ಬೆಳಗಾವಿ:
ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದಲ್ಲಿ ಸಮಾನತೆ ಬರಬೇಕಾದರೆ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು ಮತ್ತು ಜನರು ಹಣೆಬರಹದ ಮೇಲಿನ ನಂಬಿಕೆಯನ್ನು ಬಿಡಬೇಕು ಎಂದು ಪ್ರತಿಪಾದಿಸಿದರು. ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದರೂ ಜನರ ಮನಸ್ಸಿನಿಂದ ಜಾತಿ ಭಾವನೆ ಇನ್ನೂ ದೂರವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಅನೇಕ ಜನರು ತಮ್ಮ ಬಡತನ ಅಥವಾ ಶಿಕ್ಷಣದ ಕೊರತೆಗೆ ‘ಹಿಂದಿನ ಜನ್ಮದ ಪಾಪ’ ಅಥವಾ ‘ಹಣೆಬರಹ’ (ಕರ್ಮ ಸಿದ್ಧಾಂತ) ಕಾರಣ ಎಂದು ದೂಷಿಸುತ್ತಾರೆ. ಆದರೆ, 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರು ಈ ಕರ್ಮಸಿದ್ಧಾಂತವನ್ನೇ ತಿರಸ್ಕರಿಸಿದ್ದರು. “ಯಾರು ಬಸವಣ್ಣನವರನ್ನು ನಂಬುತ್ತಾರೋ, ಅವರು ಕರ್ಮ ಸಿದ್ಧಾಂತವನ್ನು ಒಪ್ಪಲು ಸಾಧ್ಯವಿಲ್ಲ. ಬಸವಣ್ಣ ಮತ್ತು ಕರ್ಮಸಿದ್ಧಾಂತ ಎರಡನ್ನೂ ಏಕಕಾಲಕ್ಕೆ ನಂಬಲು ಸಾಧ್ಯವಿಲ್ಲ”ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸುದೀರ್ಘ ಕಾಲದ ಮೊಹಮ್ಮದೀಯ ಮತ್ತು ಬ್ರಿಟಿಷ್ ಆಳ್ವಿಕೆಯಿಂದಾಗಿ ಜನರಲ್ಲಿ ‘ಗುಲಾಮಗಿರಿ ಮನೋಭಾವ’ಮನೆಮಾಡಿದೆ, ಇದು ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ವಿಶ್ಲೇಷಿಸಿದರು.
ಸಿದ್ದರಾಮಯ್ಯ ಅವರ ಮಾತಿಗೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, “ನೀವು ಬ್ರಹ್ಮನ ಬಳಿ ಕುಳಿತು ನಿಮ್ಮ ಹಣೆಬರಹ ಬರೆಸಿಕೊಂಡು ಬಂದಿದ್ದೀರಿ. ನಿಮ್ಮ ಹಾದಿಗೆ ಜಾತಿ ಅಡ್ಡ ಬರಲಿಲ್ಲ. ಡಿ. ದೇವರಾಜ ಅರಸು ಅವರ ದಾಖಲೆಯನ್ನೇ ನೀವು ಮುರಿಯುತ್ತಿದ್ದೀರಿ”ಎಂದು ವ್ಯಂಗ್ಯವಾಡಿದರು.
ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಸಿಎಂ, “ನನಗೆ ಹಣೆಬರಹದ ಮೇಲೆ ನಂಬಿಕೆಯಿಲ್ಲ. ನಮ್ಮ ಮನೆಯಲ್ಲಿ ಆರು ಮಕ್ಕಳಿದ್ದೆವು, ಪೋಷಕರು ಅವಿದ್ಯಾವಂತರಾಗಿದ್ದರು. ನನ್ನ ಅಣ್ಣ 4ನೇ ತರಗತಿವರೆಗೆ ಓದಿದ್ದರು, ಉಳಿದವರು ಶಾಲೆಗೇ ಹೋಗಲಿಲ್ಲ. ನಾನು ಮಾತ್ರ ಕಾನೂನು ಓದಬೇಕು ಎಂದು ಬ್ರಹ್ಮ ಬರೆದಿದ್ದನೇ?” ಎಂದು ಪ್ರಶ್ನಿಸುವ ಮೂಲಕ ವೈಚಾರಿಕತೆಯನ್ನು ಸಮರ್ಥಿಸಿಕೊಂಡರು.
ಬಿಜೆಪಿಯ ಸುರೇಶಗೌಡ, ಕಾಂಗ್ರೆಸ್ ಸೇರಿದ ಕೇವಲ 10 ವರ್ಷಗಳಲ್ಲಿ ನೀವು ಮುಖ್ಯಮಂತ್ರಿಯಾದಿರಿ ಎಂದರೆ ಅದು ನಿಮ್ಮ ಹಣೆಬರಹವಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಎಂ, ಬಸವಣ್ಣನವರನ್ನು ನಂಬುವವರು ಇಂತಹ ಮೂಢನಂಬಿಕೆಗಳಿಂದ ದೂರವಿರಬೇಕು ಎಂದು ಪುನರುಚ್ಚರಿಸಿದರು. ಸಮಾಜದಲ್ಲಿ ಸಂಪೂರ್ಣ ಸಮಾನತೆ ಸ್ಥಾಪನೆಯಾಗುವವರೆಗೆ ಜಾತಿ ವಿರುದ್ಧದ ಹೋರಾಟ ಮುಂದುವರಿಯಬೇಕು ಎಂಬುದು ಅವರ ಭಾಷಣದ ಆಶಯವಾಗಿತ್ತು.
ಕೃಪೆ: ಪೀಪಲ್ ಟಿವಿ
