ರಥಮ ಕಾಯಕ ಜೀವಿಗಳ ವಿವಿಧ ಕಾಯಕದ ವರ್ಗಗಳ ದುಡಿಯುವ ವರ್ಗದ ಹೋರಾಟ ಆಗಿತ್ತು.
ಸಿಎಂ ಅವರು ಕೂಡಲೇ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಮಹಾತ್ಮ ಬಸವೇಶ್ವರ ಹೆಸರಿಡಲು ರಾಷ್ಟ್ರೀಯ ಬಸವ ದಳ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ, ಲಿಂಗಾಯತ ಧರ್ಮ ಮಹಾಸಭಾ ಸೇರಿದಂತೆ ಎಲ್ಲಾ ಸಂಘಟನೆಗಳ ಬೇಡಿಕೆ ಇದೆ ಎಂದರು.
ಇದೇ ವೇಳೆ ಶಿವರಾಜ ಪಾಟೀಲ ಅತಿವಾಳ, ರಾಷ್ಟ್ರೀಯ ಉಪಾಧ್ಯಕ್ಷರು, ಲಿಂಗಾಯತ ಧರ್ಮ ಮಹಾಸಭಾ ಬೀದರ, ರವಿಕಾಂತ ಬಿರಾದಾರ, ಶಂಕರಗೌಡ, ಶಿವಶರಣಪ್ಪ ಪಾಟೀಲ ಹಾರೂರಗೇರಿ ಉಪಸ್ಥಿತರಿದ್ದರು.
