ಅಭಿಜಾತ ಕಲಾವಿದೆ ಉಮಾಶ್ರೀ ಅವರಿಗೆ ಶಿವಕುಮಾರ ಪ್ರಶಸ್ತಿ ಪ್ರದಾನ

ಗಣೇಶ ಅಮೀನಗಡ
ಗಣೇಶ ಅಮೀನಗಡ

ಹೊಸದುರ್ಗ:

ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಿಗೆ ಬಣ್ಣ ಹಚ್ಚುವ ಖ್ಯಾತ ರಂಗ ಕಲಾವಿದೆ ಉಮಾಶ್ರೀ ಅಭಿಜಾತ ಕಲಾವಿದೆ ಎಂದು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಶ್ಲಾಘಿಸಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಶಿವಕುಮಾರ ಪ್ರಶಸ್ತಿ ಪುರಸ್ಕೃತೆ ಉಮಾಶ್ರೀ ಕುರಿತು ಮಾತನಾಡಿದರು.

ಉತ್ತರ ಕರ್ನಾಟಕದ ನಾಟಕ ಕಂಪನಿಗಳು ನಷ್ಟದಲ್ಲಿದ್ದಾಗ ಕಲಾವಿದೆ ಉಮಾಶ್ರೀ ಬಣ್ಣ ಹಚ್ಚಿ ಲಾಭ ತಂದರು. ಅವರು ಬರದಿದ್ದರೆ ಬೀದಿಗೆ ಬರುತ್ತಿದ್ದೆವು ಎಂದು ನಾಟಕ ಕಂಪನಿ ಮಾಲೀಕರು ಹೇಳುತ್ತಾರೆ. ಇಂಥ ಉದಾಹರಣೆಗಳು ಅಸಂಖ್ಯ ಎಂದು ಹೇಳಿದರು.

470 ಸಿನಿಮಾಗಳಲ್ಲಿ ನಟಿಸಿರುವ ಅವರು, 7 ಸಲ ಅತ್ಯುತ್ತಮ ನಟಿ ಪ್ರಶಸ್ತಿ ಅಲ್ಲದೆ ಸಿನಿಮಾದ ಜೀವಮಾನ ಸಾಧನೆಗೆ ಡಾ. ರಾಜಕುಮಾರ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸಾವಿರಾರು ನಾಟಕಗಳಿಗೆ ಬಣ್ಣ ಹಚ್ಚಿರುವ ಅವರು, ಮಾಡದ ಪಾತ್ರಗಳಿಲ್ಲ ಎಂದು ತಿಳಿಸಿದರು.

ಸಹಾಯಾರ್ಥ ನಾಟಕ ಪ್ರದರ್ಶನ; ಉಮಾಶ್ರೀ

ಸಾಣೇಹಳ್ಳಿಯ ಶಿವಸಂಚಾರದ ಕಲಾವಿದರಿಗೆ ಹೆಚ್ಚಿನ ಸಂಬಳ ನೀಡುವ ಸಲುವಾಗಿ 3 ಕೋಟಿ ರೂಪಾಯಿಗಳಷ್ಟು ಸಂಗ್ರಹಿಸಿ ಠೇವಣಿ ಇಡುವ ಯೋಜನೆಗೆ ಶಾಸಕರ ನಿಧಿಯಿಂದ 5 ಲಕ್ಷ ರೂ. ನೀಡುವುದರ ಜೊತೆಗೆ, ಈಚಿನ ನನ್ನ ಶರ್ಮಿಷ್ಠೆ ಎಂಬ ಏಕವ್ಯಕ್ತಿ ನಾಟಕದ 5 ಪ್ರದರ್ಶನದ ಮೂಲಕ ಸಂಗ್ರಹವಾಗುವ ಮೊತ್ತವನ್ನು ದೇಣಿಗೆಯಾಗಿ ನೀಡುವೆ ಎಂದು ರಂಗ ಕಲಾವಿದೆ ಉಮಾಶ್ರೀ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಿವಕುಮಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನ್ನನ್ನು ಪ್ರೋತ್ಸಾಹಿಸುವ ಪ್ರೇಕ್ಷಕ ಪ್ರಭುವಿಗೆ ಶಿವಕುಮಾರ ಪ್ರಶಸ್ತಿ ಅರ್ಪಿಸುವೆ ಎಂದರು. ಇದಕ್ಕೂ ಮೊದಲು ಕಲ್ಲಂತಿದ್ದ ನನ್ನನ್ನು ರಂಗಭೂಮಿಯಲ್ಲಿ ಶಿಲೆಯಾಗಿ ಮಾಡಿದ ಅನೇಕರನ್ನು ಸ್ಮರಿಸುವೆ ಎಂದರು.

ಶಿವಸಂಚಾರಕ್ಕೆ ಶಾಶ್ವತನಿಧಿ; ಸಾಣೇಹಳ್ಳಿ ಶ್ರೀಗಳ ಒತ್ತಾಯ

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ನಮ್ಮ ಸಾಣೇಹಳ್ಳಿಯ ಶಿವಸಂಚಾರಕ್ಕೆ ಶಾಶ್ವತನಿಧಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡುವಂತೆ ನಮ್ಮ ಜಿಲ್ಲೆಯ ಶಾಸಕರು, ಸಚಿವರು ಒತ್ತಾಯಿಸಬೇಕೆಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮ್ಮ ಬಗ್ಗೆ ಪ್ರೀತಿ, ವಿಶ್ವಾಸ ಇದೆ. ಅವರು ಕಬ್ಬು ಬೆಳೆಗಾರರ ಹೋರಾಟ ಇತ್ಯರ್ಥಪಡಿಸಲು ಬೆಂಗಳೂರಿನಲ್ಲಿ ಇರಬೇಕಾದ ಅನಿವಾರ್ಯತೆ ಇರುವುದರಿಂದ ಅವರು ಸಮಾರೋಪ ಸಮಾರಂಭಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಉಮಾಶ್ರೀ ಅವರು ಅಭಿಜಾತ ಕಲಾವಿದೆ. ಅವರಿಗೆ ಶಿವಕುಮಾರ ಪ್ರಶಸ್ತಿ ನೀಡಿದ್ದರಿಂದ ಕನ್ನಡ ನಾಡು ಖುಷಿಪಟ್ಟಿದೆ ಎಂದು ತಿಳಿಸಿದರು.

ನಮ್ಮ ಸಾಣೇಹಳ್ಳಿಯಲ್ಲಿ ತಮ್ಮ ಸವತಿಯ ಮಕ್ಕಳನ್ನು ಓದಲು ಬಿಟ್ಟಿದ್ದರು ಅಂದರೆ ತಮ್ಮ ಗಂಡನ ಎರಡನೇ ಹೆಂಡತಿಯ ಮಕ್ಕಳನ್ನು ನಮ್ಮಲ್ಲಿ ಓದಲು ಉಮಾಶ್ರೀ ಅವರು ಬಿಟ್ಟಿದ್ದರು ಎಂದು ಸ್ವಾಮೀಜಿ ಸ್ಮರಿಸಿದರು.

ಭರವಸೆ:

ಶಿವಸಂಚಾರದ ಕಲಾವಿದರಿಗೆ ಹೆಚ್ಚಿನ ಸಂಬಳ ನೀಡುವ ಸಲುವಾಗಿ 3 ಕೋಟಿ ರೂಪಾಯಿಗಳಷ್ಟು ಸಂಗ್ರಹಿಸಿ ಠೇವಣಿ ಇಡುವ ಯೋಜನೆಗೆ ರೂ. 25 ಲಕ್ಷ ನೀಡುವ ವಾಗ್ದಾನವನ್ನು ಸಚಿವರು, ಶಾಸಕರು ಶುಕ್ರವಾರ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ ಅವರು ತಮ್ಮ ವೈಯಕ್ತಿಕವಾಗಿ ರೂ. 5 ಲಕ್ಷ ಹಾಗೂ ಡಿಸಿಸಿ ಮೂಲಕ ರೂ. 5 ಲಕ್ಷವನ್ನು ನೀಡುವೆ. ಅಲ್ಲದೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ರೂ.5 ಲಕ್ಷ ನೀಡಲಿದ್ದಾರೆ ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ತಲಾ ರೂ. 5 ಲಕ್ಷ ದೇಣಿಗೆ ನೀಡುವುದಾಗಿ ಹೇಳಿದರು. ಶಿವಕುಮಾರ ಪ್ರಶಸ್ತಿ ಪುರಸ್ಕೃತೆ ಉಮಾಶ್ರೀ ತಮ್ಮ ಶಾಸಕರ ನಿಧಿಯಿಂದ ರೂ.5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *