ಶಹಾಪುರ
ಬಸವಾದಿ ಶರಣರ ವಚನ ಸಾಹಿತ್ಯ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ರಚಿತವಾಗಿವೆ. ಶರಣರ ಬದುಕು ಮತ್ತು ಬೋಧನೆ ಜನಮುಖಿಯಾದುದು. ಶರಣರು ಕಟ್ಟಿದ ಧರ್ಮ ಅದು ಕನ್ನಡಿಗರ ಮೊದಲ ಧರ್ಮ ಎಂದು ಸಾಹಿತಿ, ಚಿಂತಕ ಡಾ. ಸಿದ್ಧರಾಮ ಹೊನ್ಕಲ್ ನುಡಿದರು.
ಬಸವಮಾರ್ಗ ಪ್ರತಿಷ್ಠಾನ ಮತ್ತು ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು -೧೨೮ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಮಾನವೀಯ ಮೌಲ್ಯಗಳು ಎಂಬ ವಿಷಯ ಕುರಿತು ಮಾತನಾಡಿದರು.
ಲಿಂಗೈಕ್ಯ ಸಿದ್ದಲಿಂಗಪ್ಪ ಮತ್ತು ಸರಸ್ವತಿ ಕಾಕನಾಳೆ, ಭಾಲ್ಕಿ ಅವರ ಸಂಸ್ಮರಣೆಯಲ್ಲಿ ನಡೆದ ಸಭೆಯಲ್ಲಿ ಅನುಭಾವಿಗಳಾಗಿ ಮಾತನಾಡಿದ ಅವರು ಬಸವಣ್ಣನವರು ಬರುವುದಕ್ಕಿಂತ ಪೂರ್ವದಲ್ಲಿ ಸಾಹಿತ್ಯ ಜನಮುಖಿಯಾಗಿರಲಿಲ್ಲ. ಅಂದು ಪಂಡಿತರು ಜ್ಞಾನಿಗಳು ಬಳಸುವ ಭಾಷೆ ಜನ ಸಾಮಾನ್ಯನಿಗೆ ತಿಳಿಯುತ್ತಿರಲಿಲ್ಲ. ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನಮ್ಮಮನೆ ಎಂಬ ಜೀವನ ಅಲ್ಲಗಳೆಯುವ ಸಾಹಿತ್ಯ ಮತ್ತು ಬದುಕು ರೂಪಿತವಾಗಿತ್ತು.

ಗುಡಿಗಳು ಮತ್ತು ಅದರೊಳಗೆ ಸ್ಥಾಪಿತವಾದ ದೇವರು ಕೆಲವರ ಕಪಿಮುಷ್ಠಿಯೊಳಗೆ ಸಿಲುಕಿದ್ದವು. ಬಸವಣ್ಣ ಸಾಮಾಜಿಕ ಅಂಕುಡೊಂಕುಗಳನ್ನು ಸಮಗ್ರವಾಗಿ ಅಭ್ಯಸಿಸಿ ದೇವರು ಎಲ್ಲರೂ ಕೈಗೆ ಸಿಗುವಂತೆ ಮಾಡಿದರು ಎಂದು ಅಭಿಪ್ರಾಯಪಟ್ಟರು. ನಿನ್ನ ದೇವರನ್ನು ನೀನೆ ಪೂಜಿಸು ಎಂದು ಇಷ್ಟಲಿಂಗ ಕೊಟ್ಟು, ದೇಹವೇ ದೇವಾಲಯ ಮಾಡಿದ ಅಪರೂಪದ ಧರ್ಮ ಲಿಂಗಾಯತವೆಂದು ಬಣ್ಣಿಸಿದರು.
ಸಿದ್ಧಲಿಂಗಪ್ಪ ಕಾಕನಾಳೆ ಬೀದರ ಜಿಲ್ಲೆಯ ಬಹು ಅಪರೂಪದ ಜೀವ. ಸಹಕಾರಿ ಕ್ಷೇತ್ರದಲ್ಲಿ ಅವರದು ಅದ್ವೀತಿಯ ಹೆಸರು. ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ ಎಂಬ ಮಾತಿಗೆ ಸಾಕ್ಷಿಯಾಗಿ ಬದುಕಿದ ಶರಣ ಸಂತಾನಿಯಾಗಿದ್ದರು ಎಂದು ಪ್ರಾಸ್ತಾವಿಕವಾಗಿ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.
ಸಭೆಯನ್ನು ಉದ್ಘಾಟಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಶರಣು ಗದ್ದುಗೆ ಮಾತನಾಡಿ, ಸತ್ಯಂಪೇಟೆ ಮನೆತನ ಶರಣ ಸಾಹಿತ್ಯವನ್ನು ಪ್ರಚುರಪಡಿಸುವಲ್ಲಿ ಬಹು ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಸಮಾಜದಲ್ಲಿ ಈಗಾಗಲೆ ಇರುವ ಮೌಢ್ಯ ಕಂದಾಚಾರ ತೊಲಗಲಿ ನೈಸರ್ಗಿಕ ಜೀವನ ನಮ್ಮೆಲ್ಲರದಾಗಲಿ ಎಂಬ ಕಳಕಳಿಯಿಂದ ಶ್ರಮಿಸುತ್ತಿದೆ. ಬಸವಮಾರ್ಗ ಪ್ರತಿಷ್ಠಾನದೊಂದಿಗೆ ನಾವೆಲ್ಲ ಇದ್ದೇವೆ ಎಂದು ಸಭೆಗೆ ತಿಳಿಸಿದರು.

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಸನ್ಮಾನ ಸ್ವೀಕರಿಸಿ ಡಾ. ಸುರೇಶ ಸಜ್ಜನ ಮಾತನಾಡುತ್ತ, ಸತ್ಯಂಪೇಟೆ ಲಿಂಗಣ್ಣ ಮತ್ತು ಕುಟುಂಬದ ಪ್ರಭಾವ ನನ್ನ ಮೇಲೆ ದಟ್ಟವಾಗಿದೆ. ವಚನ ಸಾಹಿತ್ಯವನ್ನು ನಿತ್ಯ ಓದಬೇಕೆಂಬ ಅವರ ಪ್ರೇರಣೆಯೆ ನನ್ನ ಸಾಮಾಜಿಕ ಕಾಳಜಿಗೆ ಮುಖ್ಯ ಕಾರಣವೆಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಕಲಬುರ್ಗಿ ಡಿಸಿಸಿ ಬ್ಯಾಂಕ್ ನ ನೂತನ ಅಧ್ಯಕ್ಷರಾದ ವಿಠ್ಠಲ ಯಾದವ, ನಿವೃತ್ತ ಶಿರಸ್ತೆದಾರ ವಿಶ್ವಾರಾಧ್ಯ ಸತ್ಯಂಪೇಟೆ ಉಪಸ್ಥಿತರಿದ್ದರು. ಫಜಲುದ್ದೀನ್ ಖಾಜಿಸಾಬ ಕೆಂಭಾವಿ ವಚನ ಗಾಯನ ಮಾಡಿದರು. ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಕೊನೆಯಲ್ಲಿ ಚೇತನಗೌಡ ಮಾಲಿ ಪಾಟೀಲ ವಂದನಾರ್ಪಣೆ ಮಾಡಿದರು.
ಸಭೆಯಲ್ಲಿ ಶಿವಣ್ಣ ಪೋಸ್ಟ ಮಾಸ್ಟರ್, ಶಿವಯೋಗಪ್ಪ ಮುಡಬೂಳ, ಮರೆಪ್ಪ ಅಣಬಿ, ಶಿವಲಿಂಗಪ್ಪ ಪ್ರಾಂಶುಪಾಲರು, ಲಕ್ಷಣ ಲಾಳಸೇರಿ, ಪ್ರಶಾಂತ ಗುಗ್ಗರಿ, ಸುರೇಶ ಅರುಣಿ, ಸಿದ್ಧಲಿಂಗಪ್ಪ ಆನೇಗುಂದಿ, ರಾಜಶೇಖರ ನಗನೂರು, ಸಿದ್ಧಾರ್ಥ ಸಲಾದಪುರ, ಸಿದ್ಧಲಿಂಗಣ್ಣ ಆನೇಗುಂದಿ, ಡಾ. ಬಸವರಾಜ ಹಾದಿಮನಿ, ಪಂಪಣಗೌಡ ಮಳಗ, ಬಸವರಾಜ ಆನೇಗುಂದಿ ಹಾಗೂ ಬಸವ ಭಕ್ತರು ಉಪಸ್ಥಿತರಿದ್ದರು.
