ಬಸವಣ್ಣನವರ ವಚನ ನಿರ್ವಚನ: ಸದ್ಗುಣಗಳೇ ಸ್ವರ್ಗ, ಅವಗುಣಗಳೇ ನರಕ

ಗುಳೇದಗುಡ್ಡ:

ಬಸವಕೇಂದ್ರದ ವತಿಯಿಂದ ಶನಿವಾರ ಪುತ್ರಪ್ಪ ಷ. ಬೀಳಗಿ ಅವರ ಮನೆಯಲ್ಲಿ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಅಂದು ಚಿಂತನೆಗೆ ಆಯ್ದುಕೊಂಡ ವಚನ ಬಸವ ತಂದೆಗಳದು –

ಆನೆಯನ್ನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯನೆ ಹೂಸಿಕೊಂಡು ಹೋದಿರೇ ಅಣ್ಣಾ!
ಸತ್ಯದ ನಿಲುವನರಿಯದೆ ಹೋದಿರಲ್ಲಾ
ಸದ್ಗುಣವೆಂಬ ಫಲವ ಬಿತ್ತದೆ
ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಸದಮಜ ಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲ ಸಂಗಮದೇವರನರಿಯದೆ
ನರಕಕ್ಕೆ ಭಾಜನವಾದಿರಲ್ಲಾ.

ಭಕ್ತಿ ಭಂಡಾರಿ ಬಸವ ತಂದೆಗಳ ಈ ವಚನವನ್ನು ಚಿಂತನೆಗೆ ಪ್ರಾರಂಭಿಸಿದ ಪ್ರೊ. ಶ್ರೀಕಾಂತ ಎಂ. ಗಡೇದ ಅವರು, ಅಂದಿನ ಗಣ್ಯರು ಹಿರಿಯರು ಆನೆ ಕುದುರೆಗಳ ಮೇಲೆ ಹೋದರೇ ವಿನಃ ಜನಸಾಮಾನ್ಯರ ಮಧ್ಯಕ್ಕೆ ಬರಲಿಲ್ಲ. ಸಾಕಷ್ಟು ಹಣ ಗಳಿಸಿದರಾದರೂ ಜನರ ಸುಖ ದುಃಖಗಳನ್ನು ವಿಚಾರಿಸಲಿಲ್ಲ.  ಗಳಿಸಿದ ವಜ್ರ ವೈಡೂರ್ಯಗಳು ಜನರ ನಡುವಿನ ಅಂತರವನ್ನು ಹೆಚ್ಚಿಸುತ್ತವೇ ವಿನಃ ಕಡಿಮೆಯಾಗುವುದಿಲ್ಲ. ಜ್ಞಾನ ಮತ್ತು ಕ್ರಿಯೆಗಳು ಒಂದಾಗಬೇಕು. ಭೇದರಹಿತ ಸಮಾಜ ನಮ್ಮದಾಗಬೇಕು.  ಅದಾಗಬೇಕಿದ್ದರೆ, ಅಧಿಕಾರ ಮತ್ತು ಅಹಂಭಾವ ತೊಲಗಬೇಕು. ಇಂಥ ದರ್ಪದ ಜನರನ್ನು ಕುರಿತು ಬಸವಣ್ಣನವರು ಮರುಗಿದ್ದಾರೆ.

ಉದ್ಯಮಿ ಮಹಾಂತೇಶ ಸಿಂದಗಿ ಅವರು ಚಿಂತನೆಯಲ್ಲಿ ಪಾಲ್ಗೊಂಡು ವೈದಿಕ ಹಾಗೂ ಮನುವಾದಿಗಳನ್ನು ಧಿಕ್ಕರಿಸಿದ ಬಸವಾದಿ ಶಿವಶರಣರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಅಪ್ಪ ಬಸವಣ್ಣನವರು ನಂದಿಮೂರ್ತಿಯಲ್ಲ.  ಅದೊಂದು ವಿಶ್ವಪ್ರಜ್ಞೆ. ನಮ್ಮ ಜನ ಅಧಿಕಾರವನ್ನು ಭೋಗಿಸಿದರೇ ವಿನಃ ಅರಿವಿನಿಂದ ನಡೆಯಲಿಲ್ಲ.  ನಾವು ಎಡೆ ಹಿಡಿದ ಪ್ರಸಾದವನ್ನು ತಿನ್ನದಿರುವುದು ಎಷ್ಟು ಸತ್ಯವೋ ಆತ ದೇವರೇ ಅಲ್ಲವೆಂಬುವದೂ ಅಷ್ಟೇ ಸತ್ಯ.  ಈ ದೇವರುಗಳೆಲ್ಲರೂ ಮಾನವ ನಿರ್ಮಿತ. ಅವರು ದೇವರೆ ಆದಾರು ಹೇಗೆ? ಇದಕ್ಕಾಗಿ ಜನರು ಅಧಿಕಾರ ಅಂತಸ್ತುಗಳಿಂದ ಮೆರೆಯದೆ ತನ್ನ ತಾನರಿಯಬೇಕು. ಈ ಅರಿವು ಇಷ್ಟಲಿಂಗದಿಂದ ಉಂಟಾಗುತ್ತದೆ. ಈ ಇಷ್ಟಲಿಂಗದಿಂದಲೇ ಸತ್ಯದ ಪಥ ತಿಳಿಯುತ್ತದೆ ಎಂದರು.

ನಿವೃತ್ತ ಶಿಕ್ಷಕರಾದ ವಸಂತ ಚವ್ಹಾಣ ಗುರುಗಳು ಚಿಂತನೆಯಲ್ಲಿ ಭಾಗಿಯಾಗಿ, ಇಂದಿನ ಅಸಮಾನತೆಯ ಬದುಕಿಗೆ, ಸರಿಯಾದ ದಾರಿಯನ್ನು ಒಂಭತ್ತು ನೂರು ವರ್ಷಗಳಿಗೆ ಮೊದಲೇ ನಿರ್ಮಿಸಿದ್ದರು. ಇಂದಿನ ಎಲ್ಲ ಕಾನೂನುಗಳ ಮೂಲವನ್ನು ಅಂದೇ ಕಾಣಬಹುದಾಗಿದೆ.  ಬಸವಣ್ಣನವರು ಇಂಥ ಮಾನವೀಯ ಆಶಯಗಳನ್ನು ಮಹಾಮನೆ ಕಾರ್ಯಕ್ರಮಗಳು ಈಡೇರಿಸುವಲ್ಲಿ ನಿರತವಾಗಿವೆ.   ಶರಣರ ಅನುಭಾವವನ್ನು ನಾವು ಎಷ್ಟರ ಮಟ್ಟಿಗೆ ಪಾಲಿಸಿದ್ದೇವೆ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕು.  ಅದಕ್ಕಾಗಿ ಇಷ್ಟಲಿಂಗ ಧಾರಣೆ ಮುಖ್ಯ ಎಂದು ಅಭಿಪ್ರಾಯ ಪಟ್ಟರು. 

ಪ್ರೊ. ಸುರೇಶ ರಾಜನಾಳ ಅವರು ಇದೇ ಚಿಂತನೆಯನ್ನು ಮುಂದುವರೆಸುತ್ತ, ಮಾನವರಿಗೂ ಮತ್ತು ಪಶುಗಳಿಗೂ ಇರುವ ಅಂತರ ಸದ್ಗುಣವಂತರಾಗಿ ಬಾಳುವದು. ಇಲ್ಲಿ ಮನುಷ್ಯರು ಹಣ ಅಧಿಕಾರವನ್ನು ಗಳಿಸಿ, ಮೆರೆದರೇ ವಿನಃ ಮಾನವರಾಗಿ ಸದ್ಗುಣಿಗಳಾಗಲಿಲ್ಲ.  ಮನುಷ್ಯರಾದವರು ಕೇವಲ ಸದ್ಗುಣಿಗಳಾಗಿ ಬಾಳಿದರೆ ಸಾಲದು, ಇತರರಿಗೆ ಮಾದರಿಯಾಗಿ ಬದುಕಿ ಸದ್ಗುಣಗಳನ್ನು ಬಿತ್ತಿ ಬೆಳೆಯಬೇಕು. ಅಂದರೆ ಮುಂದಿನ ಜನಾಂಗಕ್ಕೂ ಕೊಂಡೊಯ್ಯಬೇಕು. ಈ ಕೆಲಸವನ್ನು ಹಿಂದಿನಿಂದ ಬುದ್ಧ, ಬಸವ, ಅಂಬೇಡ್ಕರ ನಮ್ಮ ಕಣ್ಣೆದುರಿಗೆ ತೋರಿದ್ದಾರೆ.  ಅದನ್ನು ಜಾಗೃತಿಯಿಂದ ಆಚರಿಸುವದು ನಮ್ಮ ಇಂದಿನ ಆಧ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ವಚನವನ್ನು ಚಿಂತನೆಗೆ ಒಳಪಡಿಸುತ್ತ ಪ್ರೊ. ಸಿದ್ದಲಿಂಗಪ್ಪ ಬ. ಬರಗುಂಡಿ ಅವರು, ಅಪ್ಪ ಬಸವಣ್ಣನವರು ಅಧಿಕಾರಿ ವರ್ಗ ಹಾಗೂ ಶ್ರೀಮಂತರು ತಮಗೆ ಒದಗಿದ ಸುಂದರ ಬದುಕನ್ನು ಹಾಳುಮಾಡಿಕೊಂಡು ವ್ಯರ್ಥವಾಗಿ ಜೀವನವನ್ನು ಕಳೆದುಕೊಂಡದುದಕ್ಕೆ ಮರುಗಿದ್ದಾರೆ. ಈ ಅಧಿಕಾರ ಅಂತಸ್ತು ಸ್ಥಿರವಾದುದಲ್ಲ.  ಆನೆ, ಕುದುರೆಗಳು ಅಧಿಕಾರಶಾಹಿಗಳನ್ನು ಅಂದರೆ ರಾಜ, ಮಂತ್ರಿ ಹಾಗೂ ಶ್ರೀಮಂತರನ್ನು ಪ್ರತಿನಿಧಿಸಿದರೆ, ಕುಂಕುಮ, ಕಸ್ತೂರಿಗಳು ಭೋಗವನ್ನು ಹೇಳುತ್ತವೆ. ಇವುಗಳನ್ನು ಬಳಸಿ ಶರೀರವನ್ನೇ ತೋರಿ ಸುಖಿಸಿದರೇ ವಿನಃ ಒಳಗಿನ ದೇವರತ್ತ ನೋಡಲಿಲ್ಲ. ಸತ್ಯದ ನಿಲುವನರಿಯುವದು ಮಾನವ ಜೀವನದ ಸಾರ್ಥಕತೆ ಅದನ್ನು ಮರೆತು ಅಹಂಕಾರವೆಂಬ ಮದಗಜವನ್ನೇರಿ ಹೊರಟುದುದಕ್ಕೆ ಬಸವಣ್ಣನವರು ಮರುಗಿದ್ದಾರೆ.

ಸ್ವರ್ಗ, ನರಕಗಳು ಮೇಲೆ, ಕೆಳಗೆ ಇಲ್ಲ. ಅವು ನಮ್ಮಲ್ಲಿಯೇ ಇವೆ. ಸುಂದರವಾದ ಈ ಜಗತ್ತಿನಲ್ಲಿ ಸದ್ಗುಣಗಳನ್ನು ಬೆಳೆದು ಸ್ವರ್ಗವನ್ನಾಗಿಸುವುದು, ಅವಗುಣಗಳನ್ನು ಬೆಳೆದು ನರಕವನ್ನಾಗಿಸುವುದೂ ನಾವೇ.   ಕಾರಣ ಸದ್ಗುಣಗಳನ್ನು ಬಿತ್ತಿ ಬೆಳೆದು ಸುಂದರ ಸಮಾಜವನ್ನು ನಿರ್ಮಿಸಬೇಕಾಗಿದೆ. ಅದೇ ಸ್ವರ್ಗ. ಇಂಥ ಸ್ವರ್ಗವನ್ನು ಸೃಷ್ಠಿಸುವುದೇ ಶರಣರ ನಿಲುವಾಗಿತ್ತು ಎಂದು ಬರಗುಂಡಿಯವರು ತಿಳಿಸಿದರು.

ಹೆಚ್ಚಿನ ಸಂಖ್ಯೆಯ ಜನ ಸೇರಿದ್ದು, ಬಹಳ ಖುಷಿ ತಂದಿತ್ತು. ಕಾರ್ಯಕ್ರಮ ಆರಂಭದಲ್ಲಿ ವಚನ ಪ್ರಾರ್ಥನೆ, ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಶಿವುಕುಮಾರ ಶೀಪ್ರಿ, ಡಾ. ಎಚ್. ಎಸ್. ಘಂಟಿ, ರೇವಣಸಿದ್ದೇಶ್ವರ ಮಠ, ಬಸಯ್ಯ ಕಂಬಾಳಿಮಠ, ಜಿರ್ಲಿ ಗೌಡ್ರ, ಮಂಜು ನಾಯಿನೇಗಲಿ, ರಾಚಣ್ಣ ಕೆರೂರ, ಹುಚ್ಚೇಶ ಸಿಂದಗಿ, ಮಹಾಲಿಂಗಪ್ಪ ಕರನಂದಿ, ಮೋಹನ ಕರನಂದಿ, ಸಂಗಮೇಶ ಯಳಮೇಲಿ, ಗೀತಾ ತಿಪ್ಪಾ, ಶ್ರೀದೇವಿ ಶೇಖಾ, ಕವಿತಾ ಬರಗುಂಡಿ, ನಿರ್ಮಲಾ ಬರಗುಂಡಿ, ವಿಶಾಲಕ್ಷೀ ಗಾಳಿ, ದಾಕ್ಷಾಯಣಿ ತೆಗ್ಗಿ, ಸುರೇಖಾ ಗೆದ್ದಲಮರಿ, ಜಯಶ್ರೀ ಬರಗುಂಡಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *