ಅಭಿಯಾನ ಅನುಭವ: ಧಾರವಾಡದಲ್ಲಿ ಮಹಿಳೆಯರೇ ಹೆಚ್ಚಿಗೆ ಬಂದರು

ಬಿಂದು ಆರ್.ಡಿ.
ಬಿಂದು ಆರ್.ಡಿ.

ಜಿಲ್ಲೆಯಲ್ಲಿ ತಾಲೂಕು, ಹಳ್ಳಿ ಮಟ್ಟಕ್ಕೆ ಅಭಿಯಾನ ವಿಸ್ತರಿಸಲು ಬಸವ ಸಂಘಟನೆಗಳ ಆಲೋಚನೆ

ಧಾರವಾಡ

(ವಿವಿಧ ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ದುಡಿದ ಮುಖಂಡರ, ಕಾರ್ಯಕರ್ತರನ್ನು ಬಸವ ಮೀಡಿಯಾ ಸಂದರ್ಶಿಸುತ್ತಿದೆ.

​ಧಾರವಾಡ ಜಿಲ್ಲೆ ಅಭಿಯಾನ ಸಮಿತಿಯ ಖಚಾಂಚಿ ಬಸವಂತಪ್ಪ ತೋಟದ ತಮ್ಮ ಅನುಭವವನ್ನು ಬಿಂದು ಆರ್.ಡಿ. ಅವರೊಂದಿಗೆ ಹಂಚಿಕೊಂಡಿದ್ದಾರೆ.)

1) ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ, ಜನರನ್ನು ಸಂಘಟಿಸಿದ್ದು ಹೇಗೆ?

​ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ವಿವಿಧ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ಅಭಿಯಾನ ಧಾರಾವಾಡದಲ್ಲಿ ಸೆಪ್ಟೆಂಬರ್ 12 ನಡೆಯಿತು.

ಅದಕ್ಕೆ ಪೂರ್ವಭಾವಿಯಾಗಿ ನಗರದ ಶ್ರೀ ಮುರುಘಾ ಮಠದಲ್ಲಿ ಎಲ್ಲಾ ಬಸವಪರ ಸಂಘಟನೆಗಳ ಜೊತೆ ಮೂರು ಸಭೆಗಳು ನಡೆದವು. ಮೊದಲ ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಎಸ್. ಎಂ. ಜಾಮದಾರ್ ಅತಿಥಿಯಾಗಿ ಭಾಗವಹಿಸಿ ಅಭಿಯಾನದ ರೂಪುರೇಷೆ ನೀಡಿದರು. ಮೂರನೇ ಸಭೆಯಲ್ಲಿ ಗದುಗಿನ ಶ್ರೀಗಳು ಮತ್ತು ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿಗಳು ಕೂಡ ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಈ ಸಭೆಗಳಲ್ಲಿ ಅಭಿಯಾನದ ಜಿಲ್ಲಾ ಸಮಿತಿಯ ರಚನೆಯಾಯಿತು. ಅಧ್ಯಕ್ಷರಾಗಿ ಜೆ. ವಿ. ಕೊಂಗವಾಡ, ಉಪಾಧ್ಯಕ್ಷರಾಗಿ ಸಿದ್ದಣ್ಣ ನಡಕಟ್ಟಿ, ಕಾರ್ಯದರ್ಶಿಯಾಗಿ ನಾಗರಾಜ ಪಟ್ಟಣಶೆಟ್ಟಿ, ಖಚಾಂಚಿಯಾಗಿ ಬಸವರಾಜಪ್ಪ ತೋಟದ, ಸಹಕಾರ್ಯದರ್ಶಿಯಾಗಿ ಶಿವಾನಂದ ಶೆಟ್ಟನ್ನವರ್ ಆಯ್ಕೆಯಾದರು. ಜೊತೆಗೆ 15 ಜನರ ಆಡಳಿತ ಮಂಡಳಿ ಸದಸ್ಯರು ಕೂಡ ಆಯ್ಕೆಯಾದರು.

ಅಭಿಯಾನದ ಸಮಿತಿಯವರು ಧಾರಾವಾಡ ಜಿಲ್ಲೆಯ 15 ವಿರಕ್ತಮಠಗಳಿಗೆ ಆಹ್ವಾನ ಮಾಡಿ ಅಭಿಯಾನದ ನೇತೃತ್ವವಹಿಸುವಂತೆ ಕೋರಿಕೊಂಡರು.

ಅಭಿಯಾನಕ್ಕೆ ಜಿಲ್ಲಾಡಳಿತ, ಪೋಲೀಸ್ ಇಲಾಖೆಯಿಂದ ಅನುಮತಿ ಪಡೆದೆವು. ಎಲ್ಲಾ ಬಸವಪರ ಸಂಘಟನೆಗಳು ತಮ್ಮ ತಮ್ಮ ಊರುಗಳಲ್ಲಿ ಪ್ರಚಾರ ಮಾಡಿದರು.

ಪೂರ್ವಭಾವಿ ಸಭೆಯಲ್ಲಿ ಅಭಿಯಾನಕ್ಕೆ 1 ಲಕ್ಷ ರೂಪಾಯಿಯನ್ನು ಶಂಕರ್ ಕೋಳಿವಾಡ ದಾಸೋಹ ನೀಡಿದರು, ಆನಂತರ ಉತ್ಸಾಹದಿಂದ ಬಸವ ಭಕ್ತರು ಸ್ವಯಂಪ್ರೇರಿತವಾಗಿ 5, 10 ಸಾವಿರ ಹಣ ನೀಡುತ್ತಾ ಬಂದರು.

2) ಜನರಿಂದ ಸ್ಪಂದನೆ ಹೇಗಿತ್ತು? ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಭಿಯಾನ ನಡೆಯಿತೆ?

ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಅಭಿಯಾನಕ್ಕೆ ಧಾರವಾಡದಲ್ಲಿಯೇ ಸುಮಾರು 8-10 ಸಾವಿರ ಜನ ಸೇರಿದ್ದರು, ಅದರಲ್ಲಿ ವಿಶೇಷವಾಗಿ 60% ಮಹಿಳೆಯರೇ ಇದ್ದರು. 5,000 ಮಹಿಳೆಯರು ವಚನ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ತಮ್ಮ ಮನೆಯ ಹಬ್ಬದಂತೆ ಅತ್ಯಂತ ಉತ್ಸಾಹದಿಂದ ಸಾಗಿದರು.

​3) ಅಭಿಯಾನದ ಬಗ್ಗೆ ನಿರೀಕ್ಷೆ ಏನಿತ್ತು. ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಭಿಯಾನ ನಡೆಯಿತೆ?

ನಮ್ಮ ಪ್ರಮುಖ ನಿರೀಕ್ಷೆಯೆಂದರೆ ಬಸವಾದಿ ಶರಣರ ಚಿಂತನೆಗಳನ್ನು ಮತ್ತು ‘ವಚನ ಸಂವಿಧಾನ’ದ ಆದರ್ಶಗಳನ್ನು ಜನಮನದಲ್ಲಿ ಬಿತ್ತುವುದು. ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವುದು. ರಾಜ್ಯಾದ್ಯಂತ ಸಂಚರಿಸಿ, ಎಲ್ಲೆಲ್ಲೂ ಸಾವಿರಾರು ಜನರ ಸೆಳೆದ ಅಭಿಯಾನ ನಮ್ಮ ನಿರೀಕ್ಷೆ ಮೀರಿ ನಡೆಯಿತು. 120% ಯಶಸ್ವಿಯಾಯಿತು.

4) ಅಭಿಯಾನದಲ್ಲಿ ನಿಮ್ಮ ಗಮನ ಸೆಳೆದ ಅಂಶಗಳೇನು?

ಮಠಾಧೀಶರ ಒಕ್ಕೂಟದ ಶ್ರಮ ಮತ್ತು 25ಕ್ಕೂ ಹೆಚ್ಚು ಸ್ವಾಮೀಜಿಗಳ ಭಾಗವಹಿಸುವಿಕೆ ವಿಶೇಷವಾಗಿತ್ತು. ​ಬಸವಣ್ಣನವರ ಭಾವಚಿತ್ರ ಮತ್ತು ವಚನ ಸಾಹಿತ್ಯದ ಭವ್ಯ ಮೆರವಣಿಗೆ, ಯುವಜನತೆಯಲ್ಲಿ ಬಸವತತ್ವವನ್ನು ಬಿತ್ತುವ ಸಲುವಾಗಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮ, ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಮತ್ತೆ ಕೇಳಿಬಂದಿದ್ದು ಗಮನ ಸೆಳೆಯಿತು.

ಅಭಿಯಾನದ ಸಂವಾದವನ್ನು ಧಾರಾವಾಡ ಮೃತ್ಯುಂಜಯ ಕಾಲೇಜಿನಲ್ಲಿ ಏರ್ಪಡಿಸಿದ್ದೆವು, ಧಾರಾವಾಡದ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಈ ಸಂವಾದದಲ್ಲಿ ಲಿಂಗಾಯತ ಮಠಾಧೀಶರು, ಬಸವಪರ ಸಂಘಟನೆಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಲಿಂಗಾಯತ ಮಠಾಧೀಶರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅವುಗಳಿಗೆ ಸಮಂಜಸವಾಗಿ ವಿದ್ಯಾರ್ಥಿಗಳ ವಯಸ್ಸಿಗೆ ತಕ್ಕಂತೆ, ಮನಮುಟ್ಟುವಂತೆ ಮಠಾಧೀಶರು ಉತ್ತರಿಸಿದರು.

  1. ಅಭಿಯಾನದಲ್ಲಿ ಸಮಾಜಕ್ಕೆ ಬಂದ ಸಂದೇಶಗಳೇನು?

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಗೌರವಿಸುವುದು; ಕಾಯಕ ಶ್ರದ್ಧೆ, ದಯೆ, ಸತ್ಯ ಮತ್ತು ಪ್ರಾಮಾಣಿಕತೆಯಂತಹ ಆದರ್ಶಗಳನ್ನು ಪಾಲಿಸುವುದು; ಸ್ಥಾವರಕ್ಕಲ್ಲದೆ ಜಂಗಮಕ್ಕೆ ಮೌಲ್ಯ ನೀಡುವುದು, ಮನುಷ್ಯ ಮನುಷ್ಯರ ನಡುವೆ ನೈತಿಕ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಅಭಿಯಾನದ ಮುಖ್ಯ ಸಂದೇಶವಾಗಿತ್ತು.

7) ಅಭಿಯಾನ ಜನರ ಮೇಲೆ ಮತ್ತು ಬಸವ ಸಂಘಟನೆಗಳ ಮೇಲೆ ಬೀರಿದ ಪರಿಣಾಮವೇನು?

ಅಭಿಯಾನ ಅತಿದೊಡ್ಡ ಪರಿವರ್ತನೆಯ ಹಾದಿಯಾಯಿತು. 12ನೇ ಶತಮಾನದ ಬಸವಾದಿ ಶಿವಶರಣರ, ಅವರ ತತ್ವಗಳ, ವಚನ ಸಾಹಿತ್ಯದ ಮಹತ್ವದ ಪರಿಚಯ ಮಾಡಿಕೊಡಲು ಅವಕಾಶವಾಯಿತು. ಇವುಗಳು ವಿದ್ಯಾರ್ಥಿಗಳ, ಬಸವಪರ ಸಂಘಟನೆಗಳ ಮತ್ತು ಬಸವ ಭಕ್ತರ ಮೇಲೆ ಬಹಳ ಪರಿಣಾಮ ಬೀರಿದವು. ಬಸವಾದಿ ಶಿವಶರಣರ ಅನುಭಾವ ಪ್ರತಿ ವ್ಯಕ್ತಿಗಳಲ್ಲಿ ಬೇರೂರಿತು.

8) ಅಭಿಯಾನದಲ್ಲಿ ಮಠಾಧೀಶರ ಒಕ್ಕೂಟದ, ಬಸವ ಸಂಘಟನೆಗಳ ಸಹಯೋಗ ಹೇಗಿತ್ತು?

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವವೇ ಅಭಿಯಾನದ ಪ್ರಮುಖ ಶಕ್ತಿಯಾಗಿತ್ತು. ಇದರಿಂದ ಹಲವಾರು ಮಠಾಧೀಶರನ್ನು, ಬಸವ ಸಂಘಟನೆಗಳನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಈ ಸಹಯೋಗವೇ ಮುಖ್ಯ ಕರಣ.

ಬಸವ ಸಂಘಟನೆಗಳು ಯಾವುದೇ ಮನಸ್ತಾಪವಿಲ್ಲದೆ ಒಂದಾಗಿ, ಕಾರ್ಯಕ್ರಮ ಯಶಸ್ವಿಯಾಗಲು ಕಾಯಕ ಮಾಡಿದವು, ನಿಜಕ್ಕೂ ಇದು ನೋಡಲು ಸಂತೋಷ ತಂದಿತು. ಈ ಅಭಿಯಾನದಲ್ಲಿ ಬಸವ ಪರ ಸಂಘಟನೆಗಳು ಮತ್ತು ಲಿಂಗಾಯತ ಮಠಾಧೀಶರು, ಸರ್ವ ಭಕ್ತರು ಸಹಕಾರದಿಂದ ಒಗ್ಗಟ್ಟಿನಿಂದ ಕೆಲಸ ಮಾಡಿದರು, ಯಾವುದೇ ಸೌಕರ್ಯ ನಿರೀಕ್ಷೆ ಮಾಡದೇ ಮಠಾಧೀಶರು ಸಾಮಾನ್ಯ ಜನರಂತೆ, ಎಲ್ಲರೊಂದಿಗೆ ಬೆರೆತರು, ಈ ಕಾರ್ಯಕ್ರಮದ ಯಶಸ್ಸಿಗೆ 1 ತಿಂಗಳು ಬಸವಪರ ಸಂಘಟನೆಗಳು ಹಗಲು, ರಾತ್ರಿ ದುಡಿದು, ಯಶಸ್ಸಿಗೆ ಕಾರಣರಾದರು.

9) ಮುಂದಿನ ವರ್ಷ ಮತ್ತೆ ಅಭಿಯಾನ ಮಾಡಿದರೆ ಹೇಗೆ ಸುಧಾರಿಸಬಹುದು?

ಮುಂದಿನ ವರ್ಷ ಅಭಿಯಾನ ಮಾಡಿದರೆ ಕೇವಲ ಭಾಷಣ ಮಾಡದೆ, ಜನರಿಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನೂ ಆಯೋಜಿಸಬೇಕು. ಬಡವರಿಗೆ ಸಹಾಯ, ಉಚಿತ ಶಿಕ್ಷಣದಂತಹ ಕೆಲಸಗಳನ್ನು ಮಾಡಬೇಕು. ಆ ಮೂಲಕ ಬಸವಣ್ಣನವರ ತತ್ವವನ್ನು ಕೇವಲ ಮಾತಿನಲ್ಲಿ ಅಲ್ಲದೆ, ಕೃತಿಯಲ್ಲಿ ತೋರಿಸಲು ಸಾಧ್ಯವಾಗುತ್ತದೆ.

ಬಸವತತ್ವವನ್ನು ಕೇವಲ ಪ್ರಚಾರ ಮಾಡುವುದಲ್ಲದೆ, ಅದನ್ನು ದೈನಂದಿನ ಜೀವನದಲ್ಲಿ ಅನುಷ್ಠಾನಗೊಳಿಸುವ ಬಗ್ಗೆಯೂ ಹೆಚ್ಚು ಒತ್ತು ನೀಡಬೇಕು. ಶೋಷಣೆಗೊಳಗಾದ ಸಮುದಾಯಗಳಿಗೆ ದಾಸೋಹ ಮತ್ತು ಕಾಯಕದ ಮೂಲಕ ನೆರವು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಬಹುದು. ವಚನ ಸಾಹಿತ್ಯವನ್ನು ಎಲ್ಲರಿಗೂ ತಲುಪಿಸಲು ಡಿಜಿಟಲ್ ಮಾಧ್ಯಮಗಳನ್ನೂ ಬಳಸಿಕೊಳ್ಳಬಹುದು. ಇದಕ್ಕಿಂತ ಹೆಚ್ಚು ಜನರನ್ನು ಸೇರಿಸುವ ದೊಡ್ಡ ಕೆಲಸ ಆಗಬೇಕಾಗಿದೆ.

10) ನಿಮ್ಮ ಮುಂದಿನ ಯೋಜನೆಗಳೇನು?

ಎಲ್ಲಾ ಸಮುದಾಯಗಳನ್ನು ಒಳಗೊಂಡ ವಿನೂತನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ನಡೆಸುತ್ತೇವೆ. ಎಲ್ಲಾ ಸಮುದಾಯಗಳ ಮಠಾಧೀಶರನ್ನು ಆಹ್ವಾನ ಮಾಡಲಾಗುವುದು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದೊಂದು ದಿನ ಈ ಕಾರ್ಯಕ್ರಮವನ್ನು ಮಾಡಿ ಬಸವ ತತ್ವ ಬಿತ್ತುವ ಸದುದ್ದೇಶವಿದೆ. ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸು ಎಂಬ ಬಸವ ತತ್ವವನ್ನು ಪ್ರತಿ ಹಳ್ಳಿ, ಮನೆಗೆ ಮುಟ್ಟಿಸುವ ಪ್ರಯತ್ನ ಜಿಲ್ಲೆಯ ಬಸವಪರ ಸಂಘಟನೆಗಳು ಮಾಡಲಿವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
2 Comments
  • ಒಳ್ಳೆಯ ಸಂದರ್ಶನ. ಸಂಪೂರ್ಣ ವಿವರಣೆ ಇದೆ. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳನ್ನು ನೀಡಿದರೆ ಇನ್ನೂ ಚೆನ್ನಾಗಿರುತ್ತದೆ.

  • ಧಾರವಾಡ ಬಸವ ಕೇಂದ್ರದ ವೆಬಸೈಟ.

    ಎಲ್ಲ ಶರಣ ಬಂಧುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿ.

    ಶರಣಾರ್ಥಿಗಳು.

    https://www.basavakendradharwad.org

Leave a Reply

Your email address will not be published. Required fields are marked *