ಹುಕ್ಕೇರಿ ಮಠದ ಮಕ್ಕಳ ಗ್ರಂಥಾಲಯ ಉದ್ಘಾಟಿಸಿದ ಸಿದ್ಧಲಿಂಗ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ

ಒಂದು ಪುಸ್ತಕ ಮಕ್ಕಳ ಜೀವನವನ್ನು ರೂಪಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮೊಬೈಲ್ ತಲೆ ಎತ್ತಲು ಬಿಡಲ್ಲ, ಪುಸ್ತಕ ತಲೆತಗ್ಗಿಸಲು ಬಿಡಲ್ಲ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜರುಗಿದ ಶ್ರೀ ಶಿವಬಸವೇಶ್ವರ ಉಚಿತ ಪ್ರಸಾದ ನಿಲಯದ ಅಮೃತ ಮಹೋತ್ಸವ, ಹಳೆಯ ವಿದ್ಯಾರ್ಥಿಗಳ ಸಂಘದ ರಜತ ಮಹೋತ್ಸವ ವೇಳೆ ಮಕ್ಕಳ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲೆಂದು ಹುಕ್ಕೇರಿಮಠದ ಶಾಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಆಗಿರುವ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಅಶೋಕ ಹಿಂಚಿಗೇರಿ ಅವರು ತಮ್ಮ ತಂದೆ–ತಾಯಿ ಹೆಸರಿನಲ್ಲಿ ‘ಅರಿವಿನ ಮನೆ ಗ್ರಂಥಾಲಯ’ ತೆರೆದಿರುವುದು ಶ್ಲಾಘನೀಯ. ಇಂದಿನ ಶಾಲೆಗಳಿಗೆ ಸುಸಜ್ಜಿತ ಕ್ರೀಡಾಂಗಣ, ಪ್ರಯೋಗಾಲಯ, ಗ್ರಂಥಾಲಯಗಳು ಬೇಕಿವೆ’ ಇಂಥ ಸಂದರ್ಭದಲ್ಲಿ ಮಕ್ಕಳ ಗ್ರಂಥಾಲಯ ಉದ್ಘಾಟನೆಗೊಂಡು ಅರಿವಿನ ಮನೆಯಾಗಿ ಬೆಳಗಲಿ ಎಂದರು.

ಸರ್ಕಾರಗಳು ಅಕ್ಷರ ದಾಸೋಹ ಆರಂಭಿಸುವ ಮುನ್ನ ಮಠಗಳು ತ್ರಿವಿಧ ದಾಸೋಹದ ಮೂಲಕ ಸೇವೆ ನೀಡಿದ ಶ್ರೇಯಸ್ಸು ನಮ್ಮ ನಾಡಿನಲ್ಲಿದೆ. ಈ ಪರಂಪರೆಯ ಮುಂದುವರೆದ ಭಾಗವಾಗಿ ಹಾವೇರಿ ಹುಕ್ಕೇರಿಮಠದ ಪ್ರಸಾದ ನಿಲಯ ಅಮೃತ ಮಹೋತವ ಆಚರಿಸಿಕೊಳ್ಳುತ್ತಿರುವುದು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದ ಶ್ರೀಮಠದ ತ್ಯಾಗ ಮತ್ತು ಸೇವೆಯ ಸಂಗಮವಾಗಿರುವ ಸದಾಶಿವ ಸ್ವಾಮೀಜಿಯವರ ರೂಪದಲ್ಲಿ ಶಿವಬಸವ ಹಾಗೂ ಶಿವಲಿಂಗ ಸ್ವಾಮೀಜಿಯವರು ದಾಸೋಹ ಪರಂಪರೆಗೆ ಅನನ್ಯ ಕೊಡುಗೆ ನೀಡಿರುವರು.

ಆದಿಚುಂಚನಗಿರಿ ಮಹಾಸಂಸ್ಥಾನಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ನೂರು ವರ್ಷಗಳ ಹಿಂದೆ ಸಾಕ್ಷರತಾ ಪ್ರಮಾಣ ಶೇ 5ಕ್ಕಿಂತ ಹೆಚ್ಚಿರಲಿಲ್ಲ. ಅಂದು ಮಕ್ಕಳ ಶಿಕ್ಷಣದ ಬಗ್ಗೆ ತಂದೆ–ತಾಯಿಗೆ ಅರಿವಿರಲಿಲ್ಲ. ಊಟಕ್ಕೂ ಪರದಾಡುವ ಸ್ಥಿತಿಯಿತ್ತು. ಅವಾಗಲೇ ಸನ್ಯಾಸಿಗಳು, ಮಕ್ಕಳಿಗೆ ಶಿಕ್ಷಣ ಕೊಡಿಸಲು ಜೋಳಿಗೆ ಹಿಡಿದು ಭಿಕ್ಷೆ ಬೇಡಿದರು. ಅಂಥ ಸನ್ಯಾಸಿಗಳ ಮಠದಲ್ಲಿ ಹುಕ್ಕೇರಿಮಠವು ಇಂದಿಗೂ ತನ್ನ ಕೆಲಸ ನಿಲ್ಲಿಸಿಲ್ಲ’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ದೇಶದಲ್ಲಿ ನಡೆದ ಭಕ್ತಿ ಚಳವಳಿ ಹಾಗೂ ವೈಚಾರಿಕ ಚಳವಳಿಗಳು ಕಾಲಕಾಲಕ್ಕೂ ಅಂದಿನ ಸವಾಲುಗಳನ್ನು ಎದುರಿಸಿವೆ. ಉತ್ಕೃಷ್ಟವಾದ ಪ್ರೀತಿಯೇ ಭಕ್ತಿ ಎಂಬುದನ್ನು ತೋರಿಸಿವೆ, ಎಂದರು.

ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಸಿದ್ದಲಿಂಗ ಮಹಾಸ್ವಾಮೀಜಿ, ಮಂಡರಗಿ ‌ಮಠದ ಅನ್ನದಾನೀಶ್ವರಿ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಅಭಿನವ ಸಿದ್ದಾರೂಢ ಸ್ವಾಮೀಜಿ, ಘಟಪ್ರಭದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್, ಶಾಸಕರಾದ ಯು.ಬಿ ಬಣಕಾರ, ಬಸವರಾಜ ಶಿವಣ್ಣನವರ, ಹಾವೇರಿ ವಿವಿ ಕುಲಪತಿ ಡಾ. ಸುರೇಶ ಜಂಗಮ ಶೆಟ್ಟಿ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ್, ಮಾಜಿ ಶಾಸಕ ಶಿವರಾಜ ಸಜ್ಜನರ ಸೇರಿದಂತೆ ಅನೇಕ‌ ಗಣ್ಯರು, ವಿವಿಧ ಮಠದ ಶ್ರೀಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *