ಹೊಸದುರ್ಗ:
12ನೇ ಶತಮಾನದಲ್ಲಿ ಸಂಘರ್ಷದಿಂದ ಹುಟ್ಟಿದ, ಸಂಘರ್ಷದಲ್ಲೇ ಬದುಕುತ್ತಿರುವುದು ಲಿಂಗಾಯತ ಧರ್ಮ ಎಂದು ಶರಣತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಬುಧವಾರ ನಡೆದ ಸಮಾರಂಭದಲ್ಲಿ ಲಿಂಗಾಯತ ಧರ್ಮದ ಕುರಿತು ಮಾತನಾಡಿದರು.
23 ಸಾವಿರ ವಚನಗಳಲ್ಲಿ ತಮ್ಮದೇ ಸ್ವತಂತ್ರ ಮಹಾಮಾರ್ಗ ರೂಪಿಸಿದ್ದು ಶರಣರು ಎಂದು ಅರಿಯಲು ವಚನ ಸಾಹಿತ್ಯ ಓದಬೇಕು ಎಂದು ಒತ್ತಾಯಿಸಿದರು.

ನಮ್ಮ ಲಿಂಗಾಯತ ಧರ್ಮದ ತತ್ವಗಳನ್ನು ತಿರುಚುವ, ಇನ್ನೊಂದು ಧರ್ಮಕ್ಕೆ ವಿಲೀನಗೊಳಿಸುವ, ಶರಣರ ವಚನಗಳನ್ನು ತಿರುಚುವ ಕೆಲಸ ನಡೆಯುತ್ತಿದೆ, ಬಸವಣ್ಣನವರ ವಚನಗಳನ್ನು ಅಪವ್ಯಾಖ್ಯಾನಿಸುವುದು ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವ್ಯವಸ್ಥೆಯನ್ನು ವಿರೋಧಿಸುವ, ಪರ್ಯಾಯ ಕಟ್ಟಿಕೊಡುವ ಕಾರ್ಯವನ್ನು ಶರಣರು ಕೈಗೊಂಡರು. ಹೀಗಾಗಿ ಇದು ವೈಶಿಷ್ಟ್ಯಪೂರ್ಣ ಧರ್ಮವೆಂದು ತಿಳಿಹೇಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಜಾತ್ಯತೀತವೆಂಬುದು ವಚನ ಸಂವಿಧಾನದ ಶಿವಾಚಾರ ತತ್ವದಲ್ಲಿದೆ. ಹಾಗೆಯೇ ಲಿಂಗಾಯತ ಧರ್ಮ ಸರ್ವತಂತ್ರ ಸ್ವತಂತ್ರ. ಇದಕ್ಕೆ ಲಿಂಗಾಯತ ಮಹಾಮಾರ್ಗ ಎನ್ನಬಹುದು. ಹೀಗಾಗಿ ಇದು ವಿಶಿಷ್ಟ ಧರ್ಮ ಎಂದು ಹೇಳಿದರು.

ದೇವರು ಬೇರೆ ಎಲ್ಲೂ ಇಲ್ಲ, ನಮ್ಮೊಳಗೆ ದೇವರನ್ನು ಹುಡುಕಬಹುದು. ಲಿಂಗಾಯತರು ಪೂಜೆ ಮಾಡಿಕೊಳ್ಳುತ್ತಾರೆ. ಇದು ಭಕ್ತನೇ ದೇವರಾಗುವ ಪ್ರಕ್ರಿಯೆ. ದೇವಾಲಯಗಳಿಗೆ ಹೋಗಬೇಡಿ ಎಂದಾಗ ನೋವಾಗುತ್ತದೆ. ಈಗ ದೇವಾಲಯಗಳು ದಂಧೆಯ ತಾಣಗಳಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಲಿಂಗಪೂಜೆಯಲ್ಲಿ ಯೋಗದ ಮಾರ್ಗವಿದೆ. ನಾವೇ ದೇವರಾಗುವುದು ಎಂದರೆ ನಮ್ಮೊಳಗಿನ ಋಣಾತ್ಮಕ ಅಂಶಗಳನ್ನು ಕಳೆದುಕೊಂಡು ಇಷ್ಟಲಿಂಗದ ಸಮರಸ, ಸಾಮರಸ್ಯದ ಭಾವ ಉಂಟಾದಾಗ ಲಿಂಗಾಯತ ತಾನೇ ದೇವರಾಗುತ್ತಾನೆ. ಹೀಗಾಗಿ ಲಿಂಗಾಯತ ಧರ್ಮದಲ್ಲಿ ದೇವರು ಹೊರಗಿಲ್ಲ ಒಳಗಿದ್ದಾನೆ. ಉಳಿದ ಧರ್ಮಗಳಲ್ಲಿ ಹೀಗಿಲ್ಲ ಎಂದು ತಿಳಿಸಿದರು.
ಹೆಚ್ಚಿದ ಅಸ್ಪೃಶ್ಯತೆಯ ಕಾರಣಕ್ಕಾಗಿ ನಡೆಯುವ ಹಲ್ಲೆಗಳು, ಮರ್ಯಾದೆ ಹತ್ಯೆಗಳಿಂದ ಪರಿಸ್ಥಿತಿ ಬದಲಾಗಿಲ್ಲ. ಇಂಥ ಸಂದರ್ಭದಲ್ಲಿ ನಾಟಕ, ಸಾಹಿತ್ಯದ ಮೂಲಕ ಬದಲಾವಣೆ ತರಲು ಸಾಣೇಹಳ್ಳಿ ಮಠ ಯತ್ನಿಸುತ್ತಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದುದಕ್ಕೆ ಸನ್ಮಾನ ಸ್ವೀಕರಿಸಿ ಶ್ಲಾಘಿಸಿ ಮಾತನಾಡಿದರು.

ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಬಹಳ ಮುಂದುವರೆದಿದ್ದೇವೆ. ಆದರೆ ವೈಚಾರಿಕವಾಗಿ ಬದಲಾವಣೆಗಳಾಗಿಲ್ಲ. ಇಂಥ ನಿರಾಸೆಯ ಸಂದರ್ಭದಲ್ಲಿ ಪಂಡಿತಾರಾಧ್ಯ ಶ್ರೀಗಳು ಬದಲಾವಣೆಯ ಗಾಳಿಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸ್ತುತ್ಯಾರ್ಹ ಎಂದು ಪುಷ್ಪಾ ಹೇಳಿದರು.

ಸಾನಿಧ್ಯ ವಹಿಸಿ ಹಂದಿಗುಂದ ಸಿದ್ಧೇಶ್ವರಮಠದ ಶಿವಾನಂದ ಸ್ವಾಮಿಗಳು ಮಾತನಾಡುತ್ತ, ರಾಜ್ಯದಲ್ಲಿ ರಂಗಭೂಮಿ ಕುರಿತು ವಿಶ್ವವಿದ್ಯಾಲಯ ಆರಂಭಿಸಲು ಯೋಚಿಸುವುದಾದರೆ ಸಾಣೇಹಳ್ಳಿ ಮಠವನ್ನು ಪರಿಗಣಿಸಬಹುದು. ರಂಗಕಲೆಯನ್ನು ಬೆಳೆಸುತ್ತಿರುವುದು ಸಾಣೇಹಳ್ಳಿ ಮಠ. ಹೀಗಾಗಿ ಅವರು ರಂಗ ಜಂಗಮ ಜೊತೆಗೆ ದಿಟ್ಟ ಜಂಗಮ ಎಂದು ಹೊಗಳಿದರು.
ಮುಖ್ಯ ಅತಿಥಿಗಳಾಗಿ ಕಡೂರಿನ ಮಾಜಿ ಶಾಸಕ ಬೆಳ್ಳಿ ಪ್ರಕಾಶ, ಚನ್ನಗಿರಿ ಮಾಜಿ ಶಾಸಕ ವಡ್ನಾಳ ರಾಜಣ್ಣ, ಶಿವಮೊಗ್ಗದ ವರ್ತಕರಾದ ಎಚ್. ಓಂಕಾರಪ್ಪ, ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ವೇದಿಕೆ ಮೇಲಿದ್ದರು. ಹೊಸದುರ್ಗದ ಸುದಿಪ್ತ ಮತ್ತು ತಂಡದಿಂದ ವಚನನೃತ್ಯ ರೂಪಕ ಪ್ರದರ್ಶನಗೊಂಡಿತು.
