ರೈತರ ಬೇಡಿಕೆಗೆ ಸರಕಾರ ಕೂಡಲೇ ಸ್ಪಂದಿಸಲಿ: ತೋಂಟದ ಸಿದ್ಧರಾಮ ಶ್ರೀ

ಗದಗ

ಕಳೆದ ಹಲವಾರು ದಿನಗಳಿಂದ ನಾಡಿನ ರೈತರು ತಾವು ಬೆಳೆದ ಕಬ್ಬಿಗೆ ಯೋಗ್ಯ ಬೆಲೆಯನ್ನು ನೀಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಸಕ್ಕರೆ ಕಾರಖಾನೆಗಳ ಮಾಲಿಕರು ರೈತರು ಕೇಳಿದ ಬೆಲೆಯನ್ನು ನೀಡಲು ಸಾಧ್ಯವಾಗುವುದಿಲ್ಲವೆಂದು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರಸ್ಪರ ಸಹಯೋಗದೊಂದಿಗೆ ರೈತರ ಸಮಸ್ಯೆಯನ್ನು ನೀಗಿಸುವುದು ಕಷ್ಟದ ಮಾತೇನೂ ಅಲ್ಲ. ಈ ದಿಶೆಯಲ್ಲಿ ಇಚ್ಛಾಶಕ್ತಿಯೊಂದಿಗೆ ಸರಕಾರಗಳು ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.

ಪ್ರಾಕೃತಿಕ ಆಪತ್ತುಗಳು ಅನ್ನದಾತರನ್ನು ಪದೇ ಪದೇ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಅತೀವೃಷ್ಟಿ-ಅನಾವೃಷ್ಟಿಗಳಿಂದ ತೊಂದರೆಗೊಳಗಾದ ರೈತರು ತಾವು ಬೆಳೆದ ಅಲ್ಪಸ್ವಲ್ಪ ಬೆಳೆಗೆ ಯೋಗ್ಯ ಬೆಲೆಯನ್ನು ಪಡೆಯದಿದ್ದರೆ ಅವರು ಬದುಕುವುದಾದರೂ ಹೇಗೆ?.

ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಕ್ಕಳ ದುಬಾರಿ ಶಿಕ್ಷಣ, ಹಾಗೆಯೇ ಮದುವೆ-ಮುಂಜಿವೆ, ಆರೋಗ್ಯ ಮುಂತಾದವುಗಳ ಖರ್ಚು-ವೆಚ್ಚಗಳನ್ನು ನೀಗಿಸುವುದು ರೈತರಿಗೆ ಸವಾಲಾಗಿ ಪರಿಣಮಿಸಿವೆ. ಇಂಥ ಸಂದರ್ಭದಲ್ಲಿ ಸರಕಾರಗಳು ಮೀನ-ಮೇಷ ಮಾಡದೇ ತತ್‌ಕ್ಷಣವೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದುದು ಕರ್ತವ್ಯ.

ಅನ್ನದಾತರ ಬೆಂಬಲಕ್ಕೆ ಬಂದ ಲಿಂಗಾಯತ ಮಠಾಧಿಪತಿಗಳು

ಆಳುವ ಸರಕಾರಗಳೇ ರೈತರ ಗೋಳನ್ನು ಕೇಳದಿದ್ದರೆ ರೈತರು ಯಾರ ಮೊರೆ ಹೋಗಬೇಕು. ರೈತರು ಸರಕಾರಗಳಿಗೆ ಯೋಗ್ಯ ಬೆಲೆ ನೀಡಬೇಕೆಂದು ಕೇಳುವುದು ನ್ಯಾಯೋಚಿತವಾಗಿದೆ.

ಕರ್ನಾಟಕದ ಎಲ್ಲಾ ಲಿಂಗಾಯತ ಮಠಾಧಿಪತಿಗಳು ರೈತ ಹೋರಾಟದ ಸಂದರ್ಭಗಳಲ್ಲಿ ಸದಾ ಅನ್ನದಾತರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈಗಲೂ ಅನ್ನದಾತರ ಬೆನ್ನಿಗೆ ನಿಂತಿದ್ದಾರೆ.

ಸರಕಾರಗಳು ಜನಪ್ರತಿನಿಧಿಗಳು ಪರಸ್ಪರ ದೋಷಾರೋಪಣೆ ನಿಲ್ಲಿಸಿ ತುರ್ತಾಗಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ನಿಲ್ಲಿಸಬೇಕು. ಅನ್ಯಥಾ ಸಂಭವನೀಯ ಅನಾಹುತಕ್ಕೆ ಸರಕಾರಗಳೇ ಹೊಣೆಯಾಗಬೇಕಾಗುವುದು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪರವಾಗಿ ಶ್ರೀಗಳು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *

ಪೂಜ್ಯರು ಗದಗ-ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ಶ್ರೀಗಳಾಗಿದ್ದಾರೆ.