ನಿಜಾಚರಣೆಗಳು ಸರಳ, ಖರ್ಚೂ ಕಡಿಮೆ: ಬಸವರಾಜ ಕಮಡೊಳ್ಳಿ

ವಚನಮೂರ್ತಿ ಬಸವರಾಜ ಕಮಡೊಳ್ಳಿಯವರು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಗುಲ್ಬರ್ಗ ಜಿಲ್ಲೆಗಳಲ್ಲಿ ನಿಜಾಚರಣೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಬಸವಣ್ಣನೇ ಲಿಂಗಾಯತರ ಧಾರ್ಮಿಕ ಗುರು, ವಚನಗಳೇ ನಮ್ಮ ಧರ್ಮ ಗ್ರಂಥ ಎನ್ನುವ ಅವರು ತಮ್ಮ ಹನ್ನೆರಡು ವರ್ಷಗಳ ನಿಜಾಚರಣೆಯ ಅನುಭವವನ್ನು ಬಸವ ಮೀಡಿಯಾದ ಕುಮಾರಣ್ಣ ಎಸ್ ಪಾಟೀಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

1) ನೀವು ನಿಜಾಚರಣೆ ಕಾರ್ಯಕ್ರಮಗಳನ್ನು ಎಷ್ಟು ವರ್ಷದಿಂದ ನಡೆಸಿಕೊಡುತ್ತಿದ್ದೀರಾ? ನಿಮ್ಮ ಪ್ರೇರಣೆಯೇನು? ಈ ಕಾರ್ಯವನ್ನು ಶುರು ಮಾಡಿದ್ದು ಹೇಗೆ?

ಉತ್ತರ: ನಾನು ಅನುಭಾವಿಗಳ ಸಹಕಾರದಿಂದ ಸುಮಾರು ಹನ್ನೆರಡು ವರುಷಗಳಿಂದ ನಿಜಾಚರಣೆ ಕಾರ್ಯಕ್ರಮ ನಡೆಸಿರುವೆನು. ನಿಜಾಚರಣೆ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ವೀಕ್ಷಿಸಿ, ಇದೇ ಸರಿಯಾದ ಮಾರ್ಗವೆಂದು ಮನಗಂಡು, ಲಿಂಗಾಯತನಾದ್ದರಿಂದ ಇವುಗಳನ್ನು ಪ್ರಚಾರ ಪಡಿಸಬೇಕು ಎಂದು ಸಂಕಲ್ಪ ಮಾಡಿರುವೆ.

2) ನಿಮ್ಮ ವೃತ್ತಿ, ಶಿಕ್ಷಣದ ಹಿನ್ನೆಲೆಯೇನು? ನಿಜಾಚರಣೆಯ ಕಾರ್ಯಕ್ರಮಗಳನ್ನು ನಡೆಸಲು ನೀವು ಪಡೆದಿರುವ ತರಬೇತಿ, ಮಾಡಿರುವ ಅಧ್ಯಯನವೇನು?

ಉತ್ತರ: ನಾನು ವೃತ್ತಿಯಿಂದ ಕೃಷಿಕ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ
(M. A.) ಪದವಿ ಮಾಡಿರುವೆ (೧೯೮೦).

ಬಸವ ಕೇಂದ್ರದ ಆಜೀವ ಸದಸ್ಯನಾಗಿರುವುದರಿಂದ ಸದಸ್ಯರ ಮನೆಯಲ್ಲಿನ ನಿಜಾಚರಣೆಗಳನ್ನು ನೋಡಿ ಕಲಿತಿರುವೆ. ಅನೇಕ ನಿಜಾಚರಣೆ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿರುವೆ. ಅನುಭಾವಿಗಳ, ಕೆಲ ಪೂಜ್ಯರ ನಿಜಾಚರಣೆ ಕುರಿತು ಗ್ರಂಥಗಳ ಅಧ್ಯಯನ ಮಾಡಿರುವೆ. ಇವು ನನಗೆ ಪ್ರೇರಣೆ ನೀಡಿದವು. ಅನೇಕ ಆತ್ಮೀಯರ, ಸಂಬಂಧಿಗಳ, ಸ್ನೇಹಿತರ ಮನೆಗಳಲ್ಲಿನ ಕಲ್ಯಾಣ ಮಹೋತ್ಸವ, ಗುರು ಪ್ರವೇಶ, ಸೀಮಂತ ಕಾರ್ಯಕ್ರಮ, ನಾಮಕರಣ, ಮುಂತಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅನುಭವ ಗಳಿಸಿದ್ದೇನೆ.

3) ನಿಜಾಚರಣೆ ಕಾರ್ಯಕ್ರಮಗಳನ್ನು ಯಾವ ಯಾವ ಊರುಗಳಲ್ಲಿ ನಡೆಸಿಕೊಡುತ್ತೀರಿ?

ಉತ್ತರ: ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಗುಲ್ಬರ್ಗಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೀನಿ.

4) ಯಾವ ರೀತಿಯ ನಿಜಾಚರಣೆ ಕಾರ್ಯಕ್ರಮಗಳನ್ನು ಹೆಚ್ಚಿಗೆ ನಡೆಸಿಕೊಡುತ್ತೀರಿ?

ಉತ್ತರ: ನಾನು ಹೆಚ್ಚಾಗಿ ಕಲ್ಯಾಣ ಮಹೋತ್ಸವ, ಗುರು ಪ್ರವೇಶ, ಕಾರ್ಯಕ್ರಮ ನಡೆಸಿಕೊಟ್ಟಿರುವೆ. ಸಾಂದರ್ಭಿಕವಾಗಿ ಸೀಮಂತ, ನಾಮಕರಣ, ಲಿಂಗಧಾರಣೆ, ಅಂತ್ಯಕ್ರಿಯೆ ಕಾರ್ಯಕ್ರಮ ನಡೆಯಿಸಿರುವೆ.‌

5) ನಿಜಾಚರಣೆಗಳು ವೈದಿಕ ಆಚರಣೆಗಳಿಗಿಂತ ಹೇಗೆ ಭಿನ್ನ?

ಉತ್ತರ: ವೈದಿಕಾಚರಣೆಗೂ ನಿಜಾಚರಣೆಗೂ ಅಜಗಜಾಂತರ ವ್ಯತ್ಯಾಸ. ವೈದಿಕಕ್ಕೆ ಕಂದಾಚಾರ, ಮೂಢನಂಬಿಕೆ ಮೂಲ. ಇಲ್ಲಿ ಧರ್ಮಾಚರಣೆಗಿಂತ ಕರ್ಮಾಚರಣೆ ಪ್ರಮುಖ. ವೈದಿಕರ ಅರ್ಥವಾಗದ ಸಂಸ್ಕೃತ ಮಂತ್ರಗಳು, ಅವರು ಮಾಡುವ ಅಲಂಕಾರ ಇವೆಲ್ಲ ಅನಪೇಕ್ಷಿತ. ವೈದಿಕತೆಯಲ್ಲಿ ಆಚರಣೆಗಿಂತ ಆಡಂಬರವೆ ಹೆಚ್ಚು. ಆರ್ಥಿಕ ಹೊರೆ. ಆದರೆ ನಿಜಾಚರಣೆಯಲ್ಲಿ ಆಡಂಬರವಿಲ್ಲ, ಸರಳವಾಗಿ ಎಲ್ಲರಿಗೂ ಅರ್ಥವಾಗುವ ಕನ್ನಡ ವಚನಗಳೇ ಇವುಗಳಿಗೆ ಆಧಾರ.

6) ನಿಜಾಚರಣೆಗಳನ್ನು ಪಾಲಿಸುವುದರಿಂದ ಆಗುವ ಅನುಕೂಲಗಳೇನು? ಲಿಂಗಾಯತರು ವೈದಿಕ ಆಚರಣೆಗಳನ್ನು ನಿಲ್ಲಿಸಿ ನಿಜಾಚರಣೆಗಳನ್ನು ಮಾತ್ರ ಏಕೆ ಅನುಸರಿಸಬೇಕು?

ಉತ್ತರ: ಇತ್ತೀಚೆಗೆ ವೈದಿಕರು ಇಂಥ ಆಚರಣೆಗೆ ಇಷ್ಟು ಹಣ, ಇಷ್ಟು ಸಾಮಗ್ರಿಗಳು ಅಂಥಾ ನಿಗದಿ ಮಾಡಿದ್ದಾರೆ. ಇಲ್ಲಿ ಯಾರಿಗೂ ಯಾವುದೇ ಆರ್ಥಿಕ ಹೊರೆ ಇಲ್ಲ.

ನಿಜಾಚರಣೆಗಳು ಸರಳ, ನಿರಾಡಂಬರ, ಗೋಜು ಗೊಂದಲಗಳಿಲ್ಲ. ಪ್ರತಿಯೊಂದು ಆಚರಣೆಗಳು ಜನರಿಗೆ ತಿಳಿಯುತ್ತವೆ. ವಧು-ವರರು ಪ್ರತಿಜ್ಞೆ ಮಾಡಿ, ಜೀವನದಲ್ಲಿ ನಾವು ಅನ್ಯೋನ್ಯವಾಗಿ ಪ್ರೀತಿ ವಿಶ್ವಾಸ ನಂಬುಗೆಯ ಜೀವನ ನಡೆಸುತ್ತೇವೆ ಎಂದು ಸಂಕಲ್ಪ ಮಾಡುತ್ತಾರೆ.

ವಿಶ್ವಗುರು ಬಸವಣ್ಣನವರೇ ನಮ್ಮ ಧರ್ಮಗುರು, ವಚನಗಳೇ ನಮ್ಮ ಧರ್ಮಗ್ರಂಥಗಳು. ಶರಣ ಸಮ್ಮತ ನಿಜಾಚರಣೆಗಳೇ ನಮಗೆ ಮಾನ್ಯ.

“ನಿಜಾಚರಣೆಗಳು ಸರಳ, ನಿರಾಡಂಬರ, ಗೋಜು ಗೊಂದಲಗಳಿಲ್ಲ. ಪ್ರತಿಯೊಂದು ಆಚರಣೆಗಳು ಜನರಿಗೆ ತಿಳಿಯುತ್ತವೆ. ವಧು-ವರರು ಪ್ರತಿಜ್ಞೆ ಮಾಡಿ, ಜೀವನದಲ್ಲಿ ನಾವು ಅನ್ಯೋನ್ಯವಾಗಿ ಪ್ರೀತಿ ವಿಶ್ವಾಸ ನಂಬುಗೆಯ ಜೀವನ ನಡೆಸುತ್ತೇವೆ ಎಂದು ಸಂಕಲ್ಪ ಮಾಡುತ್ತಾರೆ.”

7) ಶರಣ ಸಮಾಜದಲ್ಲಿ ನಿಜಾಚರಣೆ ಕಾರ್ಯಕ್ರಮಗಳಿಗಿಂತ ವೈದಿಕ ಆಚರಣೆಗಳೇ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು?

ಉತ್ತರ: ಇಂದು ಸಮಾಜದಲ್ಲಿ ವೈದಿಕಾಚರಣಗಳೆ ಹೆಚ್ಚು ಪ್ರಚಲಿತ. ಸಂಪ್ರದಾಯಸ್ಥ ವೈದಿಕರು ಮಾನಸಿಕ ಭಯೋತ್ಪಾದಕರಿದ್ದಂತೆ. ಅವರು ಸ್ವರ್ಗ-ನರಕ, ಪಾಪಪುಣ್ಯ, ಧರ್ಮ-ಅಧರ್ಮ ಹೀಗೆ ಜನರಲ್ಲಿ ಭೀತಿ ಆಸೆ ಹುಟ್ಟಿಸಿ ಮಾನಸಿಕವಾಗಿ ಅವರನ್ನು ಆವರಿಸಿದ್ದಾರೆ. ಅವರು ತಮ್ಮ ಆಚರಣೆಗಳಲ್ಲಿ ಮಾಡುವ ಶೃಂಗಾರ, ಗಿಳಿಯಂತೆ ಹೇಳುವ ಮಂತ್ರ ಜನರಿಗೆ ಆಕರ್ಷಕವಾಗಿ ಬಿಟ್ಟಿವೆ. ಇಂತಿಂತಹ ಆಚರಣೆ ಮಾಡಿದರೆ ಮಾಡಿದರೆ ನಿಮಗೆ ಇಂತಹ ಲಾಭಗಳು ಅಂತಾ ಬಿಂಬಿಸಿ ಜನರನ್ನು ಶೋಷಿಸುತ್ತಾರೆ.

ಜನ ಅವರ ಪ್ರಲೋಭನೆಗೆ ಒಳಗಾಗಿ ಅವರ ದಾಸರಾಗಿ ಬಿಟ್ಟಿದ್ದಾರೆ. ಸಮಾಜ ಇವರ ಮಿಥ್ಯ ಆಚರಣೆಯಿಂದ ಹೊರಬರಬೇಕು.

8) ನಿಜಾಚರಣೆ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸುವಲ್ಲಿ ಕಾಣುವ ಸಮಸ್ಯೆ ಅಥವಾ ಅಡಚಣೆಯೇನು? ಅವುಗಳಿಗೆ ಪರಿಹಾರವೇನು?

ಉತ್ತರ: ಸಮಾಜದಲ್ಲಿನ ಬಹುತೇಕರ ಅಜ್ಞಾನ, ತಪ್ಪು ತಿಳುವಳಿಕೆ, ಮೂಢನಂಬಿಕೆಗಳು, ವೈದಿಕರ ಪ್ರಲೋಭನೆಗಳು ಮುಂತಾದವು ನಿಜಾಚರಣೆಗಳ ಮುಂದಿರುವ ಅಡಚಣೆಗಳು.

ಬಸವತತ್ವ ಅನುಭಾವಿಗಳು, ಲಿಂಗಾಯತ ಧರ್ಮಗುರುಗಳು ಅಲ್ಲಲ್ಲಿ ನಿಜಾಚರಣೆಗಳ ಕುರಿತು ಕಾರ್ಯಗಾರ, ಗೋಷ್ಠಿಗಳು, ವಿಚಾರ ಸಂಕೀರ್ಣಗಳನ್ನು ನಡೆಯಿಸಿ, ಜನರಲ್ಲಿನ ತಪ್ಪು ಕಲ್ಪನೆಗಳನ್ನು, ಮೂಢನಂಬಿಕೆಗಳನ್ನು ನಿವಾರಿಸಬೇಕು. ಜನರಲ್ಲಿ ಬಸವಧರ್ಮದ ಹಿರಿಮೆ ಗರಿಮೆಗಳ ಕುರಿತು ಅರಿವು ಮೂಡಿಸಬೇಕು. ಜನಮಾನಸದಲ್ಲಿ ನಿಜದ ಅರಿವು ಆಗುವಂತೆ ತಿಳಿಸಬೇಕು. ಅರಿತ ಅರಿವು ಆಚರಣೆಗೆ ಬರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಬಸವಧರ್ಮ ಅರಿವು-ಆಚಾರ- ಅನುಭಾವ ಪ್ರಮಾಣವಾದ ಧರ್ಮ. ಒಟ್ಟಿನಲ್ಲಿ ಸಾಂಘಿಕ ಪ್ರಯತ್ನ ಮೂಲಕ ನಿಜಾಚರಣೆಗಳ ಅನುಷ್ಠಾನ ಸಾಧ್ಯ.

9) ನೀವು ನೋಡಿರುವ ಹಾಗೆ ಕಳೆದ ೧೦ ವರ್ಷಗಳಲ್ಲಿ ನಿಜಾಚರಣೆ ಕಾರ್ಯಕ್ರಮಗಳು ಹೆಚ್ಚುತಿವೆಯೇ ಅಥವಾ ಕಡಿಮೆಯಾಗುತ್ತಿವೆಯೇ? ಕಾರಣವೇನು ?

ಉತ್ತರ: ಕಲ್ಯಾಣ ಕ್ರಾಂತಿಯ ನಂತರ ಜನರು ಭೀತಿಯಿಂದ ಶರಣರ ಬಗ್ಗೆ, ವಚನಗಳ ಬಗ್ಗೆ ನಿಜಾಚರಣೆಗಳ ಕುರಿತು ವಿಚಾರಿಸದೆ ಮೌನವಾಗಿ ಕುಳಿತರು. ಇದರ ಲಾಭ ಪಡೆದ ಪುರೋಹಿತರು, ವೈದಿಕರು ತಮ್ಮ ತಮ್ಮ ಆಚರಣೆಗಳನ್ನು ಜನರಲ್ಲಿ ಗಾಢವಾಗಿ ಬಿತ್ತಿದರು. ಶಂಖದಿಂದ ಬಂದಿದ್ದೆ ತೀರ್ಥ ಎನ್ನುವ ಹಾಗೆ, ಅವರು ಮಾಡಿದ್ದೆ ಶ್ರೇಷ್ಠ ಎಂದು ಜನ ನಂಬಿದರು. ವೈದಿಕಾಚರಣೆ ನಿಲ್ಲಿಸಿದರೆ ನಮಗೆ ಏನೋ ಕೇಡಾಗಬಹುದು, ನಷ್ಟ – ಕಷ್ಟಕ್ಕೆ ಸಿಲುಕಬಹುದು ಎಂದು ಭಯದಿಂದ ವೈದಿಕಾಚರಣೆಗಳ ದಾಸರಾದರು. ವೈದಿಕರು ಆ ರೀತಿ ಜನಮಾನಸದಲ್ಲಿ ಅಚ್ಚೊತ್ತಿದರು.

ಇತ್ತೀಚೆಗೆ ಶರಣರಾದ ಫಗು ಹಳಕಟ್ಟಿ, ಹರ್ಡೇಕರ್ ಮಂಜಪ್ಪ ಮುಂ. ಅನುಭಾವಿಗಳ ಪರಿಶ್ರಮದ ಫಲವಾಗಿ ವಚನಗಳು ಜನಸಾಮಾನ್ಯರಿಗೆ ಲಭ್ಯವಾದವು. ವಚನಗಳಿಂದ ಪ್ರೇರಣೆಗೊಂಡು ಅನೇಕ ಬಸವಧರ್ಮ ಪರ ಸಂಘಟನೆಗಳು, ಕೇಂದ್ರಗಳು ಆರಂಭಗೊಂಡವು. ಹೀಗಾಗಿ ಅನೇಕ ನಿಷ್ಠಾವಂತ ಬಸವಭಕ್ತರ ಮನೆಗಳಲ್ಲಿ ನಿಜಾಚರಣೆಗಳ ಪಾಲನೆ ನಡೆದಿದೆ. ಆದರೆ ಬಹುಸಂಖ್ಯೆಯ ಜನರು, ಅದರಲ್ಲಿಯೂ ಲಿಂಗಾಯತರು ವೈದಿಕಾಚರಣೆ ಪಾಲನೆ ಮಾಡುತ್ತಿರುವುದು ಖೇದಕರ ಸಂಗತಿ.

10) ನಿಜಾಚರಣೆ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು ಹೇಗೆ? ಜನರನ್ನು ವೈದಿಕ ಮಾರ್ಗದಿಂದ ನಿಜಾಚರಣೆಗಳ ಮಾರ್ಗಕ್ಕೆ ತರುವುದು ಹೇಗೆ?

ಉತ್ತರ: ನಿಜಾಚರಣೆಗಳ ಪಾಲನೆ ಕುರಿತು ಜನಜಾಗೃತಿ ಮಾಡುವುದು ಕಷ್ಟಸಾಧ್ಯ. ಶತ ಶತಮಾನಗಳಿಂದ ಬೇರೂರಿರುವ ವೈದಿಕಾಚರಣೆಗಳನ್ನು ಅರಿವೆ ಬದಲಿಸಿದಷ್ಟು ಸುಲಭವಲ್ಲ. ವಚನಮೂರ್ತಿಗಳು, ಅನುಭಾವಿಗಳು, ಲಿಂಗಾಯತ ಮಠಾಧೀಶರು ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಾಗಾರ, ಚಿಂತನಘೋಷ್ಠಿ, ನಡೆಯಿಸಿ, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಮಾನಸಿಕವಾಗಿ ಅವರನ್ನು ನಿಜಾಚರಣೆಗೆ ಗಟ್ಟಿಮಾಡಬೇಕು. ಅಜ್ಞಾನ, ಮೂಢನಂಬಿಕೆ, ಕಂದಾಚಾರ ಮುಂತಾದ ಅನಿಷ್ಟಗಳನ್ನು ತೊರೆದು, ವೈಚಾರಿಕ, ವೈಜ್ಞಾನಿಕ ತಳಹದಿಯ ಮೇಲಿರುವ ನಿಜಾಚರಣೆಗಳ ಪಾಲನೆ ಕುರಿತು ಶಿಕ್ಷಣ ತರಬೇತಿ ನೀಡಬೇಕು.

ಒಟ್ಟಿನಲ್ಲಿ ಜನ ಮಾನಸಿಕವಾಗಿ ಬದಲಾವಣೆ ಹೊಂದುವಂತೆ ಪ್ರೇರಣೆ ನೀಡಬೇಕು. ಮನೆ ಮನೆಗೆ ಭೇಟಿ ನೀಡಿ ವಚನಗಳ ಬಗ್ಗೆ, ನಿಜಾಚರಣೆಗಳ ಮಹತಿಯ ಬಗ್ಗೆ ತಿಳಿಹೇಳಬೇಕು.

11) ನಿಜಾಚರಣೆ ಕಾರ್ಯಕ್ರಮಗಳನ್ನು ನಡೆಸಿಕೊಡುವಾಗ ಯಾವುದಾದರು ವಿಶಿಷ್ಟವಾದ ಅನುಭವವಾಗಿದ್ದರೆ ಹಂಚಿಕೊಳ್ಳುತೀರಾ?

ಉತ್ತರ: ಶರಣತತ್ವ ಪ್ರಣೀತ ನಿಜಾಚರಣೆ ಪ್ರಕಾರ ಕಾರ್ಯಕ್ರಮ ಮಾಡುವಾಗ ಕೆಲವು ಬಾರಿ ಮನಸ್ಸಿಗೆ ನೋವುಂಟು ಮಾಡುವ ಪ್ರಸಂಗಗಳು ನಡೆಯುತ್ತವೆ.

ನಾನೊಮ್ಮೆ ನಮ್ಮ ಆತ್ಮೀಯರ ಸಹಕಾರದಿಂದ ಬಸವ ಕೇಂದ್ರದ ಸದಸ್ಯೆಯೊಬ್ಬರ (ಜಂಗಮರು) ಸುಪುತ್ರರೀರ್ವರ ಕಲ್ಯಾಣ ಮಹೋತ್ಸವವನ್ನು ನಿಜಾಚರಣೆ ಪ್ರಕಾರ ಮಾಡುತ್ತಾ ಇದ್ದೆವು. ಒಂದೊಂದೆ ಕಾರ್ಯಕ್ರಮ ( ಶುದ್ಧೋದಕ ಸಿಂಪರಣೆ, ವಿಭೂತಿ ಧಾರಣೆ, ರುದ್ರಾಕ್ಷಿ ಕಂಕಣ, ವಚನಗಂಟು ಕಟ್ಟವುದು, ವಧು ವರರಿಗೆ ಪ್ರತಿಜ್ಞಾಸ್ವೀಕಾರ, ಮುಂ.) ಮಾಡಿ ಕೊನೆಗೆ ಪುಷ್ಪವೃಷ್ಟಿ ಮಾಡಿದೆವು. ಆಗ ವಧುಗಳ ಕಡೆಯವರು (ಜಂಗಮರು) ಇದೇನಿದು ಅನಿಷ್ಟ, ನಾವು ಅಕ್ಷತೆ ಹಾಕಬೇಕು, ಹೂವನ್ನು ಸತ್ತವರ ಮೇಲೆ ಹಾಕುತ್ತಾರೆ ಎಂದು ಗಲಾಟೆ ಮಾಡಿದರು. ಅವರು ಅಕ್ಕಿಯನ್ನು ತಂದು ಅರಿಷಿಣ ಕುಂಕುಮ ಬೆರೆಸಿ ವಧುವರರ ಮೇಲೆ ಹಾಕಿದರು. ಇದು ಬಹಳ ನೋವು ಖೇದ ಉಂಟು ಮಾಡಿದೆ.

ಇನ್ನೊಂದು ಬಾರಿ ನಮ್ಮ ಆತ್ಮೀಯರೊಬ್ಬರ ಸಹೋದರನ ಸುಪುತ್ರನ ಕಲ್ಯಾಣ ಮಹೋತ್ಸವವನ್ನು ನಿಜಾಚರಣೆ ಪ್ರಕಾರ ಮಾಡಲಾಯಿತು. ಮನೆಯವರು ತಮ್ಮ ಊರಿನ ಒಬ್ಬ ಸ್ವಾಮೀಜಿಯನ್ನು ಆಶೀರ್ವದಿಸಲು ಕರೆತಂದಿದ್ದರು. ಆ ಸ್ವಾಮೀಜೀ ನಮ್ಮ ಕಾರ್ಯಕ್ರಮಗಳನ್ನು ನೋಡಿ ಕೆಂಡಲಮಂಡಲರಾಗಿ, ವೇದಿಕೆಯಲ್ಲಿಯೆ ‘ ಇದೇನು ಅನಿಷ್ಟ, ನೀವು ಹೀಗೆ ಮಾಡುವುದಿದ್ದರೆ ನನ್ನನ್ನೇಕೆ ಕರೆದಿರಿ ‘ ಎಂದು ಕೂಗಾಡಿದರು. ನಾನು ಮತ್ತೆ ವಧುವರರನ್ನು ನನ್ನ ಮಠಕ್ಕೆ ಕರೆಸಿ ವೈದಿಕ ಸಂಪ್ರದಾಯದ ಪ್ರಕಾರ ಮಾಡುವೆ ಎಂದು ಕೂಗಿ ಹೋಗಿಯೆಬಿಟ್ಟರು.

Share This Article
Leave a comment

Leave a Reply

Your email address will not be published. Required fields are marked *