ಕೋರ್ಟುಗಳಿಗೆ ಕಂಡ ಕನ್ನೇರಿ ಸ್ವಾಮಿಯ ಸತ್ಯ ಸಂಘ ಪರಿವಾರಕ್ಕೆ ಕಾಣದೆ?

ಎಂ. ಎ. ಅರುಣ್
ಎಂ. ಎ. ಅರುಣ್

ಕರ್ನಾಟಕ ಹೈಕೋರ್ಟಿನ ತೀರ್ಪನ್ನು ವಿಶೇಷವಾಗಿ ಗಮನಿಸಬೇಕು

ಬೆಂಗಳೂರು

ಇತ್ತೀಚೆಗೆ ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯ ಪರವಾಗಿ ಹಿಂದುತ್ವ ಸಂಘಟನೆಗಳಿಂದ ಮೆರವಣಿಗೆ, ಪ್ರತಿಭಟನೆ ನಡೆದವು. ಅಲ್ಲಿ ಮಾತನಾಡಿದ ಹಿಂದುತ್ವ ನಾಯಕರು ‘ಸಂತ’ ‘ಮಹಾತ್ಮ’ ಎಂದೆಲ್ಲಾ ಕನ್ನೇರಿ ಸ್ವಾಮಿಯನ್ನು ವರ್ಣಿಸಿ ಅವರ ಮೇಲೆ ವಿಧಿಸಿರುವ ನಿರ್ಬಂಧವನ್ನು ಉಗ್ರವಾಗಿ ಖಂಡಿಸಿದರು.

“ಒಂದು ಸಣ್ಣ ಗ್ರಾಮ್ಯ ಭಾಷೆಯ ಪದ ಬಳಸಿರುವುದಕ್ಕೆ ಅವರನ್ನು ನಿರ್ಬಂಧಿಸಿರುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷದಿಂದ ಇದು ಹಿಂದೂ ಧರ್ಮ ಒಡೆಯುವ ಸಂಚು,” ಎಂದು ವಿಜಯಪುರದಲ್ಲಿ ಒಬ್ಬರು ಕೇಸರಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನೇರಿ ಸ್ವಾಮಿ ಸಂತರೇ? ಮಹಾತ್ಮರೇ? ಕರ್ನಾಟಕದ ಒಂದು ದೊಡ್ಡ ಸಮುದಾಯದ ಪೂಜ್ಯರ ಮೇಲೆ ಇವರು ಬಳಸಿರುವುದು ಸಣ್ಣ ಗ್ರಾಮ್ಯ ಭಾಷೆಯ ಪದವೆ?

ಲಿಂಗಾಯತ ಪೂಜ್ಯರ ಮೇಲೆ ಇವರು ಬಳಸಿರುವುದು ಸಣ್ಣ ಗ್ರಾಮ್ಯ ಭಾಷೆಯ ಪದವೆ?

ಈ ಪ್ರಶ್ನೆಗಳಿಗೆ ಈಗ ಕೋರ್ಟಿನ ಕಟಕಟೆಯಲ್ಲಿ ಉತ್ತರ ದೊರಕಿದೆ. ಕೇವಲ ಎರಡು ವಾರಗಳ ಅವಧಿಯಲ್ಲಿ ನಗರ ಸಿವಿಲ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟುಗಳ ಕದ ತಟ್ಟಿದ ವಿಶಿಷ್ಟ ಪ್ರಕರಣವಿದು. ಅಲ್ಲೆಲ್ಲಾ ವಿಚಾರಣೆ ನಡೆಸಿದ ಯಾವ ನ್ಯಾಯಮೂರ್ತಿಯವರಿಗೂ ಕನ್ನೇರಿ ಸ್ವಾಮಿ ‘ಸಂತ’ ಅಥವಾ ‘ಮಹಾತ್ಮ’ರಂತೆ ಕಾಣಿಸಿಲ್ಲ.

ಈ ಮೂರು ಹಂತಗಳ ಕೋರ್ಟುಗಳ ತೀರ್ಪುಗಳಲ್ಲಿ ನಾವು ವಿಶೇಷವಾಗಿ ಗಮನಿಸಬೇಕಿರುವುದು ಕರ್ನಾಟಕ ಹೈಕೋರ್ಟಿನ ಕಲಬುರ್ಗಿ ಪೀಠದ ತೀರ್ಮಾನವನ್ನು.

ವಿಜಯಪುರ ಜಿಲ್ಲೆಗೆ ನಿರ್ಬಂಧ ಬಿದ್ದ ಬೆನ್ನಲ್ಲೇ ಕನ್ನೇರಿ ಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಕ್ಟೊಬರ್ 17 ಅವರ ಅರ್ಜಿಯನ್ನು ಕಲಬುರ್ಗಿ ಪೀಠದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠವು ವಜಾಗೊಳಿಸಿತು.

ಹಿಡಿದು ಮೆಟ್ಟಿಲೇ ಹೊಡಿಬೇಕ ಅವ್ರಿಗೆ,

ತಮ್ಮ 15 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಕನ್ನೇರಿ ಸ್ವಾಮಿಯ ಭಾಷಾ ಪಾಂಡಿತ್ಯ ಮತ್ತು ಪದಬಳಕೆಯಲ್ಲಿ ಕಾಣಿಸುವ ಅವರ ಯೋಗ್ಯತೆಯನ್ನು ವಿವರವಾಗಿ ದಾಖಲಿಸಿದ್ದಾರೆ.

ತೀರ್ಪು ಇಂಗ್ಲೀಷಿನಲ್ಲಿದೆ, ಆದರೂ ನ್ಯಾಯಮೂರ್ತಿಗಳು ಅಕ್ಟೊಬರ್ 9 ಸಾಂಗ್ಲಿ ಜಿಲ್ಲೆಯ ಬೀಳೂರು ಗ್ರಾಮದಲ್ಲಿ ಕನ್ನೇರಿ ಸ್ವಾಮಿ ಮಾಡಿದ ವಿವಾದಿತ ಭಾಷಣದ ಆಯ್ದ ಭಾಗಗಳನ್ನು ಕನ್ನಡದಲ್ಲಿಯೇ ಉಲ್ಲೇಖಿಸಿದ್ದಾರೆ.

” ‘ಗುಡ್ಯಾಗ ಹೋಗಬ್ಯಾಡ್ರಿ ಗುಡ್ಯಾಗ ಹೋಗಬ್ಯಾಡ್ರಿ ಅಂತಾ ಪ್ರಚಾರ ನಡೆದೈತಿ, ತಿಂಗಳ ದೀಡ್ ತಿಂಗಳ ಹಿಂದೆ ಮಾಡಿದ್ರಪ್ಪಾ, ಮುಖ್ಯಮಂತ್ರಿಗಳ ಕೃಪಾಪೋಷಕ ಲಿಂಗಾಯತ ಮಠಾಧೀಪತಿಗಳ ಒಕ್ಕೂಟ ಕಲಾವಿದರಿಂದ ಕೂಡಿಕೊಂಡತಹ ಬಸವ ಸಂಸ್ಕೃತಿ ಅಭಿಯಾನ ಎನ್ನುವ ನಾಟಕವನ್ನ ತೆಗೆದುಕೊಂಡು ಇಡೀ ಕರ್ನಾಟಕ ರಾಜ್ಯದ ತುಂಬ ತಿರುಗಾಡಿ ದೇವರು ಗುಡಿಯಾಗ ಇಲ್ಲ, ಗುಡ್ಯಾಗ ಹೋಗಬ್ಯಾಡ್ರಿ, ಮನ್ಯಾಗಿನ ದೇವ್ರಗಳನ್ನು ತಗೊಂಡು ಹೊಳ್ಳಾಗ ಹಾಕ್ರಿ ಹೋಟೆಲ್‌ದಾಗ ಹೋಗಿ ದಾರು ಕುಡಿರಿ, ಆರಾಮಾಗಿರಿ, ಮಾಂಸಾ ತಿನ್ನರಿ, ಅವರನ್ನ ಮುಂದೆ ಕುದ್ರಸ್ಕೊಂಡ ಆ ಸೂಳೆ ಮಕ್ಕಳಿಗೆ ಬುದ್ದಿ ನಾನೇ ಹೇಳಬೇಕು. ಹಿಡಿದು ಮೆಟ್ಟಿಲೇ ಹೊಡಿಬೇಕ ಅವ್ರಿಗೆ, ಮೆಟ್ ಮೆಟ್ಲೆ ಹೊಡಿದ್ರುನು ಕಡಿಮೆನೇ.’

ಆ ಹಿನ್ನೆಲೆಯಲ್ಲಿ ಗದಗ, ವಿಜಯಪುರ, ಬೀದರ, ಸಿಂಧನೂರು, ಕೂಡಲಸಂಗಮ, ದಾವಣಗೇರೆ, ಮುದ್ದೇಬಿಹಾಳ, ಬಸವಕಲ್ಯಾಣ, ಹೊಸದುರ್ಗ, ಬೆಳಗಾವಿ, ಚಿಟಗುಪ್ಪ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ಮತ್ತು ಮಠಾಧೀಶರು ಪ್ರತಿಕೃತಿಗಳನ್ನು ದಹಿಸಿ ಹಾಗೂ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿ, ಮನವಿ
ಪತ್ರಗಳನ್ನು ಸಲ್ಲಿಸಿರುತ್ತಾರೆ”

(ಕನ್ನೇರಿ ಸ್ವಾಮಿ ಮೇಲೆ ಹೈಕೋರ್ಟ್ ತೀರ್ಪು ಪುಟ 6 ಮತ್ತು 7)

ಪೂಜ್ಯರಿಗೆ ಯೋಗ್ಯ ಭಾಷೆಯಲ್ಲ

ಪೊಲೀಸ್ ಅಧೀಕ್ಷಕರ ವರದಿಯಲ್ಲಿ ದಾಖಲಾಗಿರುವ ಕನ್ನೇರಿ ಸ್ವಾಮಿಯ ಮೇಲಿನ ಹೇಳಿಕೆಯ ಆಧಾರದ ಮೇಲೆ ನ್ಯಾಯಮೂರ್ತಿಗಳು ತಮ್ಮ ತೀರ್ಪನ್ನು ನೀಡಿದ್ದಾರೆ. ಅವರ ತೀರ್ಪಿನ ಆಯ್ದ ಭಾಗಗಳು ಇಲ್ಲಿವೆ:

…ಕೋರ್ಟಿನ ಮುಂದಿರುವ ದಾಖಲೆಗಳು ಅರ್ಜಿದಾರರು (ಕನ್ನೇರಿ ಸ್ವಾಮಿ) ನಿಂದನೀಯ ಮತ್ತು ಅವಹೇಳನಕಾರಿ ಭಾಷೆಯ ಬಳಸಿರುವುದನ್ನು ತೋರಿಸುತ್ತದೆ. ಸಮಾಜದಲ್ಲಿ ಪೂಜ್ಯ ಸ್ಥಾನವಿರುವ ಯಾವುದೇ ವ್ಯಕ್ತಿಗೆ ಇದು ಯೋಗ್ಯ ಭಾಷೆಯಲ್ಲ.

ಪೂಜ್ಯ ಸ್ಥಾನವಿರುವ ಯಾವುದೇ ವ್ಯಕ್ತಿಗೆ ಇದು ಯೋಗ್ಯ ಭಾಷೆಯಲ್ಲ.

…ಅರ್ಜಿದಾರರು (ಕನ್ನೇರಿ ಸ್ವಾಮಿ) ಸಭ್ಯವಾಗಿ ಮಾತನಾಡದೆ, ಬೆದರಿಕೆಯ ಮತ್ತು ನಿಂದನೀಯ ಭಾಷೆ ಬಳಸಿ, ದೈಹಿಕ ಹಲ್ಲೆಯನ್ನು ಪ್ರಚೋದಿಸುವ ಹೇಳಿಕೆಯನ್ನೂ ನೀಡಿದ್ದಾರೆ.

…ಇಂತಹ ನಡವಳಿಕೆಯು ನೈತಿಕ ಮತ್ತು ಆಧ್ಯಾತ್ಮಿಕ ಶಿಸ್ತಿಗೆ ಒಳಪಟ್ಟಿರುವ ಧಾರ್ಮಿಕ ವ್ಯಕ್ತಿಗಳಿಗೆ ಹೊಂದಿಕೆಯಾಗುವುದಿಲ್ಲ. ಇದು ಅವರ ಪದವಿಗಿರುವ ಘನತೆಯನ್ನು ಕುಗ್ಗಿಸುತ್ತದೆ.

…ಇಂತಹ ಅಂಕೆಯಿಲ್ಲದ ಮತ್ತು ಪ್ರಚೋದನಕಾರಿ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯು, ತಾನು ಧಾರ್ಮಿಕ ಗುರುವಿನ ಸ್ಥಾನ ಅಲಂಕರಿಸಿದ ಮಾತ್ರಕ್ಕೆ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ರೀತಿಯ ವರ್ತನೆ ಧಾರ್ಮಿಕ ಸ್ವಾತಂತ್ರ್ಯವೆಂದೂ ಹೇಳಲು ಸಾಧ್ಯವಿಲ್ಲ.

…ಅರ್ಜಿದಾರರಿಗೆ (ಕನ್ನೇರಿ ಸ್ವಾಮಿಗೆ) ಸಮಾಜದಲ್ಲಿ ಗೌರವಾನ್ವಿತ ಸ್ಥಾನವಿದೆಯೆಂದು ಕೋರ್ಟಿಗೆ ತಿಳಿಸಲಾಗಿದೆ. ಆದರೆ ಅವರ ಹೇಳಿಕೆಗಳು ಈಗಾಗಲೇ ಸಾರ್ವಜನಿಕ ಪ್ರತಿಭಟನೆಗಳಿಗೆ ಕಾರಣವಾಗಿವೆ ಮತ್ತು (ಲಿಂಗಾಯತ ಸ್ವಾಮೀಜಿಗಳ) ಭಕ್ತರಲ್ಲಿ ಸ್ಪಷ್ಟವಾದ ಉದ್ವಿಗ್ನತೆಯನ್ನು ಸೃಷ್ಟಿಸಿವೆ.

ಇಂತಹ ಪ್ರಚೋದನಕಾರಿ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

…ಇಂತಹ ನಡವಳಿಕೆಯು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಅಶಾಂತಿಯನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿರುವಾಗ, ಜಿಲ್ಲಾಡಳಿತವು ತೆಗೆದುಕೊಂಡಿರುವ (ನಿರ್ಬಂಧ) ಕ್ರಮ ವಿವೇಚನೆಯಿಲ್ಲದ್ದು ಅಥವಾ ಅತಿಯಾದದ್ದು ಎಂದು ಕರೆಯಲಾಗುವುದಿಲ್ಲ.

…ಅರ್ಜಿದಾರರು ಬಸವನ ಬಾಗೇವಾಡಿಗೆ ಭೇಟಿ ನೀಡಿದರೆ ಪ್ರತಿಭಟನೆ ನಡೆದು, ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಯಿದೆ ಎಂಬ ವಿಶ್ವಾಸಾರ್ಹ ಗುಪ್ತಚರ ವರದಿಯ ಮೇಲೆ ಜಿಲ್ಲಾಧಿಕಾರಿಗಳು ನಿಷೇಧಿತ ಆದೇಶವನ್ನು ಹೊರಡಿಸಿದ್ದಾರೆ.

…ಸಂವಿದಾನ 19(1)(ಡಿ) ವಿಧಿಯು ಮುಕ್ತವಾಗಿ ಸಂಚರಿಸುವ ಮೂಲಭೂತ ಹಕ್ಕನ್ನು ನೀಡಿದ್ದರೂ, ಜೊತೆಗೆ ಸಾರ್ವಜನಿಕ ಶಾಂತಿಗೆ ಧಕ್ಕೆ ತರದಂತೆ ವರ್ತಿಸುವ ಬಾಧ್ಯತೆಯನ್ನೂ ವಿಧಿಸಿದೆ. ಈ ಸಂದರ್ಭದಲ್ಲಿ ಅರ್ಜಿದಾರರು (ಬಸವನಬಾಗೇವಾಡಿಗೆ) ಹೋಗಬೇಕೆಂದು ಹಠ ಹಿಡಿಯುವ ಬದಲು ಸ್ವಯಂಪ್ರೇರಣೆಯಿಂದ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ತಮ್ಮ ಭೇಟಿಯನ್ನು ಮುಂದೂಡುವ ಆಧ್ಯಾತ್ಮಿಕ ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು.

ನೀವು ಒಳ್ಳೆಯ ಪ್ರಜೆಯಲ್ಲ

ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೊರೆ ಹೋದ ಕನ್ನೇರಿ ಸ್ವಾಮಿಗೆ ಕಾನೂನು ಸಮರದಲ್ಲಿ ಎರಡನೇ ಹಿನ್ನಡೆಯಾಯಿತು.

ಅವರ ಮೇಲ್ಮನವಿ ಅರ್ಜಿಯನ್ನು ಅಕ್ಟೊಬರ್ 29 ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

“ಒಬ್ಬ ಸ್ವಾಮೀಜಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ. ನೀವು ಒಳ್ಳೆಯ ಪ್ರಜೆಯಲ್ಲ. ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ಅವಹೇಳನಕಾರಿ ಭಾಷೆ ಬಳಸಿದ್ದೀರಿ. ನೀವು ಮಾತನಾಡುವುದು ನಿಲ್ಲಿಸಿ ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ,” ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಒಬ್ಬ ಸ್ವಾಮೀಜಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ.

ಅದಾದ ಎರಡು ದಿನಗಳಿಗೆ ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಕನ್ನೇರಿ ಸ್ವಾಮಿಗೆ ಮೂರನೇ ಹಿನ್ನಡೆಯಾಯಿತು.

ಅವರ ವಿರುದ್ಧ ಲಿಂಗಾಯತ ಮಠಾಧೀಶರ ಒಕ್ಕೂಟ ಹೂಡಿದ ಒಂದು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯಲ್ಲಿ ಬೆಂಗಳೂರಿನ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ಹೊರಡಿಸಿದರು. ಅದರಲ್ಲಿ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಕನ್ನೇರಿ ಸ್ವಾಮಿಗೆ ಮತ್ತು ಅವರ ಬೆಂಬಲಿಗರಿಗೆ ನಿರ್ಬಂಧಕಾಜ್ಞೆ​ ವಿಧಿಸಿದ್ದಾರೆ.

ಈ ಬಗ್ಗೆ ಕನ್ನೇರಿ ಸ್ವಾಮಿಗೆ ನೋಟಿಸ್ ಜಾರಿ ಮಾಡಿ ಡಿಸೆಂಬರ್ 5ರಂದು ಮುಂದಿನ ವಿಚಾರಣೆ ನಡೆಯುವಂತೆ ನ್ಯಾಯಾಧೀಶರು ದಿನ ಗೊತ್ತು ಪಡಿಸಿದ್ದಾರೆ.

ಒಟ್ಟಾರೆ ಕನ್ನೇರಿ ಸ್ವಾಮಿ ಕೋರ್ಟುಗಳಲ್ಲಿ ಛೀಮಾರಿ ಹಾಕಿಸಿಕೊಂಡು ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಅವರು ಹಾಕಿರುವ ಬಟ್ಟೆಗೂ, ಅವರ ವರ್ತನೆಗೂ ಸಂಬಂಧವಿಲ್ಲವೆನ್ನುವುದು ಅವರ ವಿರುದ್ಧ ಸಾಕ್ಷಿಯನ್ನು ಪರಿಶೀಲಿಸಿರುವ ನ್ಯಾಯಾಧೀಶರ ಕಾನೂನುಬದ್ಧ ನಿಲುವು.

ಆದರೆ ಕನ್ನೇರಿ ಸ್ವಾಮಿಗೆ ಏನೋ ದೊಡ್ಡ ಅನ್ಯಾಯವಾಗಿದೆ ಎಂದು ಸಂಘ ಪರಿವಾರದವರು ಹೋರಾಟ ಶುರು ಮಾಡಿದ್ದಾರೆ. ಬೆಳಗಾವಿಯಲ್ಲಿ ಚಕ್ರವರ್ತಿ ಸೂಲಿಬೆಲೆ, ಯತ್ನಾಳ, ಪ್ರತಾಪ ಸಿಂಹ, ಈಶ್ವರಪ್ಪ, ಸಿ.ಟಿ. ರವಿಯಂತವರು ಕರೆ ನೀಡಿದ ಮೇಲೆ ಅಲ್ಲಲ್ಲಿ ಹಿಂದುತ್ವದ ಸಂಘಟನೆಗಳು ಕೂಗಾಡಿಕೊಂಡು ರಸ್ತೆಗಿಳಿದಿವೆ.

ಕನ್ನೇರಿ ಸ್ವಾಮಿಗೆ ಏನೋ ದೊಡ್ಡ ಅನ್ಯಾಯವಾಗಿದೆ ಎಂದು ಸಂಘ ಪರಿವಾರದವರು ಹೋರಾಟ ಶುರು ಮಾಡಿದ್ದಾರೆ

ಇವರು ಕನ್ನೇರಿ ಸ್ವಾಮಿಯ ವರ್ತನೆ ಕಾಣದಷ್ಟು ಕುರುಡರೇ ಅಥವಾ ಕೋರ್ಟುಗಳ ಧ್ವನಿ ಕೇಳದಷ್ಟು ಕಿವುಡರೇ. ಇವರನ್ನು ರಸ್ತೆಗಿಳಿಸಿರುವವರ ಉದ್ದೇಶವೇನು? ಲಿಂಗಾಯತರನ್ನು, ಲಿಂಗಾಯತ ಮಠಾಧೀಶರನ್ನು ಟಾರ್ಗೆಟ್ ಮಾಡಿಕೊಂಡು ಏನನ್ನು ಸಾಧಿಸಲು ಹೊರಟ್ಟಿದ್ದಾರೆ? ಇದು ಈಗ ಲಿಂಗಾಯತರು ಉತ್ತರ ಕಂಡುಕೊಳ್ಳಬೇಕಾಗಿರುವ ಪ್ರಶ್ನೆಗಳು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
3 Comments
  • ಕನ್ನೇರಿ ಶ್ರೀ ನು ಅಲ್ಲ ಸ್ವಾಮಿನು ಅಲ್ಲ ಗೂಂಡಾ ಪ್ರವೃತ್ತಿಯ ಅವರಿಗೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಅಂತಹವರ ವಿರುದ್ಧ FIR ದಾಖಲಿಸಿ ಜೈಲಿಗೆ ಅಟ್ಟಬೇಕು. ಸಾರ್ವಜನಿಕರಿಗೆ ನೋವುಂಟು ಮಾಡಿದ ಇವರಿಗೆ ಬುದ್ದಿ ಬರುತ್ತದೆ.

  • ಇಂಥಹ ಅವಿವೇಕಿ ಮಾತನಾಡುವವರಿಗೆ ಬೆಂಬಲ ಕೊಡುವವರು, ಆ ಕೀಳುಮಟ್ಟದ ಭಾಷೆ ಬಳಸಿದ ಕನ್ನೇರಿ ಸ್ವಾಮಿಗಿಂತ ಕಡೆಯುವವರು.ಕೋರ್ಟಗಳು ನೀಡಿದ ತೀರ್ಪುನ್ನು ಕಡೆಗಣಿಸುತಿರುವ ಇವರು ಸಂವಿಧಾನಕ್ಕೆ ಚ್ಯುತಿ ತಂದಿದ್ದಾರೆ.ಇಂಥವರ ಮೇಲು ಸಹ ಮೊಕದ್ದಮೆ ದಾಖಲಿಸಿ ಕೋರ್ಟ್ನ ಕಟಕಟೆಯಲ್ಲಿ ನಿಲ್ಲಿಸಿದಾಗಲೇ ಇವರಿಗೆ ಪಾಠ ಕಲಿಸಿದಂತೆ ಆಗುವುದು.

  • ಈ ಸತ್ಯ ಸಂಘ ಪಾರಿವಾರಕ್ಕೆ ಕಾಣುತ್ತದೆ ಆದರೆ ಕಾಣದಂತೆ ವರ್ಥಿಸುತ್ತಾರೆ, ಕಾರಣ ಇದು ಸಂಘ ಪಾರಿವಾರದ ಕಾರ್ಯಸೂಚಿ (agenda). ಜೊತೆಗೆ, ಇದು ಅವರ ಟೂಲ್ ಕಿಟ್ಟಿನ ಭಾಗ. ಲಿಂಗಾಯತರ ವಿರುದ್ಧ ಹಿಂದುತ್ವದ ರಾಜಕೀಯದ ಒಳಸಂಚು ಮತ್ತು ಹುನ್ನಾರ. ಇದರಲ್ಲಿ, ಸಂಘಪಾರಿವಾರವು ಲಿಂಗಾಯತ ಅಥವಾ ಬಸವ ಪರಂಪರೆಯ ಮಠಗಳು ಮತ್ತು ಮಠಧೀಶರುಗಳನ್ನು ಹಾಗೂ RSS ನ ರಾಜಕೀಯ ಮಖವಾಡವಾದ BJP ಪಕ್ಷದಲ್ಲಿರುವ ಲಿಂಗಾಯತ ರಾಜಕಾರಣಿಗಳನ್ನು ಗುರಾಣಿಗಳಾಗಿ ಉಪಯೋಗಿಸಿಕೊಂಡು ಲಿಂಗಾಯತರನ್ನು ಹಿಂದುತ್ವದ ತೆಕ್ಕೆಯಿಂದ ಹೊರಹೋಗದಂತೆ ಹುನ್ನಾರ ನಡೆಸಿದ್ದಾರೆ. ಈ ಕನ್ನೇರಿ ಸ್ವಾಮಿ, ಯತ್ನಾಳ್, ಈಶ್ವರಪ್ಪ, ಸಿಟಿ ರವಿ, ವಿಜಯೇಂದ್ರ, ಬೊಮ್ಮಯಿ ಹಾಗೂ ಯಡಿಯೂರಪ್ಪನವರನ್ನೂ ಒಳಗೊಂಡಂತೆ ಇತರೆ ಲಿಂಗಾಯತ ರಾಜಕಾರಣಿಗಳು ಸಂಘ ಪಾರಿವಾರದ ಒಕಾಸಂಚಿನ ಹಾಗೂ ಟೂಲ್ ಕಿಟ್ಟಿನ ಬಾಗವಾಗಿದೆ. ಇದನ್ನು ಲಿಂಗಾಯತ ಧರ್ಮೇಯರು ಅರ್ಥಮಾಡಿಕೊಂಡಷ್ಟು ಲಿಂಗಾಯತರಿಗೆ ಒಳ್ಳೆಯದು. ನಾವು ಈಗ ಹಿಂದುತ್ವ ರಾಜಕೀಯದ ಭಾಗವಾದ ಹಿಂದು ಆಗಿ ನಮ್ಮ ಮುಂದಿನ ಪೀಳಿಗೆಯನ್ನು ಶೂದ್ರರಾಗಿ ಮಾಡುವುದೋ ಅಥವಾ ಬಸವ ಪ್ರಣೇತ ಲಿಂಗಾಯತರಾಗಿ ಸಾಮಾಜಿಕ ಕ್ರಾಂತಿಯ ಭಗವಾಗೋಣವೋ? ಯೋಚಿಸಿ ನಿರ್ಧಾರ ಮಾಡುವ ಸಂಘರ್ಷದ ಹಂತ ತಲುಪಿದ್ದೇವೆ.

Leave a Reply

Your email address will not be published. Required fields are marked *