ಬಲಿಷ್ಠ ರಾಷ್ಟ್ರಕ್ಕೆ ಯುವಕರು ಬಸವಣ್ಣನವರ ಆದರ್ಶ ಪಾಲಿಸಬೇಕು: ವಸಂತ ಕುಮಾರ

ರಾಯಚೂರು:

ನಗರದ ಬಸವ ಕೇಂದ್ರದಲ್ಲಿ ರವಿವಾರ 12ನೇ ಶತಮಾನದ ಶಿವಶರಣೆಯರ ಮಹೋತ್ಸವದ ಎರಡನೆಯ ದಿನದ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯ ಎ. ವಸಂತ ಕುಮಾರ ಮಾತನಾಡಿ, ಬಸವಣ್ಣನವರ ಸಿದ್ಧಾಂತಗಳು ಇಂದು ಜಗತ್ತಿಗೆ ಅತ್ಯವಶ್ಯವಾಗಿ ಬೇಕಾಗಿವೆ. ಅಂತೆಯೆ ಬಸವಣ್ಣನವರು ಜಗತ್ತಿಗೆಲ್ಲಾ  ಗುರುವಾಗಿದ್ದಾರೆ.

ಬಸವಣ್ಣನವರಂಥ ದಾರ್ಶನಿಕ ಪುರುಷ ಇನ್ನೂವರೆಗೂ ಬಂದಿಲ್ಲವೆಂದು ಹೇಳುತ್ತಾ, ಬಸವ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಸವಣ್ಣನವರ ಆದರ್ಶಗಳನ್ನು ಪಾಲಿಸಿದರೆ ರಾಷ್ಟ್ರ ಬಲಿಷ್ಠವಾಗುತ್ತದೆ ಎಂದು ಹೇಳುತ್ತ ಬಸವ ಕೇಂದ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಇನ್ನೋರ್ವ ಅತಿಥಿಗಳಾದ ಕೆ. ಶಾಂತಪ್ಪ ಗಂಗಾಮತಸ್ಥ ಸಮಾಜ ಅಧ್ಯಕ್ಷರು ಮಾತನಾಡಿ, ನಗರದ ಬಸವ ಕೇಂದ್ರದಲ್ಲಿ ಎಲ್ಲ ಜಾತಿಯವರಿಗೂ ಸಮಾನ ಅವಕಾಶವಿದೆ. ಬಸವ ಕೇಂದ್ರ ಸದಸ್ಯರು ಬಸವ ತತ್ವ ಪ್ರಚಾರಕ್ಕಾಗಿ ಶಾಲಾ ಕಾಲೇಜುಗಳಿಗೆ, ಸಂಘ ಸಂಸ್ಥೆಗಳಿಗೆ, ಅಷ್ಟೇ ಅಲ್ಲದೆ ಸ್ಲಂ ಏರಿಯಾಗಳಲ್ಲಿಯೂ ಕೂಡ ಮಹಾಮನೆಯನ್ನು ಹಾಗೂ ವ್ಯಕ್ತಿ ವಿಕಸನ ಶಿಬಿರಗಳನ್ನು ಏರ್ಪಡಿಸುತ್ತಾ ಜನಮಾನಸದಲ್ಲಿ ಬಸವಪ್ರಜ್ಞೆ ಮೂಡಿಸುವ ಕಾರ್ಯ ಶ್ಲಾಘ ನೀಯ ಎಂದರು.

ಜೊತೆಗೆ ಲಿಂಗಾಯತ ಮಠಾಧೀಶರ ಒಕ್ಕೂಟವು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಂಡಂತಹ ಬಸವ ಸಂಸ್ಕೃತಿ ಅಭಿಯಾನವು ಜನರಲ್ಲಿ ಶರಣತತ್ವದ ಜಾಗೃತಿಯನ್ನು ಮೂಡಿಸಿದೆ. ಅಷ್ಟೇ ಅಲ್ಲದೆ ಬೆಂಗಳೂರಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಲಕ್ಷಗಟ್ಟಲೆ ಜನ ಕೂಡಿದ್ದನ್ನು ನೋಡಿದರೆ ಇನ್ನು ಕೆಲವೇ ದಿನಗಳಲ್ಲಿ ಬಸವಪ್ರಜ್ಞೆ ವಿಶ್ವಮಟ್ಟಕ್ಕೆರುವದಲ್ಲಿ ಸಂಶಯವಿಲ್ಲವೆಂದರು.

ವೇದಿಕೆ ಮೇಲೆ ಅತಿಥಿ ಸ್ಥಾನದಲ್ಲಿ ಗಿರಿಜಾ ಶಂಕರ, ವಿಜಯಕುಮಾರ ಸಜ್ಜನ, ಚನ್ನಬಸವ ಇಂಜಿನಿಯರ್, ಶರಣು ಸರೋಜಾ ಮಾಲಿಪಾಟೀಲ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ  ಹರವಿ ನಾಗನಗೌಡರು ಮಾತನಾಡಿ, ಬಸವ ಕೇಂದ್ರ ನಡೆದು ಬಂದ ದಾರಿ, ಕೇಂದ್ರದ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು. ಜೊತೆಗೆ ಎರಡು ದಿನದ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾದ ಎಲ್ಲರನ್ನೂ ಅಭಿನಂದಿಸಿದರು.

ಸಾನಿಧ್ಯ ವಹಿಸಿದ ಪೂಜ್ಯ ವೆಂಕಟಾಪುರ ಬಸವರಾಜಪ್ಪ ಶರಣರು ಅನುಭಾವ ನೀಡುತ್ತ, ಬಸವಾದಿ ಶರಣರು ಹಾಕಿಕೊಟ್ಟ ದಾರಿ ಅಮೂಲ್ಯವಾದುದು. ಶರಣರು ವಿಶ್ವಕ್ಕೆ ಶಾಂತಿ ಸಂದೇಶದ ಮಾರ್ಗದರ್ಶನ ನೀಡಿದ್ದಾರೆ. ಇಂತಹ ಅಮೂಲ್ಯ ತತ್ವಗಳನ್ನು ಜನಸಮೂಹ ನಿಷ್ಠೆಯಿಂದ ಪಾಲಿಸಿದಲ್ಲಿ ಮಾತ್ರ ಸುಖ, ಶಾಂತಿ, ನೆಮ್ಮದಿ ದೊರಕುವುದರಲ್ಲಿ  ಸಂದೇಹವಿಲ್ಲವೆಂದರು.

ನಗರದ ಬಸವ ಕೇಂದ್ರ ಕರ್ನಾಟಕಕ್ಕೆ ಮಾದರಿ ಕೇಂದ್ರವಾಗಿದ್ದು, ಸಮಗ್ರ ಕಾರ್ಯಕರ್ತರು ಒಕ್ಕಟಿನಿಂದ ಕಾರ್ಯನಿರ್ವಹಿಸಿ ಬಸವ ಕೇಂದ್ರದ ಕೀರ್ತಿಯನ್ನು ಇನ್ನಷ್ಟು ಉನ್ನತೀಕರಿಸಲು ಸಲಹೆ ನೀಡಿದರು.

ಕೋಶಾಧ್ಯಕ್ಷರಾದ ಎಸ್. ಶಂಕರೇಗೌಡರು ದಾಸೋಹಿಗಳ ಹೆಸರುಗಳನ್ನು ಓದಿದರು. ಬಸವ ಕೇಂದ್ರದ ಕೋಣೆ ಕಟ್ಟಡ ನಿಧಿಗೆ ರೂ. 1,25,000 ದಾಸೋಹ ನೀಡಿದ ವನಜಾಕ್ಷಿ ಗಿರಿಜಾಶಂಕರ ಅವರನ್ನು ಸನ್ಮಾನಿಸಲಾಯಿತು.

ಅಕ್ಕನ ಬಳಗದ ಶರಣೆಯರಾದ ಜಗದೇವಿ ಚೆನ್ನಬಸವ, ಪಾರ್ವತಿ ಪಾಟೀಲ, ಪೂರ್ಣಿಮಾ ಪಾಟೀಲ, ಡಾ. ಪ್ರಿಯಾಂಕಾ ಗದ್ವಾಲ್, ಸುಪ್ರಿಯಾ ಪಾಟೀಲ ಇವರೆಲ್ಲ ಮಹಾಂತ ಜೋಳಿಗೆಯ ಮಹತ್ವವನ್ನು ಸಾರುವ ಹಾಸ್ಯ ಮಿಶ್ರಿತ ರೂಪಕವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.  ರೂಪಕಕ್ಕೆ ಹಾರ್ಮೋನಿಯಂ ರಾಘವೇಂದ್ರ ಆಶಾಪುರ ನುಡಿಸಿದರೆ,  ತಬಲಾ ಕುಮಾರ ಬ್ರಹ್ಮೇಂದ್ರ ಬಾರಿಸಿದರು. ವಚನ ಪ್ರಾರ್ಥನೆಯನ್ನು ಪಾರ್ವತಿ ಪಾಟೀಲ ಹಾಗೂ ಅಶ್ವಿನಿ ಮಾಟೂರ್ ಹಾಡಿದರು.

ಸುಮಂಗಲಾ ಪಾಟೀಲ ಸ್ವಾಗತಿಸಿದರು.ಯ, ಡಾ. ಶಿವಕುಮಾರ ಮಾಟೂರ ನಿರೂಪಿಸಿದರು. ನಿರ್ಮಲ ನಾಗನಗೌಡ ವಂದಿಸಿದರು.

ಇದೇ ಸಂದರ್ಭದಲ್ಲಿ ಬಸವ ಕೇಂದ್ರ ಕಟ್ಟಲು ಕಾರಣೀಭೂತರಾದ ಕೇಂದ್ರದ ಗೌರವಾಧ್ಯಕ್ಷರು ಆಗಿದ್ದ ಲಿಂಗೈಕ್ಯ ಶರಣಪ್ಪಗೌಡ ಪಾಟೀಲ, ಮಾಚನೂರ ಇವರ ಧರ್ಮಪತ್ನಿ ವಿಮಲಾ ಮಾಚನೂರ ಲಿಂಗೈಕ್ಯರಾದ ಪ್ರಯುಕ್ತ ಅವರ ಗೌರವಾರ್ಥ ಮೌನಾಚರಣೆ ಮಾಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *