‘ರಾಜಸತ್ತೆ ವಿರುದ್ಧ ಪ್ರತಿಭಟಿಸಿದ ಮೊದಲ ರೈತ ಒಕ್ಕಲಿಗ ಮುದ್ದಣ್ಣ’

ಬೀದರ:

ಒಕ್ಕಲಿಗ ಮುದ್ದಣ್ಣ ಅನ್ನದ ಮಹತ್ವ ಸಾರಿದ್ದರು ಎಂದು ಬಸವಕಲ್ಯಾಣದ ನೀಲಾಂಬಿಕಾ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಡಾ. ಸವಿತಾ ಯರನಳ್ಳೆ ಹೇಳಿದರು.

ಲಿಂಗಾಯತ ಮಹಾ ಮಠದ ವತಿಯಿಂದ 270ನೇ ಮಾಸಿಕ ಶರಣ ಸಂಗಮ ಹಾಗೂ ರೈತ ದಿನಾಚರಣೆ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಒಕ್ಕಲಿಗ ಮುದ್ದಣ್ಣನವರ ವಚನ ಚಿಂತನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಹೊನ್ನಿನಿಂದ ಹೊಟ್ಟೆ ತುಂಬದು. ಹೊಟ್ಟೆ ತುಂಬಲು ಅನ್ನವೇ ಬೇಕು. ಕಾರಣ, ಚಿನ್ನಕ್ಕಿಂತ ಅನ್ನ ಮಿಗಿಲು ಎಂದು ಹೇಳುತ್ತಿದ್ದರು. ದೇಹದ ಹಸಿವು ತಣಿಸಲು ಒಕ್ಕಲುತನ ಹಾಗೂ ಅಂತರಂಗದ ಹಸಿವು ತಣಿಸಲು ಆಧ್ಯಾತ್ಮ ಸಾಧನೆ ಅವಶ್ಯವೆಂದು ಮುದ್ದಣ್ಣ ಪ್ರತಿಪಾದಿಸಿದ್ದರು ಎಂದು ಹೇಳಿದರು.

ಕೃಷಿಯನ್ನು ಕಾಯಕವಾಗಿಸಿಕೊಂಡಿದ್ದ 12ನೇ ಶತಮಾನದ ಈ ಶರಣ ಮನುಕುಲವನ್ನು ಪೋಷಿಸುವವನೇ ಅನ್ನದಾತ ಎಂದು ಬಣ್ಣಿಸುತ್ತಿದ್ದರು.

ಹೆಚ್ಚಿನ ತೆರಿಗೆ ಕಟ್ಟಲಾರೆನೆಂದು ರಾಜಸತ್ತೆ ವಿರುದ್ಧ ಪ್ರತಿಭಟಿಸಿದ ಮೊದಲ ರೈತ ಅವರಾಗಿದ್ದರು. ಕೃಷಿ ಪಾರಿಭಾಷಿಕ ಪದಗಳನ್ನು ಬಳಸಿ ವಚನಗಳನ್ನು ರಚಿಸಿದ್ದರು. ‘ಕಾಮ ಭೀಮ ಜೀವನದೊಡೆಯ’ಅವರ ವಚನಾಂಕಿತ. ಅವರ 12 ವಚನಗಳು ಮಾತ್ರ ಲಭಿಸಿದ್ದು, ಅವುಗಳಲ್ಲಿ ಆಧ್ಯಾತ್ಮದ ಅರಿವು ತುಂಬಿ ತುಳುಕುತ್ತಿದೆ ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಕೆ.ಎಸ್.ಸಿ.ಎ. ರಾಯಚೂರು ವಲಯ ಸಂಚಾಲಕ ಕುಶಾಲರಾವ ಪಾಟೀಲ ಮಾತನಾಡಿ, ಮನುಷ್ಯನಿಗೆ ಮಣ್ಣಿನ ಸಂಬಂಧವಿರಬೇಕು. ಇಂದಿನ ಕಲುಷಿತ ವಾತಾವರಣದಲ್ಲಿ ಸ್ವತಃ ರೈತನಾದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ ಎಂದು ತಿಳಿಸಿದರು.

ಮುದ್ದಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಸಾಯನಿಕ ಮುಕ್ತ ಬೆಳೆ ಬೆಳೆಯಲು ಪಣ ತೊಡಬೇಕು ಎಂದರು.

ಅಕ್ಕ ಅನ್ನಪೂರ್ಣತಾಯಿ ನಾಡು ಕಂಡ ಅಪ್ರತಿಮ ಬಸವ ತತ್ವ ಪ್ರವಚನಕಾರರು. ಅವರಿಂದ ಬದುಕು ರೂಪಿಸಿಕೊಳ್ಳಲು ಪ್ರೇರಣೆ ದೊರೆತಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಭೌತಿಕ ಕೃಷಿ ಮತ್ತು ಆಧ್ಯಾತ್ಮಿಕ ಕೃಷಿ ಎಂಬ ಎರಡು ಬಗೆಯ ಕೃಷಿಗಳನ್ನು ಬಸವಾದಿ ಶರಣರು ಪ್ರತಿಪಾದಿಸಿದ್ದಾರೆ. ಇದರಲ್ಲಿ ಕೃಷಿಯೇ ಸರ್ವ ಶ್ರೇಷ್ಠ ಕಾಯಕ ಎಂದು ನುಡಿದರು.

ಒಕ್ಕಲಿಗ ಬಿತ್ತಿದರೆ ಜಗವೆಲ್ಲ ಉಣ್ಣುತ್ತದೆ. ಇಲ್ಲದಿದ್ದರೆ ಹಾಹಾಕಾರ. ಭೌತಿಕ, ಸುಖ, ಶಾಂತಿಗೆ ರೈತನ ಉತ್ಪಾದನೆ ಬೇಕು. ಆದರೆ, ಭೌತಿಕ ಸುಖ ಶಾಶ್ವತವಲ್ಲ. ಶಾಶ್ವತ ಸುಖ ಸಂಪಾದಿಸಲು ಆಧ್ಯಾತ್ಮಿಕ ಕೃಷಿಯತ್ತ ಮುಖ ಮಾಡಬೇಕು ಎಂದು ತಿಳಿಸಿದರು.

ತನುವನ್ನೇ ತೋಟವಾಗಿಸಿಕೊಂಡು, ಮನಸ್ಸೆಂಬ ಗುದ್ದಲಿಯಿಂದ ಭ್ರಾಂತಿಯೆಂಬ ಬೇರು ಅಗೆದು ತೆಗೆಯಬೇಕು. ಅವಗುಣಗಳೆಂಬ ಕಸ ಕಿತ್ತೆಸೆಯಬೇಕು. ದೇವ ಸಾಧನೆಗೈದರೆ ಸಾಕೆನಿಸದ, ಸವೆಯದ, ಮತ್ತೊಂದು ಬೇಕೆನಿಸದ ಸುಖ ಪಡೆಯಬಹುದು ಎಂದು ವಚನಗಳನ್ನು ಉಲ್ಲೇಖಿಸಿ ಮಾರ್ಮಿಕವಾಗಿ ಹೇಳಿದರು.

ಬಸವಣ್ಣನವರ ಕಾಯಕವೇ ಕೈಲಾಸ ತತ್ವ ಅಕ್ಷರಶಃ ಪಾಲಿಸಿದ ಒಕ್ಕಲಿಗ ಮುದ್ದಣ್ಣ ಮನುಕುಲಕ್ಕೆ ಆದರ್ಶಪ್ರಾಯರು ಎಂದು ಹೇಳಿದರು.

ಕುಶಾಲರಾವ ಪಾಟೀಲ ಗಾದಗಿ ಹಾಗೂ ಗೋರ್ಟಾ(ಬಿ) ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷೆ ವಿಜಯಲಕ್ಷ್ಮಿ ಭೀಮಣ್ಣ ರಾಜೋಳೆ ಅವರನ್ನು ಅಭಿನಂದಿಸಲಾಯಿತು.

ಬೀದರ ನೀಲಮ್ಮನ ಬಳಗದ ಶ್ರೀದೇವಿ (ಸಿದ್ದಮ್ಮ) ಶರಣಬಸವ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಪರುಷಕಟ್ಟೆ ಚನ್ನಬಸವಣ್ಣ, ಸಾಹಿತಿ ರಮೇಶ ಮಠಪತಿ, ಮಾಣಿಕಪ್ಪ ಗೋರನಾಳೆ, ಪ್ರಕಾಶ್ ಮಠಪತಿ, ಚನ್ನಬಸಪ್ಪ ಹಂಗರಗಿ ಮತ್ತಿತರರು ಇದ್ದರು.

ಸೌಮ್ಯ ಮಹೇಶ ಶೇರಿಕಾರ, ಪ್ರತ್ಯಷ್ ಮತ್ತು ಪ್ರಿಯಾಂಶ್ ಗುರುಪೂಜೆ ನೆರವೇರಿಸಿದರು. ನೀಲಮ್ಮನ ಬಳಗದ ಸದಸ್ಯೆಯರು ಪ್ರಾರ್ಥನೆ, ಗುರುಶ್ರೀ, ಶ್ಯಾಮಲಾ ಎಲಿ ವಚನ ಗಾಯನ  ನಡೆಸಿಕೊಟ್ಟರು. ಬಸವ ಚಿಕ್ಕಲಿಂಗೆ ಸ್ವಾಗತಿಸಿದರು. ಸುನಂದಾ ಬಸವರಾಜ ಶೇರಿಕಾರ ಭಕ್ತಿ ದಾಸೋಹಗೈದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *