ಮೈಸೂರು:
ಬಸವಾದಿ ಶರಣರು ನುಡಿದಂತೆ ಸರ್ವರೂ ಕಾಯಕ ದಾಸೋಹದಲ್ಲಿ ನಂಬಿಕೆ ಇಡಬೇಕು. ಸತ್ಯಶುದ್ಧ ಕಾಯಕ ಮಾಡಿ ಸಂಪಾದಿಸಿದ್ದರಲ್ಲಿ ಒಂದಷ್ಟು ಭಾಗ ಸಮಾಜಕ್ಕೆ ದಾಸೋಹ ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸಬೇಕು ಎಂದು ನೀಲಕಂಠೇಶ್ವರ ಮಠದ ಪೂಜ್ಯ ಸಿದ್ಧಮಲ್ಲ ಸ್ವಾಮೀಜಿ ಹೇಳಿದರು.
ನಗರದ ಅಗ್ರಹಾರದಲ್ಲಿರುವ ಹೊಸಮಠದ ಶ್ರೀ ನಟರಾಜ ಸಭಾಂಗಣದಲ್ಲಿ ಮಂಗಳವಾರ ಬಸವ ಭಾರತ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವಪ್ರಣೀತ ಲಿಂಗಾಯತ ಧರ್ಮ ದಿನದರ್ಶಿಕೆ ಬಿಡುಗಡೆ, ಶರಣ ಒಕ್ಕಲಿಗ ಮುದ್ದಣ್ಣ ಸ್ಮರಣೋತ್ಸವ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರೈತ ಈ ದೇಶದ ಬೆನ್ನೆಲುಬು ಎಂದುಬಿಟ್ಟರೆ ಸಾಲದು. ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ನ್ಯಾಯ ಒದಗಿಸಬೇಕು. ರೈತನನ್ನು ಸ್ಮರಿಸುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.
12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಎಲ್ಲರೂ ಅವನ್ನು ಮೈಗೂಡಿಸಿಕೊಂಡಲ್ಲಿ ನಾಡು ಶಾಂತಿ, ಸೌಹಾರ್ದತೆ, ಪ್ರಗತಿಯ ಕಡೆ ಸಾಗಬಲ್ಲದು ಎಂದರು.
ಇದೇ ವೇಳೆ ಬಸವ ಪ್ರಣೀತ ಲಿಂಗಾಯತ ಧರ್ಮ ದಿನದರ್ಶಿಕೆಯನ್ನು ಬಿಡುಗಡೆ. ಮಾಡಲಾಯಿತು. ರೈತ ದಿನಾಚರಣೆಯ ಅಂಗವಾಗಿ ಅನೇಕ ಪ್ರಗತಿಪರ ರೈತರನ್ನು ಆತ್ಮೀಯತೆಯಿಂದ ಸನ್ಮಾನಿಸಲಾಯಿತು.

ಫೌಂಡೇಷನ್ ಅಧ್ಯಕ್ಷ ವಿ. ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸಮಠದ ಪೂಜ್ಯ ಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅರಸೀಕೆರೆ ತಾಲ್ಲೂಕು, ಬಂದೂರು ವಿರಕ್ತಮಠದ ಮಹಾಲಿಂಗಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಯದೇವಿ ತಾಯಿ, ಶಿವಬುದ್ಧಿ ಹಲ್ಲರೆ ಮತ್ತಿತರರು ಇದ್ದರು.
