ಹೊಸದುರ್ಗ:
ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನಡೆದಿರುವ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಬುಧವಾರ “ಸಾವಯವ ಕೃಷಿ” ಕುರಿತು ಅರ್ಥಪೂರ್ಣ ವಿಚಾರ ಸಂಕಿರಣ ನಡೆಯಿತು.
‘ಸಹಜ ಕೃಷಿಯಲ್ಲಿ ಸಗಣಿ ಮಹತ್ವ’ ಕುರಿತು ಸಹಜ ಕೃಷಿಕ ಕುಂದಗೋಳದ ಬಿಸಿರೊಟ್ಟಿ ಮಲ್ಲೇಶಪ್ಪ ಮಾತನಾಡಿ, ಈ ವರ್ಷದ ಸಗಣಿಯನ್ನು ಹಾಗೇ ಕಳಿಯಲು ಬಿಡಬೇಕು. ನಂತರ ಒಳ್ಳೆ ಪರಿಮಳ ಬರುವುದು. ಅದನ್ನು ಮುಂದಿನ ವರ್ಷ ಬಳಸಬೇಕು. ಇದರಲ್ಲಿ ಎರೆಹುಳು, ಗೊಣ್ಣೆಹುಳು, ಮತ್ತು ಲಾರ್ವಾಗಳು ಬೆಳೆಯುತ್ತವೆ.
ಹಾನಿಕಾರಕ ಕೀಟಗಳನ್ನು ತಿಂದು ಹಾನಿಕಾರಕವಲ್ಲದ ಕಿಟಗಳು ಉಳಿಯುತ್ತವೆ. ಇಂಥ ಸಗಣಿಯಲ್ಲಿ ನೀರನ್ನು ಹಿಡಿದಿಡುವ ಶಕ್ತಿ ಬರುತ್ತದೆ. ಸಾವಿರ ವರ್ಷಗಳು ಕಳೆದರೂ ಭೂಮಿ ತನ್ನ ಸತ್ವ ಕಳೆದುಕೊಳ್ಳುವುದಿಲ್ಲ.
ಜೇನು ಹುಳು ತನ್ನಿಂದ ತಾನೇ ಬಂದು ಗೂಡು ಕಟ್ಟುವವು. ಸಗಣಿಗೆ ಸಾವಿಲ್ಲ. ಸಗಣಿಯನ್ನು ಒಣಗಿಸಿ ಪುಡಿಮಾಡಿ ಇಟ್ಟುಕೊಳ್ಳಬಹುದು. ಸಗಣಿಯನ್ನು ಬಳಸುವುದರಿಂದ ರಾಸಾಯನಿಕ ಮತ್ತು ಕ್ರಿಮಿನಾಶಕಗಳನ್ನು ಬಳಸದೆ ಒಳ್ಳೆಯ ಫಸಲನ್ನು ಪಡೆಯಬಹುದು ಎನ್ನುವುದನ್ನು ಸ್ಲೈಡ್ಸ್ ನೊಂದಿಗೆ ವಿವರಿಸಿದರು.
ಮುಡಬಾಗಿಲಿನ ಅರಿವು ಪ್ರಭಾಕರ್ ‘ಆರ್ಥಿಕ ಮತ್ತು ಪೌಷ್ಠಿಕ ಭದ್ರತೆಗೆ ಅಕ್ಕಡಿ ಬೆಳೆ’ ವಿಷಯ ಕುರಿತು ಮಾತನಾಡಿ, ಆಹಾರ ಹೊಲದಿಂದ ಬಂದರೆ ಪೌಷ್ಠಿಕ, ಹೊರಗಿನಿಂದ ಬಂದರೆ ವಿಷ. ವಿವಿಧ ಆಕಾರ, ಗುಣವಿಶೇಷಗಳನ್ನು ಒಳಗೊಂಡ ಅಕ್ಕಡಿ ಸಾಲಿನಲ್ಲಿ ಅರಿವಿನ ತತ್ವವಿದೆ, ಸಹಬಾಳ್ವೆಯ ಪಾಠವಿದೆ. ಮಣ್ಣಿನ ಸಾರವನ್ನು ಹಂಚಿಕೊಂಡು ಬೆಳೆ ಬೆಳೆಯುತ್ತವೆ. ಮಣ್ಣಿನ ಆರೋಗ್ಯವನ್ನು ಕಾಪಾಡಬಹುದು.
ರೈತನೊಬ್ಬನೇ ಕೃಷಿ ಮಾಡಲು ಸಾಧ್ಯವಿಲ್ಲ. ಜಾನುವಾರುಗಳು, ಕ್ರಿಮಿಕೀಟಗಳು, ಪಳೆಯುಳಿಕೆಗಳು ಮತ್ತು ಪಂಚಭೂತಗಳು ಸೇರಿಯೇ ಆಗುವಂಥದ್ದು. ನವಗ್ರಹಗಳ ಬದಲಿಗೆ ನವದಾನ್ಯಗಳನ್ನು ಪೂಜಿಸಬೇಕು. ಎನ್ನುವುದನ್ನು ಸ್ಲೈಡ್ಸ್ ಗಳೊಂದಿಗೆ ವಿವರಿಸಿದರು.
‘ಕೃಷಿ ಮತ್ತು ಉದ್ಯಮ’ ಕುರಿತಂತೆ ಮೈಸೂರಿನ ನವೀನಕುಮಾರ ದೇಸಿರಿ ಮಾತನಾಡಿ, ರೈತರು ಉದ್ದಿಮೆದಾರರಾಗಬೇಕಾದ ತಿಳುವಳಿಕೆಯ ಕೊರತೆಯಿಂದಾಗಿ ದಲ್ಲಾಳಿಗಳ ಕೈಗೊಂಬೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಅಡುಗೆ ಎಣ್ಣೆಯನ್ನು ಎತ್ತಿನ ಗಾಣದಿಂದ ಉತ್ಪಾದನೆ ಮಾಡುವ ಕೆಲಸ ಆರಂಭಿಸಿದೆವು.

ಕೃಷಿ ಉತ್ಪನ್ನಗಳಿಗೆ ನಿರಂತರ ಬೇಡಿಕೆಯಿರುತ್ತದೆ. ಪರಿಸರಕ್ಕೆ ಹಾನಿಕಾರಕವಲ್ಲ. ಪ್ಲಾಸ್ಟಿಕ್ ಮುಕ್ತವಾದ ವಾತಾವರಣ ನಿರ್ಮಾಣ ಮಾಡಬಹುದಾಗಿದೆ. ಗೋ ಸಂಪತ್ತನ್ನು ಉಳಿಸಬಹುದು. ಎತ್ತಿನ ಗಾಣದಿಂದ ಎಣ್ಣೆ ತೆಗೆಯುವ ಪರಂಪರೆ ದೇಶಾತೀತವಾಗಿ ಬಹುಪ್ರಾಚೀನವಾದುದು.
ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಆಗುವುದಿಲ್ಲ. ಜೈವಿಕ ಕಾಂಪೋಸ್ಟ್ ತಯಾರಾಗುತ್ತದೆ. ಗಾಣ ಟೂರಿಜಂ ಮಾಡಿದೆವು. ರಾಸಾಯನಿಕಯುಕ್ತ ಎಣ್ಣೆಯಿಂದ ಅನೇಕ ರೋಗಗಳು ಬರುತ್ತವೆ ಎನ್ನುವುದು ಸಂಶೋಧನೆಯಿಂದ ಸಾಬೀತಾಗಿದೆ. ಆದರೆ ಇಂಥ ಗುಡಿ ಕೈಗಾರಿಕೆಯಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ನಿರುದ್ಯೋಗ ತನ್ನಿಂದ ತಾನೇ ನಿವಾರಣೆಯಾಗುವುದು.
ಯುವಕರು, ವಿದ್ಯಾವಂತರು ಗೃಹೋದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಅತ್ಯಂತ ದುರ್ದಿನಗಳನ್ನು ಕಾಣಬೇಕಾಗುತ್ತದೆ ಎನ್ನುವುದನ್ನು ಸ್ಲೈಡ್ಸ್ ಗಳು, ಅಂಕಿ-ಅಂಶಗಳ ಮೂಲಕ ವಿವರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಿಲ್ಲಾಧಿಕಾರಿ ಅಮರನಾರಾಯಣ ಮಾತನಾಡಿ (ಶ್ರೀಗಂಧದ ಪಾದುಕೆಗಳನ್ನು ಗುರುಗಳಿಗೆ ಅರ್ಪಿಸಿ), ಕಳೆದ ವರ್ಷ ಶ್ರೀಮಠದ ಆವರಣದಲ್ಲಿನ ಗಂಧದ ಮರಗಳನ್ನು ಕಳುವು ಮಾಡಲಾಗಿತ್ತು. ಆಗ ಅಳಿದುಳಿದ ಮರದ ತುಂಡುಗಳನ್ನು ಹೇಗೆ ಬಳಸಿಕೊಂಡು ಉತ್ಪಾದನೆಯನ್ನು ಮಾಡಬಹುದು ಎನ್ನುವುದಕ್ಕಾಗಿ ಈ ಪಾದುಕೆಗಳನ್ನು ಇಲ್ಲಿ ಪೂಜ್ಯರಿಗೆ ಸಮರ್ಪಿಸಲಾಯಿತು.
ವೈದ್ಯ ಮುರುಗೇಶ್ ಅವರ ಹೊಸದುರ್ಗದ ಬಳಿ ಇರುವ ‘ಕಲ್ಪವನ’ ಮಾದರಿಯಾಗಿದೆ. ನಾನು ಐಎಎಸ್ ಅಧಿಕಾರಿಯಾಗಿದ್ದರೂ ನನ್ನ ಮೂಲ ಕೃಷಿ. ಮತ್ತೆ ಈಗ ಕೃಷಿಯಲ್ಲಿಯೇ ಮುಂದುವರೆದಿದ್ದೇನೆ. ಅದರಲ್ಲಿಯೇ ಸಂತೋಷ ಅನುಭವಿಸುತ್ತಿದ್ದೇನೆ.
ಎರಡು ಲಕ್ಷ ಕೋಟಿಗೂ ಹೆಚ್ಚಿನ ಹಣವನ್ನು ಸರಕಾರ ರಾಸಾಯನಿಕ ಗೊಬ್ಬರಗಳಿಗೆ ಸಬ್ಸಿಡಿಯನ್ನಾಗಿ ನೀಡುತ್ತಿದೆ. ಇದನ್ನೇ ಸಾವಯವ ಕೃಷಿಗೆ ನೀಡಿದರೆ ಸಹಜ ಕೃಷಿ, ಜೀವನ ಮರಳಿ ಬಂದಂತಾಗುತ್ತದೆ.

ಸಾವಯವ ಕೃಷಿಯ ಉತ್ಪಾದನೆಗೆ ಯೋಗ್ಯ ಅಥವಾ ಹೆಚ್ಚಿನ ಬೆಲೆ ಸಿಗುವಂತಾಗಬೇಕು. ಇದರ ಮಹತ್ವವನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಡುವ ತುರ್ತು ಅಗತ್ಯವಿದೆ. ವಿದ್ಯಾವಂತ ಯುವಕರು ಕೃಷಿ ಕೆಲಸಕ್ಕೆ ನಿಸ್ಸಂಕೋಚವಾಗಿ ವಾಪಸ್ ಬರಬೇಕು. ಇದರಿಂದ ಸ್ವಾವಲಂಬಿಗಳಾಗುವುದರ ಜೊತೆಗೆ ಆರೋಗ್ಯವಂತರಾಗಿ ಬಾಳಬಹುದು.
ನನ್ನ ಅಧಿಕಾರಾವಧಿಯಲ್ಲಿ ಎಂದೂ ರೈತರ ಮೇಲೆ ಲಾಠಿ ಎತ್ತಿಸಲಿಲ್ಲ. ರೈತರು ರಾಸಾಯನಿಕ ಗೊಬ್ಬರಗಳು ಬೇಕು ಎಂದು ಮುಷ್ಕರ ಮಾಡುವ ಬದಲು ಸಾವಯವ, ಸಹಜ, ಅರಣ್ಯ ಕೃಷಿಗೆ ಹಿಂದಿರುಗಿದರೆ ಮುಂದಿನ ಪೀಳಿಗೆ ವಿಷಮುಕ್ತರಾಗಿ, ಆರೋಗ್ಯವಂತರಾಗಿ ಬದುಕುಲು ಸಾಧ್ಯ. ಇದು ರೈತರಿಂದ ಮಾತ್ರ ಸಾಧ್ಯ. ಸಗಣಿ ಎಂದು ಕೀಳಾಗಿ ಕಾಣದೆ ಅದೊಂದು ಸಂಪತ್ತು ಎಂದು ಪರಿಗಣಿಸಬೇಕು.
ಇಂದು ನಡೆದ ವಿಚಾರ ಸಂಕಿರಣದ ಹಕ್ಕೊತ್ತಾಯವೇನೆಂದರೆ ‘ರಾಸಾಯನಿಕಕ್ಕೆ ನೀಡುವ ಸಬ್ಸಿಡಿ ನಿಲ್ಲಿಸಿ, ಸಾವಯವ ಕೃಷಿಗೆ ನೀಡಬೇಕು’ ಎಂದರು.
‘ಕೃಷಿ ಮತ್ತು ಸರ್ಕಾರದ ನೀತಿಗಳು’ ಕುರಿತು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಾತನಾಡಿದರು.
ರೈತರು ಅರ್ಥಪೂರ್ಣ ಸಂವಾದ ನಡೆಸಿದರು. ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ಹಾಸನ ಮೊದಲಾದ ಜಿಲ್ಲೆಗಳ ರೈತರು ಭಾಗವಹಿಸಿದ್ದರು.
