ರಾಯಚೂರು:
ನಗರದ ಬಸವ ಕೇಂದ್ರದ ಮರುಳ ಶಂಕರದೇವ ಪ್ರಸಾದ ನಿಲಯದ ಗುರುಪ್ರವೇಶವು ಶನಿವಾರ ಬಸವತತ್ವದಂತೆ ನಡೆಯಿತು. ಕಾರ್ಯಕ್ರಮದ ಮೊದಲಿಗೆ ನಿರ್ಮಲಾ ನಾಗನಗೌಡ ಹಾಗೂ ಪಾರ್ವತಿ ಪಾಟೀಲ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಇಳಕಲ್ಲ ವಿಜಯಮಹಾಂತೇಶ ಮಠದ ಪೂಜ್ಯ ಗುರುಮಹಾಂತಪ್ಪ ಶ್ರೀಗಳು ನೇತೃತ್ವ ವಹಿಸಿದ್ದರು. ಅವರು ಶರಣರ ಷಟಸ್ಥಲ ಮಾರ್ಗದ ಕುರಿತು ಅನುಭಾವ ನೀಡುತ್ತ, ಷಟಸ್ಥಲಗಳು ಲಿಂಗಾಯತ ಧರ್ಮದ ಪ್ರಮುಖ ಸಿದ್ಧಾಂತವಾಗಿದ್ದು, ಇದು ಶಿವಸಾಕ್ಷಾತ್ಕಾರದ ಆರು ಹಂತ ಅಥವಾ ಮೆಟ್ಟಿಲುಗಳನ್ನು ಸೂಚಿಸುತ್ತದೆ.

ಇವು ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಸ್ಥಲಗಳಾಗಿವೆ. ಇವುಗಳನ್ನು ಪೂರ್ಣಗೊಳಿಸುವ ಮೂಲಕ ಸಾಧಕನು ಪರಶಿವನಲ್ಲಿ ಐಕ್ಯನಾಗುತ್ತಾನೆ ಎಂದರು.
ನೂರಾರು ಜನ ಮಹಿಳೆಯರು, ಮಕ್ಕಳು, ಸಂಘಟನೆಗಳ ಮುಖಂಡರು ಮುಖ್ಯರಸ್ತೆಯ ಉದ್ಯಾನವನದಿಂದ ವಚನ ಕಟ್ಟುಗಳ ಹೊತ್ತು ಬಸವಾದಿ ಶರಣರ ಜಯಘೋಷಣೆಗಳೊಂದಿಗೆ ಬಂದು ಪ್ರಸಾದ ನಿಲಯದ ಗುರುಪ್ರವೇಶ ಮಾಡಿದರು.

ನಂತರ ನಿಲಯದಲ್ಲಿ ಸಹಜ ಶಿವಯೋಗ ನಡೆಯಿತು. ಪೂಜ್ಯ ಗುರುಮಹಾಂತಪ್ಪಗಳು ಇಷ್ಟಲಿಂಗತತ್ವ, ಅದರ ಮಹತ್ವದ ಕುರಿತಾಗಿ ತಿಳಿಸುತ್ತಾ, ಪ್ರತಿದಿನ ಲಿಂಗಪೂಜೆ, ಲಿಂಗನಿರೀಕ್ಷಣೆಯಲ್ಲಿ ಕಾರ್ಯನಿರತರಾಗಿ ಮನಃಶಾಂತಿಯಿಂದ ಜೀವನ ಸಾಗಿಸಬೇಕೆಂದರು.

ಕಾರ್ಯಕ್ರಮದಲ್ಲಿ ನಾಗನಗೌಡ ಹರವಿ, ಗಿರಿಜಾಶಂಕರ, ಚನ್ನಬಸವ ಇಂಜನಿಯರ್, ಜೆ. ಬಸವರಾಜ, ಚೆನ್ನಬಸವಣ್ಣ ಮಹಾಜನಶೆಟ್ಟಿ, ಸರ್ವಮಂಗಳಾ ಸಕ್ರಿ, ಜಗದೇವಿ ಚನ್ನಬಸವ, ಡಾ. ಪ್ರಿಯಾಂಕ ಗದ್ವಾಲ್, ಸುಪ್ರಿಯಾ ಪಾಟೀಲ, ಪೂರ್ಣಿಮಾ ಪಾಟೀಲ, ಅನ್ನಪೂರ್ಣ ಹರವಿ, ಬಸವರಾಜ ಕುರುಗೋಡ, ಮಲ್ಲಿಕಾರ್ಜುನ ಗುಡಿಮನಿ, ನಾಗೇಶಪ್ಪ, ಯಂಕಣ್ಣ ಆಶಾಪುರ ಸೇರಿದಂತೆ ಬಸವಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.

